ಕಾಮಗಾರಿ ಅಪೂರ್ಣ: ಜನರು ಹೈರಾಣ
ಬೆಂಗಳೂರು: ಇಂದಿರಾನಗರದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳು ಪೂರ್ಣಗೊಳ್ಳದೇ ಇರುವುದರಿಂದ ನಿವಾಸಿಗಳು ಹೈರಾಣಾಗಿದ್ದಾರೆ.ಒಳಚರಂಡಿ, ವೈಟ್ಟ್ಯಾಪಿಂಗ್, ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿಗಳು ವರ್ಷದಿಂದಲೂ ನಡೆಯುತ್ತಿವೆ. ಬಿರು ಬಿಸಿಲಿಗೆ ಏಳುವ ದೂಳು, ಮಳೆ ಬಿದ್ದರೆ ರಸ್ತೆಯೆಲ್ಲಾ ಕೆಸರು, ಪಾದಚಾರಿ ಮಾರ್ಗಗಳಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯವು

ಬೆಂಗಳೂರು: ಇಂದಿರಾನಗರದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳು ಪೂರ್ಣಗೊಳ್ಳದೇ ಇರುವುದರಿಂದ ನಿವಾಸಿಗಳು ಹೈರಾಣಾಗಿದ್ದಾರೆ.ಒಳಚರಂಡಿ, ವೈಟ್ಟ್ಯಾಪಿಂಗ್, ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿಗಳು ವರ್ಷದಿಂದಲೂ ನಡೆಯುತ್ತಿವೆ. ಬಿರು ಬಿಸಿಲಿಗೆ ಏಳುವ ದೂಳು, ಮಳೆ ಬಿದ್ದರೆ ರಸ್ತೆಯೆಲ್ಲಾ ಕೆಸರು, ಪಾದಚಾರಿ ಮಾರ್ಗಗಳಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯವು ಯೋಜನಾಬದ್ಧ ನಗರಿಯನ್ನು ಕೊಂಪೆಯಾಗಿಸಿದೆ.ಚರಂಡಿಯಲ್ಲೇ ಕೇಬಲ್ಗಳು: 100 ಅಡಿ ರಸ್ತೆ ಮತ್ತು 80 ಅಡಿ ರಸ್ತೆ ಸಂಪರ್ಕಿಸುವ 6ನೇ ಮುಖ್ಯ ರಸ್ತೆಯ ವೈಟ್ಟಾಪಿಂಗ್ ಕಾಮಗಾರಿ ಕಳೆದ 6 ತಿಂಗಳಿಂದ ನಡೆಯುತ್ತಿದೆ. ಚರಂಡಿ ಕಾಮಗಾರಿ ಬಾಕಿ ಇದ್ದು, ರಸ್ತೆಯಲ್ಲಿ ಸುರಿಯಲಾಗಿದ್ದ ಮಣ್ಣು ಮಳೆ ಬಂದರೆ ಕಟ್ಟಡ ತ್ಯಾಜ್ಯಗಳು ಮಳೆ ನೀರು ಚರಂಡಿ ಸೇರುತ್ತಿದೆ. ಇಂಟರ್ನೆಟ್ ಕೇಬಲ್ಗಳು ಮಳೆ ನೀರು ಚರಂಡಿಗಳ ಒಳಗೇ ಇದ್ದು, ಅದನ್ನು ಪ್ರತ್ಯೇಕಗೊಳಿಸಿಲ್ಲ. ‘ಮೈಕೆಲ್ ಪಾಳ್ಯ, ಬಿನ್ನಮಂಗಲದ ರಸ್ತೆಗಳಲ್ಲಿ ಒಳಚರಂಡಿ ಪೈಪ್ಗಳನ್ನು ವರ್ಷದಿಂದಲೂ ಜೋಡಿಸಿಡಲಾಗಿದ್ದು, ಕಾಮಗಾರಿಗಳಿಗೆ ಬಳಕೆಯಾಗದೇ ಉಳಿದಿವೆ. ಪಾದಚಾರಿ ಮಾರ್ಗಗಳು ಹದಗೆಟ್ಟಿವೆ. ರಾಜಧಾನಿಯ ಮಾದರಿ ನಗರವೊಂದು ಅವೈಜ್ಞಾನಿಕ ಕಾಮಗಾರಿಗಳಿಂದ ಹೆಸರಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ‘ಹಳೆ ಮದ್ರಾಸ್ ರಸ್ತೆಯಿಂದ 100 ಅಡಿ ರಸ್ತೆ ಸಂಪರ್ಕಿಸುವ ಪರಮಹಂಸ ಯೋಗಾನಂದ ರಸ್ತೆಗೆ ಡಾಂಬರು ಹಾಕಿಲ್ಲ. ದೂಪನಹಳ್ಳಿ ಉದ್ಯಾನಕ್ಕೆ ನಮ್ಮಂಥ ವೃದ್ಧರು ಹೋಗಿ ವಾಕ್ ಮಾಡಲಾಗುತ್ತಿಲ್ಲ. ಮೂರು ತಿಂಗಳ ಹಿಂದೆ ಒಳಚರಂಡಿ ಕಾಮಗಾರಿಗೆ ತೆಗೆದ ಹಳ್ಳವನ್ನು ಮುಚ್ಚಿಲ್ಲ’ ಎಂದು ಎಚ್ಎಎಲ್ ಬಡಾವಣೆ ನಿವಾಸಿ ಅಬ್ರಾಹಂ ‘ಪ್ರಜಾವಾಣಿ’ ಜೊತೆ ಬೇಸರ ವ್ಯಕ್ತಪಡಿಸಿದರು. ‘ಎಂಜಿನಿಯರ್ ಆಗಿ ನಿವೃತ್ತನಾಗಿರುವ ನಾನು 46 ವರ್ಷಗಳಿಂದ ಇಲ್ಲಿನ ನಿವಾಸಿ. ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವ ಬಡಾವಣೆಗಳಲ್ಲಿ ಇಂದಿರಾ ನಗರವೂ ಒಂದು. ಯಾವ ಸಂದರ್ಭದಲ್ಲೂ ಇಷ್ಟು ಹಾಳಾಗಿರಲಿಲ್ಲ. ಹೋಟೆಲ್ಗಳು, ರೆಸ್ಟೊರೆಂಟ್ಗಳಿಂದ ತ್ಯಾಜ್ಯ ಸಂಗ್ರಹಿಸುವ 50ಕ್ಕೂ ಹೆಚ್ಚು ಟ್ರಕ್ಗಳು ಹಳೆ ಮದ್ರಾಸ್ ರಸ್ತೆಯಲ್ಲಿ ನಿಲ್ಲುತ್ತಿವೆ. ಇಂದಿರಾನಗರಕ್ಕೆ ಬರುವವರನ್ನು ದುರ್ವಾಸನೆಯಿಂದಲೇ ಸ್ವಾಗತಿಸುತ್ತಿವೆ’ ಎಂದು ದೂರಿದರು.‘ಎಂಜಿಯರ್ಗಳು ಹಳೆಯ ನೀಲನಕ್ಷೆ ಇಲ್ಲದೇ ಕಾಮಗಾರಿ ನಡೆಸುತ್ತಿದ್ದಾರೆ. ಅದರಿಂದ ಹಳೆ ಪೈಪ್ಗಳು ಒಡೆಯುತ್ತಿವೆ. 12ನೇ ‘ಎ’, ‘ಬಿ’ ರಸ್ತೆಗಳು ಹಾಳಾಗಿವೆ. ಚೆನ್ನಾಗಿರುವ ಒಳಚರಂಡಿ ಪೈಪ್ ಅನ್ನೇ ಒಡೆದು ತೆಗೆದು ಹೊಸದನ್ನು ಅಳವಡಿಸಿದ್ದಾರೆ. ಬೀದಿ ದೀಪಗಳಿಲ್ಲದೇ ರಾತ್ರಿ ಓಡಾಡುವುದೇ ಕಷ್ಟವಾಗಿದೆ. ಉದ್ಯಾನಗಳಿಗೆ ಹೋಗಲು ಆಗುತ್ತಿಲ್ಲ. ಎಲ್ಲ ಕಡೆಯೂ ಬರೀ ದೂಳು’ ಎಂದರು. ತುರ್ತು ಕ್ರಮ ವಹಿಸಿ: ‘ಜೋರು ಮಳೆ ಬಂದರೆ ಇಂದಿರಾ ನಗರದ ಕೆಳಭಾಗದಲ್ಲಿ ಒಳಚರಂಡಿ ನೀರು ನಿಂತು ಹಲಸೂರು ಕೆರೆಯಂತಾಗುತ್ತದೆ. ಕಟ್ಟಡ ತ್ಯಾಜ್ಯವನ್ನು ತೆರೆವುಮಾಡಬೇಕು’ ಎನ್ನುತ್ತಾರೆ ಮೈಕೆಲ್ಪಾಳ್ಯದ ಕಾರ್ತಿಕ್. ಪ್ರತಿಕ್ರಿಯೆಗೆ ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಅವರಿಗೆ ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ.ಇಂದಿರಾನಗರದ ಪರಮಹಂಸ ಯೋಗಾನಂದ ರಸ್ತೆಯ 12ನೇ ‘ಎ’ ಮುಖ್ಯ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಯ ಸ್ಥಿತಿ – ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್6ನೇ ಮುಖ್ಯರಸ್ತೆಯ ಮಳೆನೀರು ಚರಂಡಿ ದುರಸ್ತಿ ಕಾಮಗಾರಿಯಲ್ಲಿ ಅವ್ಯವಸ್ಥಿತ ಕೇಬಲ್ ಜಾಲವನ್ನು ಸರಿಪಡಿಸಲು ನಿರತರಾದ ಕಾರ್ಮಿಕರು –ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್ಅವಗಣನೆಗೆ ಒಳಗಾದ ಮಾದರಿ ನಗರ ಸರ್ ಸಿ.ವಿ.ರಾಮನ್ ನಗರ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿಹೋಗಿರುವ ಇಂದಿರಾನಗರವನ್ನು 1970–80ರ ದಶಕದಲ್ಲಿ ಬಿನ್ನಮಂಗಲ ದೊಮ್ಮಲೂರು ಲಕ್ಷ್ಮೀಪುರ ಮೋಟಪ್ಪನಪಾಳ್ಯ ಅಪ್ಪಾರೆಡ್ಡಿ ಪಾಳ್ಯ ದೂಪನಹಳ್ಳಿ ಕೋಡಿಹಳ್ಳಿ ಮತ್ತು ತಿಪ್ಪಸಂದ್ರ ಗ್ರಾಮಗಳನ್ನು ಸೇರಿಸಿ ಅಭಿವೃದ್ಧಿ ಪಡಿಸಲಾಯಿತು. ಡಿಫೆನ್ಸ್ ಕಾಲೊನಿ ಜೀವನ್ ಬಿಮಾ ನಗರ ಎಚ್ಎಎಲ್ ಬಡಾವಣೆಗಳೂ ಇದಕ್ಕೇ ಹೊಂದಿಕೊಂಡಿವೆ. ವಿಶಾಲವಾದ ರಸ್ತೆಗಳು ಉದ್ಯಾನಗಳಿದ್ದು ಡೆಲ್ ಐಬಿಎಂ ಮೈಕ್ರೊಸಾಫ್ಟ್ನಂಥ ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿಗಳೊಂದಿಗೆ ನವೋದ್ಯಮಗಳ ವಾಣಿಜ್ಯ ಕಚೇರಿಗಳನ್ನು ಹೊಂದಿದೆ. ಹಳೆ ಮದ್ರಾಸ್ ರಸ್ತೆ ಹಾಗೂ ಎಚ್ಎಎಲ್ ರಸ್ತೆ ಮಧ್ಯೆ ಚಾಚಿರುವ ಇಂದಿರಾನಗರದ ಮಧ್ಯೆ 100 ಅಡಿ 80 ಅಡಿ ಹಾಗೂ ಪರಮಹಂಸ ಯೋಗಾನಂದ ರಸ್ತೆಗಳು ಹಾದುಹೋಗಿವೆ.