ವಾಂಗ್ಚೂಕ್ ಮಾತ್ರವಲ್ಲ ಉಪವಾಸನಿರತ ನೇಹಾ, ಅಮೀನ್, ಮನೀಶ್ ಆರೋಗ್ಯ ಸ್ಥಿತಿಯೂ ಗಂಭೀರ
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್ಎ) ಮೂವರು ಸದಸ್ಯರ ಆರೋಗ್ಯ ಸ್ಥಿತಿ ಶುಕ್ರವಾರ ಮತ್ತಷ್ಟು ಹದಗೆಟ್ಟಿದ್ದು, ಅವರಲ್ಲಿ ಒಬ್ಬರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್ಎ) ಮೂವರು ಸದಸ್ಯರ ಆರೋಗ್ಯ ಸ್ಥಿತಿ ಶುಕ್ರವಾರ ಮತ್ತಷ್ಟು ಹದಗೆಟ್ಟಿದ್ದು, ಅವರಲ್ಲಿ ಒಬ್ಬರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.‘ನೇಹಾ, ಅಮೀನ್ ಮತ್ತು ಮನೀಶ್ ಅವರು ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನೇಹಾ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತ್ಯಂತ ಕಳವಳಕಾರಿ ಮಟ್ಟಕ್ಕೆ ಕುಸಿದಿದ್ದು (ಹೈಪೋಗ್ಲೈಸೀಮಿಯಾ), ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಡುವ ಮುನ್ನ ಉಪವಾಸ ಕೈಬಿಟ್ಟು ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ’ ಎಂದು ಸಂಘಟನೆ ತಿಳಿಸಿದೆ.‘ಅಮೀನ್ ಅವರ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಮನೀಶ್ ಅವರು 10 ಕೆ.ಜಿಗಿಂತ ಹೆಚ್ಚು ತೂಕ ಕಳೆದುಕೊಂಡಿದ್ದು, ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಇತರರ ನೆರವಿಲ್ಲದೇ ದೈನಂದಿನ ಚಟುವಟಿಕೆ ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಸಂಘಟನೆ ವಿವರಿಸಿದೆ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಪರೀಕ್ಷಾ ಹಗರಣಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.ಹೋರಾಟಕ್ಕೆ ರಾಜಕೀಯ ಬೆಂಬಲ:ವಿದ್ಯಾರ್ಥಿಗಳ ಈ ಹೋರಾಟಕ್ಕೆ ರಾಜಕೀಯ ವಲಯದಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ನಾಯಕ ಪವನ್ ಖೇರಾ, ಎನ್ಸಿಪಿ (ಶರದ್ ಪವಾರ್) ಸಂಸದೆ ಸುಪ್ರಿಯಾ ಸುಳೆ, ಹರಿಯಾಣದ ಮಾಜಿ ಉಪ ಮುಖ್ಯಮಂತ್ರಿ ದುಷ್ಯಂತ್ ಚೌತಾಲಾ, ದಿಗ್ವಿಜಯ್ ಚೌತಾಲಾ ಮತ್ತು ಕಾಂಗ್ರೆಸ್ ನಾಯಕ ರಾಜೇಂದ್ರ ಪಾಲ್ ಗೌತಮ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಬೆಂಬಲ: ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರುವ ಉನ್ನಾವೊ ಅತ್ಯಾಚಾರ ಸಂತ್ರಸ್ತೆ, ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸಂಘಟನೆ ತಿಳಿಸಿದೆ.‘2017ರಲ್ಲಿ ನನ್ನ ಪರವಾಗಿ ನೇಹಾ ಸೇರಿದಂತೆ ಎಐಎಸ್ಎ ಸದಸ್ಯರು ಹೋರಾಟ ನಡೆಸಿದ್ದರು. ಪ್ರಸ್ತುತ ಅವರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇನೆ’ ಎಂದು ಸಂತ್ರಸ್ತೆ ತಿಳಿಸಿದ್ದಾರೆ.ವಾಂಗ್ಚೂಕ್ ಸ್ಥಿತಿಯೂ ಗಂಭೀರ:ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದ್ದು, ತುರ್ತಾಗಿ ಚಿಕಿತ್ಸೆ ನೀಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.