ಮನೆಬಿಟ್ಟು ಬಂದಿದ್ದ ಬಾಲಕಿ ಬೇರೊಬ್ಬನ ಜೊತೆ ಚಾಟಿಂಗ್ ಮಾಡ್ತಿದ್ದಾಳೆಂದು ಗುಂಡಿಕ್ಕಿ ಹತ್ಯೆ!
– ಅಪ್ರಾಪ್ತರ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯ – ದೃಶ್ಯ ಸಿನಿಮಾ ಸ್ಟೈಲಲ್ಲಿ ತಮ್ಮನನ್ನ ಉಳಿಸಲು ಯತ್ನಿಸಿದ್ದ ಅಣ್ಣನೂ ಅರೆಸ್ಟ್ ರಾಮನಗರ: 16 ವರ್ಷದ ಅಪ್ರಾಪ್ತರ ಪ್ರೀತಿಯಲ್ಲಿ ಮೂಡಿದ ಅನುಮಾನ ಬಾಲಕಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ (Kodihalli Police Station) ವ್ಯಾಪ್ತಿಯಲ್ಲಿ ನಡೆದಿದೆ. ತನ್ನನ್ನೇ ನೆಚ್ಚಿಕೊ

– ಅಪ್ರಾಪ್ತರ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯ – ದೃಶ್ಯ ಸಿನಿಮಾ ಸ್ಟೈಲಲ್ಲಿ ತಮ್ಮನನ್ನ ಉಳಿಸಲು ಯತ್ನಿಸಿದ್ದ ಅಣ್ಣನೂ ಅರೆಸ್ಟ್ ರಾಮನಗರ: 16 ವರ್ಷದ ಅಪ್ರಾಪ್ತರ ಪ್ರೀತಿಯಲ್ಲಿ ಮೂಡಿದ ಅನುಮಾನ ಬಾಲಕಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ (Kodihalli Police Station) ವ್ಯಾಪ್ತಿಯಲ್ಲಿ ನಡೆದಿದೆ. ತನ್ನನ್ನೇ ನೆಚ್ಚಿಕೊಂಡು ಮನೆ ಬಿಟ್ಟು ಬಂದಿದ್ದ ಹುಡುಗಿ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿದ ಬಾಲಕ, ಆಕೆಯನ್ನು ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದಿರುವ ಘಟನೆ ಜುಲೈ 10 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ಶವವನ್ನು ಮನೆ ಬಳಿಯೇ ಹೂತು ಹಾಕಿ ಬಾಲಕನನ್ನ ರಕ್ಷಿಸಲು ಯತ್ನಿಸಿದ್ದ ಆತನ ಅಣ್ಣ ಪುಟ್ಟಮಾದು ಹಾಗೂ ಚಿಕ್ಕಪ್ಪ ರವಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಕಾನೂನಿನ ಸಂಘರ್ಷ ಎದುರಿಸುತ್ತಿರುವ ಬಾಲಕನನ್ನ ಬಾಲನ್ಯಾಯ ಮಂಡಳಿ ವಶಕ್ಕೆ ಒಪ್ಪಿಸಿ, ಕೃತ್ಯಕ್ಕೆ ಬಳಸಿದ್ದ ಬಂದೂಕನ್ನ ಕೋಡಿಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ಕಪಕ್ಕದ ಗ್ರಾಮದವರಾದ ಇಬ್ಬರು ಅಪ್ರಾಪ್ತರ ನಡುವೆ 2 ತಿಂಗಳ ಹಿಂದೆ ಇನ್ಸ್ಟಾಗ್ರಾಂ ಮೂಲಕ ಶುರುವಾಗಿದ್ದ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರದ್ದು ಬಡ ಕುಟುಂಬ. ತಿಂಗಳ ಹಿಂದೆ ಸ್ನೇಹಿತೆ ಮನೆಗೆ ಹೋಗುವುದಾಗಿ ಹೇಳಿದ್ದ ಬಾಲಕಿ, ತನ್ನ ಪ್ರಿಯಕರನ ಮನೆಗೆ ಬಂದು ಉಳಿದುಕೊಂಡಿದ್ದಳು ಎನ್ನಲಾಗಿದೆ. ತನ್ನ ಜೊತೆ ಇದ್ದೂ ಬಾಲಕಿ ಬೇರೊಬ್ಬ ಹುಡುಗನ ಜೊತೆ ಚಾಟಿಂಗ್ ಮಾಡುತ್ತಿದ್ದಾಳೆಂದು ಬಾಲಕ ಜಗಳವಾಡಿದ್ದ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ಬಾಲಕ ಮನೆಯೊಳಗಿದ್ದ ಹಳೆಯ ಬಂದೂಕು ತಂದು ಮುಖಕ್ಕೆ ಶೂಟ್ ಮಾಡಿದ್ದು ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಳು. ಬಳಿಕ ಆತ ಶವವನ್ನ ತನ್ನ ಅಣ್ಣ ಮತ್ತು ಚಿಕ್ಕಪ್ಪನ ನೆರವಿನಿಂದ ಮನೆ ಬಳಿಯ ಜಮೀನಿನಲ್ಲಿ ಹೂತು ಹಾಕಿದ್ದ ಎಂದು ತಿಳಿದು ಬಂದಿದೆ. ಬೋರ್ವೆಲ್ ರಿಪೇರಿ ಕೆಲಸ ಮಾಡುತ್ತಿದ್ದ ಬಾಲಕನ ಮನೆಗೆ ಬಂದು ವಾಸವಾಗಿದ್ದ ಬಾಲಕಿ ಕೆಲ ದಿನಗಳಿಂದ ಕಾಣದಿರುವ ಬಗ್ಗೆ ಹಾಗೂ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬುದರ ಗುಸುಗುಸು ಗ್ರಾಮದಲ್ಲಿ ಕೇಳಿ ಬರುತ್ತಿತ್ತು. ವಿಷಯ ಕೋಡಿಹಳ್ಳಿ ಠಾಣೆ ಸಿಬ್ಬಂದಿ ಗಮನಕ್ಕೆ ಬಂದಾಗ, ಗ್ರಾಮಕ್ಕೆ ತೆರಳಿ ಬಾಲಕ ಮತ್ತು ಆತನ ಕುಟುಂಬದವರನ್ನು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಕೃತ್ಯದ ಬಳಿಕ ಬಾಲಕ ಮನೆ ಬಳಿಯ ಮೆದೆಯಲ್ಲಿ ಬಚ್ಚಿಟ್ಟಿದ್ದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ತಮ್ಮ ಮಗಳು ಸ್ನೇಹಿತೆಯ ಮನೆಯಲ್ಲಿದ್ದಾಳೆ ಅಂದುಕೊಂಡಿದ್ದ ಬಾಲಕಿ ಕುಟುಂಬದವರಿಗೆ ವಿಷಯ ತಿಳಿಸಲಾಗಿದ್ದು, ನಾಳೆ ತಹಶೀಲ್ದಾರ್ ಸಮ್ಮುಖದಲ್ಲಿ ಬಾಲಕಿ ಶವವನ್ನು ಹೊರತೆಗೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.