ಪತಿಗೆ ಆಗದಿದ್ರೆ ‘ಸಂಸತ್ ಚಲೊ’ವನ್ನು ನಾನು ಮುನ್ನಡೆಸುವೆ: ವಾಂಗ್ಚೂಕ್ ಪತ್ನಿ
ನವದೆಹಲಿ: ಜುಲೈ 20ರಂದು ನಡೆಯಲಿರುವ ಸಂಸತ್ ಚಲೊ ಜಾಥಾದಲ್ಲಿ ಸೊನಮ್ ವಾಂಗ್ಚೂಕ್ ಅವರಿಗೆ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ, ಅದರ ನೇತೃತ್ವವನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ವಾಂಗ್ಚೂಕ್ ಪತ್ನಿ ಗೀತಾಂಜಲಿ ಜೆ. ಆಂಗ್ಮೊ ಹೇಳಿದ್ದಾರೆ.20 ದಿನಗಳಿಂದ ಉಪವಾಸನಿರತರಾಗಿರುವ ವಾಂಗ್ಚೂಕ್ ಅವರನ್ನು ನ್ಯಾಯಾಲಯದ ಆದೇಶದ ಮೇಲೆ ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗ

ನವದೆಹಲಿ: ಜುಲೈ 20ರಂದು ನಡೆಯಲಿರುವ ಸಂಸತ್ ಚಲೊ ಜಾಥಾದಲ್ಲಿ ಸೊನಮ್ ವಾಂಗ್ಚೂಕ್ ಅವರಿಗೆ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ, ಅದರ ನೇತೃತ್ವವನ್ನು ನಾನು ವಹಿಸಿಕೊಳ್ಳುತ್ತೇನೆ ಎಂದು ವಾಂಗ್ಚೂಕ್ ಪತ್ನಿ ಗೀತಾಂಜಲಿ ಜೆ. ಆಂಗ್ಮೊ ಹೇಳಿದ್ದಾರೆ.20 ದಿನಗಳಿಂದ ಉಪವಾಸನಿರತರಾಗಿರುವ ವಾಂಗ್ಚೂಕ್ ಅವರನ್ನು ನ್ಯಾಯಾಲಯದ ಆದೇಶದ ಮೇಲೆ ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.‘ಪದೇ ಪದೇ ವಿನಂತಿಸಿದರೂ ಅವರ(ವಾಂಗ್ಚೂಕ್) ವೈದ್ಯಕೀಯ ವರದಿಗಳನ್ನು ಹಂಚಿಕೊಳ್ಳಲು ಆಸ್ಪತ್ರೆಯವರು ನಿರಾಕರಿಸುತ್ತಿದ್ದಾರೆ’ ಎಂದು ಗೀತಾಂಜಲಿ ಅವರು ಆರೋಪಿಸಿದ್ದಾರೆ.ಈ ಕುರಿತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿರುವ ಅವರು, ಕುಟುಂಬದ ಅನುಮತಿಯಿಲ್ಲದೇ ಯಾವುದೇ ಚಿಕಿತ್ಸೆ ನೀಡದಂತೆ ಮನವಿ ಮಾಡಿದ್ದಾರೆ.‘ಶುಕ್ರವಾರ ವಾಂಗ್ಚೂಕ್ ಅವರನ್ನು ಪರೀಕ್ಷಿಸಿದ ವೈದ್ಯರು, ರಕ್ತದಲ್ಲಿನ ಪೊಟ್ಯಾಸಿಯಮ್ ಮಟ್ಟ 4.3 ಇದೆ ಎಂದು ಹೇಳಿದ್ದರು. ಈಗ ಇವರು 2.9 ಇದೆ ಎಂದು ಹೇಳುತ್ತಿದ್ದಾರೆ. ಇಷ್ಟು ಕಡಿಮೆ ಇರುವುದು ಜೀವಕ್ಕೆ ಅಪಾಯಕಾರಿಯಾಗಿದೆ. ಅದರ ಬಗ್ಗೆ ವರದಿ ಕೊಡುವಂತೆ ಕೇಳಿದರೆ ತೋರಿಸುತ್ತಾರೆಯೇ ಹೊರತು ನೀಡುತ್ತಿಲ್ಲ. ಪಾರದರ್ಶಕತೆಯ ಕೊರತೆಯಿದ್ದು, ಇಲ್ಲಿನ ಚಿಕಿತ್ಸಾ ವಿಧಾನದ ಬಗ್ಗೆ ನನಗೆ ನಂಬಿಕೆ ಬರುತ್ತಿಲ್ಲ’ ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.‘ಸದ್ಯ ಯಾವುದೇ ಔಷಧಿ ನೀಡದಂತೆ ಕೇಳಿಕೊಂಡಿದ್ದೇವೆ. ಬೇರೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ವರದಿ ಪಡೆದುಕೊಳ್ಳುವವರೆಗೂ ಔಷಧಿ ನೀಡುವುದು ಬೇಡ ಎಂದಿದ್ದೇವೆ. ವಾಂಗ್ಚೂಕ್ ಅವರು ಆರೋಗ್ಯವಾಗಿದ್ದಾರೆ. ಶ್ರೀಘ್ರದಲ್ಲೇ ಬೇರೆ ಆಸ್ಪತ್ರೆ ಸ್ಥಳಾಂತರಿಸಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.‘ಆಸ್ಪತ್ರೆ ಒಳಗೆ ಮೊಬೈಲ್ ಕೊಂಡೊಯ್ಯಲು ಬಿಡುತ್ತಿಲ್ಲ. ಆವರಣದ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಿದ್ದಾರೆ. ಜೈಲಿನಂತೆ ಭಾಸವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.