ಎಲ್ಲರಿಗೂ ತಾಯಿಯೇ ಆಗಿದ್ದ ಚನ್ನಮ್ಮ: ಅವರ ಒಡನಾಟದಲ್ಲಿ ಇದ್ದವರು ಹೇಳುವ ಮಾತಿದು
ಬೆಂಗಳೂರು/ಹಾಸನ: ‘ಎಲ್ಲರನ್ನೂ ತಾಯಿ ಹೃದಯದಿಂದ ನೋಡುತ್ತಿದ್ದರು, ಅವರ ಒಡನಾಟಕ್ಕೆ ಬಂದವರಿಗೆಲ್ಲ ಮಮತೆಯ ತಾಯಿಯೇ ಆಗಿದ್ದರು...’ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಕುರಿತಾಗಿ, ಅವರ ಒಡನಾಟದಲ್ಲಿ ಇದ್ದವರು ಮತ್ತು ಅವರ ಮನೆಗೆ ಒಮ್ಮೆಯಾದರೂ ಭೇಟಿ ನೀಡಿದವರು ಹೇಳುವ ಮಾತಿದು.ಹಾಸನ ತಾಲ್ಲೂಕಿನ ಮುತ್ತಿಗೆ ಹಿರಿಹಳ್ಳಿ ಕಾಳಮ್ಮ ಮತ್ತು ದೇವೇಗೌಡ ದಂಪತಿ

ಬೆಂಗಳೂರು/ಹಾಸನ: ‘ಎಲ್ಲರನ್ನೂ ತಾಯಿ ಹೃದಯದಿಂದ ನೋಡುತ್ತಿದ್ದರು, ಅವರ ಒಡನಾಟಕ್ಕೆ ಬಂದವರಿಗೆಲ್ಲ ಮಮತೆಯ ತಾಯಿಯೇ ಆಗಿದ್ದರು...’ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಕುರಿತಾಗಿ, ಅವರ ಒಡನಾಟದಲ್ಲಿ ಇದ್ದವರು ಮತ್ತು ಅವರ ಮನೆಗೆ ಒಮ್ಮೆಯಾದರೂ ಭೇಟಿ ನೀಡಿದವರು ಹೇಳುವ ಮಾತಿದು.ಹಾಸನ ತಾಲ್ಲೂಕಿನ ಮುತ್ತಿಗೆ ಹಿರಿಹಳ್ಳಿ ಕಾಳಮ್ಮ ಮತ್ತು ದೇವೇಗೌಡ ದಂಪತಿಯ ಹಿರಿಯ ಪುತ್ರಿ ಚನ್ನಮ್ಮ ಅವರು, ತಮ್ಮ ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ತಾಯಿಯಂತೆಯೇ ಸಲಹಿದ್ದರು. ಮನೆಯ ಹಿರಿಯ ಮಗಳಿಗೆ ಮನೆವಾಳ್ತೆಯ ಹೊಣೆಯೂ ಕರಗತವಾಗಿತ್ತು. ಬದುಕಿನ ಕೊನೆಯವರೆಗೂ ಆ ಹೊಣೆಯನ್ನು ಅವರು ನಿಭಾಯಿಸಿದರು.ಚನ್ನಮ್ಮ ಅವರು 1954ರ ಮೇ25ರಂದು ಎಚ್.ಡಿ. ದೇವೇಗೌಡ ಅವರನ್ನು ವಿವಾಹವಾಗಿ ಹೊಳೆನರಸೀಪುರದ ಹರದನಹಳ್ಳಿಗೆ ಬಂದಾಗ, ದೇವೇಗೌಡ ಅವರು ಕೃಷಿಕರೇ ಆಗಿದ್ದರು. ಕೃಷಿ ಪ್ರಧಾನ ಕುಟುಂಬದ ಮನೆಮಂದಿಗೆ ಮತ್ತು ಕೆಲಸದಾಳುಗಳಿಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದ ಚನ್ನಮ್ಮವರು, ದೇವೇಗೌಡ ಅವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೆ ಏರಿದರೂ ಬಂದವರಿಗೆ ಅನ್ನವಿಕ್ಕುವುದನ್ನು ಕೈಬಿಟ್ಟಿರಲಿಲ್ಲ ಎಂಬುದನ್ನು ಅವರ ಕುಟುಂಬದ ಆಪ್ತರು ನೆನಪಿಸಿಕೊಳ್ಳುತ್ತಾರೆ.‘ಚನ್ನಮ್ಮ ಅವರು ನಮ್ಮ ಕುಟುಂಬಕ್ಕೆ ಮಾರ್ಗದರ್ಶಕರಾಗಿದ್ದರು. ನಮ್ಮ ಕುಟುಂಬದ ಬಹುತೇಕರು ಅವರ ಕೈತುತ್ತು ತಿಂದು ಬೆಳೆದಿದ್ದೇವೆ. ಅವರ ತಾಯಿಹೃದಯದ ನೆರಳಿನಲ್ಲೇ ರಾಜಕೀಯ ಭವಿಷ್ಯ ರೂಪಿಸಿಕೊಂಡಿದ್ದೇವೆ’ ಎಂದು ಜೆಡಿಎಸ್ನ ನಾಯಕರು, ಹಿಂದೆ ಜನತಾಪರಿವಾರದಲ್ಲಿದ್ದು ಈಗ ಬೇರೆ ಕಡೆ ಗುರುತಿಸಿಕೊಂಡಿರುವ ಬಹುತೇಕ ನಾಯಕರು ಹೇಳಿದ್ದಾರೆ.‘ಪಕ್ಷದ ನಾಯಕರನ್ನು ಮಾತ್ರವಲ್ಲ, ಕಾರ್ಯಕರ್ತರನ್ನೂ ಯಾವುದೇ ಭೇದ ಎಣಿಸದೆ ನೋಡಿಕೊಳ್ಳುತ್ತಿದ್ದರು. ಎಲ್ಲರಿಗೂ ತಾಯಿಯೇ ಆಗಿದ್ದರು. ದೇವೇಗೌಡ ಅವರು ರಾಜಕೀಯದಲ್ಲಿ ನಿರತರಾಗಿದ್ದಾಗ, ಚನ್ನಮ್ಮ ಒಬ್ಬರೇ ನಿಂತು ಮನೆಯನ್ನು ನಡೆಸಿದರು. ಮಕ್ಕಳನ್ನು ಸಲಹಿದರು. ಪಕ್ಷ ಸಂಘಟಿಸುವಲ್ಲಿ ದೇವೇಗೌಡ ಅವರಿಗೆ ಬೆನ್ನೆಲುಬಾಗಿ ನಿಂತರು. ದೇವೇಗೌಡ ಅವರು ಮುಖ್ಯಮಂತ್ರಿ, ಪ್ರಧಾನಿ ಆದಾಗ ಚನ್ನಮ್ಮ ಅವರು ಹಿಗ್ಗಲಿಲ್ಲ. ದೇವೇಗೌಡರಿಗೆ ರಾಜಕೀಯ ಹಿನ್ನಡೆಯಾದಾಗ, ಚನ್ನಮ್ಮ ಅವರು ಕುಗ್ಗಲಿಲ್ಲ. ರಾಜಕೀಯ ಅಧಿಕಾರದ ಹಮ್ಮು ಯಾವತ್ತಿಗೂ ಅವರ ಬಳಿ ಸುಳಿಯಲಿಲ್ಲ. ದೇವೇಗೌಡ ಅವರ ರಾಜಕೀಯ ಎದುರಾಳಿಗಳು ಮನೆಗೆ ಬಂದಾಗಲೂ ಆತ್ಮೀಯತೆಯಿಂದಲೇ ಮಾತನಾಡಿಸುತ್ತಿದ್ದರು, ಕರೆದು ಊಟ ಬಡಿಸುತ್ತಿದ್ದರು. ಅಲ್ಲಿ ರಾಜಕಾರಣಕ್ಕೆ ಜಾಗವಿರಲಿಲ್ಲ’ ಎಂಬುದು ಚನ್ನಮ್ಮ ಅವರ ಬಗೆಗಿರುವ ಜನಜನಿತ ಮಾತು.ತಮ್ಮ ರಾಜಕೀಯ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಗಳಲ್ಲಿ ತಮ್ಮ ಪತ್ನಿ ಚನ್ನಮ್ಮ ಅವರ ಪಾತ್ರವನ್ನು ದೇವೇಗೌಡರು ಅನೇಕ ಬಾರಿ ಸ್ಮರಿಸಿದ್ದಾರೆ. ‘ಮದುವೆಯ ಆರಂಭದ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ಚನ್ನಮ್ಮನ ಚಿನ್ನಾಭರಣಗಳನ್ನು ಮಾರಿ ಸಾಲ ತೀರಿಸಿದ್ದೆ’ ಎಂದು ದೇವೇಗೌಡರು ಹಲವು ಬಾರಿ ಉಲ್ಲೇಖಿಸಿದ್ದಾರೆ. ‘ನಾನು ಇಷ್ಟು ಎತ್ತರಕ್ಕೆ ಬಂದಿದ್ದರೆ, ಅದರ ಹಿಂದೆ ನನ್ನ ಪತ್ನಿಯ ಸಹಕಾರವೇ ಕಾರಣ’ ಎಂದು ಅನೇಕ ವೇದಿಕೆಗಳಲ್ಲಿ ಹೇಳಿದ್ದಾರೆ.ಚನ್ನಮ್ಮ ಅವರ ಜೀವನದಲ್ಲಿ ಸವಾಲುಗಳೂ ಕಡಿಮೆಯಿರಲಿಲ್ಲ. 2001ರ ಫೆಬ್ರುವರಿ 21ರಂದು ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ಈಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮರಳುತ್ತಿದ್ದ ವೇಳೆ, ಅವರ ಮೇಲೆ ಹಾಗೂ ಸೊಸೆ ಭವಾನಿ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ದೀರ್ಘಕಾಲ ಚಿಕಿತ್ಸೆ ಪಡೆದು ಗುಣಮುಖರಾದರು. ಆದರೂ ಎಲ್ಲರನ್ನು ತಾಯಿಯಂತೆ ನೋಡುವ ಅವರ ಸಹಜ ಗುಣ ಕರಗಿರಲಿಲ್ಲ. ಚನ್ನಮ್ಮ ಅವರ ನಿಧನದಿಂದ ಅವರ ಹುಟ್ಟೂರು ಮುತ್ತಿಗೆ ಹಿರಿಹಳ್ಳಿ ಹಾಗೂ ದೇವೇಗೌಡ ಅವರ ಸ್ವಗ್ರಾಮ ಹರದನಹಳ್ಳಿ ಗ್ರಾಮಗಳಲ್ಲಿ ನೀರವ ಮೌನ ಆವರಿಸಿದೆ.ದೇವೇಗೌಡ ಅವರೊಂದಿಗೆ ಚನ್ನಮ್ಮದೇವೇಗೌಡರ ಮಕ್ಕಳು ಮೊಮ್ಮಕ್ಕಳೊಂದಿಗೆ ಚನ್ನಮ್ಮಪತ್ನಿಗೆ ಕಣ್ಣೀರ ವಿದಾಯತಮ್ಮ ಪತ್ನಿಯೇ ತಮ್ಮ ಶಕ್ತಿ ಎಂದೇ ಹೇಳುತ್ತಿದ್ದ ದೇವೇಗೌಡ ಅವರು ಚನ್ನಮ್ಮ ಅವರಿಗೆ ಕಣ್ಣೀರ ವಿದಾಯ ಹೇಳಿದ್ದಾರೆ. ನಾಲ್ಕು ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಎದುರಾದಾಗ ದೇವೇಗೌಡ ಅವರೇ ಸಹಾಯಕರ ನೆರವಿನೊಂದಿಗೆ ಚನ್ನಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ನಡೆಯುತ್ತಿದ್ದ ವೇಳೆ ಅಲ್ಲಿಯೇ ಉಳಿದು ಮಾಹಿತಿ ಪಡೆದುಕೊಳ್ಳುತ್ತಿದ್ದರು. ತಮ್ಮ ತಾಯಿಯನ್ನು ನೋಡಲು ಬಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಧೈರ್ಯ ಹೇಳಿದ್ದರು. ಶನಿವಾರ ಚನ್ನಮ್ಮ ಅವರ ಆರೋಗ್ಯ ತೀರಾ ಹದಗೆಟ್ಟಾಗ ದೇವೇಗೌಡ ಅವರು ಚನ್ನಮ್ಮ ಅವರ ಹಣೆಗೆ ಕುಂಕುಮವನ್ನಿಟ್ಟರು. ಚನ್ನಮ್ಮ ಅವರು ನಿಧನರಾದ ನಂತರ ಮೌನಕ್ಕೆ ಜಾರಿದರು. ಮೃತದೇಹವನ್ನು ಆಸ್ಪತ್ರೆಯಿಂದ ಪದ್ಮನಾಭನಗರದ ನಿವಾಸಕ್ಕೆ ಕರೆದೊಯ್ಯುವಾಗ ದೇವೇಗೌಡ ಅವರ ಕಣ್ಣಾಲಿಗಳು ತುಂಬಿಬಂದವು.‘ಸರಳತೆಯ ಸಾಕಾರ ಮೂರ್ತಿ’ದೇವೇಗೌಡ ಅವರ ಸುದೀರ್ಘ ದಾಂಪತ್ಯ ಮತ್ತು ರಾಜಕೀಯ ಜೀವನದಲ್ಲಿ ಚನ್ನಮ್ಮ ಅವರು, ಅವರಿಗೆ ನೆರಳಾಗಿದ್ದರು. ಇಡೀ ಕುಟುಂಬವನ್ನು ಸಲಹಿದರು. ದೇವೇಗೌಡ ಅವರು ಮುಖ್ಯಮಂತ್ರಿ, ಪ್ರಧಾನಿ ಆದಾಗಲೂ ಚನ್ನಮ್ಮ ಅವರು ಸರಳತೆಯ ಸಾಕಾರ ಮೂರ್ತಿಯಂತೆ ನಡೆದುಕೊಳ್ಳುತ್ತಿದ್ದರು. ದೈವಭಕ್ತೆಯಾಗಿದ್ದ ಅವರು, ಪತಿಯ ಒಳಿತು–ಕೆಡಕುಗಳೆಲ್ಲವೂ ಭಗವಂತನ ಇಚ್ಛೆ ಎಂದೇ ನಂಬಿದ್ದರು.-ನಿರ್ಮಲಾನಂದನಾಥಸ್ವಾಮೀಜಿ, ಪೀಠಾಧ್ಯಕ್ಷ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದೇವೇಗೌಡರ ಪ್ರತಿ ಯಶಸ್ಸಿನ ಹಿಂದೆ ನಿಂತಿದ್ದವರು. ಅವರ ಕುಟುಂಬ ಸದಸ್ಯರು ಸೋತಾಗ ಕುಗ್ಗಲಿಲ್ಲ, ಗೆದ್ದಾಗ ಹಿಗ್ಗಲಿಲ್ಲ. ಗೌಡರ ಬದುಕಿನ ನಿಜವಾದ ಶಕ್ತಿಯಾಗಿದ್ದರು. ಮೌನದಿಂದಲೇ ಇಡೀ ಕುಟುಂಬದ ನಿರ್ವಹಣೆ ಮಾಡಿದವರು-ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಚನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ - ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ. ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಮಾದರಿ ಸತಿಯಾಗಿದ್ದರು.-ಸಿದ್ದರಾಮಯ್ಯ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯದೇವೇಗೌಡರ ಸುದೀರ್ಘ ರಾಜಕೀಯ ಜೀವನದ ಏಳು-ಬೀಳುಗಳಲ್ಲಿ ನಿರಂತರವಾಗಿ ಬೆಂಬಲವಾಗಿ ನಿಂತು, ಇಡೀ ಕುಟುಂಬಕ್ಕೆ ಮಾತೃಶಕ್ತಿಯಾಗಿದ್ದ ಸರಳ ಸಜ್ಜನಿಕೆಯ ತಾಯಿ ಚನ್ನಮ್ಮನವರ ಅಗಲಿಕೆ ಗೌಡರ ಇಡೀ ಕುಟುಂಬಕ್ಕೆ ದೊಡ್ಡ ನಷ್ಟ.ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಸಂಸದೀಯ ಸಲಹಾ ಮಂಡಳಿ ಸದಸ್ಯ