ನೈಜೀರಿಯಾದಲ್ಲಿ ಎದುರಾದ ಕಹಿ ಅನುಭವ ಹಂಚಿಕೊಂಡ ‘ಲೆನಿನ್’ ಸಿನಿಮಾದ ನಟಿ ಭಾಗ್ಯಶ್ರೀ
‘ಲೆನಿನ್’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ನಟಿ ಭಾಗ್ಯಶ್ರೀ ಬೋರ್ಸೆ ಅವರು ತಮ್ಮ ಬಾಲ್ಯದ ಅತ್ಯಂತ ಕಠಿಣ ದಿನಗಳನ್ನು ಮೆಲುಕು ಹಾಕಿದ್ದಾರೆ. 'ಆನೆಸ್ಟ್ ಟೌನ್ ಹಾಲ್'ನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಕುಟುಂಬ ಮಹಾರಾಷ್ಟ್ರದಿಂದ ನೈಜೀರಿಯಾಕ್ಕೆ ಸ್ಥಳಾಂತರಗೊಂಡಾಗ ತಾವು ಎದುರಿಸಿದ ಕಿರುಕುಳದ ಬಗ್ಗೆ ವಿವರಿಸಿದ್ದಾರ

‘ಲೆನಿನ್’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿರುವ ನಟಿ ಭಾಗ್ಯಶ್ರೀ ಬೋರ್ಸೆ ಅವರು ತಮ್ಮ ಬಾಲ್ಯದ ಅತ್ಯಂತ ಕಠಿಣ ದಿನಗಳನ್ನು ಮೆಲುಕು ಹಾಕಿದ್ದಾರೆ. 'ಆನೆಸ್ಟ್ ಟೌನ್ ಹಾಲ್'ನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಕುಟುಂಬ ಮಹಾರಾಷ್ಟ್ರದಿಂದ ನೈಜೀರಿಯಾಕ್ಕೆ ಸ್ಥಳಾಂತರಗೊಂಡಾಗ ತಾವು ಎದುರಿಸಿದ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. ‘ನಾನು ಛತ್ರಪತಿ ಸಂಭಾಜಿನಗರದ ಮರಾಠಿ ಮಾಧ್ಯಮ ಶಾಲೆಯೊಂದರಲ್ಲಿ ಓದುತ್ತಿದ್ದ ವೇಳೆ ನಮ್ಮ ತಂದೆಗೆ ನೈಜೀರಿಯಾದಲ್ಲಿ ಉದ್ಯೋಗ ಸಿಕ್ಕಿತ್ತು. ಹಾಗಾಗಿ ನಾವು ಮಹಾರಾಷ್ಟ್ರದಿಂದ ನೈಜೀರಿಯಾಕ್ಕೆ ಹೋಗಬೇಕಾಯಿತು. ಆಗ ನನಗೆ ಇಂಗ್ಲಿಷ್ ಸ್ವಲ್ಪವೂ ಬರುತ್ತಿರಲಿಲ್ಲ. ನನಗೆ ಮರಾಠಿ ಮತ್ತು ಹಿಂದಿ ಮಾತ್ರ ಗೊತ್ತಿತ್ತು. ನಮ್ಮ ಸುತ್ತಮುತ್ತಲಿನವರು ‘ನಿನಗೆ ಇಂಗ್ಲಿಷ್ ಬರುವುದಿಲ್ಲವೇ’ ಎಂದು ಹೀಯಾಳಿಸಿದ್ದಾಗಿ ಭಾಗ್ಯಶ್ರೀ ತಿಳಿಸಿದ್ದಾರೆ.‘ನಾನು ತುಂಬಾ ಮುಗ್ಧಳಾಗಿದ್ದೆ. ಭಾಷೆ ತಿಳಿಯದ ಕಾರಣಕ್ಕೆ ನೆರೆಹೊರೆಯ ಮಕ್ಕಳು ನನ್ನನ್ನು ರೇಗಿಸುತ್ತಿದ್ದರು. ನಾನು ಅಂತಹ ಹಲವು ಸನ್ನಿವೇಶಗಳನ್ನು ಎದುರಿಸಿದ್ದೇನೆ. ಇಂತಹ ಸಂದರ್ಭಗಳಲ್ಲಿ ಸುತ್ತಲಿನ ನೆಗೆಟಿವ್ ಮಾತುಗಳನ್ನು ನಿರ್ಲಕ್ಷಿಸಿ, ನಮ್ಮ ಗುರಿಯತ್ತ ಗಮನ ಹರಿಸುವುದು ಮುಖ್ಯ’ ಎಂದು ಭಾಗ್ಯಶ್ರೀ ಹೇಳಿದ್ದಾರೆ.‘ಆ ಕಹಿ ಅನುಭವವು ಚಿಕ್ಕ ವಯಸ್ಸಿನಲ್ಲೇ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿತು. ಇಂದು ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯಾಗಿ ರೂಪುಗೊಳ್ಳಲು ನನಗೆ ಸಹಾಯ ಮಾಡಿತು’ ಎಂದು ಹೇಳಿಕೊಂಡಿದ್ದಾರೆ. ‘ಕೆಲವೊಮ್ಮೆ ಇದು ಕಷ್ಟಕರವಾಗಿರುತ್ತದೆ ಮತ್ತು ನೋವುಂಟು ಮಾಡುತ್ತದೆ. ಆದರೆ, ಆ ನೋವೇ ನಮ್ಮನ್ನು ಬೆಳೆಯಲು ಪ್ರೇರೇಪಿಸುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಘಟನೆ ನಡೆಯದಿದ್ದರೆ ನಾನು ಇಂಗ್ಲಿಷ್ ಇಷ್ಟು ಚೆನ್ನಾಗಿ ಮಾತನಾಡುತ್ತಿರಲಿಲ್ಲ. ಭಾಷೆ ಕಾರಣಕ್ಕಾಗಿ ಅವರು ನನ್ನನ್ನು ರೇಗಿಸದೇ ಇದ್ದಿದ್ದರೆ ನಾನು ಕಲಿಯಲು ಪ್ರಯತ್ನಿಸುತ್ತಿರಲಿಲ್ಲ. ಹಾಗಾಗಿ ನಾನು ಎಲ್ಲವನ್ನೂ ಸಕಾರಾತ್ಮಕ ದೃಷ್ಟಿಕೋನದಲ್ಲೇ ನೋಡಲು ಬಯಸುತ್ತೇನೆ. ಹಾಗೆ ಮಾಡುವುದರಿಂದ ನಮ್ಮ ಜೀವನದ ಪ್ರತಿಯೊಂದು ನಕಾರಾತ್ಮಕ ವಿಷಯವೂ ಸಕಾರಾತ್ಮಕತೆ ಮನೋಭಾವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ’ ಎಂದಿದ್ದಾರೆ.ರೂಪ ಇರಲಿ, ಭಾಷೆ, ವಿದ್ಯಾಭ್ಯಾಸ ಅಥವಾ ಹಿನ್ನೆಲೆ ಇಂತಹ ಹಲವು ಕಾರಣಗಳಿಗಾಗಿ ಅನೇಕ ಮಕ್ಕಳು ಕಿರುಕುಳ ಅನುಭವಿಸುತ್ತಾರೆ. ಆ ಕಹಿ ನೆನಪುಗಳು ನಮ್ಮನ್ನು ಕುಗ್ಗಿಸುವಂತೆ ಮಾಡಿಕೊಳ್ಳುವ ಬದಲು ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳಲು ಪ್ರೇರಣೆಯಾಗಿ ಬಳಸಿಕೊಳ್ಳಬೇಕು. ನೀವು ಅದನ್ನು ಹೇಗೆ ನೋಡುತ್ತೀರಿ ಎಂಬುದರ ಮೇಲೆ ಎಲ್ಲವೂ ನಿರ್ಧರಿತವಾಗುತ್ತದೆ. ಪ್ರತಿಯೊಂದು ಹಿನ್ನಡೆಯೂ ಒಂದು ಪಾಠವಾಗುತ್ತದೆ’ ಎಂದು ವಿವರಿಸಿದ್ದಾರೆ.‘ಲೆನಿನ್’ ಯಶಸ್ಸು...ಭಾಗ್ಯಶ್ರೀ ಅವರು ದೃಢಸಂಕಲ್ಪ ಮತ್ತು ಪರಿಶ್ರಮವುಳ್ಳವರಾಗಿದ್ದಾರೆ. ಅವರು ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದು, ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಸಿಗುವ ಮುನ್ನ ಅವರ ತಂದೆ ಕೆಲಸಕ್ಕಾಗಿ ಪಟ್ಟ ಶ್ರಮದ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಮಾಡೆಲಿಂಗ್ ಮತ್ತು ಜಾಹೀರಾತುಗಳಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದ ಅವರು, ನಂತರ ಚಿತ್ರರಂಗಕ್ಕೆ ಪ್ರವೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಚೆಗೆ ತೆಲುಗು ನಟ ಅಖಿಲ್ ಅಕ್ಕಿನೇನಿ ಅವರೊಂದಿಗೆ ಅಭಿನಯಿಸಿದ್ದ ‘ಲೆನಿನ್’ ಚಿತ್ರ ಹಿಟ್ ಆಗಿದೆ. ಮೊದಲ ಯಶಸ್ಸಿಗಾಗಿ ಅವರು ಮೂರು ವರ್ಷ ಕಾಯಬೇಕಾಯಿತು.