ವಾಂಗ್ಚೂಕ್ ಹೋರಾಟ ಇಲ್ಲಿಗೆ ಮುಗಿದಿಲ್ಲ: ಶರದ್ ಪವಾರ್
ಮುಂಬೈ: ಸೊನಮ್ ವಾಂಗ್ಚೂಕ್ ಅವರ ಹೋರಾಟ ಜಂತರ್ ಮಂತರ್ನಲ್ಲಿಯೇ ಮುಗಿದಿಲ್ಲ, ಅದರ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ

ಮುಂಬೈ: ಸೊನಮ್ ವಾಂಗ್ಚೂಕ್ ಅವರ ಹೋರಾಟ ಜಂತರ್ ಮಂತರ್ನಲ್ಲಿಯೇ ಮುಗಿದಿಲ್ಲ, ಅದರ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು’ ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚೂಕ್ ಅವರನ್ನು ನ್ಯಾಯಾಲಯದ ಸೂಚನೆ ಮೇರೆಗೆ ದೆಹಲಿ ಪೊಲೀಸರು ಜಂತರ್ ಮಂತರ್ನಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಈ ಘಟನೆ ನಡೆದ ಕೆಲ ಹೊತ್ತಿನಲ್ಲಿಯೇ ಪವಾರ್ ಅವರಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ‘ಕೇಂದ್ರ ಸರ್ಕಾರವು ಈ ವಿಷಯವನ್ನು ಬೇಜವಾಬ್ದಾರಿಯಿಂದ ನಿಭಾಯಿಸಿದ್ದು, ಹಲವಾರು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ’ ಎಂದು ಹೇಳಿದ್ದಾರೆ.‘ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಅರಿತ ಕೇಂದ್ರ ಸರ್ಕಾರ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದೆ. ಇಲ್ಲಿಯವರೆಗೆ ಸರ್ಕಾರದ ಒಬ್ಬನೇ ಒಬ್ಬ ಪ್ರತಿನಿಧಿ ಅವರನ್ನು ಭೇಟಿಯಾಗಲು ಹೋಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ಈಗ ತರಾತುರಿಯಲ್ಲಿ ಆಸ್ಪತ್ರೆಗೆ ಸೇರಿಸಿರುವುದು ಸರ್ಕಾರದ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಸಂಸತ್ ಅಧಿವೇಶನ ಪ್ರಾರಂಭವಾಗಲಿರುವುದರಿಂದ ಈ ವಿಷಯ ಇಲ್ಲಿಗೇ ಮುಗಿಯುವುದಿಲ್ಲ, ಅಲ್ಲೂ ಚರ್ಚೆಯಾಗಲಿದೆ’ ಎಂದು ಹೇಳಿದ್ದಾರೆ.‘ಕಾಂಗ್ರೆಸ್ ನಾಯಕ ಪವನ್ ಖೇರಾ, ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ಹಲವು ನಾಯಕರು ಅಲ್ಲಿಗೆ(ಜಂತರ್ ಮಂತರ್) ಭೇಟಿ ನೀಡಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ವಾಂಗ್ಚೂಕ್ ಅವರ ಅನುಪಸ್ಥಿತಿಯಲ್ಲೂ ಪ್ರತಿಭಟನೆ ಮುಂದುವರಿಯಲಿದೆ’ ಎಂದು ತಿಳಿಸಿದ್ದಾರೆ.