ಸಂತೇಬೆನ್ನೂರು| ಬರದ ಛಾಯೆ; ಬಾಡುತ್ತಿದೆ ಬೆಳೆ
ಸಂತೇಬೆನ್ನೂರು: ಮಳೆ ಕೊರತೆ ದಿನದಿಂದ ದಿನಕ್ಕೆ ರೈತರಲ್ಲಿ ಆತಂಕ ಹೆಚ್ಚಿಸುತ್ತಿದೆ. ಕೆಲವೆಡೆ ಬಿತ್ತಿದ ಮುಂಗಾರು ಹಂಗಾಮಿನ ಬೆಳೆ ಬಿಸಿಲ ಝಳಕ್ಕೆ ಬಾಡುತ್ತಿದೆ. ಬರದ ಛಾಯೆ ಆವರಿಸಿದ್ದು, ಅನ್ನದಾತರಲ್ಲಿ ಕಳವಳ ಮೂಡಿಸಿದೆ.ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ 7,500 ಹೆಕ್ಟೇರ್ ಮಳೆಯಾಧಾರಿತ ಕೃಷಿ ಭೂಮಿ ಇದೆ. 3,500 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆ ಆಗಿದೆ. ಜೂನ

ಸಂತೇಬೆನ್ನೂರು: ಮಳೆ ಕೊರತೆ ದಿನದಿಂದ ದಿನಕ್ಕೆ ರೈತರಲ್ಲಿ ಆತಂಕ ಹೆಚ್ಚಿಸುತ್ತಿದೆ. ಕೆಲವೆಡೆ ಬಿತ್ತಿದ ಮುಂಗಾರು ಹಂಗಾಮಿನ ಬೆಳೆ ಬಿಸಿಲ ಝಳಕ್ಕೆ ಬಾಡುತ್ತಿದೆ. ಬರದ ಛಾಯೆ ಆವರಿಸಿದ್ದು, ಅನ್ನದಾತರಲ್ಲಿ ಕಳವಳ ಮೂಡಿಸಿದೆ.ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ 7,500 ಹೆಕ್ಟೇರ್ ಮಳೆಯಾಧಾರಿತ ಕೃಷಿ ಭೂಮಿ ಇದೆ. 3,500 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆ ಆಗಿದೆ. ಜೂನ್ ಅಂತ್ಯ ಹಾಗೂ ಜುಲೈ ಆರಂಭದಲ್ಲಿ ಸುರಿದಿದ್ದ ಮಳೆಯನ್ನು ನೆಚ್ಚಿಕೊಂಡು ರೈತರು ಮೆಕ್ಕೆಜೋಳ ಬಿತ್ತನೆ ಕೈಗೊಂಡಿದ್ದರು. ಮಳೆ ಕೊರತೆಯಿಂದ ಬೀಜ ಮೊಳಕೆ ಒಡೆದಿಲ್ಲ. ಮಳೆ ಬಂದರೂ ಚಿಗುರುವ ಭರವಸೆ ಉಳಿದಿಲ್ಲ.‘ಅಲ್ಪಸ್ವಲ್ಪ ಬೆಳೆದು ನಿಂತ ಮೆಕ್ಕೆಜೋಳದ ಬೆಳೆ ಬಾಡುತ್ತಿದೆ. ಇನ್ನೂ 3–4 ದಿನಗಳಲ್ಲಿ ಮಳೆ ಬಾರದಿದ್ದರೆ ಬೆಳೆ ಮಣ್ಣು ಪಾಲಾಗುವುದು ಖಚಿತ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.‘ಉಳುಮೆ, ಬೀಜ, ಗೊಬ್ಬರಕ್ಕಾಗಿ ಪ್ರತಿ ಎಕರೆಗೆ ₹ 8,000ದಿಂದ ₹ 10,000 ಖರ್ಚು ತಗುಲಿದೆ. ಮಳೆಗಾಗಿ ನಿತ್ಯ ಮುಗಿಲು ನೋಡುವುದೇ ಆಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಬೆಳೆ ಕೈ ಹಿಡಿಯುವ ಭರವಸೆ ಇಲ್ಲದೆ ಆತ್ಮವಿಶ್ವಾಸ ಕುಗ್ಗಿದೆ. ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ತಕ್ಷಣ ಬರ ಪರಿಹಾರ ನೀಡಲು ಕ್ರಮ ವಹಿಸಬೇಕು’ ಎಂದು ರೈತರಾದ ಸುರೇಶ್, ಬಸಣ್ಣ, ಕುಮಾರ್ ಕೋರಿದರು.‘ಮಳೆ ವ್ಯಾಪಕವಾಗಿ ಸುರಿದಿಲ್ಲ. ಕೆಲವೆಡೆ ಒಂದೆರಡು ಸಲ ಉತ್ತಮ ಮಳೆ ಆಗಿದೆ. ಸೋಮಲಾಪುರ, ಚೆನ್ನಾಪುರ, ಕೊಂಡದಹಳ್ಳಿ, ಕುಳೇನೂರು, ಚಿಕ್ಕಬೆನ್ನೂರು, ದೊಡ್ಡೇರಿಕಟ್ಟೆ ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಬಿತ್ತನೆ ಸಾಧ್ಯವಾಗಿಲ್ಲ. ಹೊಲ ಹಸನು ಮಾಡಿ ಮಳೆಗಾಗಿ ಕಾದು ಸಾಕಾಗಿದೆ. ಮಳೆ ಬಂದರೂ ಬಿತ್ತನೆ ಮಾಡಿ ಬೆಳೆ ತೆಗೆಯುವ ವಿಶ್ವಾಸವೂ ಉಳಿದಿಲ್ಲ’ ಎನ್ನುತ್ತಾರೆ ರೈತರಾದ ಶಿವು, ರಂಗಸ್ವಾಮಿ.‘ಈ ಬಾರಿ ಶೇ 70ರಷ್ಟು ರೈತರು ಮೆಕ್ಕೆಜೋಳ ಬಿತ್ತನೆಗೆ ಸಿದ್ಧತೆ ನಡೆಸಿದ್ದರು. ಉಳಿದಂತೆ ಶೇ 30ರಷ್ಟು ರೈತರಿಗೆ ಸೋಯಾಬಿನ್ ಹಾಗೂ ರಾಗಿ ಪರ್ಯಾಯ ಬೆಳೆಯಾಗಿದೆ. ಪಾಪ್ ಕಾರ್ನ್ ಮೆಕ್ಕೆಜೋಳ ಬಿತ್ತನೆ ತೀವ್ರ ಕುಸಿತ ಕಂಡಿದೆ. ಜೂನ್ 1ರಿಂದ ಜುಲೈ 15ರ ವರೆಗೆ ಸಂತೇಬೆನ್ನೂರು-1 ಹೋಬಳಿಯಲ್ಲಿ 121 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, 60 ಮಿ.ಮೀ. ಬಿದ್ದಿದೆ. ಸಂತೇಬೆನ್ನೂರು-2 ಹೋಬಳಿಯಲ್ಲಿ 134 ಮಿ.ಮೀ. ವಾಡಿಕೆ ಪೈಕಿ 62 ಮಿ.ಮೀ. ಮಳೆ ಆಗಿದೆ. ಒಟ್ಟಾರೆ ಶೇ 52ರಷ್ಟು ಮಳೆ ಕೊರತೆ ಉಂಟಾಗಿದೆ’ ಎನ್ನುತ್ತಾರೆ ಕೃಷಿ ಅಧಿಕಾರಿ ಬಿ.ಬಿ. ಕುಮಾರ್.‘ಹದಮಳೆ ಇಲ್ಲದೆ ತೇವಾಂಶವೂ ಕುಸಿದಿದೆ. ಬರ ಪರಿಹಾರ ನೀಡಲು ಸರ್ಕಾರ ಸಮೀಕ್ಷೆ ನಡೆಸಬೇಕು’ ಎನ್ನುತ್ತಾರೆ ರೈತರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260719-43-330954436