ಹೋಂಸ್ಟೇ ನೋಂದಣಿ ಕಡ್ಡಾಯ – ಇದುವರೆಗೂ 500ಕ್ಕೂ ಅಧಿಕ ಹೋಂಸ್ಟೇಗಳ ನೋಂದಣಿಗೆ ಅರ್ಜಿ
ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಹೋಂಸ್ಟೇಗಳೂ (Homestay) ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದುವರೆಗೂ 500ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದು, ನೋಂದಣಿ ಮಾಡಿಸದಿರುವ ಎಲ್ಲಾ ಅರ್ಹ ಹೋಂಸ್ಟೇ ಮಾಲೀಕರು ವಿಳಂಬ ಮಾಡದೆ ಶೀಘ್ರವೇ ಪ್ರವಾಸೋದ್ಯಮ ಇಲಾಖೆಯ (Tourism De

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಹೋಂಸ್ಟೇಗಳೂ (Homestay) ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದುವರೆಗೂ 500ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದು, ನೋಂದಣಿ ಮಾಡಿಸದಿರುವ ಎಲ್ಲಾ ಅರ್ಹ ಹೋಂಸ್ಟೇ ಮಾಲೀಕರು ವಿಳಂಬ ಮಾಡದೆ ಶೀಘ್ರವೇ ಪ್ರವಾಸೋದ್ಯಮ ಇಲಾಖೆಯ (Tourism Department) ಮೂಲಕ ಅಧಿಕೃತವಾಗಿ ನೋಂದಾಯಿಸಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾದ ಡಾ.ರಾಮ್ ಪ್ರಸಾತ್ ಮನೋಹರ್ (Dr. V. Ram Prasath Manohar) ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ‘ಕರ್ನಾಟಕ ಹೋಂಸ್ಟೇ ನೋಂದಣಿ ಮಾರ್ಗಸೂಚಿ-2025’ ಜಾರಿಗೆ ತಂದಿದ್ದು, ಇದಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈವರೆಗೂ 500ಕ್ಕೂ ಹೆಚ್ಚು ಹೋಂಸ್ಟೇ ಮಾಲೀಕರು ಅಧಿಕೃತ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಯೊಂದು ಹೋಂಸ್ಟೇಗೂ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಇದುವರೆಗೂ ನೋಂದಣಿ ಮಾಡಿಸದಿರುವ ಎಲ್ಲಾ ಅರ್ಹ ಹೋಂಸ್ಟೇ ಮಾಲೀಕರು ವಿಳಂಬ ಮಾಡದೆ ಶೀಘ್ರವೇ ಪ್ರವಾಸೋದ್ಯಮ ಇಲಾಖೆಯ ಮೂಲಕ ಅಧಿಕೃತವಾಗಿ ನೋಂದಾಯಿಸಿಕೊಳ್ಳುವಂತೆ ಆಯುಕ್ತರು ಕರೆ ನೀಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ, ಮಕ್ಕಳಾಗಿಲ್ಲವೆಂಬ ಬೇಸರಕ್ಕೆ ಗೃಹಿಣಿ ನೇಣಿಗೆ ಶರಣು ಕಟ್ಟುನಿಟ್ಟಿನ ಪರಿಶೀಲನಾ ಪ್ರಕ್ರಿಯೆ: ಸ್ವೀಕೃತವಾಗಿರುವ ಅರ್ಜಿಗಳ ಪೈಕಿ ಈಗಾಗಲೇ ಸುಮಾರು 400 ಅರ್ಜಿಗಳ ದಾಖಲಾತಿ ಪರಿಶೀಲನೆ ಪೂರ್ಣಗೊಂಡಿದ್ದು, ಪ್ರಸ್ತುತ ಸ್ಥಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಸಲ್ಲಿಕೆಯಾಗುವ ಪ್ರತಿ ಅರ್ಜಿಯನ್ನೂ ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ/ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನೊಳಗೊಂಡ ತಂಡವು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕವೇ ನೋಂದಣಿ ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಮೂಲಸೌಕರ್ಯ, ಭದ್ರತೆ, ಸ್ವಚ್ಛತೆ ಹಾಗೂ ಕಾರ್ಯಾಚರಣೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ಇದನ್ನೂ ಓದಿ: ಚೆನ್ನಮ್ಮ ದೀರ್ಘ ಸುಮಂಗಲಿಯಾಗಿ ಹೋಗಿದ್ದಾರೆ: ಕಂಬನಿ ಮಿಡಿದ ಬ್ರಹ್ಮಾಂಡ ಗುರೂಜಿ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಕನಿಷ್ಠ ಮಾನದಂಡಗಳನ್ನು ಪೂರೈಸದ ಹೋಂಸ್ಟೇಗಳಿಗೆ ನೋಂದಣಿ ಮಾನ್ಯತೆ ನೀಡಲಾಗುವುದಿಲ್ಲ. ಅಂತಹವರು ಅಗತ್ಯ ಲೋಪಗಳನ್ನು ಸರಿಪಡಿಸಿಕೊಂಡು ಮರು-ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಾ ಹಂತದ ಪರಿಶೀಲನೆಗಳು ಮುಕ್ತಾಯಗೊಂಡು, ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ದೊರೆತ 45 ದಿನಗಳ ಒಳಗಾಗಿ ನೋಂದಣಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರವು ಐದು ವರ್ಷಗಳ ಕಾಲ ಮಾನ್ಯತೆ ಹೊಂದಲಿದ್ದು, ತದನಂತರ ನವೀಕರಿಸಿಕೊಳ್ಳುವುದು ಕಡ್ಡಾಯ. ಇದನ್ನೂ ಓದಿ: ನನಗಾಗಿ ಅವರು ಆ್ಯಸಿಡ್ ಹಾಕಿಸಿಕೊಂಡಿದ್ರು, ನನ್ನ ದೇವತೆಯನ್ನೇ ಕಳೆದುಕೊಂಡೆ: ಬಿಕ್ಕಿ ಬಿಕ್ಕಿ ಅತ್ತ ಹೆಚ್.ಡಿ.ರೇವಣ್ಣ ನೈಜ ಹೋಂಸ್ಟೇಗಳಿಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ: ಈ ಕಡ್ಡಾಯ ನೋಂದಣಿ ವ್ಯವಸ್ಥೆಯಿಂದಾಗಿ ರಾಜ್ಯದಲ್ಲಿನ ನೈಜ ಹೋಂಸ್ಟೇಗಳಿಗೆ ಸರ್ಕಾರದ ಅಧಿಕೃತ ಮಾನ್ಯತೆ ದೊರೆಯಲಿದೆ. ಇದು ಪ್ರವಾಸಿಗರಿಗೆ ವಿಶ್ವಾಸಾರ್ಹ ಹಾಗೂ ಸುರಕ್ಷಿತ ವಸತಿ ವ್ಯವಸ್ಥೆಯನ್ನು ಒದಗಿಸುವುದರ ಜೊತೆಗೆ, ಇಲಾಖೆಯ ಮಟ್ಟದಲ್ಲಿ ಅಧಿಕೃತ ಡೇಟಾಬೇಸ್ ನಿರ್ವಹಿಸಲು ಸಹಕಾರಿಯಾಗಲಿದೆ. ನೋಂದಾಯಿತ ಹೋಂಸ್ಟೇಗಳು ಸರ್ಕಾರದ ಸುರಕ್ಷತಾ ಮತ್ತು ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಬೇಕಾಗುತ್ತದೆ ಎಂದು ಆಯುಕ್ತರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನಮ್ಮ ನಿಧನ – ಇಂದು, ನಾಳೆ ಹಾಸನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ