ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭ; ಕಾವೇರಿದ ಚರ್ಚೆ ನಿರೀಕ್ಷೆ
ನವದೆಹಲಿ: ಸೋಮವಾರದಿಂದ ಆರಂಭಗೊಳ್ಳಲಿರುವ ಮಳೆಗಾಲದ ಅಧಿವೇಶನವು ಕಾವೇರಿದ ಹೋರಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಗಳಿವೆ. ರಾಮಮಂದಿರ ದೇಣಿಗೆ ಕಳವು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಸಂಸದರ ಪಕ್ಷಾಂತರ ವಿಚಾರ ಮುಂದಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ತಿರುಗಿ ಬೀಳಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ.ಮತ್ತೊಂದೆಡೆ, ನೀಟ್ ವೈಫಲ್ಯದ ಹೊಣೆ ಹೊತ್ತು ಶಿಕ್ಷಣ ಸ

ನವದೆಹಲಿ: ಸೋಮವಾರದಿಂದ ಆರಂಭಗೊಳ್ಳಲಿರುವ ಮಳೆಗಾಲದ ಅಧಿವೇಶನವು ಕಾವೇರಿದ ಹೋರಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಗಳಿವೆ. ರಾಮಮಂದಿರ ದೇಣಿಗೆ ಕಳವು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಸಂಸದರ ಪಕ್ಷಾಂತರ ವಿಚಾರ ಮುಂದಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ತಿರುಗಿ ಬೀಳಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ.ಮತ್ತೊಂದೆಡೆ, ನೀಟ್ ವೈಫಲ್ಯದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ವಿರೋಧ ಪಕ್ಷಗಳು ಇದಕ್ಕೆ ಬೆಂಬಲ ಸೂಚಿಸಿವೆ. ಪ್ರಮುಖ ವಿಚಾರ ಚರ್ಚಿಸಿ: ‘ಅಯೋಧ್ಯೆಯ ಶ್ರೀರಾಮಮಂದಿರ ದೇಣಿಗೆ ಹಾಗೂ ಕಾಣಿಕೆಯ ಕಳ್ಳತನ, ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಮಣಿಪುರದಲ್ಲಿನ ಸ್ಥಿತಿಗತಿಯ ಕುರಿತಂತೆ ಅಧಿವೇಶನದಲ್ಲಿ ಚರ್ಚಿಸಲು ಅವಕಾಶ ಕೋರಲಾಗಿದೆ’ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ತಿಳಿಸಿದ್ದಾರೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಅಧಿವೇಶನದ ಮುನ್ನಾದಿನ ಸಂಸತ್ನಲ್ಲಿ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಈ ವಿಷಯ ತಿಳಿಸಿದ್ದಾರೆ. ‘ಅಧಿವೇಶನಕ್ಕಾಗಿ ಸರ್ಕಾರವು ಹಲವು ಮಸೂದೆಗಳನ್ನು ಪಟ್ಟಿ ಮಾಡಿದೆ. ಅದಕ್ಕಿಂತಲೂ ಮುಖ್ಯವಾದ ವಿಷಯಗಳ ಕುರಿತು ಚರ್ಚಿಸಲು ಅವಕಾಶ ನೀಡಬೇಕು’ ಎಂದು ಗೊಗೊಯಿ ಪ್ರತಿಪಾದಿಸಿದ್ದಾರೆ.‘ವಿರೋಧ ಪಕ್ಷಗಳು ಜನರ ಸಮಸ್ಯೆಯನ್ನು ಪ್ರಸ್ತಾಪಿಸಿದರೆ, ಸರ್ಕಾರವು ನಿರಂತರವಾಗಿ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ. ಸರ್ಕಾರವೂ ಈ ಸಮಸ್ಯೆಗಳಿಂದ ದೂರ ಸರಿದರೆ, ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಗೌರವ್ ಗೊಗೊಯಿ ತಿಳಿಸಿದ್ದಾರೆ.‘ರಾಮಮಂದಿರ ದೇಣಿಗೆ ಕಳ್ಳತನ ಹಾಗೂ ಹೋರಾಟಗಾರ ಸೊನಮ್ ವಾಂಗ್ಚೂಕ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹದ ಕುರಿತಂತೆ ಚರ್ಚೆಗೆ ಅವಕಾಶ ಕೋರಿದ್ದೇವೆ’ ಎಂದು ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ತಿಳಿಸಿದ್ದಾರೆ.‘ದೇಣಿಗೆ ಕಳ್ಳತನದ ವಿಚಾರದಲ್ಲಿ ಸರ್ಕಾರವು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕ್ಷೇತ್ರ ಪುನರ್ ವಿಂಗಡನೆಯ ಮೂಲಕ ದೇಶದಲ್ಲಿ ಸರ್ವಾಧಿಕಾರವನ್ನು ತರಲು ಯತ್ನಿಸುತ್ತಿದ್ದು, ಇಂತಹ ಎಲ್ಲ ಪ್ರಯತ್ನಗಳನ್ನು ಸಮಾಜವಾದಿ ಪಕ್ಷವು ನಿರಂತರವಾಗಿ ವಿರೋಧಿಸಲಿದೆ’ ಎಂದು ಹೇಳಿದ್ದಾರೆ.ನವದೆಹಲಿಯಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಸಚಿವರಾದ ಕಿರೆಣ್ ರಿಜಿಜು ರಾಜನಾಥ್ ಸಿಂಗ್ ಅರ್ಜುನ್ ರಾಮ್ ಮೇಘವಾಲ್ ಜೆ.ಪಿ.ನಡ್ಡಾ ಎಲ್. ಮುರುಗನ್ ಹಾಗೂ ವಿರೋಧ ಪಕ್ಷಗಳ ಸಂಸದರು ಭಾಗಿಯಾಗಿದ್ದರು–ಪಿಟಿಐ ಚಿತ್ರ -ಕಿರೆಣ್ ರಿಜಿಜು, ಸಂಸದೀಯ ಸಚಿವಸಂಸತ್ನ ಅಧಿವೇಶನವು ಸುಗಮವಾಗಿ ನಡೆಯಬೇಕೆಂದು ದೇಶದ ಜನರು ಬಯಸುತ್ತಿದ್ದಾರೆ. ನಾವು ಅದನ್ನೇ ಬಯಸುತ್ತೇವೆ. ಪ್ರತಿಭಟನೆಯಿಂದ ಯಾರಿಗೂ ಉಪಯೋಗವಿಲ್ಲ. ಎಲ್ಲ ಸದಸ್ಯರು ಸುಗಮ ಕಲಾಪಕ್ಕೆ ಸಹಕರಿಸಬೇಕು-ಮಹುವಾ ಮೊಯಿತ್ರಾ ಟಿಎಂಸಿ ಸಂಸದೆಬಂಡಾಯ 20 ಸಂಸದರ ಅನರ್ಹತೆ ವಿಚಾರವು ಇನ್ನೂ ಬಾಕಿಯಿದೆ. ಬೇರೆ ಪಕ್ಷದ ಜೊತೆ ವಿಲೀನವಾಗಲು ಇನ್ನೂ ಕೂಡ ಸ್ಪೀಕರ್ ಅನುಮತಿ ನೀಡಿಲ್ಲ. ಯಾವ ಆಧಾರದಲ್ಲಿ ಅವರನ್ನು ಸರ್ವಪಕ್ಷದ ಸಭೆಗೆ ಆಹ್ವಾನಿಸಲಾಗಿದೆ? -ಅರವಿಂದ್ ಸಾವಂತ್ ಸಂಸದ ಶಿವಸೇನಾ (ಯುಬಿಟಿ)ಆರು ಮಂದಿ ಸಂಸದರಿಗೆ ವಿಲೀನ ಮಾಡಲು ಅವಕಾಶ ನೀಡಲಾಗಿದೆ. ಕಾನೂನು ಪುಸ್ತಕಗಳಲ್ಲಿ ಆ ಪದ ಎಲ್ಲಿದೆ? -ಎನ್.ಡಿ.ಗುಪ್ತಾ ಸಂಸದ ಆಮ್ಆದ್ಮಿ ಪಕ್ಷದ 10 ಮಂದಿ ಸಂಸದರ ಪೈಕಿ 7 ಮಂದಿಯನ್ನು ಅಪಹರಿಸಲಾಗಿದೆ. ವಿಲೀನದ ಕುರಿತು ಪಕ್ಷ ಸಲ್ಲಿಸಿರುವ ಅರ್ಜಿ ಇನ್ನೂ ಕೂಡ ಇತ್ಯರ್ಥವಾಗಬೇಕಿದೆ ಸರ್ವಪಕ್ಷ ಸಭೆ; ಹೊರನಡೆದ ವಿರೋಧ ಪಕ್ಷಗಳು ನವದೆಹಲಿ: ಅಧಿವೇಶನದ ಹಿನ್ನಲೆಯಲ್ಲಿ ಕರೆದಿದ್ದ ಸರ್ವಪಕ್ಷಗಳ ಸಭೆಯು ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಪಕ್ಷದ ಬಂಡಾಯ ಸಂಸದರನ್ನು ಸಭೆಗೆ ಆಹ್ವಾನಿಸಿದ್ದನ್ನು ಪ್ರಶ್ನಿಸಿದರು. ‘ಅಧಿವೇಶನದಲ್ಲಿ ಪ್ರತ್ಯೇಕ ಸೀಟುಗಳ ವ್ಯವಸ್ಥೆ ಮಾಡುವಂತೆ ಬಂಡಾಯ ಸಂಸದರು ಈಗಾಗಲೇ ಸ್ಪೀಕರ್ಗೆ ಮನವಿ ನೀಡಿದ್ದಾರೆ. ಪ್ರತಿಯೊಬ್ಬರನ್ನೂ ಆಹ್ವಾನಿಸುವುದು ಸರ್ಕಾರದ ಕರ್ತವ್ಯವಾಗಿದೆ’ ಎಂದು ಸಂಸದೀಯ ಸಚಿವ ಕಿರಣ್ ರಿಜಿಜು ಸಮರ್ಥಿಸಿಕೊಂಡರು. ಬಂಡಾಯ ಸಂಸದರನ್ನು ಸಭೆಗೆ ಆಹ್ವಾನಿಸಿರುವುದು ‘ನ್ಯಾಯದ ಗರ್ಭಪಾತ’ ಎಂದು ಸಿಪಿಎಂನ ನಾಯಕ ಜಾನ್ ಬ್ರಿಟ್ಟಾಸ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಮಹುವಾ ‘ಇಲ್ಲಿ ಏನು ನಡೆಯುತ್ತಿದೆ. ಇದು ಸಂಖ್ಯೆಯ ವಿಚಾರವಲ್ಲ ಕಾನೂನಿನ ವಿಚಾರ. ಪ್ರಜಾಪ್ರಭುತ್ವ ವಿರೋಧಿ ಸಂವಿಧಾನ ವಿರೋಧಿಯಾಗಿದೆ’ ಎಂದು ಸಭೆಯಿಂದ ಹೊರನಡೆಯುವುದಾಗಿ ಪ್ರಕಟಿಸಿದರು. ಮಹುವಾ ಸದನದಿಂದ ಹೊರನಡೆಯುತ್ತಿದ್ದಂತೆಯೇ ಕಾಂಗ್ರೆಸ್ ಸಮಾಜವಾದಿ ಪಕ್ಷ ಡಿಎಂಕೆ ಶಿವಸೇನಾ (ಯುಬಿಟಿ) ಸಿಪಿಐ (ಎಂ) ಸಿಪಿಐ ಆರ್ಎಸ್ಪಿ ಸಿಪಿಐಎಂಎಲ್(ಎಲ್) ಕೇರಳ ಕಾಂಗ್ರೆಸ್ನ ಸಂಸದರು ಹೊರ ನಡೆದು ಪ್ರತಿಭಟನೆ ದಾಖಲಿಸಿದರು. ಇದಾದ ಕೆಲಹೊತ್ತಿನಲ್ಲೇ ವಿರೋಧ ಪಕ್ಷದ ನಾಯಕರು ಮತ್ತೆ ಸಭೆಗೆ ಹಾಜರಾದರು. ಮತ್ತೆ ಸಭೆ ಆರಂಭವಾಗುತ್ತಿದ್ದಂತೆ ಟಿಎಂಸಿ ಬಂಡಾಯ ಸಂಸದರಿಗೆ ಸದನದಲ್ಲಿ ಪ್ರತ್ಯೇಕವಾದ ಸೀಟು ವ್ಯವಸ್ಥೆ ಶಿವಸೇನಾ(ಯುಬಿಟಿ) ಸಂಸದರು ಶಿಂದೆ ನೇತೃತ್ವದ ಶಿವಸೇನಾ ಜೊತೆಗೆ ವಿಲೀನಕ್ಕೆ ಅವಕಾಶ ಆಮ್ ಆದ್ಮಿ ಪಕ್ಷದ 10 ಸಂಸದರ ಪೈಕಿ 7 ಮಂದಿಗೆ ಬಿಜೆಪಿ ಜೊತೆ ವಿಲೀನ ಮಾಡಲು ಅವಕಾಶ ನೀಡಿದ ಸ್ಪೀಕರ್ ಒಂ ಬಿರ್ಲಾ ನಿರ್ಧಾರದ ವಿರುದ್ಧ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಆಡಳಿತ ಪಕ್ಷದ ನಾಯಕರು ‘ವಿರೋಧ ಪಕ್ಷಗಳ ಎಲ್ಲ ಬೇಡಿಕೆಗಳನ್ನು ಆಲಿಸಲು ಸರ್ಕಾರ ಸಿದ್ಧವಾಗಿದೆ. ವಿರೋಧ ಪಕ್ಷಗಳು ಸರ್ಕಾರದ ಮಾತನ್ನು ಕೇಳಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬಂಡಾಯ ಸಂಸದರು ಭಾಗಿ: ಸರ್ವಪಕ್ಷ ಸಭೆಯಲ್ಲಿ ಟಿಎಂಸಿ ಸಂಸದೆ ಸುದೀಪ್ ಬಂಡೋಪಾಧ್ಯಾಯ ಕಾಕೋಲಿ ಘೋಷ್ ದಸ್ತಿದಾರ್ ಕೂಡ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್ಸಿಪಿಐ) ಪಕ್ಷದ ಪರವಾಗಿ ಪ್ರತಿನಿಧಿಸಿದರು. ‘ಎನ್ಸಿಪಿಐ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಿದೆ. 20 ಸಂಸದರು ಪಕ್ಷ ತ್ಯಜಿಸಿದ ಬಳಿಕ ಟಿಎಂಸಿ ಸಣ್ಣ ಪಕ್ಷವಾಗಿದೆ. ಸರ್ವಪಕ್ಷಗಳ ಸಭೆಯಿಂದ ವಿರೋಧ ಪಕ್ಷಗಳು ಹೊರನಡೆಯುವುದನ್ನು ಇದುವರೆಗೂ ನಾನು ಕೇಳಿಲ್ಲ’ ಎಂದು ಸುದೀಪ್ ಬಂಡೋಪಾಧ್ಯಾಯ ತಿರುಗೇಟು ನೀಡಿದ್ದಾರೆ.