ಮೊದಲ ಓದು: ಆರೋಗ್ಯದ ಸಮಗ್ರ ಮಾಹಿತಿಗೆ ವಿಶ್ವಕೋಶ
ವ್ಯಕ್ತಿಯ ಬದುಕಿನಲ್ಲಿ ಆರೋಗ್ಯದ ಪಾತ್ರ ಅತ್ಯಂತ ಮಹತ್ವದ್ದು. ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯವನ್ನು ಕೇವಲ ರೋಗರಹಿತ ಸ್ಥಿತಿಯಾಗಿ ಅಲ್ಲ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಕ್ಷೇಮದ ಸಮಗ್ರ ಸ್ಥಿತಿಯಾಗಿ ವ್ಯಾಖ್ಯಾನಿಸಿದೆ. ಅಂದರೆ ಆರೋಗ್ಯವೆಂದರೆ ದೇಹದ ಎಲ್ಲ ಅಂಗಗಳು ಸಹಜವಾಗಿ ಕಾರ್ಯನಿರ್ವಹಿಸುವುದಷ್ಟೇ ಅಲ್ಲ, ಬದುಕಿನ ಸಮತೋಲನವನ್ನು ಕಾಪಾಡುವ ಸ್ಥಿತಿಯೂ ಹೌದು.ಆರೋಗ್ಯ

ವ್ಯಕ್ತಿಯ ಬದುಕಿನಲ್ಲಿ ಆರೋಗ್ಯದ ಪಾತ್ರ ಅತ್ಯಂತ ಮಹತ್ವದ್ದು. ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯವನ್ನು ಕೇವಲ ರೋಗರಹಿತ ಸ್ಥಿತಿಯಾಗಿ ಅಲ್ಲ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಕ್ಷೇಮದ ಸಮಗ್ರ ಸ್ಥಿತಿಯಾಗಿ ವ್ಯಾಖ್ಯಾನಿಸಿದೆ. ಅಂದರೆ ಆರೋಗ್ಯವೆಂದರೆ ದೇಹದ ಎಲ್ಲ ಅಂಗಗಳು ಸಹಜವಾಗಿ ಕಾರ್ಯನಿರ್ವಹಿಸುವುದಷ್ಟೇ ಅಲ್ಲ, ಬದುಕಿನ ಸಮತೋಲನವನ್ನು ಕಾಪಾಡುವ ಸ್ಥಿತಿಯೂ ಹೌದು.ಆರೋಗ್ಯ, ಕಾಡುವ ಅನಾರೋಗ್ಯಗಳು ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಅನೇಕ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿವೆ. ಆದರೆ ದೇಹದ ವಿವಿಧ ಅಂಗಗಳ ರಚನೆ, ಅವುಗಳ ಕಾರ್ಯವಿಧಾನ, ಅವುಗಳಿಗೆ ಕಾಡಬಹುದಾದ ರೋಗಗಳು, ರೋಗಲಕ್ಷಣಗಳು, ಪತ್ತೆ ವಿಧಾನಗಳು ಹಾಗೂ ಚಿಕಿತ್ಸಾ ಕ್ರಮಗಳನ್ನು ವೈದ್ಯಕೀಯ ವಿಶ್ವಕೋಶದ ಮಾದರಿಯಲ್ಲಿ, ಸಾಮಾನ್ಯ ಓದುಗರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ವಿವರಿಸುವ ಕೃತಿಗಳು ವಿರಳ. ವೈದ್ಯಕೀಯ ಪರಿಭಾಷೆಗೆ ಕನ್ನಡದಲ್ಲಿ ಸಮಾನಾರ್ಥಕ ಪದಗಳ ಕೊರತೆ ಹಾಗೂ ತಾಂತ್ರಿಕ ವಿಷಯಗಳನ್ನು ಸುಲಭವಾಗಿ ನಿರೂಪಿಸುವ ಸವಾಲು ಇದಕ್ಕೆ ಕಾರಣವಾಗಿರಬಹುದು.ಈ ಕೊರತೆ ನೀಗಿಸುವ ಯತ್ನವಾಗಿ ಡಾ. ಎಸ್.ಪಿ. ಯೋಗಣ್ಣ ಅವರು ಮೂರು ಸಂಪುಟಗಳಲ್ಲಿ ‘ಆರೋಗ್ಯ ವಿಶ್ವಕೋಶ’ ಪ್ರಕಟಿಸಿದ್ದಾರೆ. ಕನ್ನಡ ವೈದ್ಯ ಸಾಹಿತ್ಯದಲ್ಲಿ ಈಗಾಗಲೇ ಪರಿಚಿತರಾಗಿರುವ, ಮೈಸೂರು ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಯೋಗಣ್ಣ ಅವರ 50ನೇ ಕೃತಿಯಿದು. ಆರೋಗ್ಯಕ್ಕೆ ಸಂಬಂಧಿಸಿದ ಆಧುನಿಕ ವೈದ್ಯವಿಜ್ಞಾನದ ಪ್ರಮುಖ ಮಾಹಿತಿಯನ್ನೆಲ್ಲ ಕನ್ನಡದಲ್ಲೇ ಒಂದೆಡೆ ಒದಗಿಸಬೇಕು ಎಂಬ ಉದ್ದೇಶದಿಂದ ಈ ಬೃಹತ್ ಕೃತಿಯನ್ನು ರೂಪಿಸಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ.ಮನುಷ್ಯನ ದೇಹವನ್ನು 13 ಕಾರ್ಯವ್ಯವಸ್ಥೆಗಳಾಗಿ ವಿಂಗಡಿಸಿ, ಅವುಗಳನ್ನು ಅಕಾರಾದಿಯಲ್ಲಿ ಜೋಡಿಸಿರುವುದು ಕೃತಿಯ ಪ್ರಮುಖ ವೈಶಿಷ್ಟ್ಯ. ಪ್ರತಿಯೊಂದು ವ್ಯವಸ್ಥೆಯಲ್ಲೂ ಸಂಬಂಧಿಸಿದ ಅಂಗಗಳ ರಚನೆ, ಕಾರ್ಯ, ಸಾಮಾನ್ಯ ಹಾಗೂ ಗಂಭೀರ ಕಾಯಿಲೆಗಳು, ಅವುಗಳ ಲಕ್ಷಣಗಳು, ಪರೀಕ್ಷಾ ವಿಧಾನಗಳು ಮತ್ತು ಚಿಕಿತ್ಸೆಯ ಕುರಿತು ಕ್ರಮಬದ್ಧವಾಗಿ ವಿವರಿಸಲಾಗಿದೆ. ಹೀಗಾಗಿ ಕೃತಿ ಮೂರು ಬೃಹತ್ ಸಂಪುಟಗಳಾಗಿ ವಿಸ್ತರಿಸಿದೆ. ತಮ್ಮ ವೈದ್ಯಕೀಯ ಅನುಭವದ ಜೊತೆಗೆ ಆರೋಗ್ಯ, ವೈದ್ಯವಿಜ್ಞಾನ, ಸಾಹಿತ್ಯ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ 80ಕ್ಕೂ ಹೆಚ್ಚು ಕೃತಿಗಳನ್ನು ಪರಾಮರ್ಶಿಸಿರುವುದು ಮಾಹಿತಿಯ ವ್ಯಾಪ್ತಿಗೆ ಪೂರಕವಾಗಿದೆ.ಮೊದಲ ನೋಟದಲ್ಲೇ ಕೃತಿ ಮಾಹಿತಿಯ ಸಮೃದ್ಧಿಯಿಂದ ಗಮನ ಸೆಳೆಯುತ್ತದೆ. ಪ್ರತಿಯೊಂದು ವಿಭಾಗವೂ ವಿವರಪೂರ್ಣವಾಗಿದೆ. ಸಾಧ್ಯವಾದಷ್ಟು ಕನ್ನಡ ಪದಗಳನ್ನು ಬಳಸಲು ಪ್ರಯತ್ನಿಸಿರುವ ಲೇಖಕರು, ಅಗತ್ಯವಿರುವ ಕಡೆ ಸಾಮಾನ್ಯ ಬಳಕೆಯ ಇಂಗ್ಲಿಷ್ ಪದಗಳನ್ನೂ ಜೊತೆಯಾಗಿ ನೀಡಿದ್ದಾರೆ. ಸಮರ್ಪಕ ಕನ್ನಡ ಪದಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಮೂಲ ಇಂಗ್ಲಿಷ್ ಪರಿಭಾಷೆಯನ್ನೇ ಉಳಿಸಿಕೊಂಡಿರುವುದರಿಂದ ಓದುಗನಿಗೆ ಗೊಂದಲ ಉಂಟಾಗುವುದಿಲ್ಲ. ವಿಷಯದ ಗಂಭೀರತೆ ಕಾರಣ ಓದು ದೀರ್ಘವೆನಿಸಿದರೂ ಅದು ಮಾಹಿತಿಯ ಸಮಗ್ರತೆಯ ಭಾಗವಾಗಿಯೇ ಕಾಣುತ್ತದೆ.ಉದಾಹರಣೆಗೆ, ‘ಎದೆ’ ಕುರಿತ ವಿಭಾಗವೇ ಸುಮಾರು 49 ಪುಟಗಳನ್ನು ವ್ಯಾಪಿಸಿದೆ. ಎದೆಯ ರಚನೆ, ಪಕ್ಕೆಲುಬುಗಳು, ಎದೆಗೂಡು, ಸ್ನಾಯುಗಳು, ಸ್ತನಗ್ರಂಥಿ, ಸ್ತನ ಕ್ಯಾನ್ಸರ್, ಎದೆಪೊರೆ, ಮಧ್ಯಎದೆ, ಎದೆನೋವು, ಗಾಳಿ ತುಂಬಿದ ಎದೆ ಮೊದಲಾದ ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ವಿವರಣೆ ಇದೆ. ಅದೇ ರೀತಿ ‘ಕಿವಿ’ ವಿಭಾಗದಲ್ಲಿ ಹೊರಕಿವಿಯಿಂದ ಒಳಕಿವಿವರೆಗೆ ಅದರ ರಚನೆ, ಶ್ರವಣದ ಕಿರುಮೂಳೆಗಳು, ಕಾಕ್ಲಿಯಾ, ಲ್ಯಾಬಿರಿಂತ್, ಮೆನಿಯರ್ ಕಾಯಿಲೆ, ವಿವಿಧ ಪರೀಕ್ಷೆಗಳು, ಕಿವಿ ಸೋರಿಕೆ ಸೇರಿದಂತೆ ಸಂಬಂಧಿತ ವಿಷಯಗಳನ್ನು ವಿಸ್ತೃತವಾಗಿ ವಿವರಿಸಲಾಗಿದೆ. ಈ ಮಾದರಿ ಕೃತಿಯ ಎಲ್ಲ ಭಾಗಗಳಲ್ಲಿಯೂ ಮುಂದುವರಿಯುತ್ತದೆ.ವಯಸ್ಸಿನೊಂದಿಗೆ ದೇಹದಲ್ಲಿ ಆಗುವ ಬದಲಾವಣೆಗಳು, ಅವುಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಅವುಗಳಿಗೆ ಲಭ್ಯವಿರುವ ಚಿಕಿತ್ಸಾ ಸಾಧ್ಯತೆಗಳ ಕುರಿತ ಮಾಹಿತಿಯೂ ಕೃತಿಯಲ್ಲಿ ಸ್ಥಾನ ಪಡೆದಿದೆ. ವಿಷಯವಾರು ವರ್ಗೀಕರಣ, ಸ್ಪಷ್ಟ ವಿಷಯಸೂಚಿ ಮತ್ತು ಪುಟಸಂಖ್ಯೆಗಳಿರುವುದರಿಂದ ಬೇಕಾದ ಮಾಹಿತಿಯನ್ನು ಹುಡುಕುವುದು ಸುಲಭ. ಇದು ವಿಶ್ವಕೋಶದ ಮೂಲ ಉದ್ದೇಶವನ್ನು ಈಡೇರಿಸುತ್ತದೆ.ಆದರೆ ಕೃತಿಯಲ್ಲಿ ರೋಗಗಳು, ದೇಹದ ಅಂಗಗಳ ರಚನೆ ಹಾಗೂ ಚಿಕಿತ್ಸಾ ವಿಧಾನಗಳನ್ನು ವಿವರಿಸುವ ಸಂದರ್ಭದಲ್ಲಿ ಪೂರಕ ಚಿತ್ರಗಳು, ರೇಖಾಚಿತ್ರಗಳು ಅಥವಾ ವಿವರಣಾತ್ಮಕ ಚಿತ್ರಣಗಳನ್ನು ಇನ್ನಷ್ಟು ಬಳಸಿದ್ದರೆ ಅದರ ಉಪಯುಕ್ತತೆ ಹೆಚ್ಚುತ್ತಿತ್ತು. .ಪ್ರತಿ ಸಂಪುಟವೂ 800ಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವುದರಿಂದ ಇದು ಒಮ್ಮೆ ಕುಳಿತು ಓದುವ ಪುಸ್ತಕವಲ್ಲ; ಅಗತ್ಯ ಬಂದಾಗ ಉಲ್ಲೇಖಿಸಬಹುದಾದ ಮಾಹಿತಿ ಗ್ರಂಥ. ಒಟ್ಟಾರೆ, ‘ಆರೋಗ್ಯ ವಿಶ್ವಕೋಶ’ ಕನ್ನಡದಲ್ಲಿ ಆರೋಗ್ಯ ವಿವರ ದಾಖಲಿಸುವ ಪ್ರಯತ್ನ. ಸಾಮಾನ್ಯ ಓದುಗರು, ವೈದ್ಯಕೀಯ ವಿದ್ಯಾರ್ಥಿಗಳು, ಕನ್ನಡದಲ್ಲೇ ಮಾಹಿತಿ ಬಯಸುವವರಿಗೆ ಇದು ಉಲ್ಲೇಖ ಗ್ರಂಥವಾಗಬಲ್ಲದು. ಸಂಗ್ರಹಯೋಗ್ಯ ಕೃತಿಗಳ ಸಾಲಿನಲ್ಲಿ ಇದಕ್ಕೆ ಸ್ಥಾನವಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260719-51-289002479