ಜಗಳೂರು: ಬರದ ಹೊಡೆತಕ್ಕೆ ರೈತ ಸಮುದಾಯ ತತ್ತರ
ಜಗಳೂರು: ತಾಲ್ಲೂಕಿನಲ್ಲಿ ತೀವ್ರ ಮಳೆಯ ಕೊರತೆಯಿಂದಾಗಿ ಬರದ ಛಾಯೆ ಆವರಿಸಿದೆ. ಶೇ 80ರಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ. ಮಳೆ ಇಲ್ಲದೆ ಬಿತ್ತನೆ ಮಾಡಿರುವ ಬೆಳೆಯೂ ಬಾಡುತ್ತಿದ್ದು, ರೈತ ಸಮುದಾಯದಲ್ಲಿ ತಲ್ಲಣ ಮೂಡಿಸಿದೆ.ಕಸಬಾ ಹೋಬಳಿ, ಸೊಕ್ಕೆ ಹಾಗೂ ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಆರಂಭದಲ್ಲಿ ಸ್ವಲ್ಪ

ಜಗಳೂರು: ತಾಲ್ಲೂಕಿನಲ್ಲಿ ತೀವ್ರ ಮಳೆಯ ಕೊರತೆಯಿಂದಾಗಿ ಬರದ ಛಾಯೆ ಆವರಿಸಿದೆ. ಶೇ 80ರಷ್ಟು ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ. ಮಳೆ ಇಲ್ಲದೆ ಬಿತ್ತನೆ ಮಾಡಿರುವ ಬೆಳೆಯೂ ಬಾಡುತ್ತಿದ್ದು, ರೈತ ಸಮುದಾಯದಲ್ಲಿ ತಲ್ಲಣ ಮೂಡಿಸಿದೆ.ಕಸಬಾ ಹೋಬಳಿ, ಸೊಕ್ಕೆ ಹಾಗೂ ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಕಾರಣ ಕಡಿಮೆ ಪ್ರದೇಶದಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ ಬೀಜವನ್ನು ಬಿತ್ತನೆ ಮಾಡಲಾಗಿದೆ. ಆದರೆ, ಆ ಬೆಳೆಗಳೂ ಬಾಡುತ್ತಿವೆ.‘ಜೂನ್ ಮತ್ತು ಜುಲೈ ಮಧ್ಯ ಭಾಗದವರೆಗೆ ಶೇ 34ರಷ್ಟು ಮಳೆ ಕೊರತೆಯಾಗಿದೆ. ಜೂನ್ ತಿಂಗಳಲ್ಲಿ ಸೊಕ್ಕೆ ಹೋಬಳಿಯಲ್ಲಿ ಶೇ 68, ಜುಲೈನಲ್ಲಿ ಶೇ 41, ಬಿಳಿಚೋಡು ಭಾಗದಲ್ಲಿ ಶೇ 48 ಮತ್ತು ಜುಲೈ ತಿಂಗಳಿನಲ್ಲಿ ಶೇ 34ರಷ್ಟು ಮಳೆ ಕೊರತೆಯಾಗಿದೆ. ತಾಲ್ಲೂಕಿನಲ್ಲಿ 55,968 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇದ್ದು, ಇದುವರೆಗೆ ಕೇವಲ 9,305 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೂ 46,663 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಸಾಧ್ಯವಾಗಿಲ್ಲ’ ಎಂದು ಸಹಾಯಕ ಕೃಷಿ ನಿರ್ದೇಶಕಿ ಶ್ವೇತಾ ‘ಪ್ರಜಾವಾಣಿ’ಗೆ ತಿಳಿಸಿದರು.ಬಹುತೇಕ ರೈತರು ಸಾಲ ಮಾಡಿ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಖರೀದಿಸಿಟ್ಟುಕೊಂಡಿದ್ದು, ಮಳೆಗಾಗಿ ಮುಗಿಲಿನತ್ತ ಮುಖ ಮಾಡಿದ್ದಾರೆ.ಇನ್ನೂ ಕೆಲ ರೈತರು ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋಗುತ್ತಿದ್ದಾರೆ. ಹಲವು ಗ್ರಾಮಗಳಲ್ಲಿ ವಿಶಿಷ್ಟ ಪೂಜೆ, ಆಚರಣೆಗಳ ಮೂಲಕ ಸಾಂಪ್ರದಾಯಿಕವಾಗಿ ವರುಣ ದೇವರ ಮೊರೆ ಇಡುತ್ತಿದ್ದಾರೆ.‘ಮಕ್ಕಳು ತಮ್ಮ ತಲೆ ಮೇಲೆ ಮಳೆ ದೇವನ ಮೂರ್ತಿಯನ್ನು ಹೊತ್ತು ಮನೆಗೆಳಿಗೆ ತೆರಳಿ ‘ಹುಯ್ಯೋ ಹುಯ್ಯೊ.. ಮಳೆರಾಯ.. ಬಾಳೆಯ ತೋಟಕ್ಕೆ ನೀರಿಲ್ಲ’ ಎಂದು ಪ್ರಾರ್ಥಿಸುತ್ತಿದ್ದಾರೆ. ಪ್ರತಿ ಮನೆ ಮುಂದೆ ಹೋದಾಗ ಗ್ರಾಮಸ್ಥರು ಅಂಥ ಬಾಲಕರ ಮೇಲೆ ಕೊಡಗಳಿಂದ ನೀರು ಸುರಿದು, ದವಸ– ಧಾನ್ಯ ಕೊಟ್ಟು ಕಳಿಸುತ್ತಿದ್ದಾರೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260719-43-29010515