‘ನಾನು 56 ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ’: ರಾಹುಲ್ ಕಾಲೆಳೆದ ಪಿಎಂ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಕೈರೂಟ್ ಏರೋಸ್ಪೇಸ್’ ಸ್ಟಾರ್ಟ್ಅಪ್ ಸಾಧನೆಯ ಬಗ್ಗೆ ಮಾತನಾಡುತ್ತಾ, ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ.ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ (ಜುಲೈ 20), ಆಗಸ್ಟ್ 13ರವರೆಗೆ ನಡೆಯಲಿದೆ.ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ, ಸ್ಕೈರೂಟ್ ಏರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಕೈರೂಟ್ ಏರೋಸ್ಪೇಸ್’ ಸ್ಟಾರ್ಟ್ಅಪ್ ಸಾಧನೆಯ ಬಗ್ಗೆ ಮಾತನಾಡುತ್ತಾ, ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ.ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ (ಜುಲೈ 20), ಆಗಸ್ಟ್ 13ರವರೆಗೆ ನಡೆಯಲಿದೆ.ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ, ಸ್ಕೈರೂಟ್ ಏರೋಸ್ಪೇಸ್ ಯಶಸ್ವಿ ರಾಕೆಟ್ ಉಡಾವಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಂಪನಿಯ ಯುವ ತಂಡದ ಸಾಧನೆಯನ್ನು ಶ್ಲಾಘಿಸುತ್ತಾ, ‘ಈ ಯಶಸ್ಸು ಸರಾಸರಿ 28 ವರ್ಷದ ಅನ್ವೇಷಕರಿಗೆ ಸೇರಿದ್ದು, 56 ವರ್ಷದ ಯುವಕನಿಗೆ ಅಲ್ಲ’ ಎಂದು ಹೇಳಿದ್ದಾರೆ. ಆ ಮೂಲಕ, 56 ವಯಸ್ಸಿನ ರಾಹುಲ್ ಅವರನ್ನು ಪರೋಕ್ಷವಾಗಿ ಕಿಚಾಯಿಸಿದ್ದಾರೆ ಎನ್ನಲಾಗಿದೆ.‘ದೇಶದ ಯುವಕರು ಬಾಹ್ಯಾಕಾಶ ಕ್ಷೇತ್ರದ ಕಡೆಗೆ ಹೊಸ ಪಯಣ ಆರಂಭಿಸಿದ್ದಾರೆ. ‘ಸ್ಕೈರೂಟ್’ ಸ್ಟಾರ್ಟ್ಅಪ್ನಲ್ಲಿ ಕೆಲಸ ಮಾಡುತ್ತಿರುವ ತಂಡದ ಸದಸ್ಯರೆಲ್ಲರ ಸರಾಸರಿ ವಯಸ್ಸು ಕೇವಲ 28 ಎಂಬುದು ಗೊತ್ತಾಯಿತು. ಇಂತಹ ಯುವಕರು ಮಹತ್ವದ ಸಾಧನೆ ಮಾಡಿದ್ದಾರೆ. ನಾನು 56 ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಮತ್ತೆ ಹೇಳಿದ್ದಾರೆ.ಮುಂದುವರಿದು, ‘ಕಳೆದ ವರ್ಷ ಮುಂಗಾರು ಅಧಿವೇಶನ ಆರಂಭವಾಗುವ ಒಂದು ದಿನ ಮೊದಲು ಭಾರತದ ಒಬ್ಬ ನಾಗರಿಕ ಅಂತರರಾಷ್ಟ್ರೀಯ ಬಾಕ್ಯಾಕಾಶ ನಿಲ್ದಾಣ ತಲುಪಿದ್ದರು. ಈ ಬಾರಿಯೂ, ನಿನ್ನೆಯಷ್ಟೇ ಭಾರತದ ಸ್ಟಾರ್ಟ್ಅಪ್ ಕಂಪನಿ ಅಗಾಧವಾದ ಸಾಧನೆ ಮಾಡಿದೆ. ವಿಶ್ವದ ಕೆಲವೇ ದೇಶಗಳು ಇಂತಹ ಖಾಸಗಿ ಉದ್ಯಮಗಳುನ್ನು ಹೊಂದಿವೆ. ಭಾರತವು ಜಾಗತಿಕವಾಗಿ ಮನ್ನಣೆ ಗಳಿಸುತ್ತಿದೆ. ಇದು ಕಾಕತಾಳೀಯವಲ್ಲ; ನಮ್ಮ ದೇಶದ ಯುವಕರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳು ಬಾಹ್ಯಾಕಾಶದಷ್ಟೇ ವಿಶಾಲ ಎಂಬ ಸಂದೇಶ’ ಎಂದು ಪ್ರತಿಪಾದಿಸಿದ್ದಾರೆ.