ಪೂಜಾ ಸಾಮಗ್ರಿಗಾಗಿ ತಿಂಗಳಿಗೆ ₹5,000 ನೀಡಲು ಅರ್ಚಕರ ಮನವಿ
ಬೆಂಗಳೂರು: ಮುಜರಾಯಿ ಇಲಾಖೆಯಡಿ ಬರುವ ‘ಸಿ’ ವರ್ಗದ ದೇವಸ್ಥಾನಗಳಲ್ಲಿ ಪೂಜಾ ಸಾಮಗ್ರಿಗಾಗಿ ತಿಂಗಳಿಗೆ ₹5,000 ನೀಡುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದೆ.ಮುಜರಾಯಿ ಇಲಾಖೆ ಅಡಿಯಲ್ಲಿ 36,772 ದೇವಸ್ಥಾನಗಳಿವೆ. ಅದರಲ್ಲಿ 36,217 ದೇವಸ್ಥಾನಗಳು ‘ಸಿ’ ವರ್ಗದ್ದ

ಬೆಂಗಳೂರು: ಮುಜರಾಯಿ ಇಲಾಖೆಯಡಿ ಬರುವ ‘ಸಿ’ ವರ್ಗದ ದೇವಸ್ಥಾನಗಳಲ್ಲಿ ಪೂಜಾ ಸಾಮಗ್ರಿಗಾಗಿ ತಿಂಗಳಿಗೆ ₹5,000 ನೀಡುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದೆ.ಮುಜರಾಯಿ ಇಲಾಖೆ ಅಡಿಯಲ್ಲಿ 36,772 ದೇವಸ್ಥಾನಗಳಿವೆ. ಅದರಲ್ಲಿ 36,217 ದೇವಸ್ಥಾನಗಳು ‘ಸಿ’ ವರ್ಗದ್ದಾಗಿವೆ. ‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳಿಗೆ ಆದಾಯ ಇದ್ದರೆ, ‘ಸಿ’ ವರ್ಗದ ದೇವಸ್ಥಾನಗಳಿಗೆ ಆದಾಯ ಇಲ್ಲ. ಈ ದೇವಸ್ಥಾನಗಳ ಅರ್ಚಕರಿಗೆ ತಿಂಗಳಿಗೆ ₹4,000 ತಸ್ತೀಕ್ ನೀಡಲಾಗುತ್ತಿತ್ತು. ಅದನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ₹6,000ಕ್ಕೆ ಏರಿಸಿದೆ. ಅದೇ ರೀತಿ ಪೂಜಾ ಸಾಮಗ್ರಿಗೆ ಹಣ ಒದಗಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಕೆ.ಇ., ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಮತ್ತು ಪದಾಧಿಕಾರಿಗಳು ಮನವಿ ಮಾಡಿದರು.ದೇವಸ್ಥಾನಗಳ ಆಸ್ತಿ ಶಕ್ತಿವಂತರ ಪಾಲಾಗಿತ್ತು. ರಾಮಲಿಂಗಾರೆಡ್ಡಿ ಮುಜರಾಯಿ ಸಚಿವರಾಗಿದ್ದ ಸಮಯದಲ್ಲಿ 10 ಸಾವಿರಕ್ಕಿಂತಲೂ ಅಧಿಕ ಆಸ್ತಿಗಳನ್ನು ಸರ್ಕಾರ ವಶಕ್ಕೆ ಪಡೆದು ಮರಳಿ ದೇವಸ್ಥಾನಗಳಿಗೆ ಒಪ್ಪಿಸಲಾಗಿದೆ. ಈಗ ವಶಪಡಿಸಿಕೊಂಡಿರುವುದಕ್ಕಿಂತಲೂ ಹೆಚ್ಚು ಆಸ್ತಿ ದೇವಸ್ಥಾನಗಳಿಗೆ ಸೇರಲು ಬಾಕಿ ಇದೆ. ಅದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಬೇಕು. ದೇವಸ್ಥಾನದ ಆಸ್ತಿ ರಕ್ಷಿಸಬೇಕು. ಎ.ಟಿ.ರಾಮಸ್ವಾಮಿ ವರದಿಯನ್ನು ಅನುಷ್ಠಾನ ಮಾಡಬೇಕು ಎಂದು ಹೇಳಿದರು.ಅರ್ಚಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಬೇಕು. ದೌರ್ಜನ್ಯ ಎಸಗುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅರ್ಚಕರಿಗೆ ಆಗಮ ತರಬೇತಿಗೆ ವ್ಯವಸ್ಥೆ ಮಾಡಬೇಕು. ಪ್ರತಿ ದೇವಸ್ಥಾನದಲ್ಲಿ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.ದೇವಸ್ಥಾನದ ಹುಂಡಿ ಹಣವನ್ನು ಬೇರೆ ಮತಗಳ ಧಾರ್ಮಿಕ ಕೇಂದ್ರಗಳಿಗೆ ವಿನಿಯೋಗಿಸಲಾಗುತ್ತದೆ ಎಂಬ ಅಪಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಸೂಚನಾ ಫಲಕಗಳನ್ನು ದೇವಸ್ಥಾನಗಳಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.