ಚೆನ್ನಮ್ಮ ಅಂತಿಮ ಯಾತ್ರೆ ಆರಂಭ – ಹೊಳೆನರಸೀಪುರದ ಪ್ರಮುಖ ಗ್ರಾಮಗಳಲ್ಲಿ ಮೆರವಣಿಗೆ
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ (Chennamma H.D Devegowda) ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಿದೆ. ಹೊಳೆನರಸೀಪುರ (Holenarasipura) ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯುತ್ತಿದ್ದು, ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಅಂತಿಮ ಯಾತ್ರೆ ನಡೆಯಲಿದೆ. ಹೊಳೆನರಸೀಪುರದಿಂದ ನಾಗಲಾಪುರ, ಹುಚ್ಚನಕೊಪ್ಪಲು, ಸಂಕನಹಳ್ಳಿ, ಕಳ್ಳಿಕೊ

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ (Chennamma H.D Devegowda) ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಿದೆ. ಹೊಳೆನರಸೀಪುರ (Holenarasipura) ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯುತ್ತಿದ್ದು, ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಅಂತಿಮ ಯಾತ್ರೆ ನಡೆಯಲಿದೆ. ಹೊಳೆನರಸೀಪುರದಿಂದ ನಾಗಲಾಪುರ, ಹುಚ್ಚನಕೊಪ್ಪಲು, ಸಂಕನಹಳ್ಳಿ, ಕಳ್ಳಿಕೊಪ್ಪಲು, ಕಟ್ಟಹಳ್ಳಿ ಬಾರೆ, ಮಾರಗೊಡನಹಳ್ಳಿ, ಪಡುವಲಹಿಪ್ಪೆ, ಹನುಮನಹಳ್ಳಿ, ಬಸವನಾಯಕನಹಳ್ಳಿ, ಹಂಗರಹಳ್ಳಿ, ಹಳೇಕೋಟೆ ಗ್ರಾಮಗಳಲ್ಲಿ ಅಂತಿಮ ಯಾತ್ರೆ ನಡೆಯಲಿದೆ. ಮಲ್ಲಿಗೆ ಹೂ, ತುಳಸಿ ಮಾಲೆಯಿಂದ ಮುಕ್ತಿವಾಹನವನ್ನು ಅಲಂಕರಿಸಲಾಗಿದೆ. ರಸ್ತೆಯುದ್ದಕ್ಕೂ ಸಾರ್ವಜನಿಕರು ಅಂತಿಮ ದರ್ಶನಕ್ಕೆ ಕಾದು ನಿಂತಿದ್ದಾರೆ. ಇದನ್ನೂ ಓದಿ: ನನ್ನನ್ನು ಡಾಕ್ಟರ್ ಮಾಡಿದ್ದು ಅವರೇ – ಚೆನ್ನಮ್ಮರನ್ನು ನೆನೆದು ಭಾವುಕರಾದ ಡಾ.ಆನಂದ್ ಮಧ್ಯಾಹ್ನ 3 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಪಾರ್ಥಿವ ಶರೀರ ತಲುಪಲಿದೆ. 45 ನಿಮಿಷಗಳ ಕಾಲ ಹರದನಹಳ್ಳಿಯಲ್ಲಿ ಪೂಜೆ ನಡೆಯಲಿದ್ದು, 4 ಗಂಟೆ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಬೆಂಗಳೂರು ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಕಣ್ಣನ್ ಸ್ವಾಮೀಜಿ ನೇತೃತ್ವದಲ್ಲಿ ಅಂತ್ಯ ಸಂಸ್ಕಾರದ ವಿಧಿ ವಿಧಾನ ನಡೆಯಲಿದೆ. ಕಣ್ಣನ್ ಸ್ವಾಮೀಜಿ ಜೊತೆ 15ಕ್ಕೂ ಹೆಚ್ಚು ಅರ್ಚಕರು ಭಾಗವಹಿಸಲಿದ್ದಾರೆ. ವಾಸ್ತು ಪ್ರಕಾರ ಈಶಾನ್ಯ ದಿಕ್ಕು ಖಾಲಿ ಇರಿಸಿಕೊಂಡು ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ. ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ಯಾಕೆ? ಹರದನಹಳ್ಳಿ ಗ್ರಾಮದ ಸಮೀಪ ಇರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲು ಆಯ್ಕೆ ಮಾಡಿರುವುದಕ್ಕೆ ಅನೇಕ ಕಾರಣಗಳಿವೆ. ಚೆನ್ನಮ್ಮ ಅವರು ದೀರ್ಘಕಾಲ ಹೊಳೆನರಸೀಪುರ ಭಾಗದಲ್ಲೇ ಇದ್ದವರು. ಹಳೆಕೋಟೆ, ಮುತ್ತಿಗೆ ಹಿರೀಹಳ್ಳಿ, ಹರದನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳು ಹಾಗೂ ಗ್ರಾಮಸ್ಥರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕುಟುಂಬದ ಸದಸ್ಯರೆಲ್ಲರೂ ಸೇರಿ ಈ ಜಾಗವನ್ನು ಆಯ್ಕೆ ಮಾಡಿದ್ದು, ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನ ಮಾಡಿದ್ದೇವೆ. ಈ ಜಾಗದಲ್ಲಿ ಸ್ಮಾರಕ ಮಾಡಲು ಚಿಂತಿಸಲಾಗಿದೆ ಎಂದು ಸಂಸದ ಹಾಗೂ ಚೆನ್ನಮ್ಮ ಅವರ ಅಳಿಯ ಸಿ.ಎನ್.ಮಂಜುನಾಥ್ ಹೇಳಿದ್ದಾರೆ. ಹರದನಹಳ್ಳಿಯು ದೇವೇಗೌಡರ ತವರೂರು ಮತ್ತು ಚೆನ್ನಮ್ಮನವರು ಪತಿಯೊಂದಿಗೆ ತಮ್ಮ ಬೇರುಗಳನ್ನು ಗಟ್ಟಿಯಾಗಿರಿಸಿಕೊಂಡಿದ್ದ ಸ್ಥಳವಾಗಿದೆ. ಅವರ ಒಡೆತನದ 32 ಎಕರೆ ವಿಶಾಲವಾದ ಕೃಷಿ ಜಮೀನು ಬೆಟ್ಟದ ತಪ್ಪಲಿನಲ್ಲಿದೆ. ಮಾವಿನಕೆರೆ ರಂಗನಾಥಸ್ವಾಮಿ ಬಗ್ಗೆ ಚೆನ್ನಮ್ಮನವರಿಗೆ ಅಪಾರವಾದ ಭಕ್ತಿ ಇತ್ತು. ಇಡೀ ಕುಟುಂಬದ ಒಳಿತಿಗಾಗಿ ಹಾಗೂ ರೈತರ ಏಳಿಗೆಗಾಗಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದ ಅವರು, ದೈವ ಸನ್ನಿಧಿಯ ನೈಸರ್ಗಿಕ ವಾತಾವರಣದ ತಪ್ಪಲಿನಲ್ಲಿ ತಮ್ಮ ವಿಶ್ರಾಂತಿ ಪಡೆಯಬೇಕೆಂಬುದು ಅವರ ಕುಟುಂಬದ ಆಶಯವಾಗಿದೆ. ಇದನ್ನೂ ಓದಿ: ಹೊಳೆನರಸೀಪುರದಲ್ಲಿ ಇಂದು ಚೆನ್ನಮ್ಮ ಅಂತ್ಯಕ್ರಿಯೆ – ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ವಿಧಿವಿಧಾನ