ವಿಜ್ಞಾನದಲ್ಲಿ ತೀಕ್ಷ್ಣ ತಿಳಿವಳಿಕೆ, ವೀಕ್ಷಣೆ ಅಗತ್ಯ: ಪ್ರೊ.ಎನ್.ಕೆ. ಲೋಕನಾಥ್
ಮೈಸೂರು: ‘ವಿಜ್ಞಾನದಲ್ಲಿ ತೀಕ್ಷ್ಣವಾದ ತಿಳಿವಳಿಕೆ ಬಹುಮುಖ್ಯವಾಗಿದ್ದು, ವಿದ್ಯಾರ್ಥಿಗಳು ನಾವೀನ್ಯತೆ ಬೆಳೆಸಿಕೊಳ್ಳಲು ಜಗತ್ತನ್ನು ಸೂಕ್ಷ್ಮವಾಗಿ ವೀಕ್ಷಿಸಬೇಕಾಗುತ್ತದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ಇಲ್ಲಿನ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಭೌತವಿಜ್ಞಾನ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಬಾ

ಮೈಸೂರು: ‘ವಿಜ್ಞಾನದಲ್ಲಿ ತೀಕ್ಷ್ಣವಾದ ತಿಳಿವಳಿಕೆ ಬಹುಮುಖ್ಯವಾಗಿದ್ದು, ವಿದ್ಯಾರ್ಥಿಗಳು ನಾವೀನ್ಯತೆ ಬೆಳೆಸಿಕೊಳ್ಳಲು ಜಗತ್ತನ್ನು ಸೂಕ್ಷ್ಮವಾಗಿ ವೀಕ್ಷಿಸಬೇಕಾಗುತ್ತದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ಇಲ್ಲಿನ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಭೌತವಿಜ್ಞಾನ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಬಾಹ್ಯಾಕಾಶ: ನಾವೀನ್ಯತೆಗಳು, ಪರಿಶೋಧನೆ ಮತ್ತು ಅನ್ವೇಷಣೆ’ ವಿಷಯ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ವಿಜ್ಞಾನ ಮತ್ತು ನಾವಿನ್ಯತೆ ಒಂದು ನಾಣ್ಯದ ಎರಡು ಮುಖಗಳು. ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇವುಗಳ ಅಭಿವೃದ್ಧಿಯಿಂದ ದೇಶ ಪ್ರಗತಿ ಸಾಧಿಸುತ್ತದೆ’ ಎಂದರು.ಸದಾ ಪ್ರೇರಣೆ: ‘ಪ್ರಕೃತಿ ನಮ್ಮ ಅತ್ಯುತ್ತಮ ಶಿಕ್ಷಕನಾಗಿದ್ದು, ಮಾನವ ಕುಲವು ನಿರಂತರವಾಗಿ ಕಲಿಯಲು ಮತ್ತು ವಿಕಸನಗೊಳ್ಳಲು ಸದಾ ಪ್ರೇರೇಪಿಸುತ್ತದೆ. ವಿದ್ಯಾರ್ಥಿಗಳು ನಾವೀನ್ಯತೆಯ ನಿಜವಾದ ಮನೋಭಾವವನ್ನು ಆಳವಾಗಿ ಅರ್ಥೈಸಿಕೊಳ್ಳಲು ಮೂಲಪಠ್ಯಪುಸ್ತಕಗಳನ್ನು ಓದಬೇಕು. ಜೊತೆಗೆ ಶ್ರೇಷ್ಠ ವಿಜ್ಞಾನಿಗಳ ಜೀವನದ ಸಾಧನೆಗಳನ್ನು ಸತತ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಇಸ್ರೊ ನಿವೃತ್ತ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಶಶಿ ಶೇಖರ್, ‘ಬಾಹ್ಯಾಕಾಶಕ್ಕೆ ಯಾವುದೇ ಗಡಿಗಳು ಇರುವುದಿಲ್ಲ. ಅದು ಯಾವುದೇ ತಪ್ಪುಗಳನ್ನು ಕ್ಷಮಿಸುವುದೂ ಇಲ್ಲ’ ಎಂದರು.‘ವಿಜ್ಞಾನದಲ್ಲಿ ಕುತೂಹಲ ಬೆರೆತಾಗ ನಿಜವಾದ ಅನ್ವೇಷಣೆ ಮತ್ತು ನಾವೀನ್ಯತೆ ಕಾಣುವುದಕ್ಕೆ ಸಾಧ್ಯವಾಗುತ್ತದೆ. ವಿದ್ಯಾರ್ಥಿ ಸಮೂಹ ಸೋಲಿನ ಭಯವಿಲ್ಲದೆ ವಿಶಿಷ್ಟ ರೀತಿಯಲ್ಲಿ ನಾವೀನ್ಯತೆಗೆ ಕೊಡುಗೆ ನೀಡಲು ಮುಂದೆ ಬರಬೇಕು’ ಎಂದು ಹೇಳಿದರು.‘ಪಠ್ಯಕ್ರಮವನ್ನು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕ್ರಿಯಾತ್ಮಕವಾಗಿ ರೂಪಿಸಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಪ್ರತಿಮಾ ಡಿ.ಎಸ್., ‘ಬಾಹ್ಯಾಕಾಶ ಸಂಶೋಧನೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೆ, ಪ್ರಸ್ತುತ ಯುಗದ ಎಲ್ಲಾ ಜ್ಞಾನ ಶಿಸ್ತುಗಳ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ’ ಎಂದು ಪ್ರತಿಪಾದಿಸಿದರು.ಮೈಸೂರು ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣೇಗೌಡ ಪಿ. ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಚಾರ್ಯ ರೇಚಣ್ಣ, ಭೌತವಿಜ್ಞಾನ ವಿಭಾಗದ ಮುಖ್ಯಸ್ಥೆ ಸೌಮ್ಯಾ ಬಿ. ಉಪಸ್ಥಿತರಿದ್ದರು.ಧಾತ್ರಿ ಪ್ರಾರ್ಥಿಸಿದರು. ಸೌಜನ್ಯಾ ಸ್ವಾಗತಿಸಿದರು. ದೀಕ್ಷಾ ವಂದಿಸಿದರು. ವಂದನಾ ಎಂ.ಯೋಗೇಶ್ ನಿರೂಪಿಸಿದರು.ನಂತರ ತಾಂತ್ರಿಕ ಗೋಷ್ಠಿಗಳು ನಡೆದವು.