ಬೀದರ್: ದಾರಿ ಹೋಕರಿಗೆ ಎಲ್ಲಿದೆ ಪಾದಚಾರಿ ಮಾರ್ಗ...?
ಬೀದರ್: ‘ರಸ್ತೆಬದಿಯಲ್ಲಿರುವ ಪಾದಚಾರಿ ಮಾರ್ಗದಲ್ಲಿ ಸುರಕ್ಷಿತವಾಗಿ ನಡೆದಾಡುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು’ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತನ್ನ ಆದೇಶದಲ್ಲಿ ತಿಳಿಸಿದೆ. ಇಷ್ಟೇ ಅಲ್ಲ, ಸ್ಥಳೀಯ ಸಂಸ್ಥೆಗಳು ಆ ಹಕ್ಕು ಒದಗಿಸಿಕೊಡಬೇಕೆಂದು ನಿರ್ದೇಶನ ನೀಡಿದೆ. ಹೀಗಿದ್ದರೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅದರ ಅನುಷ್ಠಾನವಾಗಿಲ್ಲ.ಇದರ ಪರಿಣಾಮ ಜನರು

ಬೀದರ್: ‘ರಸ್ತೆಬದಿಯಲ್ಲಿರುವ ಪಾದಚಾರಿ ಮಾರ್ಗದಲ್ಲಿ ಸುರಕ್ಷಿತವಾಗಿ ನಡೆದಾಡುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು’ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತನ್ನ ಆದೇಶದಲ್ಲಿ ತಿಳಿಸಿದೆ. ಇಷ್ಟೇ ಅಲ್ಲ, ಸ್ಥಳೀಯ ಸಂಸ್ಥೆಗಳು ಆ ಹಕ್ಕು ಒದಗಿಸಿಕೊಡಬೇಕೆಂದು ನಿರ್ದೇಶನ ನೀಡಿದೆ. ಹೀಗಿದ್ದರೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅದರ ಅನುಷ್ಠಾನವಾಗಿಲ್ಲ.ಇದರ ಪರಿಣಾಮ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಗಳಲ್ಲಿ ಬೇಕಾಬಿಟ್ಟಿ ಓಡಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದರ್ ನಗರದ ಯಾವುದೇ ರಸ್ತೆ ತೆಗೆದುಕೊಂಡರೂ ಪಾದಚಾರಿ ಮಾರ್ಗ ಅತಿಕ್ರಮಣದಿಂದ ಹೊರತಾಗಿಲ್ಲ. ಫುಟ್ಪಾತ್ ಅಂದರೆ ವ್ಯಾಪಾರ ನಡೆಸುವ ಸ್ಥಳ ಎಂಬಂತಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡಿದರೆ ಇದು ಗೊತ್ತಾಗುತ್ತದೆ.ನಗರದ ಮನ್ನಳ್ಳಿ ರಸ್ತೆ, ಚಿದ್ರಿ ರಸ್ತೆ, ಉದಗೀರ್ ರಸ್ತೆ, ನಾವದಗೇರಿ ರಸ್ತೆ ಹೀಗೆ ಪ್ರಮುಖ ರಸ್ತೆಗಳಲೆಲ್ಲಾ ಪಾದಚಾರಿ ಮಾರ್ಗಗಳಲ್ಲಿ ರಾಜಾರೋಷವಾಗಿ ಪಾನಿ ಪುರಿ, ಗೋಬಿ ಮಂಚೂರಿ, ಸಿಹಿ ತಿನಿಸುಗಳು, ಹಣ್ಣು, ತರಕಾರಿ ಗೂಡಂಗಡಿಗಳನ್ನು ನಿಲ್ಲಿಸಿ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆಯಂತೂ ಹೋಟೆಲ್ಗಳು ತಲೆ ಎತ್ತಿವೆ. ಆಹಾರ ತಯಾರಿಸುವುದು, ಜನ ಅಲ್ಲಿಯೇ ನಿಂತು ಉಪಾಹಾರ ಸೇವಿಸುವುದು ಸಾಮಾನ್ಯವಾಗಿದೆ.ಮಳಿಗೆ, ಹೋಟೆಲ್ನವರು ಬಹುತೇಕ ಕಡೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡು ಅದರ ಮೇಲೆಯೇ ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಫುಟ್ಪಾತ್ನಲ್ಲಿ ನಡೆದಾಡಲು ಜಾಗವೇ ಇಲ್ಲದಂಥ ಪರಿಸ್ಥಿತಿ ಇದೆ. ಹೀಗಿರುವಾಗ ಜನ ಅನಿವಾರ್ಯವಾಗಿ ರಸ್ತೆ ಮೇಲೆ ಓಡಾಡುತ್ತ ಅಪಘಾತಗಳಿಗೆ ಒಳಗಾಗುತ್ತಿದ್ದಾರೆ.ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿರುವುದರಿಂದ ಅನೇಕ ಕಡೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ರಸ್ತೆಯ ಒಂದು ಭಾಗದಲ್ಲಿ ತಮ್ಮ ಸಾಮಾನುಗಳನ್ನು ಇರಿಸಿಕೊಂಡು ವ್ಯಾಪಾರ ಮಾಡುತ್ತಾರೆ. ಇದರಿಂದ ರಸ್ತೆಗಳಲ್ಲಿ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಬೀದರ್ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಸಹಜವಾಗಿಯೇ ಜನರಿಂದ ಹೆಚ್ಚಿನ ನಿರೀಕ್ಷೆಗಳಿವೆ. ಆದರೆ, ಇದುವರೆಗೆ ಅದರತ್ತ ಅಧಿಕಾರಿಗಳು ಲಕ್ಷ್ಯ ಹರಿಸಿಲ್ಲ. ಜಿಲ್ಲೆಯ ಬಸವಕಲ್ಯಾಣ ನಗರ ಸೇರಿದಂತೆ ಬಹುತೇಕ ತಾಲ್ಲೂಕು ಕೇಂದ್ರಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ.‘ಬೆಂಗಳೂರಿನಲ್ಲಿ ಸಮರೋಪಾದಿಯಲ್ಲಿ ಪಾದಚಾರಿ ಮಾರ್ಗದ ಅತಿಕ್ರಮಣ ತೆರವುಗೊಳಿಸಲಾಗುತ್ತಿದೆ. ಯಾರ ಪ್ರಭಾವಕ್ಕೂ ಅಲ್ಲಿನ ಅಧಿಕಾರಿಗಳು ಒಳಗಾಗದೆ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಮೇಲಿಂದ ಸುಪ್ರೀಂಕೋರ್ಟ್ ನಿರ್ದೇಶನ ಇರುವುದರಿಂದ ಎಲ್ಲರೂ ಅದನ್ನು ಪಾಲಿಸಬೇಕಾದ ಅನಿವಾರ್ಯ ಇದೆ. ಈ ಸಂದರ್ಭ ಬಳಸಿಕೊಂಡು ಮಹಾನಗರ ಪಾಲಿಕೆಯ ಅಧಿಕಾರಿಗಳು ಬೀದರ್ನಲ್ಲಿ ಅತಿಕ್ರಮಿಸಿರುವ ಫುಟ್ಪಾತ್ ತೆರವುಗೊಳಿಸಿ, ಜನರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಬೇಕು’ ಎಂದು ಸ್ಥಳೀಯ ನಿವಾಸಿಗಳಾದ ಮಚೇಂದ್ರ, ರತ್ನಾಕರ್, ಜಗನ್ನಾಥ ಆಗ್ರಹಿಸಿದ್ದಾರೆ.ಸುಪ್ರೀಂಕೋರ್ಟ್ ಹೇಳಿರುವುದೇನು?* ಸಂವಿಧಾನದ 19(1)(ಡಿ) ಮತ್ತು 21ರ ಅಡಿಯಲ್ಲಿ ಮುಕ್ತವಾಗಿ ಓಡಾಡುವುದು ಮತ್ತು ಸುರಕ್ಷಿತವಾಗಿ ನಡೆಯುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕು.* ವಾಹನಗಳ ಸಂಚಾರಕ್ಕಿಂತ ಮುಂಚೆಯೇ ಮನುಷ್ಯ ನಡೆಯುತ್ತಿದ್ದನು. ಹಾಗಾಗಿ ಪಾದಚಾರಿಗಳ ಹಕ್ಕಿಗೆ ವಾಹನಗಳಿಗಿಂತ ಹೆಚ್ಚಿನ ಆದ್ಯತೆಯಿದೆ.* ನಗರ ಅಭಿವೃದ್ಧಿ ಪ್ರಾಧಿಕಾರಗಳು ಮತ್ತು ಸ್ಥಳೀಯ ಪಾಲಿಕೆಗಳು ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದು ಒತ್ತುವರಿ ತೆರವುಗೊಳಿಸುವುದು ಮತ್ತು ಸುಸ್ಥಿತಿಯಲ್ಲಿಡುವುದು ಕಡ್ಡಾಯ.* ಪಾದಚಾರಿ ಮಾರ್ಗಗಳ ಮೇಲೆ ವಾಹನಗಳನ್ನು ನಿಲ್ಲಿಸುವುದು ಅಥವಾ ಸವಾರರು ವಾಹನಗಳನ್ನು ಏರಿಸುವುದು ಕಾನೂನು ಬಾಹಿರ.ಪಾದಚಾರಿ ಮಾರ್ಗದ ಕೆಲಸ ಪೂರ್ಣವಿಲ್ಲಬಸವಕಲ್ಯಾಣ: ನಗರದಲ್ಲಿನ ಮುಖ್ಯ ರಸ್ತೆಯಲ್ಲಿನ ಪಾದಚಾರಿ ಮಾರ್ಗದ ಕೆಲಸ ಅಪೂರ್ಣವಾಗಿದೆ. ಕೆಲ ಕಡೆ ಮಾತ್ರ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ತ್ರಿಪುರಾಂತ ಮಡಿವಾಳ ವೃತ್ತದಲ್ಲಿ ಹಾಗೂ ಮಹಾತ್ಮ ಗಾಂಧಿ ವೃತ್ತದ ಕೆಲ ಸ್ಥಳಗಳಲ್ಲಿ ಮಾತ್ರ ಪಾದಚಾರಿ ಮಾರ್ಗವಿದೆ. ಅದೂ ಕೆಲ ಸ್ಥಳಗಳಲ್ಲಿ ಅತಿಕ್ರಮಣವಾಗಿದೆ. ಮುಖ್ಯವೆಂದರೆ ನಗರದಲ್ಲಿ ಎರಡು ಕಿ.ಮೀ ನಷ್ಟು ಉದ್ದದ ಒಂದೇ ಮುಖ್ಯ ರಸ್ತೆ ಇದ್ದು ವಾಹನ ದಟ್ಟಣೆ ಹೆಚ್ಚಾಗಿದೆ. ಎಲ್ಲೆಡೆ ಪಾದಚಾರಿ ಮಾರ್ಗ ಇರಬೇಕಾದುದು ಅಗತ್ಯ ಎನ್ನುವುದು ಜನರ ಅಭಿಮತ.ಹುಲಸೂರಿನಲ್ಲೂ ಸಮಸ್ಯೆಹುಲಸೂರ: ತಾಲ್ಲೂಕು ಕೇಂದ್ರದಲ್ಲಿರುವ ಪ್ರಮುಖ ರಸ್ತೆಗಳು ವೃತ್ತಗಳು ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ಫುಟ್ಪಾತ್ ಅತಿಕ್ರಮಣಕ್ಕೆ ಒಳಗಾಗಿದೆ. ಇದರಿಂದ ಜನ ರಸ್ತೆ ಮೇಲೆ ಓಡಾಡುತ್ತಾರೆ. ವಾಹನ ದಟ್ಟಣೆ ಅಪಘಾತದ ಆತಂಕ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಫುಟ್ಪಾತ್ ಮೇಲೆ ಶಾಶ್ವತವಾಗಿ ನಿರ್ಮಿಸಿರುವ ಶೆಡ್ಗಳು ಮತ್ತು ಮಳಿಗೆಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಶಿವಾನಂದ ಮೇತ್ರೆ ಸೂಚನೆ ನೀಡಿದ್ದಾರೆ. ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.ಒತ್ತುವರಿ ತೆರವಿಗೆ ಒತ್ತಾಯಚಿಟಗುಪ್ಪ/ಹುಮನಾಬಾದ್: ಪಟ್ಟಣದಲ್ಲಿ ಫುಟ್ಪಾತ್ ಒತ್ತುವರಿಯಾಗಿದೆ. ಇಲ್ಲಿಯ ಪ್ರವಾಸಿ ಮಂದಿರದಿಂದ ಹಳೆ ತಹಶೀಲ್ದಾರ್ ಕಚೇರಿ ಕಲ್ಲೂರ್ ರಸ್ತೆಯಿಂದ ಬಸವೇಶ್ವರ ವೃತ್ತದ ವರೆಗಿನ ಫುಟಪಾತ್ ಸಂಪೂರ್ಣ ಒತ್ತುವರಿಯಾಗಿದೆ. ಪಾದಚಾರಿಗಳು ರಸ್ತೆ ಮೇಲೆ ಓಡಾಡುತ್ತಿರುವ ಕಾರಣ ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದೆ. ಅಂಗಡಿ ಮಾಲೀಕರು ಪಾದಚಾರಿ ಮಾರ್ಗದ ಮೇಲೆ ಸಾಮಗ್ರಿ ಇರಿಸಿಕೊಂಡು ಮಾರಾಟ ಮಾಡುವುದರಿಂದ ಜನರಿಗೆ ಓಡಾಡಲು ಆಗುತ್ತಿಲ್ಲ. ಚಿಟಗುಪ್ಪ ಪಟ್ಟಣದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇದೆ. ಇಲ್ಲಿ ಬಹುತೇಕ ಕಡೆ ಫುಟ್ಪಾತ್ ಒತ್ತುವರಿ ಆಗಿದ್ದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಉಂಟಾಗುತ್ತಿದೆ. ಸಂಬಂಧಪಟ್ಟವರು ಒತ್ತುವರಿ ತೆರವು ಮಾಡಬೇಕೆನ್ನುವುದು ಜನರ ಆಗ್ರಹ.ಬಹುತೇಕ ಕಡೆ ತೆರವುಭಾಲ್ಕಿ: ಪುರಸಭೆ ವತಿಯಿಂದ ಇತ್ತೀಚೆಗೆ ಪಟ್ಟಣದ ಬಹುತೇಕ ಕಡೆಗಳಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಪಾದಚಾರಿಗಳ ಸಂಚಾರಕ್ಕೆ ಫುಟ್ ಪಾತ್ ಮುಕ್ತವಾಗಿದೆ. ಆದರೆ ಪಟ್ಟಣದ ಕೆಲವೆಡೆ ಫುಟ್ಪಾತ್ಗಳಲ್ಲಿಯೇ ವ್ಯಾಪಾರ ವಹಿವಾಟು ಗೂಡಂಗಡಿ ನಡೆಸುತ್ತಿರುವುದರಿಂದ ಪಾದಚಾರಿಗಳ ಸುಗಮ ಓಡಾಟಕ್ಕೆ ತೊಂದರೆ ಆಗುತ್ತಿದ್ದು ಅಲ್ಲಿನ ಅತಿಕ್ರಮಣ ಕೂಡ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ವ್ಯಾಪಾರಿಗಳ ಕಾರುಬಾರುಔರಾದ್: ಪಟ್ಟಣದ ಕನ್ನಡಾಂಬೆ ವೃತ್ತದಿಂದ (ಎಪಿಎಂಸಿ) ಸರ್ಕಾರಿ ಆಸ್ಪತ್ರೆಯ ವರೆಗೆ ಪಾದಚಾರಿ ಮಾರ್ಗ (ಫುಟ್ಪಾತ್) ಇದ್ದೂ ಇಲ್ಲದಂತಾಗಿದೆ. ಕೆಲವು ಕಡೆ ಪಾದಚಾರಿ ಮಾರ್ಗ ಅತಿಕ್ರಮಣವಾದರೆ ಮತ್ತೆ ಕೆಲ ಕಡೆ ಅದರ ಮೇಲೆ ಬೀದಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಗ್ರಾಮೀಣ ಬ್ಯಾಂಕ್ನಿಂದ ಎಂ.ಐ. ಕಚೇರಿ ವರೆಗೆ ಫುಟಪಾತ್ ಕಾಣುವುದೇ ಇಲ್ಲ. ಬಸ್ ನಿಲ್ದಾಣದ ಬಳಿ ಫುಟ್ಪಾತ್ ವಾಹನ ನಿಲುಗಡೆಗಾಗಿ (ಪಾರ್ಕಿಂಗ್) ಬಳಕೆಯಾಗುತ್ತಿದೆ. ಸೋಮವಾರದ ಸಂತೆ ದಿನ ಇಲ್ಲಿ ನಡೆದಾಡಿಕೊಂಡು ಹೋಗುವುದು ಕಷ್ಟವಾಗಿದೆ. ಆಗಾಗ ಅವಘಡಗಳು ಸಂಭವಿಸುತ್ತಿವೆ. ಈ ವಿಷಯ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾದರೂ ವ್ಯವಸ್ಥೆ ಸುಧಾರಿಸಿಲ್ಲ ಎನ್ನುತ್ತಾರೆ ಸಾರ್ವಜನಿಕರು.ವಾಹನಗಳ ನಿಲುಗಡೆಕಮಲನಗರ: ಪಟ್ಟಣದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಫುಟ್ಪಾತ್ನಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳಿಂದ ಪಾದಚಾರಿಗಳು ರಸ್ತೆಯ ಮೇಲೆ ಸಂಚರಿಸುವಂತಾಗಿದೆ. ಪಟ್ಟಣದ ಮಿನಿ ಬಸ್ ತಂಗುದಾಣದ ಮುಂಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಫುಟ್ಪಾತ್ ಮೇಲೆ ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳು ನಿಲುಗಡೆ ಮಾಡುತ್ತಿರುವುದರಿಂದ ಸಾರ್ವಜನಿಕರು ಹಾಗೂ ಶಾಲಾ–ಕಾಲೇಜು ಮಕ್ಕಳು ರಸ್ತೆಯ ಮಧ್ಯದಲ್ಲೇ ನಡೆದು ಹೋಗುವ ಪರಿಸ್ಥಿತಿ ಇದೆ.ಪೂರಕ ಮಾಹಿತಿ: ಮಾಣಿಕ್ ಆರ್.ಭುರೆ, ಮನ್ಮಥಪ್ಪ ಸ್ವಾಮಿ, ಗುರುಪ್ರಸಾದ್ ಮೆಂಟೇ, ಬಸವರಾಜ ಪ್ರಭಾ, ಮಹಾದೇವ, ಗುಂಡು ಅತಿವಾಳಔರಾದ್ ಪಟ್ಟಣದಲ್ಲಿ ಪಾದಚಾರಿ ಮಾರ್ಗ ಅತಿಕ್ರಮಿಸಿರುವುದರಿಂದ ಬೀದಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತಳ್ಳು ಗಾಡಿ ಮೇಲೆ ಹಣ್ಣು ಮಾರಾಟ ಮಾಡುತ್ತಿರುವುದುಹುಮನಾಬಾದ್ ಪಟ್ಟಣದಲ್ಲಿ ಪಾದಚಾರಿ ಮಾರ್ಗದುದ್ದಕ್ಕೂ ಮಳಿಗೆಗಳವರು ಸಾಮಾನುಗಳನ್ನು ಇರಿಸಿರುವುದುಹುಲಸೂರ ಪಟ್ಟಣದ ಪಾದಚಾರಿ ಮಾರ್ಗದ ಮೇಲೆಲ್ಲಾ ವಾಹನಗಳನ್ನು ನಿಲ್ಲಿಸಿರುವುದು