ಸೌಜನ್ಯ ಪ್ರಕರಣ | ಶವ ಸಂಸ್ಕಾರಕ್ಕೆ ಕಾನೂನು ಪಾಲನೆಯಾಗಿಲ್ಲ: ಹೈಕೋರ್ಟ್ಗೆ ವಕೀಲರು
ಬೆಂಗಳೂರು: ‘ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ಪ್ರಕರಣದಲ್ಲಿ; ಅಪರಾಧ ಪ್ರಕ್ರಿಯೆ ಸಂಹಿತೆ–1973ರ ಕಲಂ 174 ಮತ್ತು ಕರ್ನಾಟಕ ಅಸ್ವಾಭಾವಿಕ ಮರಣಗಳ ತನಿಖೆ ಮತ್ತು ವಿಚಾರಣೆಗಳ ನಡವಳಿಕೆಯ ನಿಯಮ–2004ರ ಅಡಿಯಲ್ಲಿ ಕಡ್ಡಾಯವಾದ ಕಾನೂನು ಪ್ರಕ್ರಿಯೆ ಪಾಲಿಸದೇ ಶವ ಸಂಸ್ಕಾರ ಮಾಡಲಾಗಿದೆ’ ಎಂದು ಸೌಜನ್ಯ ತಾಯಿಯ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದರು.ಧರ್ಮಸ್ಥಳದಲ್ಲಿ 2012ರಲ್ಲಿ

ಬೆಂಗಳೂರು: ‘ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ಪ್ರಕರಣದಲ್ಲಿ; ಅಪರಾಧ ಪ್ರಕ್ರಿಯೆ ಸಂಹಿತೆ–1973ರ ಕಲಂ 174 ಮತ್ತು ಕರ್ನಾಟಕ ಅಸ್ವಾಭಾವಿಕ ಮರಣಗಳ ತನಿಖೆ ಮತ್ತು ವಿಚಾರಣೆಗಳ ನಡವಳಿಕೆಯ ನಿಯಮ–2004ರ ಅಡಿಯಲ್ಲಿ ಕಡ್ಡಾಯವಾದ ಕಾನೂನು ಪ್ರಕ್ರಿಯೆ ಪಾಲಿಸದೇ ಶವ ಸಂಸ್ಕಾರ ಮಾಡಲಾಗಿದೆ’ ಎಂದು ಸೌಜನ್ಯ ತಾಯಿಯ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದರು.ಧರ್ಮಸ್ಥಳದಲ್ಲಿ 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.ವಿಚಾರಣೆ ವೇಳೆ ಅರ್ಜಿದಾರರ ಪರ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಹಾಜರಾಗಿದ್ದ ಸುಪ್ರೀಂ ಕೋರ್ಟ್ನ ಹಿರಿಯ ವಕೀಲೆ ವೃಂದಾ ಗ್ರೋವರ್, ‘ಅರ್ಜಿದಾರರು 74 ಮಂದಿ ಅಸಹಜವಾಗಿ ಸಾವನ್ನಪ್ಪಿದ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಿದ್ದಾರೆ. ಇವುಗಳಲ್ಲಿ ಸಾವನ್ನಪ್ಪಿದವರನ್ನು ಅಂದಂದೇ ಅಂತ್ಯ ಸಂಸ್ಕಾರ ಮಾಡಲಾಗಿದೆ. ಆದರೆ, ಅಂತ್ಯ ಸಂಸ್ಕಾರ ಮಾಡಿದ ಸ್ಥಳಗಳನ್ನು ದಾಖಲಿಸಿಲ್ಲ. ಸಂತ್ರಸ್ತರನ್ನು ಒಂದೇ ರೀತಿಯಲ್ಲಿ, ಅವರ ಹೆಸರು, ವಯಸ್ಸನ್ನು ಕಾಣಿಸದೇ ಅನಾಮಿಕರು ಎಂದು ಉಲ್ಲೇಖಿಸಲಾಗಿದೆ’ ಎಂದು ಅರೋಪಿಸಿದರು.‘ಒಂದೊಮ್ಮೆ ಸಂತ್ರಸ್ತ ವ್ಯಕ್ತಿ ಪ್ರವಾಸಿ ಸ್ಥಳಗಳಲ್ಲಿ ಉಳಿದುಕೊಂಡಿದ್ದರೆ ಅವರ ವಿಳಾಸ, ವಯಸ್ಸು, ನೋಂದಣಿಯ ದಾಖಲೆಗಳು ಇರುತ್ತವೆ. ಆದರೆ, ಗೆಸ್ಟ್ ಹೌಸ್ ಮತ್ತು ಲಾಡ್ಜ್ಗಳಲ್ಲಿ ಸಿಕ್ಕಿರುವ ಮೃತದೇಹಗಳನ್ನೂ ಅನಾಮಿಕರು ಎಂದೇ ಪರಿಗಣಿಸಿ ಅಂತ್ಯಸಂಸ್ಕಾರ ಮಾಡಲಾಗಿದೆ. ಕೆಲವನ್ನು ಆತ್ಮಹತ್ಯೆ ಎಂದೂ ಉಲ್ಲೇಖಿಸಲಾಗಿದೆ. ಇವರೆಲ್ಲಾ ಯಾವ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ಎಲ್ಲೂ ಉಲ್ಲೇಖಿಸಿಲ್ಲ. ಮೂರು ಪ್ರಕರಣಗಳಲ್ಲಿ ಪೊಲೀಸರು ಯುಡಿಆರ್ ಸಂಖ್ಯೆಯನ್ನೂ ನೀಡಿಲ್ಲ’ ಎಂಬ ಅಂಶಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು. ‘ಈ ಪ್ರಕರಣಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ 2025ರ ಜುಲೈ 19ರಂದು ಎಸ್ಐಟಿ ರಚನೆ ಮಾಡಿದೆ. ಎಸ್ಐಟಿಯನ್ನೇ ಪೊಲೀಸ್ ಠಾಣೆ ಎಂದು ಗುರುತಿಸಲಾಗಿದ್ದು, ಹಿರಿಯ ಶ್ರೇಣಿಯ ಅಧಿಕಾರಿಯನ್ನು ಠಾಣಾ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಎಸ್ಐಟಿ ಪ್ರಕರಣದ ಸಮಗ್ರ ವರದಿ ನೀಡಬೇಕು ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ. ಹಾಗಾಗಿ, ಈ ಕುರಿತು ಮಾಹಿತಿ ನೀಡಲು ಮುಂದಿನ ವಿಚಾರಣೆಯಲ್ಲಿ ಎಸ್ಐಟಿ ಮುಖ್ಯಸ್ಥರು ನ್ಯಾಯಾಲಯದ ಮುಂದೆ ಹಾಜರಿರುವಂತೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.ಇದಕ್ಕೆ ಸರ್ಕಾರದ ಪರ ವಕೀಲರು, ‘ಸದ್ಯ ಅಡ್ವೊಕೇಟ್ ಜನರಲ್ ಲಭ್ಯವಿಲ್ಲದ ಕಾರಣ ಪ್ರಕರಣದಲ್ಲಿನ ದಾಖಲೆಗಳ ಕುರಿತು ಉತ್ತರಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ಉತ್ತರಿಸಲು ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಬಾಲಕೃಷ್ಣನ್ ವಕಾಲತ್ತು ವಹಿಸಿದ್ದಾರೆ.