ಉತ್ತರ ಕನ್ನಡದಲ್ಲಿ 35 ಶಾಲೆಗಳಲ್ಲಿ ಶೂನ್ಯ ದಾಖಲಾತಿ: ಕೆಪಿಎಸ್ ಕಡೆ ಹೆಚ್ಚು ಗಮನ
ಕಾರವಾರ: ಸರ್ಕಾರಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ವರ್ಷವೂ ಗಣನೀಯ ಇಳಿಕೆ ಕಾಣುತ್ತಿದ್ದು, ಶೂನ್ಯ ದಾಖಲಾತಿ ಶಾಲೆಗಳ ಸಂಖ್ಯೆ ಹೆಚ್ಚಳ ಇದಕ್ಕೆ ಪುಷ್ಟಿ ನೀಡುತ್ತಿದೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 35 ಶಾಲೆಗಳಲ್ಲಿ ಒಬ್ಬರೂ ವಿದ್ಯಾರ್ಥಿಗಳು ದಾಖಲಾಗಿಲ್ಲ.ಕರಾವಳಿಯ ಐದು ತಾಲ್ಲೂಕುಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ 20, ಘಟ್ಟದ

ಕಾರವಾರ: ಸರ್ಕಾರಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ವರ್ಷವೂ ಗಣನೀಯ ಇಳಿಕೆ ಕಾಣುತ್ತಿದ್ದು, ಶೂನ್ಯ ದಾಖಲಾತಿ ಶಾಲೆಗಳ ಸಂಖ್ಯೆ ಹೆಚ್ಚಳ ಇದಕ್ಕೆ ಪುಷ್ಟಿ ನೀಡುತ್ತಿದೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 35 ಶಾಲೆಗಳಲ್ಲಿ ಒಬ್ಬರೂ ವಿದ್ಯಾರ್ಥಿಗಳು ದಾಖಲಾಗಿಲ್ಲ.ಕರಾವಳಿಯ ಐದು ತಾಲ್ಲೂಕುಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ 20, ಘಟ್ಟದ ಮೇಲಿನ 7 ತಾಲ್ಲೂಕು ಒಳಗೊಂಡಿರುವ ಶಿರಸಿ ಶೈಕ್ಷಣಿಕ ಜಿಲ್ಲೆಯ 15 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. ಅವುಗಳ ಪೈಕಿ ಶಿರಸಿಯ 2 ಅನುದಾನ ರಹಿತ ಶಾಲೆಗಳೂ ಸೇರಿವೆ.ಕಳೆದ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯಲ್ಲಿ 21 ಸರ್ಕಾರಿ ಶಾಲೆಗಳಲ್ಲಿ, 2024–25ರಲ್ಲಿ 12ಕ್ಕೂ ಹೆಚ್ಚು ಶಾಲೆಗಳು ಶೂನ್ಯ ದಾಖಲಾತಿ ಹೊಂದಿದ್ದವು.‘ಒಬ್ಬರೂ ವಿದ್ಯಾರ್ಥಿಗಳು ಇಲ್ಲದೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿರುವ ಈ ಶಾಲೆಗಳಲ್ಲಿ ಬಹುತೇಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಕಾರವಾರದ ಅಮದಳ್ಳಿಯ ಜಡಿಗದ್ದಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದರೂ, ಅವರು ಸಮೀಪದ ಕರ್ನಾಟಕ ಪಬ್ಲಿಕ್ ಶಾಲೆಗೆ ದಾಖಲಾಗಿದ್ದರಿಂದ ಆ ಶಾಲೆ ತಾತ್ಕಾಲಿಕ ಸ್ಥಗಿತಗೊಂಡಿದೆ’ ಎಂಬುದಾಗಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕಿ ಲತಾ ನಾಯಕ ತಿಳಿಸಿದರು.‘ಕೆಲವು ಶಾಲೆಗಳಲ್ಲಿ ಒಬ್ಬರು ಇಬ್ಬರು ವಿದ್ಯಾರ್ಥಿಗಳಿದ್ದರು. ಇದರಿಂದ ಕಲಿಕೆಯ ವಾತಾವರಣ ಸರಿಹೊಂದದು ಎಂಬ ಕಾರಣಕ್ಕೆ ಪಾಲಕರೇ ಸಮೀಪದ ಬೇರೆ ಶಾಲೆಗೆ ಸೇರಿಸಿದ್ದಾರೆ. ಶೂನ್ಯ ದಾಖಲಾತಿ ಇರುವ ಶಾಲೆಗಳಲ್ಲಿನ ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿಯನ್ನು ಸಮೀಪದ ಶಾಲೆಗಳಿಗೆ ನಿಯೋಜನೆ ಮಾಡಲಾಗಿದೆ’ ಎಂದೂ ತಿಳಿಸಿದರು.‘ಪ್ರಸಕ್ತ ವರ್ಷ ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳನ್ನು ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಳಿಸಲಾಗುತ್ತದೆ. ಅಲ್ಲಿನ ಸೌಲಭ್ಯಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲಾಗುತ್ತದೆ. ಇನ್ನೂ ಮೂರು ವರ್ಷ ಆ ಶಾಲೆಗಳಿಗೆ ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ದಾಖಲಾದರೆ ಶಾಲೆಗಳು ಪುನರಾರಂಭಗೊಳ್ಳುತ್ತವೆ’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಡಿ.ಆರ್.ನಾಯ್ಕ ಪ್ರತಿಕ್ರಿಯಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260721-20-151118346