ಲಾಠಿ ಪ್ರಯೋಗ ನಮ್ಮನ್ನು ಅಚಲಗೊಳಿಸಿದೆ: ಮುಂದುವರಿದ ಸಿಜೆಪಿ ಪ್ರತಿಭಟನೆ
ನವದೆಹಲಿ: ‘ಪೊಲೀಸರು ನಮ್ಮ ಮೇಲೆ ನಡೆಸಿದ ಕ್ರೌರ್ಯವು ನಮ್ಮ ನಿರ್ಧಾರವನ್ನು ಅಚಲಗೊಳಿಸಿದೆ;ನಮ್ಮನ್ನು ಗಟ್ಟಿಗೊಳಿಸಿದೆ. ಹಲವು ಜನರ ತ್ಯಾಗದಿಂದ ಈ ಚಳವಳಿ ರೂಪುಗೊಂಡಿದೆ. ಆದ್ದರಿಂದ ನಾವು ಮಂಗಳವಾರವೂ ಕೂಡ ಇಲ್ಲಿಗೆ ಬಂದಿದ್ದೇವೆ. ನಮ್ಮ ಹೋರಾಟವನ್ನು ಮುಂದುರಿಸಿದ್ದೇವೆ. ನಮ್ಮ ಧ್ವನಿಯನ್ನು ಆಲಿಸವವರೆಗೂ ನಾವು ಮುಂದುವರಿಯುತ್ತೇವೆ...’– ಜಂತರ್ ಮಂತರ್ನಲ್ಲಿ ಸಿಜೆಪಿ

ನವದೆಹಲಿ: ‘ಪೊಲೀಸರು ನಮ್ಮ ಮೇಲೆ ನಡೆಸಿದ ಕ್ರೌರ್ಯವು ನಮ್ಮ ನಿರ್ಧಾರವನ್ನು ಅಚಲಗೊಳಿಸಿದೆ;ನಮ್ಮನ್ನು ಗಟ್ಟಿಗೊಳಿಸಿದೆ. ಹಲವು ಜನರ ತ್ಯಾಗದಿಂದ ಈ ಚಳವಳಿ ರೂಪುಗೊಂಡಿದೆ. ಆದ್ದರಿಂದ ನಾವು ಮಂಗಳವಾರವೂ ಕೂಡ ಇಲ್ಲಿಗೆ ಬಂದಿದ್ದೇವೆ. ನಮ್ಮ ಹೋರಾಟವನ್ನು ಮುಂದುರಿಸಿದ್ದೇವೆ. ನಮ್ಮ ಧ್ವನಿಯನ್ನು ಆಲಿಸವವರೆಗೂ ನಾವು ಮುಂದುವರಿಯುತ್ತೇವೆ...’– ಜಂತರ್ ಮಂತರ್ನಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸಾಕ್ಷಿ ಚಂದಾ ಅವರ ಮಾತುಗಳು. ‘ಇದು ನಮ್ಮ ಮಕ್ಕಳ ಭವಿಷ್ಯದ ವಿಚಾರ. ಆದ್ದರಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಈಗ ನಾವು ನಮ್ಮ ಮಕ್ಕಳೊಂದಿಗೆ ನಿಂತುಕೊಳ್ಳದೇ ಹೋದರೆ, ಯಾರು ಬರುತ್ತಾರೆ? ನಮ್ಮ ಮಕ್ಕಳು ಅವರ ಶಿಕ್ಷಣದ ಕುರಿತು, ಅವರ ಉದ್ಯೋಗದ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ಮಾತುಗಳನ್ನು ಕೇಳಿಸಿಕೊಳ್ಳಲೇ ಬೇಕು...’– ಇದು ಸಾಕ್ಷಿ ಚಂದಾ ಅವರ ತಾಯಿ ಅವರ ಮಾತುಗಳು.ಸಿಜೆಪಿ ಕರೆ ನೀಡಿದ್ದ ‘ಸಂಸತ್ ಚಲೋ’ ಪ್ರತಿಭಟನೆಯಲ್ಲಿ ಸೋಮವಾರ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿ ಬೀಸಿದ್ದರು. ‘ಪೊಲೀಸರ ಈ ವರ್ತನೆಯು ವಿದ್ಯಾರ್ಥಿಗಳಲ್ಲಿ ಭಯ ಮೂಡಿಸಿದೆ. ಆದ್ದರಿಂದ, ಮಂಗಳವಾರ ಜಂತರ್ ಮಂತರ್ಗೆ ಯಾರೂ ಬರುವುದಿಲ್ಲ’ ಎಂದು ಹೇಳಲಾಗುತ್ತಿತ್ತು. ಆದರೆ, ಈ ಮಾತುಗಳನ್ನು ವಿದ್ಯಾರ್ಥಿಗಳು ಸುಳ್ಳಾಗಿಸಿದ್ದಾರೆ ಎಂದು ಸಿಜೆಪಿ ಹೇಳಿದೆ.ಮಂಗಳವಾರ ಬೆಳಿಗ್ಗೆ ಸುಮಾರಿಗೆ 150–200 ವಿದ್ಯಾರ್ಥಿಗಳು ಜಂತರ್ ಮಂತರ್ ತಲುಪಿದ್ದರು. ಪೊಲೀಸರು ಪ್ರತಿಭಟನಾ ಸ್ಥಳದಲ್ಲಿದ್ದ ಟೆಂಟ್ಗಳನ್ನು ತೆರವು ಮಾಡಿದ್ದರು. ವೇದಿಕೆ ಮಾತ್ರ ಹಾಗೆಯೇ ಇತ್ತಾದರೂ ಅದು ಸುಸ್ಥಿತಿಯಲ್ಲಿ ಇರಲಿಲ್ಲ. ಬೆಳಿಗ್ಗೆ ಬಂದ ವಿದ್ಯಾರ್ಥಿಗಳು ವೇದಿಕೆಯನ್ನು ಕಟ್ಟಿದ್ದಾರೆ. ಪ್ರತಿಭಟನೆಗೆ ಸೂಕ್ತವಾದ ಸ್ಥಳವನ್ನಾಗಿ ಮಾಡಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲಿ ತುಂಬಿಕೊಂಡಿದ್ದರು. ದೆಹಲಿ ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳಿಂದ ವಿದ್ಯಾರ್ಥಿಗಳು ಸೇರಿಕೊಂಡರು.ಸೋಮವಾರ ಪೊಲೀಸರ ಲಾಠಿ ಏಟು ತಿಂದು, ಗಾಯಗೊಂಡವರೂ ಮಂಗಳವಾರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ‘ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ನಾವು ಹಲವು ವರ್ಷ ಶರ್ಮಿಸಿದ್ದೇವೆ. ನಾವು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ನಮಗೆ ಪಾರದರ್ಶಕವಾಗಿರುವ ಮತ್ತು ನ್ಯಾಯಯುತ ವ್ಯವಸ್ಥೆ ಬೇಕು’ ಎಂದು ಸ್ನಾತಕೋತ್ತರ ವಿದ್ಯಾರ್ಥಿನಿ ರಿಕಿತಾ ಶರ್ಮಾ ಹೇಳಿದರು.‘ಚಲೊ ಸಂಸತ್’ ಪ್ರತಿಭಟನಾ ಮೆರವಣಿಗೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಮಂಗಳವಾರವೂ ತಮ್ಮ ಪ್ರತಿಭಟನೆ ಮುಂದುವರಿಸಿದರು –ಪಿಟಿಐ ಚಿತ್ರಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಬೆಂಬಲಿಸಲು ಕೈಯಲ್ಲಿ ಗುಲಾಬಿ ಹಿಡಿದು ಜಂತರ್ ಮಂತರ್ಗೆ ಬಂದಿದ್ದ ವೃದ್ಧೆ –ಪಿಟಿಐ ಚಿತ್ರದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಂಗಳವಾರ ಭಾಗಿಯಾಗಿದ್ದ ವಿದ್ಯಾರ್ಥಿಗಳ ಸಮೂಹ –ಪಿಟಿಐ ಚಿತ್ರ ತುರ್ತು ವಿಚಾರಣೆ ಇಲ್ಲ: ದಹೆಲಿ ಹೈಕೋರ್ಟ್ ‘ಚಲೊ ಸಂಸತ್’ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಬಲ ಪ್ರಯೋಗಿಸಿದ್ದಾರೆ ಎಂಬ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ‘ನ್ಯಾಯಾಲಯವನ್ನು ಇದಕ್ಕೆಲ್ಲಾ ಎಳೆದು ತರಬೇಡಿ’ ಎಂದು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠ ಹೇಳಿತು. ‘ನಾವು ಬುಧವಾರ ಈ ಅರ್ಜಿಯ ವಿಚಾರಣೆ ನಡೆಸುತ್ತೇವೆ’ ಎಂದಿತು.-ಆದಿತ್ಯ ಸಿಂಗ್, ಉತ್ತರ ಪ್ರದೇಶದ ಗಾಜಿಯಾಬಾದ್ನಿಂದ ಬಂದಿದ್ದ ವಿದ್ಯಾರ್ಥಿಜನರು ಒಮ್ಮೆ ಬೀದಿಗಿಳಿದು ಪ್ರಶ್ನೆ ಕೇಳಲು ಆರಂಭಿಸಿದರೆ ಜನರನ್ನು ಸುಮ್ಮನಿರಿಸುವುದು ಕಷ್ಟಸಾಧ್ಯ