ಎಪಿಎಂಸಿ ಆಸ್ತಿ ದಾಖಲೆಗಳಲ್ಲಿ ಸಿಗದ ಮಾಲೀಕತ್ವದ ಅಂಕಿತ; ಬಾಡಿಗೆದಾರರಂತಾದ ವರ್ತಕರು
ಶಿರಸಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವಾರದಲ್ಲಿ ಹಲವು ದಶಕಗಳಿಂದ ನೆಲೆಸಿರುವ 50ಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಹಾಗೂ ವರ್ತಕರು ಅನುಮೋದಿತ ದರ ಪಾವತಿಸಿ, ಒಪ್ಪಂದದ ಮೂಲಕ ನಿವೇಶನಗಳನ್ನು ಪಡೆದುಕೊಂಡಿದ್ದರೂ, ಆಸ್ತಿ ದಾಖಲೆಗಳಲ್ಲಿ ಮಾಲೀಕತ್ವದ ಅಂಕಿತ ಸಿಗದಿರುವುದು ಉದ್ಯಮ ವಿಸ್ತರಣೆಗೆ ಬಹುದೊಡ್ಡ ತಡೆಯುಂಟಾಗಿದೆ.ಎಪಿಎಂಸಿ ಕಾಯ್ದೆಯನ್ವಯ ಸ

ಶಿರಸಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವಾರದಲ್ಲಿ ಹಲವು ದಶಕಗಳಿಂದ ನೆಲೆಸಿರುವ 50ಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಹಾಗೂ ವರ್ತಕರು ಅನುಮೋದಿತ ದರ ಪಾವತಿಸಿ, ಒಪ್ಪಂದದ ಮೂಲಕ ನಿವೇಶನಗಳನ್ನು ಪಡೆದುಕೊಂಡಿದ್ದರೂ, ಆಸ್ತಿ ದಾಖಲೆಗಳಲ್ಲಿ ಮಾಲೀಕತ್ವದ ಅಂಕಿತ ಸಿಗದಿರುವುದು ಉದ್ಯಮ ವಿಸ್ತರಣೆಗೆ ಬಹುದೊಡ್ಡ ತಡೆಯುಂಟಾಗಿದೆ.ಎಪಿಎಂಸಿ ಕಾಯ್ದೆಯನ್ವಯ ಸಮಿತಿ ಆವರಣದಲ್ಲಿ ಇಲ್ಲಿನ ಕೆಲ ಸಹಕಾರ ಸಂಘಗಳು ಹಾಗೂ ವ್ಯಾಪಾರಿಗಳು ಸಮಿತಿ ಆಡಳಿತ ಮಂಡಳಿಯು ನಿಗದಿ ಪಡಿಸಿದ ಹಣವನ್ನು ಲೀಸ್ ಕಂ ಸೇಲ್ ಒಪ್ಪಂದದ ಮೂಲಕ ಹೂಡಿಕೆ ಮಾಡಿ ಆಸ್ತಿ ಖರೀದಿಸಿದ್ದರು. ಆದರೆ, ಈ ನಿವೇಶನಗಳ ಹಕ್ಕುಪತ್ರ ಹಾಗೂ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಸರ್ಕಾರ ಎಂದು ನಮೂದಾಗಿದೆ. ಪರಿಣಾಮ ಆಸ್ತಿಯ ನೈಜ ಮಾಲೀಕರಾಗಿದ್ದರೂ, ದಾಖಲೆಗಳಲ್ಲಿ ಮಾತ್ರ ಬಾಡಿಗೆದಾರರಂತೆ ಉಳಿಯಬೇಕಾದ ಸ್ಥಿತಿ ಇದೆ.‘ವಾಣಿಜ್ಯ ಚಟುವಟಿಕೆಗಳ ವಿಸ್ತರಣೆಗೆ ಹಾಗೂ ತುರ್ತು ಬಂಡವಾಳದ ಅಗತ್ಯವಿದ್ದಾಗ ಬ್ಯಾಂಕ್ಗಳಿಂದ ಸಾಲ ಪಡೆಯಲು ಈ ಆಸ್ತಿಗಳನ್ನು ಅಡಮಾನ ಇಡಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ಗಳು ಖಾತಾ ಪತ್ರ ಮತ್ತು ಫಾರಂ ನಂ.3 ಇಲ್ಲದೆ ಸಾಲ ಮಂಜೂರು ಮಾಡಲು ನಿರಾಕರಿಸುತ್ತಿರುವುದರಿಂದ ಉದ್ಯಮ ವಿಸ್ತರಣೆಗೆ ತಡೆಯುಂಟಾಗಿದೆ’ ಎಂಬುದು ಹಲವು ವರ್ತಕರ ದೂರು.‘ಫಾರಂ ನಂ.3 ಲಭ್ಯವಿಲ್ಲದ ಕಾರಣ ನಗರಸಭೆಯಿಂದ ವ್ಯಾಪಾರ ಅನುಮತಿ ನವೀಕರಣ ಮಾಡಿಕೊಳ್ಳುವುದು, ಹಳೆಯ ಕಟ್ಟಡಗಳ ಪುನರ್ ನಿರ್ಮಾಣ ಅಥವಾ ನವೀಕರಣಕ್ಕೆ ಕಟ್ಟಡದ ನಕ್ಷೆ ಮಂಜೂರಾತಿ ಪಡೆಯುವುದು ಕಷ್ಟವಾಗಿದೆ. ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹೊರಟರೂ ಕಾನೂನು ತೊಡಕು ಎದುರಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಮಾರಾಟ ಮಾಡಲು ಅಥವಾ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಲು ಹೋದಾಗ ನೈಜ ಮಾಲೀಕರಿಗೆ ಹಕ್ಕುದಾರಿಕೆಯ ದಾಖಲೆ ತೋರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಲ್ಲಿನ ಆಸ್ತಿಗಳ ಮಾರುಕಟ್ಟೆ ಮೌಲ್ಯ ಕುಸಿಯುತ್ತಿದೆ’ ಎನ್ನುತ್ತಾರೆ ಆಸ್ತಿ ಮಾಲೀಕರು.‘ಕಂದಾಯ ಇಲಾಖೆ, ನಗರಸಭೆ ಹಾಗೂ ಎಪಿಎಂಸಿ ಅಧಿಕಾರಿಗಳು ತಕ್ಷಣವೇ ಜಂಟಿ ಸರ್ವೆ ನಡೆಸಿ, ದಾಖಲೆಗಳಲ್ಲಿರುವ ಸರ್ಕಾರ ಎಂಬ ನಮೂದನ್ನು ತೆರವುಗೊಳಿಸಬೇಕು. ಅರ್ಹ ಸಹಕಾರ ಸಂಸ್ಥೆಗಳು ಹಾಗೂ ವರ್ತಕರಿಗೆ ತಕ್ಷಣ ಖಾತಾ ಬದಲಾವಣೆ ಮಾಡಿಕೊಟ್ಟು, ನಗರಸಭೆಯಿಂದ ಫಾರಂ ನಂ.3 ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ’ ಎನ್ನುತ್ತಾರೆ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ.ಪಟ್ಟರಾಜ ಗೌಡ, ಶಿರಸಿ ಎಪಿಎಂಸಿ ಆಡಳಿತಾಧಿಕಾರಿಎಪಿಎಂಸಿ ಆವಾರದಲ್ಲಿರುವ ನಿವೇಶನಗಳಿಗೆ ಸಂಬಂಧಿಸಿ ಅರ್ಹ ವರ್ತಕರಿಗೆ ಹಾಗೂ ಸಹಕಾರ ಸಂಸ್ಥೆಗಳಿಗೆ ಫಾರಂ ನಂ. 3 ಒದಗಿಸುವ ಕುರಿತು ತಕ್ಷಣವೇ ನಗರಸಭೆಗೆ ಅಧಿಕೃತ ಪತ್ರ ಬರೆಯಲು ಸಮಿತಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260721-20-81681000