ಐಎಫ್ಎಸ್ ಅಧಿಕಾರಿ ಗೋಕುಲ್ ಮೇಲಿನ ಇಲಾಖಾ ವಿಚಾರಣೆ ಮುಕ್ತಾಯ
ಬೆಂಗಳೂರು: ಎಚ್ಎಂಟಿ ಕಂಪನಿಗೆ ನೀಡಿದ ₹14 ಸಾವಿರ ಕೋಟಿ ಮೌಲ್ಯದ ಅರಣ್ಯ ಜಮೀನು ಡಿನೋಟಿಫಿಕೇಷನ್ಗೆ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಸುಪ್ರೀಂ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ಐಎಫ್ಎಸ್ ಅಧಿಕಾರಿ ಆರ್. ಗೋಕುಲ್ ಅವರ ಮೇಲಿನ ಇಲಾಖಾ ವಿಚಾರಣೆಯನ್ನು ರಾಜ್ಯ ಸರ್ಕಾರ ಮುಕ್ತಾಯಗೊಳಿಸಿದೆ.ಅಲ್ಲದೆ, ಈ ಪ್ರಕರಣದಲ್ಲಿ ಗೋಕುಲ್ ಅವರು ಅಮಾನತಿನಲ್ಲ
ಬೆಂಗಳೂರು: ಎಚ್ಎಂಟಿ ಕಂಪನಿಗೆ ನೀಡಿದ ₹14 ಸಾವಿರ ಕೋಟಿ ಮೌಲ್ಯದ ಅರಣ್ಯ ಜಮೀನು ಡಿನೋಟಿಫಿಕೇಷನ್ಗೆ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಸುಪ್ರೀಂ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ಐಎಫ್ಎಸ್ ಅಧಿಕಾರಿ ಆರ್. ಗೋಕುಲ್ ಅವರ ಮೇಲಿನ ಇಲಾಖಾ ವಿಚಾರಣೆಯನ್ನು ರಾಜ್ಯ ಸರ್ಕಾರ ಮುಕ್ತಾಯಗೊಳಿಸಿದೆ.ಅಲ್ಲದೆ, ಈ ಪ್ರಕರಣದಲ್ಲಿ ಗೋಕುಲ್ ಅವರು ಅಮಾನತಿನಲ್ಲಿದ್ದ 2025ರ ಜೂನ್ 4ರಿಂದ ಅ. 8ರವರೆಗಿನ ಅವಧಿಯನ್ನು ‘ಕರ್ತವ್ಯದ ಮೇಲಿದ್ದ ಅವಧಿ’ ಎಂದು ಕ್ರಮಬದ್ಧಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.ಏನಿದು ಪ್ರಕರಣ?: ಸಚಿವ ಸಂಪುಟದ ಅನುಮೋದನೆ ಪಡೆಯದೆ ಬೆಂಗಳೂರು ಉತ್ತರ ತಾಲ್ಲೂಕಿನ ಪೀಣ್ಯ ಪ್ಲಾಂಟೇಷನ್ನಲ್ಲಿರುವ 443 ಎಕರೆ 6 ಗುಂಟೆ ಜಮೀನನ್ನು ಎಚ್ಎಂಟಿ ಕಂಪನಿಗೆ ಡಿನೋಟಿಫಿಕೇಶನ್ ಮಾಡಲು ಸುಪ್ರೀಂ ಕೋರ್ಟ್ಗೆ 2020ರಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ನಿವೃತ್ತ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ, ಪ್ರಧಾನ ಕಾರ್ಯದರ್ಶಿ ಆಗಿದ್ದ ಸ್ಮಿತಾ ಬಿಜ್ಜೂರ್ ಮತ್ತು ಆರ್. ಗೋಕುಲ್ ಅವರಿಗೆ ಅರಣ್ಯ ಇಲಾಖೆ ಪ್ರಾಥಮಿಕ ನೋಟಿಸ್ ನೀಡಿತ್ತು. ಸಂದೀಪ್ ದವೆ ಹೊರತುಪಡಿಸಿ ಉಳಿದ ಎಲ್ಲರೂ ನೋಟಿಸ್ಗೆ ಉತ್ತರ ನೀಡಿದ್ದರು.ಪ್ರಾಥಮಿಕ ನೋಟಿಸ್ ನೀಡಿದ ಬೆನ್ನಲ್ಲೇ ಸಿಬಿಐಗೆ ಪತ್ರ ಬರೆದಿದ್ದ ಗೋಕುಲ್, ‘ಬೇಲೆಕೇರಿ ಬಂದರಿನಲ್ಲಿ ಕಬ್ಬಿಣದ ಅದಿರು ಕಳ್ಳತನ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸಾಕ್ಷ್ಯ ನುಡಿದ ಕಾರಣಕ್ಕೆ ಎಚ್ಎಂಟಿ ಭೂವಿವಾದ ಪ್ರಕರಣದಲ್ಲಿ ಬಲಿಪಶು ಮಾಡಿ ಮಾನಹಾನಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದರು. ಈ ಬೆಳವಣಿಗೆ ನಡುವೆಯೇ, ಗೋಕುಲ್ ಅವರನ್ನು ಅಮಾನತು ಮಾಡಿ ಜೂನ್ 4ರಂದು ಆದೇಶ ಹೊರಡಿಸಲಾಗಿತ್ತು.2025ರ ಅ. 8ರಂದು ಗೋಕುಲ್ ಅವರ ಅಮಾನತನ್ನು ರದ್ದುಗೊಳಿಸಿದ್ದ ಸರ್ಕಾರ, ಅವರ ವಿರುದ್ಧದ ಶಿಸ್ತುಕ್ರಮವನ್ನು ಬಾಕಿ ಇರಿಸಿತ್ತು. ನಂತರ ಗೋಕುಲ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರಡು ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸುವಂತೆ ಇಲಾಖೆಗೆ ಸೂಚಿಸಲಾಗಿತ್ತು. ಈ ಕುರಿತಂತೆ 2026ರ ಜೂನ್ 19ರಂದು ಗೋಕುಲ್ ಅವರಿಗೆ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ಗೆ ಗೋಕುಲ್ ಅವರು ನೀಡಿರುವ ಹೇಳಿಕೆಯನ್ನು ಅಂಗೀಕರಿಸಿ, ಸಕಾರಾತ್ಮಕವಾಗಿ ಪರಿಗಣಿಸಬಹುದೆಂದು ಅರಣ್ಯ ಇಲಾಖೆಯು ಅಭಿಪ್ರಾಯ ನೀಡಿದೆ. ಹೀಗಾಗಿ, ಗೋಕುಲ್ ಅವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.