ಸಿಜೆಪಿ ಸಂಸತ್ ಚಲೋ: ಚಾಟ್ ಸಂದೇಶಗಳು, ಅಪ್ಲಿಕೇಷನ್ ಪರಿಶೀಲನೆ
ನವದೆಹಲಿ: ಹಿಂಸಾಚಾರಕ್ಕೆ ತಿರುಗಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸೋಮವಾರದ ‘ಸಂಸತ್ ಚಲೋ’ ಮೆರವಣಿಗೆ ಕುರಿತು ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಪ್ರತಿಭಟನಕಾರರ ನಡುವೆ ವಿನಿಮಯವಾಗಿರುವ ಚಾಟ್ ಸಂದೇಶಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸಂಭಾವ್ಯ ಇಂಟರ್ನೆಟ್ ಸ್ಥಗಿತದ ಸಂದರ್ಭದಲ್ಲೂ ಸಂಪರ್ಕ ಕಾಯ್ದುಕೊಳ್ಳುವ ಹಾಗೂ ನಿರ್ದಿಷ್ಟ ಉದ್ದೇಶಕ್ಕ

ನವದೆಹಲಿ: ಹಿಂಸಾಚಾರಕ್ಕೆ ತಿರುಗಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸೋಮವಾರದ ‘ಸಂಸತ್ ಚಲೋ’ ಮೆರವಣಿಗೆ ಕುರಿತು ತನಿಖೆ ಆರಂಭಿಸಿರುವ ದೆಹಲಿ ಪೊಲೀಸರು ಪ್ರತಿಭಟನಕಾರರ ನಡುವೆ ವಿನಿಮಯವಾಗಿರುವ ಚಾಟ್ ಸಂದೇಶಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸಂಭಾವ್ಯ ಇಂಟರ್ನೆಟ್ ಸ್ಥಗಿತದ ಸಂದರ್ಭದಲ್ಲೂ ಸಂಪರ್ಕ ಕಾಯ್ದುಕೊಳ್ಳುವ ಹಾಗೂ ನಿರ್ದಿಷ್ಟ ಉದ್ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಮನಸ್ಥಿತಿ ಕುರಿತ ಸಂದೇಶಗಳು ವಿನಿಮಯ ಆಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ‘ಈ ಚಾಟ್ ಸಂದೇಶಗಳ ಸತ್ಯಾಸತ್ಯತೆ ಮತ್ತು ಅದರಲ್ಲಿ ಭಾಗಿಯಾದ ವ್ಯಕ್ತಿಗಳ ಗುರುತುಗಳನ್ನು ತನಿಖಾಧಿಕಾರಿ ಪರಿಶೀಲಿಸುತ್ತಿದ್ದಾರೆ’ ಎಂದು ಉನ್ನತ ಮೂಲಗಳು ಮಂಗಳವಾರ ತಿಳಿಸಿವೆ.‘ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ನೆಟ್ವರ್ಕ್ ಜಾಮರ್ ಬಳಸಿದರೆ ಇಂಟರ್ನೆಟ್ ಸೇವೆ ವ್ಯತ್ಯಯವಾಗುತ್ತದೆ. ಆಗ ಸಂವಹನ ಮುಂದುವರಿಸುವುದು ಹೇಗೆ? ಗುಂಪಿನೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಪರ್ಯಾಯ ಯಾವ ಮಾರ್ಗಗಳನ್ನು ಬಳಸಬಹುದು? ಎಂಬ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆದಿರುವುದನ್ನು ಪತ್ತೆ ಮಾಡಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಬ್ಲೂಟೂತ್ ಸಿಗ್ನಲ್ಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬಲ್ಲ ಕೆಲ ಅಪ್ಲಿಕೇಷನ್ಗಳ ಬಗ್ಗೆಯೂ ಪ್ರತಿಭಟನಕಾರರು ಸಲಹೆ ನೀಡಿದ್ದರು ಮತ್ತು ಅವುಗಳ ಲಿಂಕ್ಗಳನ್ನೂ ಹಂಚಿಕೊಂಡಿದ್ದರು ಎಂಬುದು ಗೊತ್ತಾಗಿದೆ. ಅಂತಹ ಅಪ್ಲಿಕೇಷನ್ಗಳ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ಪ್ರತಿಭಟನಾ ಸ್ಥಳಕ್ಕೆ ಬರುವ ಮುನ್ನ ಗುಂಪಿನ ಎಲ್ಲ ಸದಸ್ಯರು ಒಂದೇ ರೀತಿಯ ಅಪ್ಲಿಕೇಷನ್ ಅನ್ನು ಇನ್ಸ್ಟಾಲ್ ಮಾಡಿಕೊಂಡು, ಸಂಪರ್ಕವನ್ನು ಖಚಿತಪಡಿಸಿಕೊಳ್ಳಿ’ ಎಂದು ಸಂದೇಶವೊಂದರಲ್ಲಿ ತಿಳಿಸಲಾಗಿದೆ.‘ಪ್ರತಿಭಟನೆ ವೇಳೆ ಯಾರಾದರೂ ಮೃತಪಟ್ಟರೆ, ಭವಿಷ್ಯದ ಪೀಳಿಗೆ ಅವರ ತ್ಯಾಗವನ್ನು ನೆನಪಿಸಿಕೊಳ್ಳುತ್ತದೆ. ಅಲ್ಲದೆ ಇದರಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತದೆ’ ಎಂಬ ಮತ್ತೊಂದು ಸಂದೇಶವೂ ವಿನಿಮಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳು, ಡ್ರೋನ್ ಕ್ಯಾಮೆರಾ ದೃಶ್ಯಗಳು ಮತ್ತು ಮೊಬೈಲ್ ಫೋನ್ ವಿಡಿಯೊಗಳು ಮತ್ತು ಇತರ ಎಲೆಕ್ಟ್ರಾನಿಕ್ ಪುರಾವೆಗಳ ಜತೆಗೆ ಡಿಜಿಟಲ್ ವಿಷಯಗಳನ್ನು ವಿಶ್ಲೇಷಿಸಲಾಗುವುದು ಎಂದು ಅವರು ಹೇಳಿದ್ದಾರೆ.