ವಿಶ್ಲೇಷಣೆ: ದುಷ್ಟ ಯಶಸ್ಸಿನ ಅನುರಣನ
ಸ್ವಾರ್ಥ, ದೌರ್ಜನ್ಯ ಹಾಗೂ ವಿಸ್ಮೃತಿಯ ಮೂಲಕ ಪಡೆಯುವ ದುಷ್ಟ ಯಶಸ್ಸನ್ನು ಸಂಭ್ರಮಿಸುವ ದಿನಗಳಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ಮಕ್ಕಳ ಆತ್ಮಹತ್ಯೆ ಹಾಗೂ ನೈತಿಕತೆಗಾಗಿ ನಡೆಸುವ ಉಪವಾಸ ಗೇಲಿ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಎಲ್ಲರ ಕಿವಿಗಳಲ್ಲಿ ಯಾವ ಭೇರಿಯ ಸದ್ದು ಅನುರಣಿಸುತ್ತಿದೆ?ಮರೆಮಾಚಲು ಕಲ್ಲಿನಿಂದ ಕಟ್ಟಿದ ಕೋಟೆಯೇ ಬೇಕಿಲ್ಲ, ಕಬ್

ಸ್ವಾರ್ಥ, ದೌರ್ಜನ್ಯ ಹಾಗೂ ವಿಸ್ಮೃತಿಯ ಮೂಲಕ ಪಡೆಯುವ ದುಷ್ಟ ಯಶಸ್ಸನ್ನು ಸಂಭ್ರಮಿಸುವ ದಿನಗಳಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ಮಕ್ಕಳ ಆತ್ಮಹತ್ಯೆ ಹಾಗೂ ನೈತಿಕತೆಗಾಗಿ ನಡೆಸುವ ಉಪವಾಸ ಗೇಲಿ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ. ಎಲ್ಲರ ಕಿವಿಗಳಲ್ಲಿ ಯಾವ ಭೇರಿಯ ಸದ್ದು ಅನುರಣಿಸುತ್ತಿದೆ?ಮರೆಮಾಚಲು ಕಲ್ಲಿನಿಂದ ಕಟ್ಟಿದ ಕೋಟೆಯೇ ಬೇಕಿಲ್ಲ, ಕಬ್ಬಿಣದ ಹಾಳೆಗಳೂ ಬೇಕಿಲ್ಲ, ಅಚ್ಚಬಿಳಿಯ ಬಟ್ಟೆಗಳೂ ಸಾಕಾದೀತು, ಗಿಡುಗದಂತೆ ಎರಗಲು!ಅಧಿಕಾರ, ಸಂಪತ್ತು, ಕಾಮ ಮೋಹಗಳಿಂದ ಆಕ್ರಮಿಸಿಕೊಳ್ಳುತ್ತಾ ಹೋಗುವಾಗ ಸಿಗುವ ಯಶಸ್ಸನ್ನು ಕವಿ ನಾಗಚಂದ್ರ ‘ದುಷ್ಟ ಯಶಸ್ಸು’ ಎನ್ನುತ್ತಾನೆ. ಆ ಮಾತು ನಮ್ಮೆಲ್ಲರಲ್ಲಿಯೂ ಅನುರಣಿಸಬೇಕು; ಮುಖ್ಯವಾಗಿ ಅಧಿಕಾರ ನಡೆಸುವವರಲ್ಲಿ. ‘ರಾಮಚಂದ್ರ ಚರಿತ ಪುರಾಣ’ ಕಾವ್ಯದಲ್ಲಿ ರಾವಣ ತನಗೆ ತಾನೇ ಹೇಳಿಕೊಳ್ಳುವ ಮಾತಿದು. ಮೋಸದ ದಾರಿಯಲ್ಲಿ ಸೀತೆಯ ಅಪಹರಣದ ಯಶಸ್ಸು ಅವನಿಗೆ ಸಲೀಸಾಗಿ ಸಿಕ್ಕಿತ್ತು. ‘ದುರ್ ಯಶಃ ಪಟಹ ರವ’ ಅಂದರೆ, ದುಷ್ಟ ಯಶಸ್ಸಿನ ಭೇರಿಯ ಸದ್ದು ಕಿವಿಗಳಲ್ಲಿ ಸದಾ ಅನುರಣಿಸತೊಡಗಿದ್ದರಿಂದಾಗಿ ಬುದ್ಧಿ ಮಾತುಗಳು ಕೇಳಿಸಲೇ ಇಲ್ಲ ಎಂದು ಆತ ಪಶ್ಚಾತ್ತಾಪ ಪಡುತ್ತಾನೆ. ದುಷ್ಟ ಯೋಜನೆಗಳನ್ನು ದುಷ್ಟಮಾರ್ಗಗಳ ಮೂಲಕ ಯೋಜಿಸಿ ಅದು ಫಲಿತ ಆದಾಗ ‘ಆಹಾ! ನಾನು ಹೇಗೆ ಯೋಜಿಸಿಬಿಟ್ಟೆ’ ಎಂಬಮದ ಇನ್ನಷ್ಟು ಅಡರುತ್ತದೆ. ಆದರಿದು ಯಶಸ್ಸೇ?ಸೊನಮ್ ವಾಂಗ್ಚೂಕ್ ಅವರನ್ನು ಕ್ಷಣಮಾತ್ರದಲ್ಲಿ ಬಿಳಿಬಟ್ಟೆಯಲ್ಲಿ ಮರೆಮಾಚಿ ಹೊತ್ತೊಯ್ದದ್ದು ಯಶಸ್ಸೇ? ಯುವಕ- ಯುವತಿಯರು ತಮಗೆ ಆಗಿರುವ ಅನ್ಯಾಯಕ್ಕೆ ಅಹಿಂಸಾಮಾರ್ಗದಲ್ಲಿ ನ್ಯಾಯ ಕೇಳಿದರೆ ಸರ್ಕಾರಕ್ಕದು ಅವಮಾನವೇ?ಬಿಳಿ ಬಟ್ಟೆಯಲ್ಲಿ ವಾಂಗ್ಚೂಕ್ ಅವರನ್ನು ಮರೆಮಾಡಿ ಹೊತ್ತೊಯ್ದದ್ದು ಒಂದು ಸಂಕೇತದಂತೆ ಕಾಣುತ್ತಿದೆ. ಎಲ್ಲವನ್ನೂ ಮರೆಮಾಚುವುದು ಒಂದು ತಂತ್ರವೆಂಬಂತೆ ವಿಶ್ವದ ಹಲವೆಡೆ ನಡೆಯುತ್ತಿದೆ. ಭಾರತವೂ ಇದರಲ್ಲಿ ಪರಿಣತಿ ಹೊಂದುತ್ತಿದೆ. ಇನ್ನೊಂದೆಡೆ, ಇದೆಲ್ಲವೂ ಗೊತ್ತಾದರೂ ಬೆಂಬಲಿಸುವ ಬಹುದೊಡ್ಡ ಪಡೆಯನ್ನು ಈಗಾಗಲೇ ಹುಟ್ಟಿಸಿಯಾಗಿದೆ. ಹಾಗೆ ಸೃಷ್ಟಿಸುವುದಕ್ಕಾಗಿಯೇ ವಾಸ್ತವವನ್ನು ಜನರಿಗೆ ತಲಪಿಸಬಹುದಾದ ಮಾಧ್ಯಮಗಳನ್ನು ಬಳಸುವ ಮಾರ್ಗದಿಂದ ಹತ್ತಿಕ್ಕಲಾಗಿದೆ. ಏನೆಲ್ಲ ಮಾಡಿದರೂ ಪ್ರಣವ್ರಾಯ್ ಮತ್ತು ರಾಧಿಕಾ ರಾಯ್ರ ಮೇಲಿನ ಆಪಾದನೆಗಳನ್ನು ಸಾಬೀತು ಮಾಡಲಾಗಲಿಲ್ಲ. ಆದರೆ, ಅವರ ಸಾಲದ ಒಂದು ಸಣ್ಣ ರಂಧ್ರದ ಮೂಲಕ ಅದಾನಿ ಕಂಪನಿ ಎನ್ಡಿಟಿವಿ ಅನ್ನು ಕೊಳ್ಳುವುದರ ಮೂಲಕ ಬಹುಮುಖ್ಯ ಚಾನೆಲ್ ಅನ್ನು ವಶಪಡಿಸಿಕೊಂಡ ವಿದ್ಯಮಾನವು ದುಷ್ಟ ಯಶಸ್ಸಿಗೆ ರೂಪಕದಂತಿದೆ.ಹಿಟ್ಲರ್ನ ಗೊಬೆಲ್ಸ್ ನೀತಿ ಹೆಚ್ಚು ಹಳೆಯದೇನೂ ಅಲ್ಲ. ಅದರ ಮೂಲಕ ಯಹೂದಿಗಳ ಮೇಲಿನ ಜನಾಂಗದ್ವೇಷಕ್ಕೆ ಜನಸಮ್ಮತಿಯನ್ನು ಉತ್ಪಾದಿಸಿ, ಹಿಟ್ಲರ್ನನ್ನು ‘ಅವತಾರ ಪುರುಷ’ನಂತೆ ಸ್ಥಾಪಿಸಿ ಮಾರಣಹೋಮ ನಡೆಸಿದ್ದು ಸವಕಲಾದ ಸಂಗತಿ ಅನ್ನಿಸಬಹುದು. ಆದರೆ, ಅದರಿಂದ ಪ್ರೇರಿತರಾಗಿ ಅದನ್ನು ತನ್ನ ಬರಹದಲ್ಲಿ ಸಮರ್ಥಿಸಿ, ಭಾರತದಲ್ಲೂ ‘ಶುದ್ಧೀಕರಣ’ ಆಗಬೇಕು ಎಂದು ಯೋಜಿಸಿದ ಗೋಲ್ವಲ್ಕರ್ ಕನಸನ್ನು ನನಸು ಮಾಡಲು ಇವತ್ತು ಅವರ ಶಿಷ್ಯಪಡೆ ಹತ್ತಲ್ಲ, ನೂರು ಮುಖ ಧರಿಸಿ ಜನರೆಡೆಗೆ ಧಾವಿಸುತ್ತಿದೆ. ಬಹಳ ವಿಚಿತ್ರ ಮತ್ತು ತಮಾಷೆಯೆನಿಸುವುದು, ಯಹೂದಿಗಳ ಮಾರಣಹೋಮವನ್ನು ಬೆಂಬಲಿಸುವ ಇಂತಹ ಪಡೆಗಳು ಅದೇ ಸಮಯದಲ್ಲಿ ಅತ್ತ ನಕ್ಬಾ (ಪ್ಯಾಲೆಸ್ತೀನಿ ಅರಬರನ್ನು ಅವರ ನೆಲದಿಂದ ಹಿಂಸಾತ್ಮಕವಾಗಿ ಹೊರಗಟ್ಟಿದ ಇಸ್ರೇಲಿ ಯಹೂದಿಗಳ ಕಾರ್ಯಾಚರಣೆ) ಅನ್ನೂ ಸಮರ್ಥಿಸುತ್ತದೆ. ಯಹೂದಿಗಳಿಗೆ ಕರುಣೆ ತೋರುವ ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು, ಅದೇ ಯಹೂದಿಗಳು ಅರಬರ ಮೇಲೆ ನಡೆಸುವ ಕ್ರೌರ್ಯಗಳಿಗೆ ಪರದೆ ಕಟ್ಟುತ್ತಾರೆ. ಜನಸಾಮಾನ್ಯರು ಅನ್ನಿಸಿಕೊಂಡವರು ಇದನ್ನೆಲ್ಲ ನೋಡಿಯೂ ಮೌನವಾಗಿರುತ್ತಾರೆ ಅಥವಾ ಬೆಂಬಲಿಸುತ್ತಾರೆ.ಮೌನ ಕೆಲವೊಮ್ಮೆ ಪ್ರಭುತ್ವದೆಡೆಗಿನ ಭಯದಿಂದಾದರೆ, ಕೆಲವೊಮ್ಮೆ ತಮ್ಮೊಳಗಿನ ಒಪ್ಪಿಗೆಯೂ ಆಗಿರುತ್ತದೆ. ಈ ಒಪ್ಪಿಗೆಗೆ ಸಮರ್ಥನೆಯನ್ನು ಪ್ರಭುತ್ವಪರ ಮಾಧ್ಯಮಗಳು ಉತ್ಪಾದಿಸಿ ಕೊಡುತ್ತವೆ. ನಮ್ಮ ಪೋಷಕರು ದುಡಿದದ್ದೆಲ್ಲವನ್ನೂ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕರಗಿಸಿ ಸಾಲ ಮಾಡಿಕೊಳ್ಳಲಿ, ನಮ್ಮ ವಿದ್ಯಾರ್ಥಿಗಳು ಆತ್ಮಹತ್ಯೆಯನ್ನಾದರೂ ಮಾಡಿಕೊಳ್ಳಲಿ, ಉಪವಾಸವಾದರೂ ಕೂರಲಿ, ಅಯೋಧ್ಯೆಯ ಹಣ ಎಲ್ಲಿಗಾದರೂ ಹರಿದುಹೋಗಲಿ, ಅದಕ್ಕಾಗಿ ಹೆಣವಾದರೂ ಬೀಳಲಿ, ಅದೆಲ್ಲಾ ಮುಖ್ಯವಲ್ಲ. ಪುರಿಯ ಜಗನ್ನಾಥ ಉತ್ಸವದಲ್ಲಿ ಭಾಗಿಯಾಗಲು ಸಿಕ್ಕಿದ ಪುಣ್ಯದ ಬಗ್ಗೆ ನಮ್ಮ ಕೇಂದ್ರ ಶಿಕ್ಷಣ ಸಚಿವರು ಪುಳಕದಿಂದ ಮಾತನಾಡುತ್ತಾರೆ. ಪುರಿಯಲ್ಲಿನ ಅವರ ಉತ್ಸವದ ಬಗ್ಗೆ ಪ್ರಶ್ನೆ ಕೇಳುವ ಕೆಲವು ಮಾಧ್ಯಮದವರು ತಾವೂ ಪುನೀತರಾಗುತ್ತಾರೆ. ಇಷ್ಟಾಗಿಯೂ ಓರ್ವ ಪತ್ರಕರ್ತೆ, ‘ರಾಜಧಾನಿಯಲ್ಲಿ ನಿಮ್ಮ ರಾಜೀನಾಮೆಗೆ ಪ್ರದರ್ಶನ ನಡೆಯುತ್ತಿದೆಯಲ್ಲ’ ಎಂದು ಕೇಳಿದರೆ, ನಾನು ‘ದರ್ಶನ’ಕ್ಕೆ ಬಂದಿದ್ದೇನೆ, ಇಲ್ಲೇಕೆ ‘ಪ್ರದರ್ಶನ’ದ ಮಾತು ಎಂದು ನಿರ್ಲಜ್ಜೆಯಿಂದ ಪ್ರಾಸ ಜೋಡಿಸಿ ತಮ್ಮ ಪಾಂಡಿತ್ಯಕ್ಕೆ ತಾವೇ ಬೆರಗಾದ ಖುಷಿಯಲ್ಲಿ ಮೀಯುವ ಮಂತ್ರಿಗಳನ್ನು ಪಡೆದಿರುವ ನಮ್ಮ ಪುಣ್ಯಕ್ಕೆ ಎಣೆ ಇದೆಯೇ? ಹೀಗಿರುವಾಗ ಆ ಮಕ್ಕಳು ಅಲ್ಲೇಕೆ ಉಪವಾಸ ಕೂರಬೇಕು ಎಂದು ಸಿಟ್ಟಾದ ಮಹಿಳೆಯೊಬ್ಬಳು ವಾಂಗ್ಚೂಕ್ರನ್ನು ಕರೆದೊಯ್ದ ಮೇಲೂ ಉಪವಾಸ ಮುಂದುವರಿಸಿದ ಅಭಿಜಿತ್ ದೀಪ್ಕೆಯ ಮುಖಕ್ಕೆ ನೀಲಿ ಶಾಹಿ ಎರಚಿ, ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದಳಂತೆ. ಪಾಪ ಈ ಮಕ್ಕಳ ಬೇಡಿಕೆಗೂ ಶ್ರೀರಾಮನಿಗೂ ಎತ್ತಣಿಂದೆತ್ತ ಸಂಬಂಧ? ಆಕೆ ಅಯೋಧ್ಯೆಗಾದರೂ ಹೋಗಿ ರಾಮಭಕ್ತರಿಗೆ ನ್ಯಾಯ ಒದಗಿಸಲು ಹೀಗೆ ಕೂಗಬಹುದಿತ್ತು.ಎಲ್ಲ ಕಾಲದಲ್ಲೂ ಯಾರು ತಂತ್ರಜ್ಞಾನದ ಮೇಲೆ, ಬಂಡವಾಳದ ಮೇಲೆ ಪಾರಮ್ಯ ಸಾಧಿಸುತ್ತಾರೋ ಅವರ ಮುಖವಾಗಿ ಧುತ್ತನೆ ನಾಯಕರು ಅವತರಿಸುತ್ತಾರೆ. ಇಲಾನ್ ಮಸ್ಕ್ 2013ರಿಂದ ಇಲ್ಲಿಯ ತನಕ ಘೋಷಿಸಿದ ಹಲವು ಯೋಜನೆಗಳು ಪೂರ್ಣಗೊಂಡಿಲ್ಲ. ಆ ಯೋಜನೆಗಳು ಹತ್ತು, ಹದಿನೈದು ವರ್ಷಗಳ ನಂತರ ಕಾರ್ಯಗತಗೊಳ್ಳುತ್ತವೆ ಎಂದು ಸುಳ್ಳು ಹೇಳುತ್ತಲೇ ಆತ ಜನರನ್ನು ನಂಬಿಸಿ ಷೇರು ಬೆಲೆ ಹೆಚ್ಚಿಸಿಕೊಳ್ಳುತ್ತಲೇ ಬಂದಿದ್ದಾನೆ. ಟ್ರಂಪ್ ಪರವಾಗಿ ಚುನಾವಣೆಗೆ ಹಣ ಸುರಿದು, ತನ್ನ ಕಂಪನಿಗೆ ವ್ಯಾಪಾರ ಕುದುರಿಸುತ್ತಾ, ಎರಡು ವರ್ಷಗಳಲ್ಲಿ ಐದು ಪಟ್ಟು ಹೆಚ್ಚು ಶ್ರೀಮಂತನಾಗಿ, ಈಗ ಜಗತ್ತಿನ ಮೊತ್ತ ಮೊದಲ ಟ್ರಿಲಿಯನೇರ್ ಅನ್ನಿಸಿಕೊಂಡಿದ್ದಾನೆ. ಜೊತೆಗೇ ಟ್ರಂಪ್ ಜಗತ್ತನ್ನು ನಡುಗಿಸುವ ಕೆಲಸವನ್ನು ನಿರುಮ್ಮಳವಾಗಿ ಮಾಡಿಕೊಂಡು ಬರುವುದೂ ಕಾಣುತ್ತಿದೆ. ತಂತ್ರಜ್ಞಾನವನ್ನು ಸಂಸ್ಥೆಗಳನ್ನು, ಮನಸ್ಸುಗಳನ್ನು ಕಟ್ಟುವುದಕ್ಕೆ ಬಳಸುವುದಕ್ಕಿಂತಲೂ ಒಡೆಯುವುದಕ್ಕೆ ಬಹು ಚಾಲಾಕಿತನದಿಂದ ಬಳಸಲಾಗುತ್ತಿದೆ. ಕೊಲೆಗಳಿಗೆ ಸಮ್ಮತಿಯನ್ನು ಪಡೆಯುವ ಮಟ್ಟಿಗೆ ಮನಸ್ಸುಗಳನ್ನು ವಿಷಮಯಗೊಳಿಸಲಾಗಿದೆ.‘ಇಂದು ಶಾಂತಿ ಎಂಬ ಪದವನ್ನು ಪ್ರಬಲರು ಹೇಳಿದ್ದಕ್ಕೆ ದುರ್ಬಲರು ಬಾಯಿಮುಚ್ಚಿಕೊಂಡು ಕೂರುವುದು ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. ಯುದ್ಧ ಯಾವಾಗ ಆಗುತ್ತದೆ? ಪ್ರಬಲರು ಹೇಳಿದ್ದು ಕೇಳದಿದ್ದಕ್ಕೆ ಆಗುತ್ತದೆ ಎಂಬ ವಾದವನ್ನು ಮುನ್ನೆಲೆಗೆ ತರಲಾಗುತ್ತಿದೆ. ಇದು ಎ.ಐ. ತಂತ್ರಜ್ಞಾನದಿಂದ ಸೂಪರ್ಚಾರ್ಜ್ಡ್ ಆಗಿದೆ. ಯಾರು ಹೊಸ ತಂತ್ರಜ್ಞಾನವನ್ನು ನಿಯಂತ್ರಿಸುತ್ತಾರೋ ಅವರು ಇಡೀ ಪ್ರಪಂಚವನ್ನೇ ನಿಯಂತ್ರಿಸಲು ಎ.ಐ. ಭರವಸೆ ನೀಡುತ್ತದೆ. 19ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿಯನ್ನು ಮುನ್ನಡೆಸಿದ ಬ್ರಿಟನ್, ಫ್ರಾನ್ಸ್, ಅಮೆರಿಕ, ಜಪಾನ್ ಮೊದಲಾದವು ಇಡೀ ಜಗತ್ತನ್ನು ಆಕ್ರಮಣ ಮಾಡಿದವು. ಅವರನ್ನು ಯಾರೂ ನಿಯಂತ್ರಿಸಲು ಆಗಲಿಲ್ಲ. ಈಗ ಎ.ಐ.ಯಿಂದ ಹೀಗೇ ಮತ್ತೆ ಆಗುವ ಸಾಧ್ಯತೆ ಇದೆ.ಪ್ರಜಾಪ್ರಭುತ್ವದಲ್ಲಿದ್ದ ಸಂವಾದವನ್ನು ಐ.ಟಿ. ನಾಶ ಮಾಡಿದೆ. ನಂಬಿಕೆಯು ಈಗ ಮನುಷ್ಯರಿಗಿಂತ ಹೆಚ್ಚು ಅಲ್ಗರಿದಮ್ ಮೇಲೆ ಇದೆ. ವಿಶ್ವವಿದ್ಯಾಲಯ, ಪತ್ರಕರ್ತರು, ಸಂಪಾದಕರನ್ನು ನಂಬುವುದಿಲ್ಲ ಎನ್ನುವವರೇ ಅಲ್ಗರಿದಮ್ ಅನ್ನು ನಂಬುತ್ತಾರೆ. ಹೊಸ ರಾಜಕೀಯ ವ್ಯವಸ್ಥೆಯೊಂದು ಬರುತ್ತಿದೆ; ಅದರಲ್ಲಿ ಮನುಷ್ಯರು ಕೇಂದ್ರದಲ್ಲಿಲ್ಲ, ಬದಲಿಗೆ ಟೆಕ್ನಾಲಜಿ ಕೇಂದ್ರದಲ್ಲಿದೆ’ ಎನ್ನುವ ಚಿಂತಕ ಯೊವಾ ನೋಹಾ ಹರಾರಿ ಅವರ ಮಾತು ವರ್ತಮಾನದ ಬಿಕ್ಕಟ್ಟುಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವಂತಿದೆ.ಯಾವ ತಂತ್ರಜ್ಞಾನ ‘ಎಪ್ಸ್ಟೈನ್ ಫೈಲ್’ ಮೂಲಕ ಜಗತ್ತನ್ನು ನಡುಗಿಸುತ್ತದೆ ಎಂದು ನಂಬಲಾಗಿತ್ತೋ, ಅದನ್ನು ಬಹು ಸಲೀಸಾಗಿ ಮರೆಮಾಚಿದ್ದನ್ನು ನೋಡುವಾಗ ಹರಾರಿಯ ಮಾತುಗಳು ಮುಖ್ಯವೆನಿಸುತ್ತವೆ. ಇಂದು ನಮ್ಮ ದೇಶದಲ್ಲೂ ಹಲವು ಮಹತ್ವದ ಸಂಗತಿಗಳು ಮರೆಗೆ ಹೋಗಿ, ಅಮುಖ್ಯ ಸಂಗತಿಗಳೇ ಮುನ್ನೆಲೆಗೆ ಬರುತ್ತಿವೆ.2018ರಲ್ಲಿ ಜಿ.ಡಿ. ಅಗರ್ವಾಲ್ (ಸ್ವಾಮಿ ಜ್ಞಾನಸ್ವರೂಪ ಸಾನಂದ್) ಅವರು ಗಂಗಾನದಿಯ ಶುದ್ಧೀಕರಣಕ್ಕಾಗಿ ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟ್ಗಳ ಮೇಲೆ ಕಠಿಣ ನಿರ್ಬಂಧವೂ ಸೇರಿ ಕೆಲವು ಬೇಡಿಕೆಗಳನ್ನಿಟ್ಟು, 111 ದಿನಗಳ ಕಾಲ ಉಪವಾಸ ಮಾಡಿ ತೀರಿಕೊಂಡರು. ಆ ಘಟನೆ ಜನಮನವನ್ನು ತಟ್ಟಲೂ ಇಲ್ಲ. ಹಾಗಾಗದಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ಇಂದು ಕಂಗೆಟ್ಟ ಪೋಷಕರು ಕೋಟ್ಯಂತರ ಸಂಖ್ಯೆಯಲ್ಲಿದ್ದರೂ ಧೈರ್ಯವಾಗಿ ತಮ್ಮ ಸಂಕಟ ಹೇಳಿಕೊಳ್ಳಲಾರದ ಸ್ಥಿತಿಯಲ್ಲಿದ್ದಾರೆ. ಇದನ್ನೂ ಮೀರಿ ದೆಹಲಿಯಲ್ಲಿ ಕೆಲವರು ಪ್ರತಿರೋಧ ತೋರುವ ದಿಟ್ಟತನ ತೋರಿದ್ದಾರೆ. ಇಷ್ಟು ಸಣ್ಣ ಚಲನೆಯನ್ನೂ ಬಲಿಷ್ಠ ಪ್ರಭುತ್ವ ಸಹಿಸುತ್ತಿಲ್ಲ ಮತ್ತು ಪ್ರಭುತ್ವದ ಹುಳುಕು ತೋರಿಸುವುದನ್ನು ಜನರೂ ಸಹಿಸುತ್ತಿಲ್ಲ. ಎಲ್ಲರ ಕಿವಿಯಲ್ಲೂ ಯಾವ ಭೇರಿಯ ಸದ್ದು ಅನುರಣಿಸುತ್ತಿದೆಯೋ? ಭಾರತಕ್ಕೆ ಇದು ಯಾವುದೂ ಹೊಸದಲ್ಲ ಅಲ್ಲವೇ?