ಕೇಂದ್ರ ಸರ್ಕಾರದ ಒಟ್ಟು ಸಾಲ ₹201 ಲಕ್ಷ ಕೋಟಿ
ನವದೆಹಲಿ: ದೇಶದ ನಿವ್ವಳ ಸಾಲ ಮತ್ತು ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಅನುಪಾತವು 2025–26ನೇ ಹಣಕಾಸು ವರ್ಷದಲ್ಲಿ ಶೇ 58.2ಕ್ಕೆ ಇಳಿಕೆ ಆಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಂಗಳವಾರ ತಿಳಿಸಿದೆ.ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ 58.5ರಷ್ಟು ಇತ್ತು. 2025-26ಕ್ಕೆ ಸಂಬಂಧಿಸಿ ಈಗ ಕೇಂದ್ರವು ಸಂಸತ್ತಿಗೆ ನೀಡಿರುವುದು ತಾತ್ಕಾಲಿಕ ಅಂಕಿ–ಅಂಶವಾಗಿದೆ.ಮಾ

ನವದೆಹಲಿ: ದೇಶದ ನಿವ್ವಳ ಸಾಲ ಮತ್ತು ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಅನುಪಾತವು 2025–26ನೇ ಹಣಕಾಸು ವರ್ಷದಲ್ಲಿ ಶೇ 58.2ಕ್ಕೆ ಇಳಿಕೆ ಆಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಂಗಳವಾರ ತಿಳಿಸಿದೆ.ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ 58.5ರಷ್ಟು ಇತ್ತು. 2025-26ಕ್ಕೆ ಸಂಬಂಧಿಸಿ ಈಗ ಕೇಂದ್ರವು ಸಂಸತ್ತಿಗೆ ನೀಡಿರುವುದು ತಾತ್ಕಾಲಿಕ ಅಂಕಿ–ಅಂಶವಾಗಿದೆ.ಮಾರ್ಚ್ 31ರವರೆಗಿನ ಅಂಕಿ–ಅಂಶದ ಪ್ರಕಾರ ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತವು ₹201.17 ಲಕ್ಷ (ತಾತ್ಕಾಲಿಕ ಮಾಹಿತಿ) ಕೋಟಿ ಆಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಗೆ ಒದಗಿಸಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.ಕೋವಿಡ್ ಸಂದರ್ಭದಲ್ಲಿ, ಅಂದರೆ 2020–21ರಲ್ಲಿ ಸಾಲ ಮರುಪಾವತಿ ಮತ್ತು ರಾಜಸ್ವ ಸ್ವೀಕೃತಿ ನಡುವಿನ ಅನುಪಾತವು ಶೇ 41.6ರಷ್ಟು ಇತ್ತು. ಇದು 2025–26ರ ಹೊತ್ತಿಗೆ ಶೇ 37.6ಕ್ಕೆ ಇಳಿದಿದೆ ಎಂದು ಅವರು ಉತ್ತರದಲ್ಲಿ ತಿಳಿಸಿದ್ದಾರೆ.2026–27ನೆಯ ಸಾಲಿನ ಬಜೆಟ್ನಲ್ಲಿ ₹17.15 ಲಕ್ಷ ಕೋಟಿ ಮೊತ್ತವನ್ನು ಬಂಡವಾಳ ವೆಚ್ಚಗಳಿಗೆ ಇರಿಸಲಾಗಿದೆ. ಈ ಬಜೆಟ್ನಲ್ಲಿ ಸಾಲದ ಮೊತ್ತವನ್ನು ₹16.96 ಲಕ್ಷ ಕೋಟಿ ಎಂದು ಉಲ್ಲೇಖಿಸಲಾಗಿದೆ. ಹೊಸದಾಗಿ ಸಾಲದ ರೂಪದಲ್ಲಿ ಪಡೆಯುವ ಅಷ್ಟೂ ಮೊತ್ತವನ್ನು ಆಸ್ತಿ ಸೃಷ್ಟಿಸಲು ವಿನಿಯೋಗಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.ಕೇಂದ್ರ ಸರ್ಕಾರದ ಸಾಲದ ಹೊರೆಯು 2026–27ನೇ ಹಣಕಾಸು ವರ್ಷದಲ್ಲಿ ₹228.27 ಲಕ್ಷ ಕೋಟಿಗೆ ಹೆಚ್ಚಳ ಕಾಣುವ ಅಂದಾಜು ಇದೆ ಎಂದು ಪಕ್ಷೇತರ ಸದಸ್ಯ ದಿಲೀಪ್ ಕುಮಾರ್ ರೇ ಅವರ ಪ್ರಶ್ನೆಗೆ ಉತ್ತರವಾಗಿ ಸಚಿವ ಚೌಧರಿ ಹೇಳಿದ್ದಾರೆ.ಹೆಚ್ಚಿದ ಬಂಡವಾಳ ವೆಚ್ಚ: ಇನ್ನೊಂದು ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಚೌಧರಿ ಅವರು, 2020–21ನೇ ಹಣಕಾಸು ವರ್ಷದಿಂದ 2025–26ನೇ ಹಣಕಾಸು ವರ್ಷದವರೆಗೆ ಕೇಂದ್ರವು ಒಟ್ಟು ₹44.03 ಲಕ್ಷ ಕೋಟಿ ಮೊತ್ತವನ್ನು ಬಂಡವಾಳ ವೆಚ್ಚದ ರೂಪದಲ್ಲಿ ವಿನಿಯೋಗಿಸಿದೆ ಎಂದು ತಿಳಿಸಿದ್ದಾರೆ.ಬಂಡವಾಳ ವೆಚ್ಚ ಹೆಚ್ಚಳದ ಪರಿಣಾಮವಾಗಿ ರಸ್ತೆ, ರೈಲು ಮಾರ್ಗ, ಇಂಧನ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳು ಜಾಸ್ತಿ ಆಗಿವೆ ಎಂದು ಹೇಳಿದ್ದಾರೆ.ದಶಕದಲ್ಲಿ ಮೂರು ಪಟ್ಟು ಹೆಚ್ಚಳ 2014-15ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಸಾಲದ ಮೊತ್ತವು ₹64.11 ಲಕ್ಷ ಕೋಟಿ ಆಗಿತ್ತು. ಈಗ ಅದು ₹201.17 ಲಕ್ಷ ಕೋಟಿ ಆಗಿದೆ ಅಂದರೆ 11 ವರ್ಷಗಳ ಅವಧಿಯಲ್ಲಿ ಸಾಲದ ಮೊತ್ತವು ₹137.06 ಲಕ್ಷ ಕೋಟಿಯಷ್ಟು ಜಾಸ್ತಿ ಆಗಿದೆ. ವಾರ್ಷಿಕ ಸಂಯುಕ್ತ ಬೆಳವಣಿಗೆ ದರದ (ಸಿಎಜಿಆರ್) ಲೆಕ್ಕದಲ್ಲಿ ಹೇಳುವುದಾದರೆ ಇದು ಶೇ 10.95ರಷ್ಟು ಆಗುತ್ತದೆ ಎಂದು ಸಚಿವ ಪಂಕಜ್ ಚೌಧರಿ ಅವರು ಸಂಸತ್ತಿಗೆ ನೀಡಿರುವ ಇನ್ನೊಂದು ಉತ್ತರದಲ್ಲಿ ಮಾಹಿತಿ ಒದಗಿಸಿದ್ದಾರೆ. ಕಳೆದ ಹತ್ತು ಹಣಕಾಸು ವರ್ಷದಲ್ಲಿ ಸರ್ಕಾರ ಪಡೆದಿರುವ ಸಾಲದ ನಿವ್ವಳ ಮೊತ್ತವು ₹125.99 ಲಕ್ಷ ಕೋಟಿ ಆಗಿದೆ. ಈ ಮೊತ್ತದಲ್ಲಿ ₹60.21 ಲಕ್ಷ ಕೋಟಿಯನ್ನು (ಅಂದರೆ ಒಟ್ಟು ಸಾಲದಲ್ಲಿನ ಶೇ 48ರಷ್ಟನ್ನು) ಬಂಡವಾಳ ವೆಚ್ಚವಾಗಿ ವಿನಿಯೋಗ ಮಾಡಲಾಗಿದೆ ಎಂದು ಹೇಳಿದ್ದಾರೆ.