ಸಂಗತ: ಬುದ್ಧ ಗುರುವಿಲ್ಲದೆ ‘ಶಾಂತಿಯ ತೋಟ’ವೆ?
‘ನಾನು ಬುದ್ಧನ ನೆಲಕ್ಕೆ ಸೇರಿದವನು’ ಎಂದು ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರು ಘೋಷಿಸಿದಾಗ, ಅಮೆರಿಕದ ಪ್ರಜೆಯೊಬ್ಬ ಕೇಳಿದ ಪ್ರಶ್ನೆ: ‘ಇಡೀ ಜಗತ್ತಿಗೆ ಶಾಂತಿ ಸಂದೇಶ ಬೋಧಿಸಿದ ನಿಮ್ಮ ಬುದ್ಧ, ನಮ್ಮ ಅಮೆರಿಕಕ್ಕೆ ಯಾಕೆ ಬರಲಿಲ್ಲ?’ ಆ ಪ್ರಶ್ನೆಗೆ ವಿವೇಕಾನಂದರ ಉತ್ತರ: ‘ನನ್ನ ಬುದ್ಧ ಜಗತ್ತಿನಾದ್ಯಂತ ನಡೆದಾಡುವಾಗ ನಿನ್ನ ದೇಶ ಇನ್ನೂ ಹುಟ್ಟಿಯೇ ಇರಲಿಲ್ಲ’.ನಾವು ‘ಶಾಂ

‘ನಾನು ಬುದ್ಧನ ನೆಲಕ್ಕೆ ಸೇರಿದವನು’ ಎಂದು ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರು ಘೋಷಿಸಿದಾಗ, ಅಮೆರಿಕದ ಪ್ರಜೆಯೊಬ್ಬ ಕೇಳಿದ ಪ್ರಶ್ನೆ: ‘ಇಡೀ ಜಗತ್ತಿಗೆ ಶಾಂತಿ ಸಂದೇಶ ಬೋಧಿಸಿದ ನಿಮ್ಮ ಬುದ್ಧ, ನಮ್ಮ ಅಮೆರಿಕಕ್ಕೆ ಯಾಕೆ ಬರಲಿಲ್ಲ?’ ಆ ಪ್ರಶ್ನೆಗೆ ವಿವೇಕಾನಂದರ ಉತ್ತರ: ‘ನನ್ನ ಬುದ್ಧ ಜಗತ್ತಿನಾದ್ಯಂತ ನಡೆದಾಡುವಾಗ ನಿನ್ನ ದೇಶ ಇನ್ನೂ ಹುಟ್ಟಿಯೇ ಇರಲಿಲ್ಲ’.ನಾವು ‘ಶಾಂತಿ’ ಎಂಬ ಪದವನ್ನು ಆಲಿಸಬಹುದಷ್ಟೇ. ನಮ್ಮೊಳಗೆ ಶಾಂತಿ ಉದಯಿಸಬೇಕಾದರೆ, ಅರೆನಿಮೀಲಿತ ಕಣ್ಣುಗಳೊಟ್ಟಿಗೆ ಬುದ್ಧನ ಹಾಗೆ ಕೂರಲೇಬೇಕು. ಆ ಪ್ರಶಾಂತವಾದ ಭಂಗಿಯನ್ನು ವಿಶ್ವಕ್ಕೆ ಪರಿಚಯಿಸಿದ ಮೊದಲ ಜ್ಞಾನಿ ಬುದ್ಧ. ನಮ್ಮೊಳಗಿನ ಕಲ್ಮಶ–ಸಂಕಟಗಳನ್ನು ಮೌನವಾಗಿ ಹೊರ ಚೆಲ್ಲಿ, ಉಸಿರನ್ನು ನಿರ್ಮಲಗೊಳಿಸುವ ಮಾರ್ಗವನ್ನು ತೋರಿದವ ಬುದ್ಧ ಗುರು. ಮಾನವ ಕೋಟಿ ಬುದ್ಧಮಾರ್ಗದಲ್ಲಿ ನಡೆದಲ್ಲಿ ಸೌಹಾರ್ದ ಮತ್ತು ಶಾಂತಿ ಸಾಧ್ಯವಾಗುತ್ತದೆ. ಅಹಿಂಸೆ ನೆಲೆಯಾಗುತ್ತದೆ. ಇದನ್ನೇ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕುವೆಂಪು ಕರೆದರು. ‘ಬುದ್ಧನ ಧರ್ಮವನ್ನು ಬಿಟ್ಟರೆ ಇನ್ನೆಲ್ಲ ಧರ್ಮಗಳೂ ತಮ್ಮ ಇತಿಹಾಸವನ್ನು ರಕ್ತದಲ್ಲಿ ಬರೆದುಕೊಂಡಿವೆ’ ಎನ್ನುವ ಪೂರ್ಣಚಂದ್ರ ತೇಜಸ್ವಿಯವರ ಗ್ರಹಿಕೆಯೂ ಇದೇ ಮಾದರಿಯದು.ಸರ್ವ ಜನಾಂಗದ ಶಾಂತಿಯ ತೋಟದಲ್ಲಿ, ಶಾಂತಿಯನ್ನು ಬಿತ್ತಿದ ಬುದ್ಧನನ್ನೇ ನಾವು ದೂರ ಇಡುವುದಾದರೆ, ಈ ತೋಟದಲ್ಲಿ ಮಾನವಪ್ರೇಮವನ್ನು ಬೆಳೆಯಲು ಸಾಧ್ಯವೆ? ನಾಡಗೀತೆಯಲ್ಲಿ ಮುಸ್ಲಿಂ, ಕ್ರೈಸ್ತ, ಪಾರ್ಸಿಯಂತಹ ಧರ್ಮಗಳ ಬಗ್ಗೆ ಅಭ್ಯಂತರ ಇಲ್ಲದವರು, ಈ ನೆಲಮೂಲದ ಬೌದ್ಧ ಧರ್ಮದ ಮೇಲೆ ಏಕೆ ಇಷ್ಟೊಂದು ವೈಷಮ್ಯ ಸಾಧಿಸುತ್ತಿದ್ದಾರೆ?ಸಂಗೀತ, ಸ್ವರ, ಲಯ, ತಾಳದ ನೆಪಗಳನ್ನು ನೀಡಿ ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’ ಪದ ಕೈಬಿಡುವ ಮನಃಸ್ಥಿತಿ ದಮನಕಾರಿ ಸಂಸ್ಕೃತಿಯದು ಎನಿಸುತ್ತದೆ. ಕುವೆಂಪು ವಿರಚಿತ ನಾಡಗೀತೆಯಲ್ಲಿ ಯಾವುದೇ ಭಿನ್ನತೆಗಳಿಲ್ಲ. ಆದರೆ, ಅದನ್ನು ಯಥಾವತ್ ಜಾರಿ ಮಾಡುವುದರಲ್ಲಿ ಭಿನ್ನತೆಗಳು ಕಾಣಿಸಿಕೊಂಡಿವೆ. ಮೂಲ ಪದ್ಯಕ್ಕೆ ಹಾಕಿದ ಕತ್ತರಿ, ಹೊಸ ಪದಗಳ ಜೋಡಣೆ ಹಾಗೂ ಸ್ವರಸಂಯೋಜನೆ ಹೆಸರಿನಲ್ಲಿ ‘ಬೌದ್ಧರುದ್ಯಾನ’ ಪದಕ್ಕೆ ಅನ್ಯಾಯವಾಗಿದೆ.ನಾಡಗೀತೆಯಲ್ಲಿ ನಿರ್ದಾಕ್ಷಿಣ್ಯವಾಗಿ ಬುದ್ಧನನ್ನು ಅಮಾನ್ಯ ಮಾಡಿರುವುದು ಚಾರಿತ್ರಿಕ ಪ್ರಮಾದ. ಇದು ಈ ಕಾಲದ ಬೆಳವಣಿಗೆ ಮಾತ್ರವಾಗಿರದೆ, ಶತಮಾನಗಳ ವೈಷಮ್ಯದ ಮುಂದುವರಿಕೆಯಾಗಿ ಕಾಣಿಸುತ್ತದೆ. ಬುದ್ಧನ ಪ್ರಾತಿನಿಧ್ಯವನ್ನು ಕಡಿಮೆಗೊಳಿಸುವ ಪ್ರಯತ್ನಗಳು ಎಲ್ಲ ಕಾಲಘಟ್ಟಗಳಲ್ಲೂ ನಡೆದಿವೆ. ಮೂಲ ರಚನೆಯಲ್ಲಿ ಇಲ್ಲದ ಪದಗಳನ್ನು ಜೋಡಿಸಿದ ಮನಃಸ್ಥಿತಿ ಹಾಗೂ ಮೂಲ ರಚನೆಯಲ್ಲಿರುವ ಪದವನ್ನು ಕೈಬಿಟ್ಟ ಮನಃಸ್ಥಿತಿ ಈ ದೇಶದ ಸಾಮಾಜಿಕ ಇತಿಹಾಸದ ಸಂಕೇತದಂತಿವೆ.1977ರಿಂದ 2018ರವರೆಗೆ ಉಂಟಾದ ನಾಡಗೀತೆಯ ವಿವಾದಗಳು, ಚರ್ಚೆಗಳು ಇನ್ನೂ ಪೂರ್ಣಗೊಂಡಂತಿಲ್ಲ. 150 ಸೆಕೆಂಡ್ಗಳಿಗೆ ಕಡಿತಗೊಳಿಸಿರುವ ಗೀತೆಯಲ್ಲಿ ಬೌದ್ಧರುದ್ಯಾನದಿಂದ ವ್ಯತ್ಯಾಸವೇನೂ ಆಗುವುದಿಲ್ಲ.ನಾಡಗೀತೆಗೆ ಬೌದ್ಧರುದ್ಯಾನ ಪದದ ಸೇರ್ಪಡೆ ಕುವೆಂಪು ಅವರ ಮೂಲ ರಚನೆಯ ಯಥಾವತ್ ಜಾರಿಯಷ್ಟೆ. ಈಗ ನಾವು ಕೇಳಬೇಕಾಗಿರುವ ಪ್ರಶ್ನೆ, ಜಗತ್ತಿಗೆ ಶಾಂತಿಯನ್ನು ಮಾನ್ಯ ಮಾಡಿದ ಬುದ್ಧನನ್ನು ಸರ್ವ ಜನಾಂಗದ ಶಾಂತಿಯ ತೋಟದಿಂದ ಏಕೆ ಕೈ ಬಿಡಲಾಯಿತು? ಹೀಗೆ ಮಾಡುವ ಮೂಲಕ, ಬೌದ್ಧ ಧರ್ಮವನ್ನು ಕುವೆಂಪು ಕಡೆಗಣಿಸಿದ್ದಾರೆ ಎನ್ನುವ ತಪ್ಪು ಸಂದೇಶವನ್ನು ಮುಂದಿನ ತಲೆಮಾರುಗಳಿಗೆ ನಾವು ನೀಡಿದಂತಾಗುವುದಿಲ್ಲವೆ? ಬುದ್ಧನನ್ನು ಮತ್ತು ಆತನ ಧರ್ಮವನ್ನು ಅಪರಿಮಿತವಾಗಿ ಪ್ರೇಮಿಸಿದ ಕುವೆಂಪು ಅವರನ್ನು ಬುದ್ಧರಿಂದ ಬೇರ್ಪಡಿಸಬಾರದು, ಬೇರ್ಪಡಿಸಲೂ ಆಗದು.ಬೌದ್ಧರುದ್ಯಾನ ಪದ ಸೇರ್ಪಡೆ ವಿರೋಧಿಸುವವರು ಪೂರ್ಣಚಂದ್ರ ತೇಜಸ್ವಿ ಅವರ ಆಕ್ಷೇಪಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಅವರ ಆಕ್ಷೇಪ ಇದ್ದುದು, ನಾಡಗೀತೆಯಲ್ಲಿ ಹೊಸ ಪದಗಳನ್ನು ಸೇರಿಸುವುದಕ್ಕಾಗಿಯೇ ಹೊರತು ಮೂಲ ಪದಗಳನ್ನು ಕೈಬಿಡುವುದಕ್ಕೆ ಅಲ್ಲ.ಕನ್ನಡದ ಮಣ್ಣಿನಲ್ಲಿ ಬೆರೆತ ಬೌದ್ಧರ ನೆಲೆಗಳು, ಸಂಸ್ಕೃತಿ, ವಿದ್ವತ್ತು ಅತ್ಯಂತ ಪುರಾತನವಾದುದು. ಬಾದಾಮಿ, ಐಹೊಳೆ, ಸನ್ನತಿ, ಮಸ್ಕಿ, ಕನಗನಹಳ್ಳಿಯಂತಹ ಐತಿಹಾಸಿಕ ಬೌದ್ಧ ನೆಲೆಗಳನ್ನು ನಾವು ಹೊಂದಿದ್ದೇವೆ. ನಾಗಾರ್ಜುನನಂತಹ ಪ್ರಕಾಂಡ ಪಂಡಿತನನ್ನು ಈ ನಾಡು ಬೌದ್ಧಸಾಹಿತ್ಯ ಲೋಕಕ್ಕೆ ನೀಡಿದೆ. ಮನುಕುಲಕ್ಕೆ ಶಾಂತಿಯ ಸಂದೇಶವನ್ನು ನೀಡಿದ, ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯ ಮೇಲೆ ಈ ಜಗತ್ತಿನಲ್ಲಿ ಮೊಟ್ಟಮೊದಲು ಉಸಿರಾಡಿದ ಗೌತಮ ಬುದ್ಧನ ಮಾರ್ಗಕ್ಕೆ, ಕುವೆಂಪುರವರು ತಮ್ಮ ಕಾದಂಬರಿಗಳ ನಾಯಕರನ್ನು ತಂದು ನಿಲ್ಲಿಸಿರುವ ಪ್ರಸಂಗಗಳನ್ನು ನಾವು ಮರೆಯಬಾರದು. ಕುವೆಂಪು ಅವರ ಸಾಹಿತ್ಯದ ಮುಖ್ಯ ಆಶಯಗಳಲ್ಲೊಂದರ ರೂಪದಲ್ಲಿ ಬುದ್ಧಪ್ರಜ್ಞೆಯನ್ನು ಗುರ್ತಿಸಬಹುದಾಗಿದೆ. ಹಾಗಾಗಿ, ನಾಡಗೀತೆಗೆ ಬುದ್ಧನನ್ನು ಸೇರಿಸುವುದು ಕವಿಯನ್ನು ಗೌರವಿಸುವ ಪ್ರಕ್ರಿಯೆಯೇ ಹೊರತು, ಅವಮಾನಿಸುವ ನಡೆ ಖಂಡಿತಾ ಅಲ್ಲ.‘ಬೌದ್ಧರುದ್ಯಾನ’ ಎನ್ನುವ ಪದವನ್ನು ನಾಡಗೀತೆಗೆ ಸೇರಿಸುವ ವಿಷಯ ನಮಗೆ ಹೆಮ್ಮೆಯ ವಿಷಯ ಆಗಬೇಕಿತ್ತು. ಆದರೆ, ಈ ಪರಿಷ್ಕರಣೆ ವಿವಾದದ ರೂಪ ಪಡೆದುಕೊಂಡಿರುವುದು ದುರದೃಷ್ಟಕರ.