ಮನೆ ಬಾಗಿಲಿಗೆ ನಿವಾಸಿ ಪ್ರಮಾಣಪತ್ರ
ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಅಗತ್ಯ ದಾಖಲೆಗಳನ್ನು ಸುಲಭವಾಗಿ ಒದಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸುಮಾರು 4.85 ಕೋಟಿ ಕುಟುಂಬಗಳ ಮನೆ ಬಾಗಿಲಿಗೆ ತೆರಳಿ ಉಚಿತ ಜಾತಿ ಪ್ರಮಾಣಪತ್ರ ಮತ್ತು ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ವಿತರಿಸಲು ಸರ್ಕಾರ ಮುಂದಾಗಿದೆ.ಆ ಮೂಲಕ, ಇಡೀ ದೇಶದಲ್ಲಿ ಈ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಅಗತ್ಯ ದಾಖಲೆಗಳನ್ನು ಸುಲಭವಾಗಿ ಒದಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸುಮಾರು 4.85 ಕೋಟಿ ಕುಟುಂಬಗಳ ಮನೆ ಬಾಗಿಲಿಗೆ ತೆರಳಿ ಉಚಿತ ಜಾತಿ ಪ್ರಮಾಣಪತ್ರ ಮತ್ತು ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ವಿತರಿಸಲು ಸರ್ಕಾರ ಮುಂದಾಗಿದೆ.ಆ ಮೂಲಕ, ಇಡೀ ದೇಶದಲ್ಲಿ ಈ ದಾಖಲೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡ ಪ್ರಥಮ ರಾಜ್ಯ ಕರ್ನಾಟಕ ಆಗಲಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಶಾಶ್ವತ ನಿವಾಸಿ ಪ್ರಮಾಣಪತ್ರ ಕೂಡಾ ಒಂದು. ಈ ಸೇವೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಚಾಲನೆ ನೀಡಿದರು. ಶಾಶ್ವತ ನಿವಾಸಿ ಪ್ರಮಾಣಪತ್ರ ಸೇವೆಯ ವೆಬ್ ಸೈಟ್ ಮತ್ತು ವಾಟ್ಸ್ಆ್ಯಪ್ ಸೇವೆಗೂ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ‘ಜನರು ಯಾವುದೇ ಕಾರಣಕ್ಕೂ ತಮ್ಮ ಹಕ್ಕುಗಳಿಂದ ವಂಚಿತ ಆಗಬಾರದೆಂದು ಈ ಅಭಿಯಾನದ ಮೂಲಕ ಸೌಲಭ್ಯಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಸರ್ಕಾರ ಮತ್ತು ಜನರ ನಡುವಿನ ಅಂತರ ನಿವಾರಣೆ ಆಗಬೇಕು ಮತ್ತು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದೆಂಬ ದೃಷ್ಟಿಯಿಂದ ಸರ್ಕಾರ ಈ ಕಾರ್ಯವನ್ನು ಕೈಗೊಂಡಿದೆ’ ಎಂದರು.‘ಕರ್ನಾಟಕದಲ್ಲಿ ಬದುಕು ಕಟ್ಟಿಕೊಳ್ಳುವ ಪ್ರತಿಯೊಬ್ಬರಿಗೂ ಮೂಲಸೌಕರ್ಯ ಒದಗಿಸಿಕೊಟ್ಟು ಅವರ ಹಕ್ಕು ಸಂರಕ್ಷಿಸಲು ಸರ್ಕಾರ ಬದ್ಧವಾಗಿದೆ. ಎಸ್ ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮನೆ ಬಾಗಿಲಿಗೆ ಪಹಣಿ ನೀಡುವ ಮೂಲಕ ಸರ್ಕಾರ ಹೊಸ ಹೆಜ್ಜೆ ಇಟ್ಟಿತ್ತು. ‘ನಿಮ್ಮ ಮತ ನಿಮ್ಮ ಹಕ್ಕು, ನಿಮ್ಮ ಮತ- ನಿಮ್ಮ ಬದುಕು’ ಎನ್ನುವುದು ನಮ್ಮ ಸರ್ಕಾರದ ಮಂತ್ರ. ಎಸ್ಐಆರ್ಗೆ ಅನುಕೂಲವಾಗಲು, ಮತದಾನದ ಹಕ್ಕು ಉಳಿಸಲು ಪಕ್ಷಬೇಧ ಮರೆತು ನೆರವಾಗಲು ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.‘ಚುನಾವಣಾ ಆಯೋಗ ಸೂಚಿಸಿರುವ ಕ್ರಮಗಳನ್ನು ಚಾಚೂ ತಪ್ಪದೆ ಸರ್ಕಾರ ಪಾಲಿಸುತ್ತಿದೆ. ರಾಜ್ಯದ ನಿವಾಸಿಗಳಿಗೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ನೀಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ. ಇಂತಹ ನಿರ್ಧಾರವನ್ನು ಯಾವ ಸರ್ಕಾರವೂ ಮಾಡಿಲ್ಲ. ನಾವು ಅಧಿಕಾರವನ್ನು ದುರುಪಯೋಗ ಮಾಡುತ್ತಿದ್ದೇವೆ ಎಂದು ಕೆಲವರಿಗೆ ಗಾಬರಿ ಇರಬಹುದು. ಆದರೆ, ಸಾರ್ವಜನಿಕರಿಗೆ ಸಹಾಯ ಮಾಡಲು ಇದನ್ನು ಮಾಡಲಾಗಿದೆ’ ಎಂದು ಸಮರ್ಥಿಸಿದರು.‘ಈ ಸೇವೆಗಳಿಗೆ ಆನ್ಲೈನ್ ಮೂಲಕ, ಸೇವಾ ಕೇಂದ್ರಗಳಲ್ಲಿ, ಹೋಬಳಿ ಮಟ್ಟದಲ್ಲಿ ತೆರೆಯಲಾಗಿರುವ ಸೌಲಭ್ಯ ಕೇಂದ್ರಗಳಲ್ಲಿ ಅರ್ಜಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ನನ್ನ ಮತ್ತು ಉಪ ಮುಖ್ಯಮಂತ್ರಿಯ ಭಾವಚಿತ್ರವಿರುವ ಪ್ರಮಾಣಪತ್ರ ನೀಡಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಳ್ಳಲಿದ್ದಾರೆ’ ಎಂದರು.‘ಜನರ ಬದುಕಿಗೆ ನೇರವಾಗಿ ಸಹಾಯ ಮಾಡುವುದು ಹಾಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯಲ್ಲಿಯೇ ಸರ್ಕಾರ ಕೈಗೊಂಡಿರುವ ಐತಿಹಾಸಿಕ ಹೆಜ್ಜೆಯಿದು’ ಎಂದು ಬಣ್ಣಿಸಿದ ಮುಖ್ಯಮಂತ್ರಿ, ‘ಜನರ ಬದುಕು, ಗುರುತು ಬಹಳ ಮುಖ್ಯ. ಗುರುತಿದ್ದಲ್ಲಿ ಬದುಕು ಇದೆ. ಅದರಲ್ಲಿ ಶಕ್ತಿ ಇದ್ದು, ಮುಂದಿನ ದಿನಗಳಲ್ಲಿ ಅವರ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಇದು ಅತ್ಯಗತ್ಯ’ ಎಂದರು.ರಾಜ್ಯಪಾಲರಿಗೆ ಬಿಜೆಪಿ ದೂರು ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ನಾವು ಕಾನೂನು ಪ್ರಕಾರ ಮಾಡಿದ್ದೇವೆ. ಈ ಬಗ್ಗೆ ಚುನಾವಣಾಧಿಕಾರಿಗಳು, ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ದೇಶದ ಕಾನೂನು, ಮಾನದಂಡದ ಪ್ರಕಾರ ನಾವು ಪಿಆರ್ಸಿ ಕೊಡುತ್ತಿದ್ದೇವೆ’ ಎಂದರು.‘ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಮತ್ತು ಕರ್ನಾಟಕದ ಮೂಲ ನಿವಾಸಿ ಎಂದು ಸಾಬೀತುಪಡಿಸಲು ಈ ಪ್ರಮಾಣಪತ್ರಗಳು ಸಹಾಯ ಮಾಡಲಿವೆ. ಶಾಶ್ವತ ನಿವಾಸಿ ಪ್ರಮಾಣಪತ್ರ ಪಡೆಯಲು ಕೆಲವು ಮಾನದಂಡಗಳನ್ನು ನಿಗದಿಪಡಿಸಿದ್ದೇವೆ’ ಎಂದು ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು.‘ರಾಜ್ಯದಲ್ಲಿ ಜನಿಸಿದ ಆಧಾರದಲ್ಲಿ ಈ ಪಿಆರ್ಸಿ ನೀಡಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಬಾಂಗ್ಲಾದವರು ಸೇರಿ ಅಕ್ರಮವಾಗಿ ಹಲವರಿದ್ದಾರೆ ಎಂಬ ಅನುಮಾನಗಳಿವೆ. ಈ ಪ್ರಮಾಣಪತ್ರ ಕೊಡುವ ಮೂಲಕ ಅವರೆಲ್ಲರೂ ಹೊರಗುಳಿಯಲಿದ್ದಾರೆ’ ಎಂದು ತಿಳಿಸಿದರು.ಪ್ರಮಾಣಪತ್ರ ಪಡೆಯುವ ವಿಧಾನಗಳು ಯಾವುವು? ಜಾತಿ ಪ್ರಮಾಣಪತ್ರಗಳ ವಿತರಣಾ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿದ್ದು ನಾಲ್ಕು ವಿಧಾನಗಳ ಮೂಲಕ ಸಾರ್ವಜನಿಕರನ್ನು ತಲುಪಲಿದೆ. ಮನೆ ಮನೆಗೆ ವಿತರಣೆ: ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣಪತ್ರಗಳನ್ನು ಗ್ರಾಮವಾರು ವಿಂಗಡಿಸಿ ಪಿಡಿಎಫ್ ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ. ಈ ಪ್ರತಿಗಳನ್ನು ಮುದ್ರಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಪ್ರಮಾಣಪತ್ರ ವಿತರಿಸಿದ ಬಳಿಕ ವಿತರಕರು ಮೊಬೈಲ್ ಸಂಖ್ಯೆಯನ್ನು ದಾಖಲಿಸಿ ಆ್ಯಪ್ ಮೂಲಕ ಒಟ್ಟು ವಿತರಣೆಯ ವಿವರಗಳನ್ನು ದಾಖಲಿಸುತ್ತಾರೆ. ವೆಬ್ಸೈಟ್ ಮೂಲಕ ಉಚಿತ ಡೌನ್ಲೋಡ್: ಜಾತಿ ಪ್ರಮಾಣಪತ್ರವನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ವಿಶೇಷ ವೆಬ್ಸೈಟ್ ಅಭಿವೃದ್ಧಿಪಡಿಸಲಾಗಿದೆ. ಆರ್.ಡಿ.ಸಂಖ್ಯೆ ರೇಷನ್ ಕಾರ್ಡ್ ಸಂಖ್ಯೆ ಆಧಾರ್ ಸಂಖ್ಯೆಯನ್ನು ನಮೂದಿಸಿ ಜಾತಿ ಪ್ರಮಾಣಪತ್ರ ಪಡೆಯಬಹುದು. ವೆಬ್ಸೈಟ್ ಲಿಂಕ್: https://nadakacheri.karnataka.gov.in/AJSKCertificates ಸಹಾಯ ಕೇಂದ್ರಗಳು: ಜಾತಿ ಪ್ರಮಾಣಪತ್ರವನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಲು ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ವಾಟ್ಸ್ಆ್ಯಪ್ ಎಸ್ಎಂಎಸ್ ಮೂಲಕ ಮಾಹಿತಿ: ಸುಮಾರು 85 ಲಕ್ಷ ಜಾತಿ ಪ್ರಮಾಣಪತ್ರಗಳನ್ನು ಮೊಬೈಲ್ ಸಂಖ್ಯೆಗಳೊಂದಿಗೆ ಈಗಾಗಲೇ ಲಿಂಕ್ ಮಾಡಲಾಗಿದೆ. ಸಂಬಂಧಿತ ಫಲಾನುಭವಿಗಳಿಗೆ ವಾಟ್ಸ್ಆ್ಯಪ್ ಎಸ್ಎಂಎಸ್ ಮೂಲಕ ಡೌನ್ಲೋಡ್ ಲಿಂಕ್ ಕಳುಹಿಸಲಾಗಿದೆ. ಶಾಶ್ವತ ಪ್ರಮಾಣಪತ್ರ ಪಡೆಯಲು ಹತ್ತಿರದ ನಾಡ ಕಚೇರಿ ಅಥವಾ ಆನ್ಲೈನ್ (https://ajsk.karnataka.gov.in/nk5_online/Login/Login_Public) ಮೂಲಕ ಅರ್ಜಿ ಸಲ್ಲಿಸಬಹುದು.ಪ್ರಮಾಣಪತ್ರ ಪಡೆಯಲು ಮಾನದಂಡಗಳೇನು? ಶಾಶ್ವತ ನಿವಾಸಿ ಪ್ರಮಾಣಪತ್ರ ಪಡೆಯಲು ಅರ್ಜಿದಾರರು ಕರ್ನಾಟಕದಲ್ಲಿ ಜನಿಸಿರಬೇಕು ಅಥವಾ ನಿಗದಿತ ಅರ್ಹತೆಗಳನ್ನು ಪೂರೈಸಿರಬೇಕು. ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸಿಸಿರಬೇಕು. ಕರ್ನಾಟಕದಲ್ಲೇ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಪೂರ್ಣಗೊಳಿಸಿರಬೇಕು. ರಾಜ್ಯದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರಬೇಕು. ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಠ ಏಳು ವರ್ಷ ಸೇವೆ ಸಲ್ಲಿಸಿರಬೇಕು. ತಂದೆ ತಾಯಿ ಪತಿ ಅಥವಾ ಪತ್ನಿ ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸಿಸಿರುವ ದಾಖಲೆ ಇರಬೇಕು. ಕರ್ನಾಟಕದಲ್ಲಿ ಸ್ಥಿರಾಸ್ತಿ ಹೊಂದಿರಬೇಕು ಅಥವಾ ಕಾನೂನುಬದ್ಧವಾಗಿ ಉಪಯೋಗಿಸುತ್ತಿರಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು. ಕರ್ನಾಟಕದ ನಿವಾಸಿಯನ್ನು ವಿವಾಹವಾಗಿದ್ದರೆ ರಾಜ್ಯದಲ್ಲೇ ವಾಸಿಸುತ್ತಿರಬೇಕು.