ಕರ್ನಾಟಕ ಕಬಡ್ಡಿ ಇತಿಹಾಸದಲ್ಲಿ ಹೊಸ ಅಧ್ಯಾಯ – ಕೆಕೆಪಿಎಲ್ ಆಟಗಾರರ ಹರಾಜು ಯಶಸ್ವಿ
– ದಾಖಲೆ ಬೆಲೆಗೆ ಬಿಕರಿಯಾದ ಸಾಯಿಪ್ರಸಾದ್ ಬೆಂಗಳೂರು: ಕರ್ನಾಟಕ ಕಬಡ್ಡಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL)ನ ಚೊಚ್ಚಲ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಅದ್ಧೂರಿ ಹಾಗೂ ಯಶಸ್ವಿಯಾಗಿ ನೆರವೇರಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 112 ಪ್ರತಿಭಾವಂತ ಆಟಗಾರರು ಹರಾಜಿನಲ್ಲಿ (Auction) ಪಾಲ್ಗೊಂಡಿದ್ದು,

– ದಾಖಲೆ ಬೆಲೆಗೆ ಬಿಕರಿಯಾದ ಸಾಯಿಪ್ರಸಾದ್ ಬೆಂಗಳೂರು: ಕರ್ನಾಟಕ ಕಬಡ್ಡಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL)ನ ಚೊಚ್ಚಲ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಅದ್ಧೂರಿ ಹಾಗೂ ಯಶಸ್ವಿಯಾಗಿ ನೆರವೇರಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 112 ಪ್ರತಿಭಾವಂತ ಆಟಗಾರರು ಹರಾಜಿನಲ್ಲಿ (Auction) ಪಾಲ್ಗೊಂಡಿದ್ದು, 8 ಫ್ರಾಂಚೈಸಿಗಳು ತಮ್ಮ ತಂಡಗಳಿಗಾಗಿ ನೆಚ್ಚಿನ ಆಟಗಾರರನ್ನ ಆಯ್ಕೆ ಮಾಡಿಕೊಂಡವು. ಹರಾಜಿನಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹಾಸನ ಹಾಗೂ ಉತ್ತರ ಕನ್ನಡ ಫ್ರಾಂಚೈಸಿಗಳ ಮಾಲೀಕರು, ಕೋಚ್ಗಳು ಮತ್ತು ತಂಡದ ಅಧಿಕಾರಿಗಳು ಭಾಗವಹಿಸಿದ್ದರು. ಪ್ರತಿಯೊಂದು ತಂಡಕ್ಕೂ 10 ಲಕ್ಷ ರೂ. ಹರಾಜು ಮೊತ್ತ (Auction Purse) ನಿಗದಿಪಡಿಸಲಾಗಿದ್ದು, ಇದೇ ಮೊತ್ತದೊಳಗೆ 14 ಆಟಗಾರರನ್ನ ಖರೀದಿಸಬೇಕಿತ್ತು. ಹೀಗಾಗಿ ಪ್ರತಿಯೊಂದು ಬಿಡ್ ಕೂಡ ತೀವ್ರ ಪೈಪೋಟಿ ಹಾಗೂ ಕುತೂಹಲಕ್ಕೆ ಸಾಕ್ಷಿಯಾಯಿತು. ದಾಖಲೆ ಮೊತ್ತಕ್ಕೆ ಬಿಕರಿಯಾದ ಸಾಯಿಪ್ರಸಾದ್ ಹರಾಜಿನ ಪ್ರಮುಖ ಆಕರ್ಷಣೆಯಾಗಿ ಹಲವು ಆಟಗಾರರಿಗಾಗಿ ತೀವ್ರ ಪೈಪೋಟಿ ನಡೆಯಿತು. ಅದರಲ್ಲೂ ಸಾಯಿಪ್ರಸಾದ್ ಅವರು 3.60 ಲಕ್ಷ ರೂ. ಮೊತ್ತಕ್ಕೆ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡಕ್ಕೆ ಬಿಕರಿಯಾಗಿ ಹರಾಜಿನಲ್ಲಿ ದಾಖಲೆ ಬರೆದರು. ಚೊಚ್ಚಲ ಹರಾಜಿನಲ್ಲೇ ಅತಿಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ವೇಳೆ ಪ್ರತಿಭಾವಂತ ಆಟಗಾರ ಗಗನ್ ಗೌಡ ಅವರನ್ನ ಹೊಯ್ಸಳ ಎಂಪೈರ್ (ಹಾಸನ) ತಂಡವು 3.20 ಲಕ್ಷ ರೂ.ಗೆ ಖರೀದಿ ಮಾಡಿತು. ಅನುಭವಿ ಆಟಗಾರ ಸುಶೀಲ್ ಕಾಮ್ರೇಕರ್ ಅವರನ್ನ ಮಂಗಳೂರು ಇಂಡಿಯನ್ಸ್ ತಂಡವು 2.90 ಲಕ್ಷ ರೂ. ಗೆ, ವಿಶ್ವಾಸ್ ಗೌಡ ಅವರನ್ನ ವಿಜಯಪುರ ಲಯನ್ಸ್ ತಂಡವು 2.50 ಲಕ್ಷ ರೂ. ಗೆ ಬಿಕರಿ ಮಾಡಿತು. ಈ ನಾಲ್ವರು ಆಟಗಾರರಿಗಾಗಿ ನಡೆದ ಬಿಡ್ಡಿಂಗ್ ಪ್ರಕ್ರಿಯೆ ಹರಾಜಿನ ಅತ್ಯಂತ ರೋಚಕ ಕ್ಷಣಗಳಾಗಿ ಗಮನ ಸೆಳೆಯಿತು. ತಂತ್ರ, ಯೋಜನೆ ಮತ್ತು ತಂಡ ನಿರ್ಮಾಣದ ಪೈಪೋಟಿ ಪ್ರತಿಯೊಂದು ತಂಡದಲ್ಲೂ ಇಬ್ಬರು ಕೋಚ್ಗಳು ಹಾಗೂ ತಂಡದ ನಿರ್ವಹಣಾ ಅಧಿಕಾರಿಗಳು ತಮ್ಮ ಅನುಭವ, ತಂತ್ರ ಹಾಗೂ ತಂಡದ ಅಗತ್ಯಕ್ಕೆ ಅನುಗುಣವಾಗಿ ಆಟಗಾರರನ್ನು ಆಯ್ಕೆ ಮಾಡಿದರು. ಯಾವ ಸ್ಥಾನಕ್ಕೆ ಯಾವ ಆಟಗಾರ ಸೂಕ್ತ, ಲಭ್ಯವಿರುವ ಮೊತ್ತವನ್ನ ಹೇಗೆ ಸಮರ್ಥವಾಗಿ ಬಳಸಬೇಕು ಹಾಗೂ ಸಮತೋಲಿತ ತಂಡವನ್ನ ಹೇಗೆ ಕಟ್ಟಬೇಕು ಎಂಬ ಲೆಕ್ಕಾಚಾರವೇ ಹರಾಜಿನ ಪ್ರಮುಖ ವಿಶೇಷತೆಯಾಗಿತ್ತು. ಹರಾಜಿನ ಅಂತ್ಯಕ್ಕೆ ಎಲ್ಲಾ 8 ಫ್ರಾಂಚೈಸಿಗಳೂ ಬಲಿಷ್ಠ ಹಾಗೂ ಸಮತೋಲಿತ ತಂಡಗಳನ್ನ ರಚಿಸಿದ್ದು, ಚೊಚ್ಚಲ ಕೆಕೆಪಿಎಲ್ನಲ್ಲಿ ಭರ್ಜರಿ ಸ್ಪರ್ಧೆಯ ನಿರೀಕ್ಷೆ ಮೂಡಿಸಿದೆ. ಲೀಗ್ಗೆ ವೇದಿಕೆ ಸಜ್ಜು ಕೆಕೆಪಿಎಲ್ನಲ್ಲಿ ಮೊದಲ 7 ದಿನಗಳ ಕಾಲ ರೌಂಡ್-ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರತಿಯೊಂದು ತಂಡವೂ ಉಳಿದ ಎಲ್ಲಾ ತಂಡಗಳ ವಿರುದ್ಧ ಸೆಣಸಲಿದೆ. ಪ್ರತಿದಿನ ಸಂಜೆ 6.00 ರಿಂದ ರಾತ್ರಿ 10.00 ರ ವರೆಗೆ 4 ಪಂದ್ಯಗಳು ನಡೆಯಲಿವೆ. 8ನೇ ದಿನ 2 ಸೆಮಿಫೈನಲ್ ಪಂದ್ಯಗಳು ಹಾಗೂ ಬಳಿಕ ಅದ್ಧೂರಿ ಗ್ರ್ಯಾಂಡ್ ಫೈನಲ್ ನಡೆಯಲಿದ್ದು, ಗೆದ್ದ ತಂಡ ಮೊದಲ ಕೆಕೆಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಲಿದೆ. ಯುವ ಪ್ರತಿಭೆಗಳಿಗೆ ಹೊಸ ಅವಕಾಶ ಕೆಕೆಪಿಎಲ್ ಕೇವಲ ಒಂದು ಟೂರ್ನಿ ಮಾತ್ರವಲ್ಲ, ಇದು ಕರ್ನಾಟಕದ ಯುವ ಕಬಡ್ಡಿ ಪ್ರತಿಭೆಗಳಿಗೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಮಹತ್ವದ ವೇದಿಕೆಯಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಭಾವಂತ ಆಟಗಾರರಿಗೆ ವೃತ್ತಿಪರ ಅವಕಾಶಗಳನ್ನ ಒದಗಿಸುವ ಮೂಲಕ ಕರ್ನಾಟಕದ ಕಬಡ್ಡಿಗೆ ಹೊಸ ಆಯಾಮ ನೀಡುವ ಮಹತ್ವಾಕಾಂಕ್ಷೆಯನ್ನ ಈ ಲೀಗ್ ಹೊಂದಿದೆ. ʻನಿಮ್ಮ ಪ್ರದೇಶ… ನಿಮ್ಮ ತಂಡ… ನಿಮ್ಮ ಗೌರವ…ʼ ಎಂಬ ಘೋಷವಾಕ್ಯದೊಂದಿಗೆ ಆರಂಭವಾಗಿರುವ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL), ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ.