ಹಾವು ಕಡಿತ: ಸತತ ಎರಡನೇ ವರ್ಷವೂ ಕರ್ನಾಟಕದಲ್ಲೇ ಅತಿ ಹೆಚ್ಚು ಸಾವು!
ನವದೆಹಲಿ: ಹಾವು ಕಡಿತದಿಂದ ಅತಿ ಹೆಚ್ಚು ಮಂದಿ ಮೃತಪಟ್ಟ ರಾಜ್ಯಗಳ ಪೈಕಿ ಕರ್ನಾಟಕವು ಸತತ ಎರಡು ವರ್ಷಗಳಿಂದ ಮೊದಲ ಸ್ಥಾನದಲ್ಲಿದೆ. ಆದರೆ, ಪಶ್ಚಿಮ ಬಂಗಾಳವು ಹಾವು ಕಡಿತದ ಪ್ರಕರಣಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸಂಸತ್ಗೆ ಮಂಗಳವಾರ ತಿಳಿಸಿದೆ.2025ರಲ್ಲಿ ಕರ್ನಾಟಕದಲ್ಲಿ 160 ಮಂದಿ ಹಾವು

ನವದೆಹಲಿ: ಹಾವು ಕಡಿತದಿಂದ ಅತಿ ಹೆಚ್ಚು ಮಂದಿ ಮೃತಪಟ್ಟ ರಾಜ್ಯಗಳ ಪೈಕಿ ಕರ್ನಾಟಕವು ಸತತ ಎರಡು ವರ್ಷಗಳಿಂದ ಮೊದಲ ಸ್ಥಾನದಲ್ಲಿದೆ. ಆದರೆ, ಪಶ್ಚಿಮ ಬಂಗಾಳವು ಹಾವು ಕಡಿತದ ಪ್ರಕರಣಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸಂಸತ್ಗೆ ಮಂಗಳವಾರ ತಿಳಿಸಿದೆ.2025ರಲ್ಲಿ ಕರ್ನಾಟಕದಲ್ಲಿ 160 ಮಂದಿ ಹಾವು ಕಡಿತದಿಂದ ಮೃತಪಟ್ಟಿದ್ದರೆ, 2024ರಲ್ಲಿ 101 ಜನ ಅಸುನೀಗಿದ್ದರು. ಬೇರೆ ಯಾವುದೇ ರಾಜ್ಯಗಳಲ್ಲಿ ಹಾವು ಕಡಿತದಿಂದ ಮೃತಪಟ್ಟವರ ಸಂಖ್ಯೆ 100 ದಾಟಿಲ್ಲ.ಪಶ್ಚಿಮ ಬಂಗಾಳದಲ್ಲಿ 65, ತಮಿಳುನಾಡು 26, ಒಡಿಶಾ 23 ಮತ್ತು ಅಸ್ಸಾಂನಲ್ಲಿ 13 ಮಂದಿ ಮೃತಪಟ್ಟಿದ್ದಾರೆ.‘ಭಾರತದಲ್ಲಿ ಪ್ರತಿ ವರ್ಷ ಅಂದಾಜು 30 ಲಕ್ಷದಿಂದ 40 ಲಕ್ಷ ಹಾವು ಕಡಿತದ ಪ್ರಕರಣಗಳು ಸಂಭವಿಸುತ್ತಿವೆ. ಇದರಿಂದ ಸುಮಾರು 50 ಸಾವಿರ ಸಾವುಗಳು ಸಂಭವಿಸುತ್ತಿದ್ದು, ಇದು ಜಾಗತಿಕ ಮಟ್ಟದ ಒಟ್ಟು ಹಾವು ಕಡಿತದ ಸಾವುಗಳಲ್ಲಿ ಅರ್ಧದಷ್ಟಾಗಿದೆ. ಹಾವು ಕಡಿತಕ್ಕೆ ಒಳಗಾದವರ ಪೈಕಿ ಕೆಲವರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ, ಹಾವು ಕಡಿತದ ನಿಖರ ಮಾಹಿತಿ ದಾಖಲಾಗುತ್ತಿಲ್ಲ’ ಎಂದು ಸಚಿವಾಲಯವು ತಿಳಿಸಿದೆ.ಹಾವು ಕಡಿತದ ಮೇಲ್ವಿಚಾರಣೆಯನ್ನು ಸುಧಾರಿಸಲು ಅಧಿಸೂಚಿತ ರೋಗವೆಂದು ಘೋಷಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಕರ್ನಾಟಕ ಸೇರಿದಂತೆ 12 ರಾಜ್ಯಗಳು ಅಧಿಸೂಚಿತ ರೋಗವೆಂದು ಘೋಷಿಸಿದ್ದವು. 2024ರ ಫೆಬ್ರುವರಿಯಲ್ಲಿ ಕರ್ನಾಟಕವು ಹಾವು ಕಡಿತವನ್ನು ಅಧಿಸೂಚಿತ ರೋಗವೆಂದು ಘೋಷಿಸಿತ್ತು. ಹೀಗಾಗಿ, 2023ರಲ್ಲಿ ಕರ್ನಾಟಕದಲ್ಲಿ 6,596 ಪ್ರಕರಣ ಹಾಗೂ 19 ಸಾವುಗಳು ವರದಿಯಾಗಿದ್ದವು. ಹಾವು ಕಡಿತದ ಒಟ್ಟು ಪ್ರಕರಣಗಳಲ್ಲಿ ಶೇಕಡ 90ರಷ್ಟು ಕಟ್ಟುಹಾವು, ನಾಗರಹಾವು, ಕೊಳಕು ಮಂಡಲ ಮತ್ತು ಗರಗಸ ಹುರುಪೆ ಮಂಡಲ ಹಾವುಗಳಿಂದ ಸಂಭವಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಂಸತ್ತಿಗೆ ಮಾಹಿತಿ ನೀಡಿದೆ.