ಅಂದಿನ ಅಣ್ಣ ಹಜಾರೆ, ಇಂದಿನ ಸಿಜೆಪಿ: ಸರ್ಕಾರಗಳಿಗೆ ನುಂಗಲಾರದ ತುತ್ತಾದ ಚಳವಳಿಗಳು
2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ಭ್ರಷ್ಟಾಚಾರ ವಿರೋಧಿ ಚಳವಳಿ’ ಭಾರತದ ಇತಿಹಾಸದಲ್ಲಿ ಕೇವಲ ಒಂದು ಚಳವಳಿಯಾಗಿ ಉಳಿದಿಲ್ಲ. ಅದು ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸಿದ ಘಟನೆಯಾಗಿತ್ತು. ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಈ ಚಳವಳಿಯು ಆಗಿನ ಯುಪಿಎ ಸರ್ಕಾರವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿತ್ತು. ಲಕ್ಷಾಂತರ ಜನರನ್ನು ಒಗ್ಗೂಡಿಸುವಲ್ಲಿಯೂ ಯಶಸ್ವಿಯಾ

2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ಭ್ರಷ್ಟಾಚಾರ ವಿರೋಧಿ ಚಳವಳಿ’ ಭಾರತದ ಇತಿಹಾಸದಲ್ಲಿ ಕೇವಲ ಒಂದು ಚಳವಳಿಯಾಗಿ ಉಳಿದಿಲ್ಲ. ಅದು ದೇಶದ ರಾಜಕೀಯ ದಿಕ್ಕನ್ನೇ ಬದಲಾಯಿಸಿದ ಘಟನೆಯಾಗಿತ್ತು. ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಈ ಚಳವಳಿಯು ಆಗಿನ ಯುಪಿಎ ಸರ್ಕಾರವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿತ್ತು. ಲಕ್ಷಾಂತರ ಜನರನ್ನು ಒಗ್ಗೂಡಿಸುವಲ್ಲಿಯೂ ಯಶಸ್ವಿಯಾಗಿತ್ತು.ಇದೀಗ ಸುಮಾರು 15 ವರ್ಷಗಳ ನಂತರ ಇದೇ ರೀತಿಯ ಆಕ್ರೋಶವೊಂದು ಮತ್ತೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯೂ ಇಂತಹದ್ದೆ ಒಂದು ಆಕ್ರೋಶವನ್ನು ಒಡಲೊಳಗೆ ಇಟ್ಟುಕೊಂಡಿದೆ ಎಂದರೆ ತಪ್ಪಾಗಲಾರದು.ಮೊದಲ ನೋಟಕ್ಕೆ ಆಗಿನ ‘ಭ್ರಷ್ಟಾಚಾರ ವಿರೋಧಿ ಚಳವಳಿ’ ಮತ್ತು ಈಗಿನ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ‘ವಿದ್ಯಾರ್ಥಿಗಳ ಚಳವಳಿ’ ನಡುವೆ ಯಾವುದೇ ಸಂಬಂಧವಿಲ್ಲ ಎಂದು ತೋರುತ್ತದೆ. ಆದರೆ, ಈ ಎರಡೂ ಚಳವಳಿಗಳ ಆತ್ಮ ಒಂದೇ ಆಗಿದೆ. ಅದು ವ್ಯವಸ್ಥೆಯ ವಿರುದ್ಧದ ಆಕ್ರೋಶವಾಗಿದೆ. ರಾಜಕೀಯ ಪಕ್ಷವಲ್ಲ, ವ್ಯವಸ್ಥೆಯೇ ಇಲ್ಲಿ ಪ್ರಶ್ನೆ:ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಆರೋಪ–ಪ್ರತ್ಯಾರೋಪ ಸಾಮಾನ್ಯವಾಗಿದೆ. ಸರ್ಕಾರವನ್ನು ವಿರೋಧ ಪಕ್ಷ ಟೀಕಿಸಿದರೆ, ಅದಕ್ಕೆ ಪ್ರತಿಯಾಗಿ ಸರ್ಕಾರವು ಒಂದು ಸಬೂಬು ಕೊಡುತ್ತದೆ. ಈ ರಾಜಕೀಯ ಆಟದಲ್ಲಿ ಇಬ್ಬರು ಪಾತ್ರಧಾರಿಗಳಾಗಿರುತ್ತಾರೆ.ಆದರೆ ವ್ಯವಸ್ಥೆ ವಿರೋಧಿ ಚಳವಳಿಗಳು ಹಾಗಲ್ಲ. ಇವು ಅಧಿಕಾರದಲ್ಲಿರುವ ಪಕ್ಷವನ್ನು ಮಾತ್ರ ಪ್ರಶ್ನಿಸುವುದಿಲ್ಲ, ಬದಲಾಗಿ ಇಡೀ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುತ್ತವೆ.ಉದಾಹರಣೆಗೆ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ, ‘ಯಾವ ಪಕ್ಷ ಅಧಿಕಾರದಲ್ಲಿದ್ದರೂ ಭ್ರಷ್ಟಾಚಾರ ಏಕೆ ಕಡಿಮೆಯಾಗುತ್ತಿಲ್ಲ?’ ಎಂದು ಜನ ಪ್ರಶ್ನಿಸಿದ್ದರು. ಇಂದಿನ ವಿದ್ಯಾರ್ಥಿಗಳ ಚಳುವಳಿಯಲ್ಲಿ, ‘ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆ ಯಾಕಾಗುತ್ತಿದೆ?’ ಎಂದು ಕೇಳುತ್ತಿದ್ದಾರೆ.ಇಲ್ಲಿ ಸಮಸ್ಯೆ ಇರುವುದು ಯಾವುದೋ ಒಂದು ರಾಜಕೀಯ ಪಕ್ಷದ್ದಲ್ಲ, ಇಡೀ ವ್ಯವಸ್ಥೆಯದಾಗಿದೆ.ರಾಜಕೀಯ ತಂತ್ರ ನಡೆಯಲ್ಲ: ಸಾಮಾನ್ಯವಾಗಿ ರಾಜಕೀಯ ವಿವಾದಗಳಲ್ಲಿ ಸರ್ಕಾರಗಳು ಒಂದು ತಂತ್ರವನ್ನು ಬಳಸುತ್ತವೆ. ಸರ್ಕಾರದ ವಿರುದ್ಧ ವಿರೋಧ ಪಕ್ಷ ಟೀಕೆ ಮಾಡಿದರೆ, ‘ಅವರು ಅಧಿಕಾರದಲ್ಲಿದ್ದಾಗ ಇನ್ನೂ ಕೆಟ್ಟ ಸ್ಥಿತಿ ಇತ್ತು’ ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳುತ್ತವೆ.ಆದರೆ, ಜನ ಚಳವಳಿಗಳಲ್ಲಿ ಈ ತಂತ್ರ ಸಫಲವಾಗುವುದಿಲ್ಲ. ಏಕೆಂದರೆ ಇಲ್ಲಿ ಪ್ರತಿಭಟನಾಕಾರರು ವಿರೋಧ ಪಕ್ಷದ ಕಾರ್ಯಕರ್ತರಲ್ಲ, ಅವರು ಸಾಮಾನ್ಯ ನಾಗರಿಕರು, ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳಾಗಿರುತ್ತಾರೆ.ಮೂರು ವರ್ಷಗಳ ಕಾಲ ಪರೀಕ್ಷೆಗೆ ತಯಾರಿ ನಡೆಸಿದ ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದಾಗಿದೆ ಎಂದು ಕೇಳಿದಾಕ್ಷಣ ಅವನ ಕೋಪ ಯಾವುದೇ ರಾಜಕೀಯ ಪಕ್ಷದ ಮೇಲೆ ಹೋಗುದಿಲ್ಲ. ಅದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.ಹೀಗಾಗಿಯೇ ಸರ್ಕಾರಗಳು ಈ ಪ್ರತಿಭಟನೆಗಳನ್ನು ‘ವಿರೋಧ ಪಕ್ಷದ ತಂತ್ರ’ ಎಂದು ಹೇಳಿ ತಳ್ಳಿಹಾಕಲು ಸಾಧ್ಯವಾಗುವುದಿಲ್ಲ. ಹಾಗೆ ಮಾಡಿದರೆ ತಮ್ಮದೇ ಮತದಾರರನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ. ರಾಜಿ ಮಾತು ದೂರ:ರಾಜಕೀಯದಲ್ಲಿ ರಾಜಿ ಮಾಡಿಕೊಳ್ಳುವುದು ಸಾಮಾನ್ಯ. ಕಾರ್ಮಿಕ ಸಂಘಟನೆಗಳು ವೇತನ ಹೆಚ್ಚಳ ಕೇಳಿ ಹೋರಾಟ ನಡೆಸುತ್ತದೆ. ಸರ್ಕಾರವು ಕಾರ್ಮಿಕ ಮುಖಂಡನನ್ನು ಕರೆಯಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ರಾಜಿ ಸಂಧಾನ ಮಾಡುತ್ತದೆ. ಆದರೆ, ವ್ಯವಸ್ಥೆ ವಿರೋಧಿ ಚಳವಳಿಗಳು ಈ ರೀತಿಯ ರಾಜಿಯ ಮೇಲೆ ನಿಂತಿರುವುದಿಲ್ಲ. ಅವು ನೈತಿಕ ಪ್ರಶ್ನೆಗಳ ಮೇಲೆ ನಿಂತಿರುತ್ತವೆ.ಭ್ರಷ್ಟಾಚಾರ ವಿರುದ್ಧದ ಚಳವಳಿ, ಸಣ್ಣಪುಟ್ಟ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವಂತೆ ಸರ್ಕಾರವನ್ನು ಕೇಳಲಿಲ್ಲ. ಬದಲಾಗಿ ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಲೋಕಪಾಲ ಮಸೂದೆ ಜಾರಿ ಮಾಡಲು ಕೇಳುತ್ತದೆ.ಇಂದಿನ ವಿದ್ಯಾರ್ಥಿಗಳ ಚಳವಳಿಯೂ ಇಂತಹದ್ದೇ ಬೇಡಿಕೆಗಳನ್ನು ಮುಂದಿಟ್ಟಿದೆ. ಪರೀಕ್ಷೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರುವಂತೆಯೂ, ಶಿಕ್ಷಣ ಸಚಿವರ ರಾಜೀನಾಮೆ ನೀಡುವಂತೆಯೂ ಅದು ಕೇಳುತ್ತಿದೆ.ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಒಪ್ಪಿದರೆ, ಅದು ತನ್ನದೇ ಆಡಳಿತ ವ್ಯವಸ್ಥೆಯಲ್ಲಿ ಗಂಭೀರ ದೋಷಗಳಿವೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತಾಗುತ್ತದೆ. ಬೇಡಿಕೆಗಳನ್ನು ತಿರಸ್ಕರಿಸಿದರೆ, ಜನರ ಮುಂದೆ ಬೆತ್ತಲಾಗುತ್ತದೆ.ನಾಯಕನೇ ಇಲ್ಲ, ಜನರೇ ಎಲ್ಲ: ಸಾಂಪ್ರದಾಯಿಕ ರಾಜಕೀಯ ಚಳವಳಿಗಳಿಗೆ ಸ್ಪಷ್ಟ ನಾಯಕತ್ವ ಇರುತಿತ್ತು. ಸರ್ಕಾರ ಆ ನಾಯಕರ ಜೊತೆ ಮಾತುಕತೆ ನಡೆಸಬಹುದಿತ್ತು. ಆದರೆ, ವ್ಯವಸ್ಥೆ ವಿರೋಧಿ ಚಳವಳಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಬೆಳೆಯುತ್ತಿವೆ.ಭ್ರಷ್ಟಾಚಾರ ವಿರೋಧಿ ಚಳವಳಿಗೆ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್ ಮುಂತಾದ ಮುಖಂಡರಿದ್ದರು. ಆದರೆ, ಅದರ ಯಶಸ್ಸಿನ ಹಿಂದೆ ದೇಶದಾದ್ಯಂತದ ಸಾಮಾನ್ಯ ಜನರ ಪಾಲ್ಗೊಳ್ಳುವಿಕೆ ಇತ್ತು.ಇಂದಿನ ವಿದ್ಯಾರ್ಥಿ ಚಳವಳಿಗೂ ಟೆಲಿಗ್ರಾಂ, ಎಕ್ಸ್, ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳ ಮೂಲಕ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಒಬ್ಬ ನಾಯಕನನ್ನು ಬಂಧಿಸಿದರೆ ಚಳವಳಿ ನಿಲ್ಲುವುದಿಲ್ಲ. ಒಂದು ಸಂಘಟನೆಯನ್ನು ನಿಷೇಧಿಸಿದರೂ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ. ಇದು ಜನ ಚಳವಳಿಗಳ ಶಕ್ತಿಯಾಗಿದೆ.ಆದ್ದರಿಂದಲೇ ಜನ ಚಳವಳಿಗಳೆಂದರೆ ಎಲ್ಲಾ ಸರ್ಕಾರಗಳಿಗೂ ಒಂದು ರೀತಿಯ ಭಯ ಕಾಡುತ್ತಿರುತ್ತದೆ. ಜನರು ಸರ್ಕಾರವನ್ನು ಪ್ರಶ್ನಿಸಿದಾಗ ಅದು ರಾಜಕೀಯ. ಆದರೆ ಜನರು ವ್ಯವಸ್ಥೆಯನ್ನೇ ಪ್ರಶ್ನಿಸಲು ಆರಂಭಿಸಿದಾಗ ಅದು ಇತಿಹಾಸ.