ಕಲಬುರಗಿಯಲ್ಲಿ ಬರದ ಛಾಯೆ: ನೆಲಕಚ್ಚಿದ ತೊಗರಿ, ಒಣಗಿದ ಕಬ್ಬು ಬೆಳೆ
ಕಲಬುರಗಿ: ಮುಂಗಾರು ಮಳೆ ಅಭಾವದಿಂದ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ವಾಣಿಜ್ಯ ಬೆಳೆಗಳ ಜಿಲ್ಲೆ ಎಂದು ಕರೆಯುವ ಕಲಬುರಗಿಯಲ್ಲಿ ತೊಗರಿ, ಹೆಸರು, ಹತ್ತಿ, ಕಬ್ಬು ಬಿತ್ತನೆ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ.ಮುಂಗಾರು ಆರಂಭಕ್ಕೂ ಪೂರ್ವದಲ್ಲಿ ರೈತರು ತಮ್ಮ ಹೊಲಗಳನ್ನು ಹದಗೊಳಿಸಿ, ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಮುಂಗಾರು

ಕಲಬುರಗಿ: ಮುಂಗಾರು ಮಳೆ ಅಭಾವದಿಂದ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ವಾಣಿಜ್ಯ ಬೆಳೆಗಳ ಜಿಲ್ಲೆ ಎಂದು ಕರೆಯುವ ಕಲಬುರಗಿಯಲ್ಲಿ ತೊಗರಿ, ಹೆಸರು, ಹತ್ತಿ, ಕಬ್ಬು ಬಿತ್ತನೆ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ.ಮುಂಗಾರು ಆರಂಭಕ್ಕೂ ಪೂರ್ವದಲ್ಲಿ ರೈತರು ತಮ್ಮ ಹೊಲಗಳನ್ನು ಹದಗೊಳಿಸಿ, ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಮುಂಗಾರು ಮಳೆ ಕೊರತೆಯಿಂದ ವಾಣಿಜ್ಯ ಬೆಳೆಗಳಿಗೆ ಭಾರಿ ಹೊಡೆತ ಬಿದ್ದಿದೆ. ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.ಕಳೆದ ಮುಂಗಾರಿನಲ್ಲಿ ಹತ್ತಿ 83,735 ಹೆಕ್ಟೇರ್, ತೊಗರಿ 3,47,174 ಹೆಕ್ಟೇರ್ ಹಾಗೂ ಹೆಸರು 42,351 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಸುರಿದ ಉತ್ತಮ ಮಳೆಗೆ ಕೆಲ ರೈತರು ತಕ್ಕಮಟ್ಟಿಗೆ ಆದಾಯ ಪಡೆದುಕೊಂಡಿದ್ದರು. ಇನ್ನೂ ಕೆಲ ರೈತರು ಅತಿವೃಷ್ಟಿಯಿಂದ ಕೈ ಸುಟ್ಟುಕೊಂಡಿದ್ದರು.ಪ್ರಸಕ್ತ ವರ್ಷ ಮಳೆ ಕೊರತೆಯಿಂದಾಗಿ ಹತ್ತಿ 62,792 ಹೆಕ್ಟೇರ್, ತೊಗರಿ 2,08,287 ಹೆಕ್ಟೇರ್, ಹೆಸರು 34,753 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಮಾಡಿರುವ ಬೆಳೆಗಳು ಕೂಡ ಮಳೆ ಕೊರತೆಯಿಂದಾಗಿ ಮೊಳಕೆ ಒಡೆದು ಅಲ್ಲಿಯೇ ಕಮರುತ್ತಿವೆ.ಕಳೆದ ವರ್ಷ ಮುಂಗಾರು ಉತ್ತಮ ಮಳೆಯಾದ ಕಾರಣ ಪ್ರಸಕ್ತ ವರ್ಷ ಜನವರಿ–ಫೆಬ್ರುವರಿ ತಿಂಗಳಿನಲ್ಲಿ 44,642 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲಾಗಿತ್ತು. ಆದರೆ, ಬೆಳೆದು ನಿಂತಿರುವ ಕಬ್ಬು ಮಳೆ ಕೊರತೆಯಿಂದಾಗಿ ಒಣಗಲು ಆರಂಭಿಸಿದೆ.ಅನಾವೃಷ್ಟಿಯಿಂದ ಭೀಮಾ ನದಿಯಲ್ಲಿ ನೀರು ಬರಿದಾಗುತ್ತಿದೆ. ಅಂತರ್ಜಲ ಕುಸಿತ, ಕಾಲುವೆಗಳಿಗೆ ನೀರು ಹರಿಸದಿರುವುದು ಕಲಬುರಗಿ, ಅಫಜಲಪುರ, ಜೇವರ್ಗಿ, ಶಹಾಬಾದ್ ಭಾಗದಲ್ಲಿ ಅಪಾರ ಪ್ರಮಾಣದ ಕಬ್ಬಿನ ಬೆಳೆ ಹಾನಿಯಾಗಿದೆ. ಏಳು ತಿಂಗಳ ಬೆಳೆ ಕಣ್ಣಮುಂದೆ ಒಣಗುತ್ತಿರುವುದರಿಂದ ಕಬ್ಬು ಬೆಳೆಗಾರರನ್ನು ತೀವ್ರ ಆತಂಕಕ್ಕೆ ದೂಡಿದೆ.ಗುಳೆ ಆತಂಕ: ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ಕೃಷಿ ಕಾರ್ಮಿಕರಿಗೆ ಮತ್ತು ಸಣ್ಣ ರೈತರಿಗೆ ಸ್ಥಳೀಯವಾಗಿ ಯಾವುದೇ ಕೆಲಸ ಸಿಗದ ಕಾರಣ ನಗರ ಪ್ರದೇಶ ಹಾಗೂ ಪಕ್ಕದ ರಾಜ್ಯಗಳಿಗೆ ಗುಳೆ ಹೋಗುವ ಅನಿವಾರ್ಯತೆ ಉಂಟಾಗಿದೆ. ಮಳೆ ಕೊರತೆ ಹೀಗೆ ಮುಂದುವರಿದರೆ ಜಿಲ್ಲೆಯಲ್ಲಿ ಹಳ್ಳಿಗರು ಗುಳೆ ಹೋಗುವುದು ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ರೈತರು.ಮಳೆಯ ಲಭ್ಯತೆಗೆ ಅನುಗುಣವಾಗಿ ಮುಂಗಾರಿನಲ್ಲಿ ತೊಗರಿ ಬಿತ್ತನೆಗೆ ಆಗಸ್ಟ್ ಮೊದಲ ವಾರದವರೆಗೆ ಅವಕಾಶವಿದೆ. ರೈತರು ಶೇ 20ರಷ್ಟು ಹೆಚ್ಚುವರಿ ಬೀಜ ಬಳಸಿ ಬಿತ್ತನೆ ಮಾಡಬೇಕುಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260721-34-510966602