ಕೊಪ್ಪಳ: ಹೆಂಡತಿಯ ‘ಗೃಹಲಕ್ಷ್ಮೀ’ ಹಣಕ್ಕಾಗಿ ಗಂಡನ ಧರಣಿ
ಕೊಪ್ಪಳ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ತನ್ನ ಹೆಂಡತಿಗೆ ಮೂರು ವರ್ಷಗಳಿಂದ ನೀಡಿಲ್ಲ ಎಂದು ಆರೋಪಿಸಿದ ಪತಿ ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಬುಧವಾರ ಧರಣಿ ಆರಂಭಿಸಿದ್ದಾರೆ.ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಎಂಬಾತ ಧರಣಿ ನಡೆಸುತ್ತಿದ್ದು ಪತ್ನಿ ಶಿಲ್ಪಾ ಭೋವಿ ಅವರಿಗೆ ಹಣ ಬ

ಕೊಪ್ಪಳ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ತನ್ನ ಹೆಂಡತಿಗೆ ಮೂರು ವರ್ಷಗಳಿಂದ ನೀಡಿಲ್ಲ ಎಂದು ಆರೋಪಿಸಿದ ಪತಿ ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಬುಧವಾರ ಧರಣಿ ಆರಂಭಿಸಿದ್ದಾರೆ.ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಎಂಬಾತ ಧರಣಿ ನಡೆಸುತ್ತಿದ್ದು ಪತ್ನಿ ಶಿಲ್ಪಾ ಭೋವಿ ಅವರಿಗೆ ಹಣ ಬಂದಿಲ್ಲವೆಂದು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಶಿಲ್ಪಾಗೆ ’ಗ್ಯಾರಂಟಿ’ ಹಣ ಬಂದಿಲ್ಲ. ಅರ್ಜಿ ಸಲ್ಲಿಸಲು ಮೂರು ವರ್ಷಗಳಿಂದ ಪರದಾಡುತ್ತಿದ್ದೇನೆ ಎಂದು ಶರಣಪ್ಪ ಮಾಧ್ಯಮಗಳಿಗೆ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಾಂತ್ರಿಕ ಕಾರಣ ನೆಪವೊಡ್ಡಿ ಗೃಹಲಕ್ಷ್ಮಿ ಹಣ ಕೊಡುತ್ತಿಲ್ಲ. ಈ ಯೋಜನೆಯ ಲಾಭ ಪಡೆಯಲು ಈಗಾಗಲೇ ₹25 ಸಾವಿರ ಖರ್ಚು ಮಾಡಿಕೊಂಡಿದ್ದೇನೆ. ಯೋಜನೆಯ ಹಣ ಕೊಡಿ ಇಲ್ಲವೇ; ಯೋಜನೆ ಪಡೆಯಲು ಖರ್ಚು ಮಾಡಿದ ಹಣವನ್ನಾದರೂ ವಾಪಸ್ ಕೊಡಿ ಎಂದು ಆಗ್ರಹಿಸಿ ಡಿ.ಕೆ. ಶಿವಕುಮಾರ ಅವರಿಗೆ ಪತ್ರ ಬರೆದಿದ್ದಾರೆ.ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕುಷ್ಟಗಿ ಸಿಡಿಪಿಒ ಯಲ್ಲಮ್ಮ ಹಂಡಿ ಅವರು 'ಶರಣಪ್ಪ ಅವರ ತಾಯಿ ಯಲ್ಲಮ್ಮ ಹೆಸರಿನಲ್ಲಿ ಮೊದಲು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಆಗ ಇಕೆವೈಸಿಯಾಗದ ಕಾರಣ ಯೋಜನೆಯ ಲಾಭ ಸಿಗಲಿಲ್ಲ. ಆ ವೇಳೆಗೆ ಅವರ ತಾಯಿ ನಿಧನರಾದರು. ಪಡಿತರ ಇಲಾಖೆಯ ಕಾರ್ಡ್ನಲ್ಲಿ ತಾಯಿ ಹೆಸರಿನ ಜೊತೆಗೆ ಶಿಲ್ಪಾ ಹೆಸರು ಸೇರಿಸಿಕೊಂಡಿದ್ದರಿಂದ ಸಮಸ್ಯೆಯಾಗಿದೆ. ಒಬ್ಬ ವ್ಯಕ್ತಿಗಾಗಿಯೇ ನಮ್ಮ ಸಿಬ್ಬಂದಿಯನ್ನು ಬೆಂಗಳೂರಿಗೆ ಕಳಿಸಿ ಪರಿಶೀಲಿಸಿದಾಗ ಪಡಿತರ ಕಾರ್ಡ್ ಇದೇ ವರ್ಷದ ಮೇ 30ರಂದು ತಿದ್ದುಪಡಿಯಾಗಿದ್ದು, ಇದಾದ 90 ದಿನಗಳ ಬಳಿಕ ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಲು ಬರುತ್ತದೆ. ಈ ಎಲ್ಲ ತಾಂತ್ರಿಕ ಕಾರಣದಿಂದ ಬಾಕಿ ಉಳಿದಿದೆ. ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೂ ಇದೆ. ಅವರು ₹25 ಸಾವಿರ ಯಾವುದಕ್ಕೆ ಖರ್ಚು ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ’ ಎಂದು ತಿಳಿಸಿದರು.