ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ನನಸಾಗದ ಯುವ ಸಂಘಟನೆಗಳ ಕನಸುರಾಜ್ಯದಲ್ಲಿ ಯುವಜನರ ಅಭ್ಯುದಯಕ್ಕಾಗಿ ಯುವ ಸಬಲೀಕರಣ ಇಲಾಖೆಯಿದೆ. ಆದರೆ, ಇಲಾಖೆಯು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಕ್ರಿಯ ಆಗಿಲ್ಲ. ಪ್ರತಿ ಗ್ರಾಮದಲ್ಲೂ ಯುವ ಸಂಘಟನೆಗಳಿವೆ. ಅವುಗಳಿಗೆ ಸೂಕ್ತ ಮಾರ್ಗದರ್ಶನ, ಆರ್ಥಿಕ ಬಲವಿಲ್ಲದೆ ಕೃಶವಾಗಿವೆ. ಸರ್ಕಾರ ಹೊಸದಾಗಿ ಭಾರತ್ ಜೋಡೊ ಸಂಘಗಳ ಸ್ಥಾಪನೆಗೆ ಮುಂದಾಗಿರುವುದು ಒಳ್ಳೆಯ
ನನಸಾಗದ ಯುವ ಸಂಘಟನೆಗಳ ಕನಸುರಾಜ್ಯದಲ್ಲಿ ಯುವಜನರ ಅಭ್ಯುದಯಕ್ಕಾಗಿ ಯುವ ಸಬಲೀಕರಣ ಇಲಾಖೆಯಿದೆ. ಆದರೆ, ಇಲಾಖೆಯು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಕ್ರಿಯ ಆಗಿಲ್ಲ. ಪ್ರತಿ ಗ್ರಾಮದಲ್ಲೂ ಯುವ ಸಂಘಟನೆಗಳಿವೆ. ಅವುಗಳಿಗೆ ಸೂಕ್ತ ಮಾರ್ಗದರ್ಶನ, ಆರ್ಥಿಕ ಬಲವಿಲ್ಲದೆ ಕೃಶವಾಗಿವೆ. ಸರ್ಕಾರ ಹೊಸದಾಗಿ ಭಾರತ್ ಜೋಡೊ ಸಂಘಗಳ ಸ್ಥಾಪನೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇದರ ಜೊತೆಗೆ ಅಸ್ತಿತ್ವದಲ್ಲಿರುವ ಗ್ರಾಮೀಣ ಯುವ ಸಂಘಟನೆಗಳಿಗೆ ಜೀವ ತುಂಬುವ ಕೆಲಸವೂ ಆಗಬೇಕಿದೆ. ಈ ಸಂಘಟನೆಗಳ ಸದಸ್ಯರಿಗೆ ತಿಳಿವಳಿಕೆ ನೀಡಿ, ಗ್ರಾಮಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಕುರಿತಂತೆ ಆರ್ಥಿಕ ನೆರವು ಮತ್ತು ಮಾರ್ಗದರ್ಶನ ನೀಡಬೇಕಿದೆ. ಹಳ್ಳಿಗಳು ಉದ್ಧಾರವಾದಾಗಷ್ಟೇ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ದ ಕಲ್ಪನೆಯ ಸಾಕಾರ ಸಾಧ್ಯ.-ಮಹಾಂತೇಶ ರಾಜಗೋಳಿ, ಬೈಲಹೊಂಗಲ**ಗೃಹಜ್ಯೋತಿ ಸಮೀಕ್ಷೆ: ಗೊಂದಲದ ಗೂಡುಕರ್ನಾಟಕ ವಿದ್ಯುತ್ ಮಂಡಳಿಯಿಂದ ರಾಜ್ಯದಾದ್ಯಂತ ಗೃಹಜ್ಯೋತಿ ಬಳಕೆಯ ಫಲಾನುಭವಿಗಳನ್ನು ಗುರ್ತಿಸಲು ಮನೆ ಬಾಗಿಲಿಗೆ ಬಂದು ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆಯ ಅರ್ಜಿಯಲ್ಲಿ ಜಾತಿ, ಆದಾಯ ತೆರಿಗೆ ಪಾವತಿ, ವೃತ್ತಿಯ ಬಗ್ಗೆ ಕಡ್ಡಾಯವಾಗಿ ನಮೂದಿಸಬೇಕಿದೆ. ಗೃಹಜ್ಯೋತಿಗೂ ಜಾತಿಗೂ ಏನಾದರೂ ಸಂಬಂಧ ಇದೆಯೆ? ಇದೇ ಅರ್ಜಿಯಲ್ಲಿ ‘ನಾನು ಗೃಹಜ್ಯೋತಿಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವುದಿಲ್ಲ; ನನ್ನ ಮನೆಗೆ ಗೃಹಜ್ಯೋತಿಯ ಲಾಭ ಸ್ಥಗಿತಗೊಳಿಸಲು ನನ್ನ ಅಭ್ಯಂತರವಿಲ್ಲ’ ಎಂದು ಮುದ್ರಿತವಾಗಿದೆ. ಇದರ ಕೆಳಗಡೆಯೇ ಸಹಿ ಹಾಕಲು ಸಮೀಕ್ಷೆದಾರರು ಹೇಳುತ್ತಾರೆ. ಇದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಇಂಧನ ಸಚಿವರು ಸ್ಪಷ್ಟನೆ ನೀಡಬೇಕಿದೆ.-ಬೂಕನಕೆರೆ ವಿಜೇಂದ್ರ, ಮೈಸೂರು**ಕನ್ನಡ ಸಾಹಿತ್ಯ ಪರಿಷತ್ತಿನ ಕರ್ತವ್ಯವೇನು?‘ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷನಾದರೆ ಕನ್ನಡ ಹೋರಾಟಗಾರರಿಗೆ ಸೂಕ್ತ ಸ್ಥಾನಮಾನ ನೀಡುತ್ತೇನೆ’ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ. ಸೋಮಶೇಖರ್ ಅವರು ಹೇಳಿದ್ದಾರೆ. ಕನ್ನಡಕ್ಕಾಗಿ ಹೋರಾಡಬೇಕಾದ ಅವಶ್ಯಕತೆ ಬಾರದಂತೆ ನೋಡಿಕೊಳ್ಳುವುದು ಕಸಾಪದ ಕರ್ತವ್ಯವೇ ಹೊರತು, ಹೋರಾಟಗಾರರಿಗೆ ಸ್ಥಾನಮಾನ ನೀಡಿ ಅವರನ್ನು ಸಾಕುವುದಲ್ಲ.-ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು**ಘನತೆಯುತ ಬದುಕು ಜನರಿಗೆ ಮರೀಚಿಕೆಎಸ್ಐಆರ್ ಪ್ರಕ್ರಿಯೆಯು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ ಎನ್ನುವುದು ಕೇಂದ್ರ ಸರ್ಕಾರದ ಹೇಳಿಕೆ. ಅಧಿಕಾರಿಗಳು ಜನರ ಮನೆಗಳಿಗೆ ಎಡತಾಕುತ್ತಿದ್ದಾರೆ. ಹಳ್ಳಿಗಾಡಿನ ಮನೆಗಳು, ಗುಡಿಸಲುಗಳು, ಬಿಡಾರಗಳನ್ನು ನೇರವಾಗಿ ನೋಡುತ್ತಿದ್ದಾರೆ. ಹಲವೆಡೆ ಜನರು ಸೌಕರ್ಯದ ಕೊರತೆಯೊಂದಿಗೆ ನರಳುತ್ತಿರುವುದು ಕಾಣಿಸುತ್ತಿದೆ.ಜನತಂತ್ರ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿ ಎಷ್ಟುಮುಖ್ಯವೊ ನಾಗರಿಕರ ಜೀವನಮಟ್ಟವೂ ಅಷ್ಟೇ ಮುಖ್ಯವಲ್ಲವೆ? ದೇಶದ ಅಭಿವೃದ್ಧಿ ಎಂದರೆ ಬರೀ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುವುದಲ್ಲ; ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ. ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಗುರ್ತಿಸಿ ಪರಿಹರಿಸುವ ಆಡಳಿತಾತ್ಮಕ ವ್ಯವಸ್ಥೆಯೂ ಬಲವಾಗಬೇಕು. ಆಗಷ್ಟೇ ಜನರ ಜೀವನಮಟ್ಟದಲ್ಲಿ ಸುಧಾರಣೆ ಸಾಧ್ಯ.-ವೀರೇಶ್ ಯಾದವ್ ಡಿ.ಎಸ್., ಶಿರಾ**ರಕ್ಕಸನ ಬದಲು ಹೆಣ್ಣಿನ ಚಿತ್ರ ಬಳಕೆಯೇಕೆ?ಇತ್ತೀಚಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿ ಇರುವ ಮನೆಗಳನ್ನು ನೋಡಿದಾಗ, ರಾಕ್ಷಸ ರೂಪದ ಚಿತ್ರಗಳ ಬದಲಾಗಿ ರುದ್ರರೂಪದ ಹೆಣ್ಣಿನ ಚಿತ್ರವಿರುವ ಫಲಕಗಳನ್ನು ತೂಗಿ ಹಾಕಲಾಗಿರುತ್ತದೆ. ರಾಕ್ಷಸರನ್ನು ವಧಿಸುವ ರೂಪದಲ್ಲಿ ದೇವತೆಗಳನ್ನು ಆರಾಧಿಸುವ ನಮಗೆ, ಹೆಣ್ಣನ್ನೇ ರಾಕ್ಷಸ ರೂಪದಲ್ಲಿ ನೋಡಬೇಕಾದ ಮೌಢ್ಯದ ನಂಬಿಕೆಗಳನ್ನು ಬಿತ್ತಿದವರು ಯಾರು? ರಾಕ್ಷಸರ ಚಿತ್ರಗಳ ಬದಲಿಗೆ ಹೆಣ್ಣಿನ ಚಿತ್ರಗಳನ್ನು ತಂದವರ ಮನಃಸ್ಥಿತಿ ಹೇಗಿರಬಹುದು ಎನ್ನುವುದನ್ನು ಊಹಿಸಲಾಗದು. ನಂಬಿಕೆಗಳ ಮೌಢ್ಯಕ್ಕೆ ಮಿತಿಯಿಲ್ಲವೆ? ಪ್ರಸ್ತುತ ಹೆಣ್ಣು ಎಲ್ಲ ರಂಗದಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಸಮಾಜವು ಈ ಸತ್ಯವನ್ನು ಅರಿಯಬೇಕಿದೆ.-ಆರ್. ನೀಲಕಂಠ ಸ್ವಾಮಿ, ಬೆಂಗಳೂರು**ಹೋರಾಟ ಹತ್ತಿಕ್ಕಲು ಸರ್ಕಾರ ಸಂಚುದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಕಟ್ಟುವ, ಅನ್ಯಾಯವಾದರೆ ನ್ಯಾಯ ಕೇಳುವ, ಹಕ್ಕುಗಳಿಂದ ವಂಚಿತರಾಗಿದ್ದರೆ ಹೋರಾಟ ಮಾಡುವ, ಅಭಿಪ್ರಾಯ ವ್ಯಕ್ತಪಡಿಸುವ ಎಲ್ಲ ಹಕ್ಕುಗಳನ್ನು ಸಂವಿಧಾನ ಕೊಟ್ಟಿದೆ. ಆ ಕಾರಣದಿಂದಲೇ ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪರೀಕ್ಷೆ ಸೋರಿಕೆ ಹಗರಣ ಮತ್ತು ಅಕ್ರಮದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ನೀಟ್ ಮರುಪರೀಕ್ಷೆಯಿಂದ ಮನನೊಂದು ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಪ್ರತಿನಿತ್ಯ ಕಣ್ಣೀರಿಡುತ್ತ ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇದಕ್ಕೆ ಭ್ರಷ್ಟ ಶಿಕ್ಷಣ ವ್ಯವಸ್ಥೆ ಮತ್ತು ಕೇಂದ್ರ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂಬ ಬೇಡಿಕೆ ನ್ಯಾಯಯುತವಾಗಿದೆ. ಲಾಠಿ ಪ್ರಹಾರದಿಂದ ಹೋರಾಟ ಹತ್ತಿಕ್ಕಲು ಮುಂದಾಗಿರುವುದು ಖಂಡನೀಯ.-ಮಹೇಶ್ ಕೂದುವಳ್ಳಿ, ಚಿಕ್ಕಮಗಳೂರು