ಎಐ ತಂತ್ರಜ್ಞಾನದಿಂದ ಗುಂಡಿ ಮುಕ್ತ ರಸ್ತೆ: ಡಿ.ಎಸ್. ರಮೇಶ್
ಬೆಂಗಳೂರು: ಕೃತಕ ಬುದ್ದಿಮತೆ (ಎಐ) ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿ ರಸ್ತೆಗಳ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಿ, ಗುಂಡಿ ಮುಕ್ತ ರಸ್ತೆ ನಿರ್ಮಾಣ, ರಸ್ತೆ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ತಿಳಿಸಿದರು.ಎಐ ತಂತ್ರಜ್ಞಾನ

ಬೆಂಗಳೂರು: ಕೃತಕ ಬುದ್ದಿಮತೆ (ಎಐ) ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿ ರಸ್ತೆಗಳ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಿ, ಗುಂಡಿ ಮುಕ್ತ ರಸ್ತೆ ನಿರ್ಮಾಣ, ರಸ್ತೆ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ತಿಳಿಸಿದರು.ಎಐ ತಂತ್ರಜ್ಞಾನವನ್ನು ಬಳಸಿಕೊಂಡು ವಾಹನಗಳಿಗೆ ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿ, ‘ಯೋಲೊ ಇಮೇಜ್ ಪ್ರೊಸೆಸಿಂಗ್’ ಮಾದರಿಯ ಮೂಲಕ ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಸುಮಾರು 1,600 ಕಿಲೋಮೀಟರ್ ಉದ್ದದ ರಸ್ತೆಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗಿದೆ. ಈ ಸಮೀಕ್ಷೆಯ ಆಧಾರದ ಮೇಲೆ ನಗರ ಪಾಲಿಕೆ ವ್ಯಾಪ್ತಿಯು ರಸ್ತೆಗಳ ಸ್ಥಿತಿಗತಿ, ರಸ್ತೆ ಗುಂಡಿಗಳು, ರಸ್ತೆ ಮೇಲ್ಮೈ ಹಾನಿ, ಯುಟಿಲಿಟಿ ಸಂಪರ್ಕಕ್ಕಾಗಿ ರಸ್ತೆ ಅಗೆತ ಹಾಗೂ ಇತರೆ ಮೂಲಸೌಕರ್ಯ ಸಮಸ್ಯೆಗಳ ಕುರಿತು ನಿಖರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.ಎಐ ವರದಿಯಲ್ಲಿ ರಸ್ತೆಗಳನ್ನು ಅವುಗಳ ಸ್ಥಿತಿಗತಿಯನ್ನು ಆಧರಿಸಿ ಐದು ಪ್ರಕರಣಗಳಾಗಿ ವರ್ಗೀಕರಿಸಲಾಗಿದೆ. ಉತ್ತಮ ಸ್ಥಿತಿಯ ರಸ್ತೆಗಳು, ಸಣ್ಣ ಮಟ್ಟದ ಮೇಲ್ಮೈ ಬಿರುಕುಗಳಿರುವ ರಸ್ತೆಗಳು, ತಳಪಾಯ ಹಾನಿಯಿಂದ ರಚನಾತ್ಮಕ ದೋಷ ಕಂಡುಬಂದಿರುವ ರಸ್ತೆಗಳು, ಜಲಮಂಡಳಿ ಅಥವಾ ಇತರ ಯುಟಿಲಿಟಿ ಕಾಮಗಾರಿಗಳಿಂದ ಹಾನಿಗೊಳಗಾದ ರಸ್ತೆಗಳು, ತೀವ್ರವಾಗಿ ಹಾಳಾಗಿರುವ ಅಥವಾ ಕಚ್ಚಾ ರಸ್ತೆಗಳು ಎಂಬುದಾಗಿ ವರ್ಗೀಕರಿಸಲಾಗಿದೆ ಎಂದರು.ನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ರಸ್ತೆಯನ್ನು ಡಿಜಿಟಲ್ ವ್ಯವಸ್ಥೆಯಡಿ ತರಲು ಪ್ರತಿ ರಸ್ತೆಗೆ ವಿಶಿಷ್ಟ ರಸ್ತೆ ಗುರುತು ಸಂಖ್ಯೆ ನೀಡಲಾಗಿದ್ದು, ರಸ್ತೆಯ ಹೆಸರು, ವಾರ್ಡ್ ಸಂಖ್ಯೆ, ಜಿಪಿಎಸ್ ಸ್ಥಳ, ರಸ್ತೆಯ ಉದ್ದ, ಫೋಟೋ ಹಾಗೂ ಹಾನಿಯ ವಿವರಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆ ನಿರ್ವಹಣೆ ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಿದರು.‘ವಿಷನ್ ಲ್ಯಾಂಗ್ವೇಜ್ ಮಾಡೆಲ್’ ಬಳಸಿ ಪ್ರತಿಯೊಂದು ರಸ್ತೆ ಗುಂಡಿಯ ಉದ್ದ ಹಾಗೂ ಅಗಲವನ್ನು ನಿಖರವಾಗಿ ಲೆಕ್ಕ ಹಾಕಲಾಗುತ್ತಿದೆ. ವಿಭೂತಿಪುರ ವಾರ್ಡ್ನಲ್ಲಿ ಸುಮಾರು 144 ಚದರ ಮೀಟರ್ ಪ್ಯಾಚ್ವರ್ಕ್ ಅಗತ್ಯವಿರುವುದಾಗಿ ಎಐ ವರದಿಯಲ್ಲಿ ದಾಖಲಿಸಲಾಗಿದೆ. ಈ ರೀತಿಯ ನಿಖರ ಮಾಹಿತಿಯ ಆಧಾರದ ಮೇಲೆ ವಿವಿಧ ಅನುದಾನಗಳಡಿಯಲ್ಲಿ ಈಗಾಗಲೇ ಅನುಮೋದನೆಯಾಗಿರುವ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಹೊರತುಪಡಿಸಿ ಇನ್ನುಳಿದ ಕಾಮಗಾರಿಗಳಿಗೆ ಅಗತ್ಯ ಪ್ರಮಾಣದ ಹಾಟ್ ಮಿಕ್ಸ್, ಸಾಮಗ್ರಿ ಹಾಗೂ ವೆಚ್ಚವನ್ನು ಪೂರ್ವದಲ್ಲಿಯೇ ಅಂದಾಜಿಸಲು ಸಾಧ್ಯವಾಗುತ್ತಿದೆ ಎಂದರು.ನಗರದ ಪರಿಷ್ಕೃತ ಮಹಾಯೋಜನೆ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಎಐ ವ್ಯವಸ್ಥೆಯಲ್ಲಿ ಮ್ಯಾಪ್ ಮಾಡಲಾಗುತ್ತಿದ್ದು, ಪ್ರತಿ 30 ಮೀಟರ್ನಿಂದ 50 ಮೀಟರ್ ಅಂತರದಲ್ಲಿ ರಸ್ತೆಯ ನೈಜ ಅಗಲ ಅಳೆಯುವ ಹಾಗೂ ಪ್ರಸ್ತಾವಿತ ರಸ್ತೆಯ ಅಗಲವನ್ನು ದಾಖಲಿಸುವ ಮೂಲಕ ಅತಿಕ್ರಮಣಗಳನ್ನು ಗುರುತಿಸಿ ರಸ್ತೆ ವಿಸ್ತರಣೆ ಯೋಜನೆಗಳನ್ನು ವೈಜ್ಞಾನಿಕವಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.