ನಾವೀನ್ಯ ಆಧಾರಿತ ಉತ್ಪನ್ನ ಅಭಿವೃದ್ಧಿ ಬೇಕು: ಖುಷ್ಬೂ ಗೋಯೆಲ್ ಚೌಧರಿ
ಬೆಂಗಳೂರು: ‘ದೇಶದ ಮುಂದಿನ ಹಂತದ ಕೈಗಾರಿಕಾ ಬೆಳವಣಿಗೆಯು ನಾವೀನ್ಯ ಆಧಾರಿತ ಉತ್ಪನ್ನ ಅಭಿವೃದ್ಧಿಯತ್ತ ಸಾಗಬೇಕಿದೆ’ ಎಂದು ರಾಜ್ಯ ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಖುಷ್ಬೂ ಗೋಯೆಲ್ ಚೌಧರಿ ಹೇಳಿದರು.‘ಜಾಗತಿಕ ಮಾರುಕಟ್ಟೆಗೆ ತಕ್ಕ ತಂತ್ರಜ್ಞಾನ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಭಾರತ ಬೆಳೆಸಿಕೊಳ

ಬೆಂಗಳೂರು: ‘ದೇಶದ ಮುಂದಿನ ಹಂತದ ಕೈಗಾರಿಕಾ ಬೆಳವಣಿಗೆಯು ನಾವೀನ್ಯ ಆಧಾರಿತ ಉತ್ಪನ್ನ ಅಭಿವೃದ್ಧಿಯತ್ತ ಸಾಗಬೇಕಿದೆ’ ಎಂದು ರಾಜ್ಯ ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಖುಷ್ಬೂ ಗೋಯೆಲ್ ಚೌಧರಿ ಹೇಳಿದರು.‘ಜಾಗತಿಕ ಮಾರುಕಟ್ಟೆಗೆ ತಕ್ಕ ತಂತ್ರಜ್ಞಾನ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಭಾರತ ಬೆಳೆಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿರುವ ‘ಸಿಐಐ ಇಂಡಿಯಾ ಇನ್ನೋವರ್ಜ್ – 2026’ ಶೃಂಗಸಭೆಯಲ್ಲಿ ಅವರು ಮಾತನಾಡಿದರು ಎಂದು ಪ್ರಕಟಣೆ ತಿಳಿಸಿದೆ.ಈ ಶೃಂಗಸಭೆಯಲ್ಲಿ ಕೈಗಾರಿಕಾ ವಲಯದ ಪ್ರಮುಖರು, ಉದ್ಯಮಿಗಳು, ಹೂಡಿಕೆದಾರರು, ಸಂಶೋಧಕರು, ನವೋದ್ಯಮಿಗಳು ಹಾಗೂ ಶಿಕ್ಷಣ ಕ್ಷೇತ್ರದ ತಜ್ಞರು ಭಾಗವಹಿಸುತ್ತಿದ್ದಾರೆ.ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಭಾಷಣ ಮಾಡಿದ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ‘ಕೈಗಾರಿಕೆ, ನವೋದ್ಯಮಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಹಾಗೂ ಸಂಶೋಧನಾ ಸಂಸ್ಥೆಗಳ ಸಹಕಾರದ ಮೂಲಕ ಕರ್ನಾಟಕವು ಸ್ವಚ್ಛ, ಚೂಟಿ ಮತ್ತು ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಚಲನಶೀಲತಾ ಪರಿಸರ ನಿರ್ಮಿಸಲು ಸೂಕ್ತವಾದ ಸ್ಥಾನದಲ್ಲಿದೆ’ ಎಂದರು.ಸಿಐಐ ಮಾಜಿ ಅಧ್ಯಕ್ಷ ಹಾಗೂ ಇನ್ಫೊಸಿಸ್ ಕಂಪನಿಯ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಿ ‘ಮುಂದಿನ ಮೂರು ದಶಕಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುವ ಪರಿವರ್ತನೆ ಇಂಟರ್ನೆಟ್ ಮತ್ತು ಐ.ಟಿ ಸೇವೆಗಳ ಯುಗದಲ್ಲಿ ಆದ ಬದಲಾವಣೆಗಿಂತಲೂ ಮಹತ್ವದ್ದಾಗಿರಲಿದೆ’ ಎಂದರು.ಸಭೆಯ ಅಧ್ಯಕ್ಷ ಹಾಗೂ ವೋಲ್ವೊ ಗ್ರೂಪ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಅವರು ‘ಭಾರತ ಎ.ಐ ಆಧಾರಿತ ಉತ್ಪನ್ನ ರಾಷ್ಟ್ರವಾಗಲು ಪ್ರತಿಭೆ, ತಂತ್ರಜ್ಞಾನ, ಬಂಡವಾಳ, ಉತ್ಪಾದನೆ ಮತ್ತು ಮಾರುಕಟ್ಟೆ ಪ್ರವೇಶವನ್ನು ಸಮನ್ವಯಗೊಳಿಸಬೇಕಿದೆ’ ಎಂದು ಸಲಹೆ ನೀಡಿದರು.ಸಿಐಐ ಕರ್ನಾಟಕ ಅಧ್ಯಕ್ಷ ಹಾಗೂ ಬಾಷ್ ಇಂಡಿಯಾದ ಅಧ್ಯಕ್ಷ ಗುರುಪ್ರಸಾದ್ ಮುದ್ಲಾಪುರ್, ಸಿಸಿಐಐ ಕರ್ನಾಟಕ ಉಪಾಧ್ಯಕ್ಷ ಹಾಗೂ ಶೆವರನ್ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಸ್ಯಾಮ್ ಚೆರಿಯನ್, ಮೆಕಿನ್ಸಿ ಆ್ಯಂಡ್ ಕಂಪನಿಯ ಪಾಲುದಾರ ಸುದಿಪ್ತೋ ಪಾಲ್ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.