ಕೆ.ಜಿ. ಕೊಪ್ಪಲು: ಶಾಸಕರ ಪಾದಯಾತ್ರೆ, ನಿವಾಸಿಗಳ ಅಹವಾಲು ಆಲಿಕೆ
ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ಗೌಡ ಅವರು ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್ ನಂ. 42ರ ಕೆ.ಜಿ. ಕೂಪ್ಪಲು ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿ, ಸಾರ್ವಜನಿಕರಿಂದ ಅಹವಾಲು ಆಲಿಸಿದರು.‘ಜನರ ಮನೆ ಬಾಗಿಲಿಗೆ ಶಾಸಕರು’ ಕಾರ್ಯಕ್ರಮದ ಭಾಗವಾಗಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಾರ್ಡ್ನ ಮುಖಂಡರೊಂದಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸ
ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ಗೌಡ ಅವರು ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್ ನಂ. 42ರ ಕೆ.ಜಿ. ಕೂಪ್ಪಲು ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿ, ಸಾರ್ವಜನಿಕರಿಂದ ಅಹವಾಲು ಆಲಿಸಿದರು.‘ಜನರ ಮನೆ ಬಾಗಿಲಿಗೆ ಶಾಸಕರು’ ಕಾರ್ಯಕ್ರಮದ ಭಾಗವಾಗಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಾರ್ಡ್ನ ಮುಖಂಡರೊಂದಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು. ಮನೆಗಳ ಬಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿದರು. ಅವುಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ರೈಲ್ವೆ ಗೇಟ್ ಹಿಂಭಾಗದ ರಸ್ತೆಗಳಲ್ಲಿ ಚರಂಡಿ ಸಮಸ್ಯೆ ನಿವಾರಿಸುವಂತೆ ಹಾಗೂ ರಸ್ತೆ ಕಾಮಗಾರಿ ಮಾಡಿಸಿಕೊಡುವಂತೆ ನಿವಾಸಿಗಳು ಕೋರಿದರು. ಕೆಲವೆಡೆ ನೀರಿನ ಸಮಸ್ಯೆ ಇರುವುದಾಗಿ ಮಹಿಳೆಯರು ದೂರಿದರು. ಹಬ್ಬದ ದಿನಗಳಲ್ಲೂ ಸರಿಯಾಗಿ ನೀರು ಪೂರೈಸುವುದಿಲ್ಲ. ಕೆಲವೆಡೆ ರಸ್ತೆ ಸಮತಟ್ಟಿಲ್ಲದ ಕಾರಣ ನಲ್ಲಿಗಳಲ್ಲಿ ನೀರು ಬರುವುದಿಲ್ಲ. ಈ ಕೊರತೆಯನ್ನು ತುರ್ತಾಗಿ ಸರಿಪಡಿಸಬೇಕು ಎಂದು ಕೋರಿದರು.ಕೂಡಲೇ ಇತ್ತ ಗಮನಹರಿಸಬೇಕು, ನೀರು ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ವಾಣಿವಿಲಾಸ ನೀರು ಸರಬರಾಜು ಇಇ ಮೋಹನ್ಕುಮಾರ್ ಹಾಗೂ ಎಇಇ ಮುಸ್ತಫಾ ಅವರಿಗೆ ಸೂಚಿಸಿದರು. ಅಗತ್ಯವಿರುವ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸುವಂತೆಯೂ ನಿರ್ದೇಶನ ನೀಡಿದರು.ಹಳೆಯ ಬಡಾವಣೆ ಇದಾಗಿದ್ದು, ಕೆಲವೆಡೆ ವಿದ್ಯುತ್ ಕಂಬಗಳು ವಾಲಿವೆ. ಅವುಗಳನ್ನು ಸರಿಪಡಿಸಬೇಕು ಹಾಗೂ ಅಗತ್ಯವಿರುವಲ್ಲಿ ಬೀದಿದೀಪಗಳನ್ನು ಅಳವಡಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ‘ಸೆಸ್ಕ್’ ಅಧಿಕಾರಿಗಳಿಗೆ ಸೂಚಿಸಿದರು. ನೀರು, ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಜನರು ಅಹವಾಲು ಸಲ್ಲಿಸಿದರು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರೆ, ಉಳಿದವುಗಳನ್ನು ನಿಗದಿತ ಅವಧಿಯೊಳಗೆ ಪರಿಹರಿಸುವ ಭರವಸೆಯನ್ನು ಶಾಸಕರು ನೀಡಿದರು.ಪಿಂಚಣಿ ಮಾಡಿಸಿಕೊಡುವಂತೆ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಡುವಂತೆ ಕೆಲವರು ಕೋರಿದರು.ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳು ನೇರವಾಗಿ ಜನರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತರಾಗಿರಬೇಕು. ಗೃಹ ಜ್ಯೋತಿ, ಗೃಹಲಕ್ಷ್ಮಿ, ಪಿಂಚಣಿ ವಿಳಂಬ ಕುರಿತು ಗೊಂದಲಗಳಿದ್ದಲ್ಲಿ ಅಧಿಕಾರಿಗಳು ಕೂಡಲೇ ಬಗೆಹರಿಸಬೇಕು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.ಪಾಲಿಕೆಯ ಉಪ ಆಯುಕ್ತ (ಕಂದಾಯ) ಸೋಮಶೇಖರ್, ಎಸ್.ಇ. ಸಿಂಧು, ಇಇ ಶ್ರೀನಿವಾಸ್, ವಲಯ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ವಲಯ ಆಯುಕ್ತ ಸಂದೀಪ್, ಎಂಜಿನಿಯರ್ ಮಧುಸೂದನ್, ತೇಜಸ್ವಿನಿ, ಇಂದಿರಾಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ದೇವರಾಜ ಬ್ಲಾಕ್ ಅಧ್ಯಕ್ಷ ಡಿ. ನಾಗಭೂಷಣ್, ವಾರ್ಡ್ ಅಧ್ಯಕ್ಷ ಹರೀಶ್, ಮುಖಂಡರಾದ ರಾಜಣ್ಣ, ಭಾಸ್ಕರ್, ಬಸವರಾಜು ಪಾಲ್ಗೊಂಡಿದ್ದರು.