ಹಡಗು ದುರಸ್ತಿ ಯಾರ್ಡ್: ನ್ಯಾಯಾಂಗ ನಿಂದನೆ ಅರ್ಜಿ, ಮೂವರು ಅಧಿಕಾರಿಗಳಿಗೆ ನೋಟಿಸ್
ಬೆಂಗಳೂರು: ‘ಕಾರವಾರ ನೌಕಾ ಹಡಗು ದುರಸ್ತಿ ಯಾರ್ಡ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುರಕ್ಷತಾ ಅಧಿಕಾರಿಗೆ ಕಾನೂನುಬದ್ಧ ಸೇವಾ ಸೌಲಭ್ಯ ಒದಗಿಸುವಂತೆ ನಿರ್ದೇಶಿಸಿದ್ದ ತೀರ್ಪನ್ನು ಪಾಲನೆ ಮಾಡದೆ ಉಲ್ಲಂಘಿಸಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾರವಾರದ ನೌಕಾ ಹಡಗು ದುರಸ್ತಿ ಯಾರ್ಡ್ ಆಕ್ಯುಪಯರ್ ಅಡ್ಮಿರಲ್ ಸೂಪರಿಂಟೆಂಡೆಂಟ್ ಸೇರಿದಂತೆ ಇತರರಿಗೆ ತುರ್ತು ನೋ
ಬೆಂಗಳೂರು: ‘ಕಾರವಾರ ನೌಕಾ ಹಡಗು ದುರಸ್ತಿ ಯಾರ್ಡ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುರಕ್ಷತಾ ಅಧಿಕಾರಿಗೆ ಕಾನೂನುಬದ್ಧ ಸೇವಾ ಸೌಲಭ್ಯ ಒದಗಿಸುವಂತೆ ನಿರ್ದೇಶಿಸಿದ್ದ ತೀರ್ಪನ್ನು ಪಾಲನೆ ಮಾಡದೆ ಉಲ್ಲಂಘಿಸಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾರವಾರದ ನೌಕಾ ಹಡಗು ದುರಸ್ತಿ ಯಾರ್ಡ್ ಆಕ್ಯುಪಯರ್ ಅಡ್ಮಿರಲ್ ಸೂಪರಿಂಟೆಂಡೆಂಟ್ ಸೇರಿದಂತೆ ಇತರರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.ಕಾರವಾರದ ನೌಕಾ ಹಡಗು ದುರಸ್ತಿ ಯಾರ್ಡ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುರಕ್ಷತಾ ಅಧಿಕಾರಿ ಬಿ.ಎಚ್.ಟಿ ರಮೇಶ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ನೇತೃತ್ವದ ವಿಭಾಗೀಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.ಪ್ರತಿವಾದಿಗಳಾದ ಕಾರವಾರದ ನೌಕಾ ಹಡಗು ದುರಸ್ತಿ ಯಾರ್ಡ್ ಆಕ್ಯುಪಯರ್ ಅಡ್ಮಿರಲ್ ಸೂಪರಿಂಟೆಂಡೆಂಟ್ ರದ್ನಿ ರವನೀಶ್ ಸೇಠ್, ಕಾರ್ಖಾನೆಗಳು–ಬಾಯ್ಲರುಗಳು, ಕೈಗಾರಿಕಾ, ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ನಿರ್ದೇಶಕ ಕೆ.ಜಿ.ನಂಜಪ್ಪ ಮತ್ತು ಕಾರ್ಖಾನೆಗಳ ಇಲಾಖೆಯ ಹುಬ್ಬಳ್ಳಿ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶ್ ರಾಥೋಡ್ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ.ಏನಿದು ಅರ್ಜಿ?‘ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರಿರುವ ಸೂಕ್ಷ್ಮ ಯಾರ್ಡ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುರಕ್ಷತಾ ಅಧಿಕಾರಿಗೆ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮಟ್ಟದ ವೇತನ ಶ್ರೇಣಿ, ಸ್ಥಾನಮಾನ ಮತ್ತು ಮೂಲಸೌಕರ್ಯ ನೀಡಬೇಕು ಎಂದು ಧಾರವಾಡ ಹೈಕೋರ್ಟ್ ಪೀಠವು 2025ರ ನವೆಂಬರ್ ಅಂತ್ಯದಲ್ಲಿ ನಿರ್ದೇಶಿಸಿತ್ತು. ಆದರೆ, ಈ ಆದೇಶ ಪಾಲನೆ ಆಗಿಲ್ಲ’ ಎಂದು ಅರ್ಜಿದಾರರು ಈ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.‘ಕಾರ್ಖಾನೆಗಳ ಕಾಯ್ದೆ–1948ರ ಅನ್ವಯ ನಿಯಮಗಳನ್ನು ಜಾರಿಗೊಳಿಸಬೇಕಾದ ಅತ್ಯುನ್ನತ ಸಂಸ್ಥೆಯಾದ ಕಾರ್ಖಾನೆಗಳ ಇಲಾಖೆಯು ಹೈಕೋರ್ಟ್ ಆದೇಶದ ಅನುಸಾರ ಕಾರವಾರ ನೌಕಾ ಹಡಗು ದುರಸ್ತಿ ಯಾರ್ಡ್ನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿತ್ತು. ಆದರೆ, ಇಲಾಖೆಯ ಉನ್ನತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೂಕಪ್ರೇಕ್ಷಕರಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದು; ನ್ಯಾಯಾಂಗ ನಿಂದನೆ ಕಾಯ್ದೆ–1971ರ ಕಲಂ 11 ಮತ್ತು 12ರ ಅಡಿಯಲ್ಲಿ ಜಂಟಿ ಅಪರಾಧಿಗಳಾಗಿದ್ದಾರೆ’ ಎಂದು ಅರ್ಜಿದಾರರು ದೂರಿದ್ದಾರೆ.ರಿಟ್ ಅರ್ಜಿ: ತಮ್ಮ ಸೇವಾ ಪ್ರಯೋಜನಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಏಕಸದಸ್ಯ ನ್ಯಾಯಪೀಠ, ‘ಪ್ರತಿವಾದಿಗಳು, ಕರ್ನಾಟಕ ಕಾರ್ಖಾನೆಗಳ ನಿಯಮಗಳು–1969ರ ನಿಯಮ 88-ಎ (2), ಬಿ ಮತ್ತು ಸಿ ಅಡಿಯಲ್ಲಿನ ಅವಶ್ಯಕತೆಗಳ ಪ್ರಕಾರ ಸುರಕ್ಷತಾ ಅಧಿಕಾರಿಗೆ ಅನ್ವಯಿಸುವ ಸೇವಾ ಸೌಲಭ್ಯಗಳನ್ನು ಅರ್ಜಿದಾರರಿಗೆ 2019ರ ಮೇ 23ರಿಂದ ಜಾರಿಗೆ ಬರುವಂತೆ ಒದಗಿಸಬೇಕು. ಅರವತ್ತು ದಿನಗಳ ಒಳಗೆ ಆದೇಶವನ್ನು ಪಾಲಿಸಬೇಕು’ ’ ಎಂದು ಪ್ರತಿವಾದಿಗಳಿಗೆ ಆದೇಶಿಸಿತ್ತು.‘ಹಡಗು ದುರಸ್ತಿ ಯಾರ್ಡ್ಗಳಲ್ಲಿ ವೆಲ್ಡಿಂಗ್, ಬ್ಲಾಸ್ಟಿಂಗ್, ಕಠಿಣ ಯಾಂತ್ರಿಕ ಪ್ರಕ್ರಿಯೆಗಳು ಮತ್ತು ವಿಷಕಾರಿ ಅನಿಲ ಸೂಸುವ ಆವೃತ ಪ್ರದೇಶಗಳಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವ ಸಾವಿರಾರು ಕಾರ್ಮಿಕರ ಜೀವರಕ್ಷಣೆಯ ನಿಗಾ ವಹಿಸುವುದು ಸುರಕ್ಷಾ ಅಧಿಕಾರಿಯ ಕರ್ತವ್ಯ. ಇಂತಹ ಜವಾಬ್ದಾರಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗೆ ಸೂಕ್ತ ಆಡಳಿತಾತ್ಮಕ ಬೆಂಬಲ ಸಿಗುತ್ತಿಲ್ಲ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.