ಹುಬ್ಬಳ್ಳಿ: ಪೊಲೀಸ್ ಸಿಬ್ಬಂದಿ ಒಳಬೇಗುದಿ ಸ್ಫೋಟ
ಹುಬ್ಬಳ್ಳಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ ‘ಸುಧಾರಿತ ಬೀಟ್ ವ್ಯವಸ್ಥೆ’ಗೆ ಪೊಲೀಸ್ ಸಿಬ್ಬಂದಿಯಿಂದಲೇ ಆಕ್ಷೇಪಣೆ ವ್ಯಕ್ತವಾಗಿದೆ. ಇಲಾಖೆಯ ಸಿಬ್ಬಂದಿಯೊಬ್ಬರು ಮುಖ್ಯಮಂತ್ರಿ ಅವರಿಗೆ ಬರೆದಿರುವ ಸುದೀರ್ಘ ಪತ್ರವು ಇಲಾಖೆಯ ಆಡಳಿತಾತ್ಮಕ ವೈಫಲ್ಯ, ಮೇಲಧಿಕಾರಿಗಳ ಕಾರ್ಯವೈಖರಿ ಮತ್ತು ಅಧೀನ ಸಿಬ್ಬಂದಿಯ ಮೇಲಿನ ಒತ್ತಡವನ್ನು ಬಹಿರಂಗಪಡಿಸಿದೆ.ಪತ್ರದಲ್ಲಿ ಪಿ

ಹುಬ್ಬಳ್ಳಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ ‘ಸುಧಾರಿತ ಬೀಟ್ ವ್ಯವಸ್ಥೆ’ಗೆ ಪೊಲೀಸ್ ಸಿಬ್ಬಂದಿಯಿಂದಲೇ ಆಕ್ಷೇಪಣೆ ವ್ಯಕ್ತವಾಗಿದೆ. ಇಲಾಖೆಯ ಸಿಬ್ಬಂದಿಯೊಬ್ಬರು ಮುಖ್ಯಮಂತ್ರಿ ಅವರಿಗೆ ಬರೆದಿರುವ ಸುದೀರ್ಘ ಪತ್ರವು ಇಲಾಖೆಯ ಆಡಳಿತಾತ್ಮಕ ವೈಫಲ್ಯ, ಮೇಲಧಿಕಾರಿಗಳ ಕಾರ್ಯವೈಖರಿ ಮತ್ತು ಅಧೀನ ಸಿಬ್ಬಂದಿಯ ಮೇಲಿನ ಒತ್ತಡವನ್ನು ಬಹಿರಂಗಪಡಿಸಿದೆ.ಪತ್ರದಲ್ಲಿ ಪಿಎಸ್ಐ ಹುದ್ದೆಗಿಂತ ಮೇಲಿನ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳಿದ್ದು, ಅವುಗಳನ್ನು ಪರಿಗಣಿಸಿ ಮುಖ್ಯಮಂತ್ರಿ ಅವರ ಉಪಕಾರ್ಯದರ್ಶಿ, ಒಳಾಡಳಿತ ಇಲಾಖೆಗೆ ಪತ್ರವನ್ನು ರವಾನಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ರಾಜ್ಯದ ಎಲ್ಲಾ ಪೊಲೀಸ್ ಕಮಿಷನರೇಟ್, ವಲಯ ಐಜಿಪಿ, ಎಸ್ಪಿ, ಕೆಜಿಎಫ್ ಹಾಗೂ ರೈಲ್ವೆ ಪೊಲೀಸ್ ಘಟಕಗಳಿಗೆ ಪತ್ರ ಕಳುಹಿಸಿ, ನಿಯಮಾನು ಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ‘ಪ್ರಜಾವಾಣಿ’ಗೆ ದಾಖಲೆಗಳು ಲಭ್ಯವಾಗಿದೆ.ಪತ್ರದಲ್ಲಿ ಏನಿದೆ?: ಸುಧಾರಿತ ಬೀಟ್ ವ್ಯವಸ್ಥೆ ಜಾರಿಯಾದ ಬಳಿಕ ಕ್ಷೇತ್ರಮಟ್ಟದ ಪೊಲೀಸ್ ಸೇವೆಯ ಸಂಪೂರ್ಣ ಹೊಣೆಗಾರಿಕೆ ಬೀಟ್ ಸಿಬ್ಬಂದಿಯದ್ದೇ ಆಗಿದೆ. ಪಿಎಸ್ಐ ಮತ್ತು ಮೇಲಿನ ಅಧಿಕಾರಿಗಳು ಬೀಟ್ ವ್ಯವಸ್ಥೆಯ ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸದೆ, ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಸಣ್ಣಪುಟ್ಟ ಲೋಪಗಳಿಗೂ ಬೀಟ್ ಸಿಬ್ಬಂದಿಯನ್ನು ಗುರಿಯಾಗಿಸಿ ಅಮಾನತು, ನೋಟಿಸ್, ವೇತನ ತಡೆ, ಶಿಸ್ತುಕ್ರಮ ಕೈಗೊಳ್ಳಲಾಗುತ್ತಿದೆ. ಕೆಲ ಅಧಿಕಾರಿಗಳು ಕೇವಲ ‘ಮಾಮೂಲಿ ವಸೂಲಿಗೆ ಮಾತ್ರ ಸೀಮಿತರಾಗಿದ್ದಾರೆ’ ಎಂಬ ಗಂಭೀರ ಆರೋಪ ಸೇರಿ 23 ಪ್ರಮುಖ ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಮೇಲಧಿಕಾರಿಗಳ ಅಧಿಕಾರದ ದುರ್ಬಳಕೆ, ಮಾನಸಿಕ ಕಿರುಕುಳ, ಭ್ರಷ್ಟಾಚಾರ, ರಾತ್ರಿ ಗಸ್ತಿನ ಅಸಮರ್ಪಕ ನಿರ್ವಹಣೆ, ಇಲಾಖೆಯೊಳಗಿನ ಅಸಮಾನತೆ ಸೇರಿ ಅನೇಕ ವಿಚಾರಗಳನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಕೆಲ ಅಕ್ರಮ ಚಟುವಟಿಕೆಗಳ ಕುರಿತು ಬೀಟ್ ಸಿಬ್ಬಂದಿ ಮೇಲಧಿಕಾರಿ ಗಮನಕ್ಕೆ ತಂದರೆ, ‘ಅದು ಮೇಲ್ಮಟ್ಟದಲ್ಲಿ ಫಿಕ್ಸ್ ಆಗಿದೆ’ ಎಂದು ಹೇಳಿ ಸುಮ್ಮನಿರಿಸಲಾಗುತ್ತದೆ ಎಂದೂ ಆರೋಪಿಸಲಾಗಿದೆ.ಪತ್ರದಲ್ಲಿನ ಅತ್ಯಂತ ಗಂಭೀರ ಆರೋಪವೆಂದರೆ, ‘ಠಾಣೆಗಳಿಗೆ ವರ್ಗಾವಣೆಯಾಗಲು ಲಕ್ಷಾಂತರ ರೂಪಾಯಿ ಹಣ ವ್ಯವಹಾರ ನಡೆಯುತ್ತದೆ’ ಎನ್ನುವುದು. ‘ಕೆಲವು ಅಧಿಕಾರಿಗಳು ತಾವು ಶಾಸಕರಿಗೆ ಹಣ ನೀಡಿ ಇಷ್ಟಪಟ್ಟ ಠಾಣೆಗೆ ಬಂದಿದ್ದೇವೆ ಎಂದು ಸಿಬ್ಬಂದಿ ಎದುರಲ್ಲೇ ಹೇಳಿಕೊಳ್ಳುತ್ತಾರೆ’ ಎಂದು ಉಲ್ಲೇಖಿಸಲಾಗಿದೆ.‘ಸರ್ಕಾರಿ ವಾಹನ, ಚಾಲಕ, ಇತರೆ ಸೌಲಭ್ಯಗಳನ್ನು ಪಡೆದ ಪಿಎಸ್ಐಗಳು ಮಧ್ಯರಾತ್ರಿಯ ನಂತರ ಮನೆಗೆ ತೆರಳುತ್ತಾರೆ. ಬೆಳಿಗ್ಗೆ ಐದು ಗಂಟೆಯವರೆಗೆ ಬೀಟ್ ಸಿಬ್ಬಂದಿಯೇ ಗಸ್ತು ನಿರ್ವಹಿಸಬೇಕು. ಕೆಲ ಸಂದರ್ಭಗಳಲ್ಲಿ ಅವರು ಚಾಲಕರಿಗೆ ತಮ್ಮ ಮೊಬೈಲ್ ನೀಡಿ ಪಾಯಿಂಟ್ ಪಂಚ್ ಮಾಡಿಸುತ್ತಾರೆ’ ಎಂದು ಆರೋಪಿಸಿರುವ ಸಿಬ್ಬಂದಿ, ‘ಕಳವು ನಡೆದರೂ,ಅಕ್ರಮ ಚಟುವಟಿಕೆ ನಡೆದರೂ, ಮಾಧ್ಯಮಗಳಲ್ಲಿ ಸುದ್ದಿ ಬಂದರೂ ಮೊದಲು ಅಮಾನತಾಗುವುದು ಬೀಟ್ ಸಿಬ್ಬಂದಿ. ಮೇಲಧಿಕಾರಿಗಳು ಜವಾಬ್ದಾರಿಯಿಂದ ತಪ್ಪಿಸಿಕೊಂಡು, ಕೆಳಹಂತದ ಸಿಬ್ಬಂದಿಯನ್ನೇ ಬಲಿಪಶು ಮಾಡುತ್ತಾರೆ’ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.ಸಾಮಾನ್ಯವಾಗಿ ಇಲಾಖಾ ಮಟ್ಟದಲ್ಲಿ ಇತ್ಯರ್ಥವಾಗುವ ದೂರುಗಳು, ಈ ಬಾರಿ ಮುಖ್ಯಮಂತ್ರಿ ಕಚೇರಿಯ ಗಮನ ಸೆಳೆದಿದೆ. ಅದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಕಚೇರಿ, ಉಪಕಾರ್ಯದರ್ಶಿ ಮೂಲಕ ಒಳಾಡಳಿತ ಇಲಾಖೆಗೆ ಪತ್ರ ರವಾನಿಸಿರುವುದು ಹಾಗೂ ಡಿಜಿಪಿ ಕಚೇರಿಯಿಂದ ರಾಜ್ಯದಾದ್ಯಂತ ಎಲ್ಲಾ ಪೊಲೀಸ್ ಘಟಕಗಳಿಗೆ ಸೂಚನೆ ಹೋಗಿರುವುದು ಪ್ರಕರಣದ ಮಹತ್ವ ಹೆಚ್ಚಿಸಿದೆ.ಶ್ರುತಿ ಎನ್.ಎಸ್., ಡಿಸಿಪಿ, ಹುಬ್ಬಳ್ಳಿ–ಧಾರವಾಡ ಮಹಾನಗರಸುಧಾರಿತ ಬೀಟ್ ವ್ಯವಸ್ಥೆ ಮತ್ತು ಪೊಲೀಸ್ ಕಾರ್ಯವೈಖರಿ ಬಗ್ಗೆ ಸಿಬ್ಬಂದಿಯೊಬ್ಬರು ಬರೆದ ಪತ್ರದ ಕುರಿತು ಮೇಲಧಿಕಾರಿಗಳಿಂದ ಪರಿಶೀಲನೆಗೆ ಸೂಚನೆ ಬಂದಿದ್ದು, ಪರಿಶೀಲಿಸಲಾಗುವುದು.–ಸಿಎಂಗೆ ಪತ್ರ ಬರೆದ ಸಿಬ್ಬಂದಿತಪ್ಪು ಮಾಡದಿದ್ದರೂ ನನ್ನನ್ನು ಶಿಕ್ಷೆಗೆ ಒಳಪಡಿಸಲಾಯಿತು. ಆತ್ಮಸ್ಥೈರ್ಯ ಕುಗ್ಗಿ ನಿವೃತ್ತಿಗೆ ನಿರ್ಧರಿಸಿದ್ದೆ. ತಂದೆ, ತಾಯಿ, ಹೆಂಡತಿ, ಮಕ್ಕಳ ಜವಾಬ್ದಾರಿಯಿಂದಾಗಿ ಸ್ವಾಭಿಮಾನಕ್ಕೆ ಧಕ್ಕೆಯಾದರೂ ಮುಂದುವರಿಸಿದ್ದೇನೆ.ಸರ್ಕಾರದಿಂದ ಮಹತ್ವದ ನಡೆಸಾಮಾನ್ಯವಾಗಿ ಇಂತಹ ದೂರುಗಳು ಕಡತಗಳಲ್ಲಿ ಉಳಿಯುತ್ತವೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಕಚೇರಿಯು ಗೃಹ ಇಲಾಖೆಗೆ ಅಧಿಕೃತವಾಗಿ ಸಿಬ್ಬಂದಿಯ ಪತ್ರ ರವಾನಿಸಿರುವುದು ಮತ್ತು ಡಿಜಿಪಿ ರಾಜ್ಯದ ಎಲ್ಲ ಪೊಲೀಸ್ ಘಟಕಗಳಿಗೆ ಪರಿಶೀಲನೆಗೆ ಸೂಚಿಸಿರುವುದು ಪ್ರಕರಣವನ್ನು ಆಡಳಿತಾತ್ಮಕ ಮಟ್ಟಕ್ಕೆ ಕೊಂಡೊಯ್ದಿದೆ. ಇದು ಒಬ್ಬ ಸಿಬ್ಬಂದಿಯ ಅಹವಾಲಾಗಿ ಉಳಿಯದೆ, ಇಲಾಖೆಯ ಕಾರ್ಯ ಸಂಸ್ಕೃತಿಯ ಕುರಿತು ಆತ್ಮಾವಲೋಕನ ನಡೆಸುವ ಸಾಧ್ಯತೆಯಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260723-24-169474162