ಸಿಎಸ್ಆರ್ ನಿಧಿ ದುರ್ಬಳಕೆ ತಡೆಗೆ ತಂಡ: ಡಿ.ಕೆ. ಶಿವಕುಮಾರ್
ಬೆಂಗಳೂರು: ‘ರಾಜ್ಯದಲ್ಲಿನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಗಳಲ್ಲಿನ ನಿಧಿಯ ದುರ್ಬಳಕೆ ತಡೆಯಲು ಪ್ರತ್ಯೇಕವಾದ ತಂಡ ರಚಿಸಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಹೇಳಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಗುರುವಾರ ಆಯೋಜಿಸಿದ್ದ ‘ಜಾಗತಿಕ ಸಿಎಸ್ಆರ್ ಮತ್ತು ಸುಸ್ಥಿರತಾ ಶೃಂಗಸಭೆ 20

ಬೆಂಗಳೂರು: ‘ರಾಜ್ಯದಲ್ಲಿನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಗಳಲ್ಲಿನ ನಿಧಿಯ ದುರ್ಬಳಕೆ ತಡೆಯಲು ಪ್ರತ್ಯೇಕವಾದ ತಂಡ ರಚಿಸಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಹೇಳಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಗುರುವಾರ ಆಯೋಜಿಸಿದ್ದ ‘ಜಾಗತಿಕ ಸಿಎಸ್ಆರ್ ಮತ್ತು ಸುಸ್ಥಿರತಾ ಶೃಂಗಸಭೆ 2026’ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಸುಮಾರು ₹10 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಇದರ ಪ್ರತಿ ಪೈಸೆ ಕೂಡ ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗವಾಗಬೇಕು. ಆದರೆ, ಶೇ 50ರಷ್ಟು ಉದ್ಯಮಿಗಳು ಈ ಸಿಎಸ್ಆರ್ ನಿಧಿ ದುರುಪಯೋಗ ಮಾಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ತಂಡ ನೇಮಿಸಿ ಹಣವನ್ನು ಎಲ್ಲೆಲ್ಲಿ ಬಳಸಲಾಗುತ್ತಿದೆ ಎಂದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸದೃಢಗೊಳಿಸಲು ಕೈಗಾರಿಕೆಗಳು ತಮ್ಮ ಸಿಎಸ್ಆರ್ ನಿಧಿಯನ್ನು ಬಳಸಿ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಮೂಲಸೌಕರ್ಯ ಇರುವ ಶಾಲೆಗಳನ್ನು ನಿರ್ಮಿಸಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ನಗರ ಪ್ರದೇಶಗಳಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದರು.‘ಕಾರ್ಪೊರೇಟ್ ಕಂಪನಿಗಳು ನಮಗೆ ಹಣ ನೀಡಬೇಕಿಲ್ಲ. ನೀವೇ ಹಣ ಹಾಕಿ ಶಾಲೆಗಳನ್ನು ನಿರ್ಮಿಸಿ. ಅಲ್ಲದೆ, ಶಾಲೆಗೆ ನಿಮ್ಮ ಹೆಸರನ್ನು ಸೇರಿಸಿ. ಟೊಯೊಟ ಸೇರಿದಂತೆ ಕೆಲವು ಕಂಪನಿಗಳು ಶಾಲೆಗಳನ್ನು ನಿರ್ಮಿಸುತ್ತಿವೆ. ಇದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವುದಲ್ಲದೆ, ಕಂಪನಿಗಳಿಗೆ ಒಳ್ಳೆಯ ಹೆಸರು ಬರುತ್ತದೆ’ ಎಂದರು.ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐನ ಅಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಂ ಪ್ರಸಾದ್, ಮಾಜಿ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಇಸ್ರೇಲ್ನ ಕೌನ್ಸಿಲ್ ಜನರಲ್ (ದಕ್ಷಿಣ ಭಾರತ) ಓರ್ಲಿ ವೈಟ್ಜ್ಮನ್, ಲುಥ್ರಾ ಸಮೂಹದ ಅಧ್ಯಕ್ಷ ಗಿರೀಶ್ ಲುಥ್ರಾ ಹಾಗೂ ಇತರರಿದ್ದರು.ಅಭಿವೃದ್ಧಿಗೆ ಕೈಜೋಡಿಸಿದ ಎಫ್ಕೆಸಿಸಿಐ ಬೆಂಗಳೂರಿನಲ್ಲಿ ಐ.ಟಿ–ಬಿ.ಟಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಂತಹ ಕ್ಷೇತ್ರಗಳು ಆರಂಭವಾಗುವುದಕ್ಕೂ ಮುನ್ನವೇ ಎಫ್ಕೆಸಿಸಿಐ ನಾಡು ಮತ್ತು ದೇಶದ ಅಭಿವೃದ್ಧಿಗೆ ಕೈಜೋಡಿಸಿದೆ ಎಂದು ಶಿವಕುಮಾರ್ ಅವರು ಎಫ್ಕೆಸಿಸಿಐ ಅನ್ನು ಪ್ರಶಂಸಿದರು. ‘ಯುವ ಉದ್ಯೋಗ ಸೇತು ಎಂಬ ಖಾಸಗಿ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು ನಿಮಗೆ ಯಾವ ರೀತಿಯ ಕೌಶಲ ಆಧಾರಿತ ಉದ್ಯೋಗಿಗಳು ಬೇಕು ಎಂದು ತಿಳಿಸಿದರೆ ರಾಜ್ಯ ಸರ್ಕಾರ ಯುವಜನರಿಗೆ ಅಂತಹ ತರಬೇತಿ ನೀಡುತ್ತದೆ. ನೀವು ಅವರಿಗೆ ಉದ್ಯೋಗ ನೀಡಬಹುದು’ ಎಂದು ಹೇಳಿದರು. ಈಗ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಶೇ 15ರಷ್ಟು ಮೀಸಲಾತಿ ನೀಡಲಾಗುತ್ತಿದ್ದು ಸದ್ಯದಲ್ಲೇ ಈ ಮೀಸಲಾತಿಯಲ್ಲಿ ಶೇ 7.5ರಷ್ಟನ್ನು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಲಾಗುವುದು ಎಂದರು.ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆ ದತ್ತು‘ನಗರ ಪ್ರದೇಶಗಳಲ್ಲಿ ₹50 ಸಾವಿರಕ್ಕಿಂತ ಹೆಚ್ಚಿನ ಶುಲ್ಕ ತೆಗೆದುಕೊಳ್ಳುವ ಖಾಸಗಿ ಶಾಲೆಗಳು ಗ್ರಾಮೀಣ ಭಾಗದಲ್ಲಿನ ತಲಾ ಒಂದು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ನಿಯಮವನ್ನು ಶೀಘ್ರದಲ್ಲಿಯೇ ರೂಪಿಸಲಾಗುವುದು’ ಎಂದು ಶಿವಕುಮಾರ್ ತಿಳಿಸಿದರು.‘ನಾನು ಕೂಡ ಮೂರು ಶಾಲೆಗಳನ್ನು ನಡೆಸುತ್ತಿದ್ದು ನಮ್ಮ ಶಾಲೆಗಳು ಕೂಡ ಗ್ರಾಮೀಣ ಭಾಗದ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿವೆ’ ಎಂದರು.