ಮಹದಾಯಿ: ರಾಜ್ಯಕ್ಕೆ ಭಾರಿ ಹಿನ್ನಡೆ
ನವದೆಹಲಿ: ಮಹದಾಯಿ ಯೋಜನೆಗೆ ಅನುಮತಿ ಸಿಗುವ ನಿರೀಕ್ಷೆಯಲ್ಲಿ ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣ ಇತ್ಯರ್ಥವಾದ ಬಳಿಕವಷ್ಟೇ ಯೋಜನೆಗೆ ಅನುಮತಿ ನೀಡುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜುಲೈ 13ರಂದು ಕರ್ನಾಟಕ ನೀರಾವರಿ ನಿಗಮಕ್ಕೆ ಉತ್ತರ ನೀಡಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಸಚ

ನವದೆಹಲಿ: ಮಹದಾಯಿ ಯೋಜನೆಗೆ ಅನುಮತಿ ಸಿಗುವ ನಿರೀಕ್ಷೆಯಲ್ಲಿ ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣ ಇತ್ಯರ್ಥವಾದ ಬಳಿಕವಷ್ಟೇ ಯೋಜನೆಗೆ ಅನುಮತಿ ನೀಡುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜುಲೈ 13ರಂದು ಕರ್ನಾಟಕ ನೀರಾವರಿ ನಿಗಮಕ್ಕೆ ಉತ್ತರ ನೀಡಿರುವ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ, ‘ಯೋಜನೆಯನ್ನು ಆಕ್ಷೇಪಿಸಿ ಕೇರಳದ ವನ್ಯಜೀವಿ ವಾರ್ಡನ್ ಅವರು ಕರ್ನಾಟಕ ಸರ್ಕಾರಕ್ಕೆ 2023ರ ಮಾರ್ಚ್ನಲ್ಲಿ ನೋಟಿಸ್ ನೀಡಿದ್ದರು. ಈ ನೋಟಿಸ್ ಅನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಅದೇ ವರ್ಷ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣ ವಿಚಾರಣಾ ಹಂತದಲ್ಲಿದೆ. ಎರಡು ರಾಜ್ಯಗಳ ನಡುವಿನ ವಿವಾದ ಇತ್ಯರ್ಥಗೊಳ್ಳಬೇಕಿದೆ. ಇಂತಹ ಸನ್ನಿವೇಶದಲ್ಲಿ ಯೋಜನೆ ಬಗ್ಗೆ ಸಚಿವಾಲಯ ತೀರ್ಮಾನ ತೆಗೆದುಕೊಂಡರೆ ನ್ಯಾಯಿಕ ಮಧ್ಯಪ್ರವೇಶ (ಸಬ್ಜುಡೀಸ್) ಆಗುತ್ತದೆ. ಹೀಗಾಗಿ, ಅರಣ್ಯ ತೀರುವಳಿಯ ಪ್ರಸ್ತಾವವನ್ನು ವಾಪಸ್ ಕಳುಹಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಆಧಾರದಲ್ಲಿ ಪ್ರಸ್ತಾವದ ಮರುಪರಿಶೀಲನೆ ಮಾಡಲಾಗುವುದು’ ಎಂದು ತಿಳಿಸಿದೆ. ಬಂಡೂರಾ ನಾಲಾ ತಿರುವು ಯೋಜನೆಗೆ ಪೈಪ್ಲೈನ್, ಪಂಪ್ಹೌಸ್, ವಿದ್ಯುತ್ ಮಾರ್ಗ ನಿರ್ಮಾಣಕ್ಕಾಗಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ನೆರಸೆ, ಮಂತುರ್ಗ ಹಾಗೂ ಬಚೋಲಿ ಗ್ರಾಮಗಳ 71 ಎಕರೆ ಅರಣ್ಯ ಬಳಕೆಗೆ ಅನುಮೋದನೆ ಕೋರಿ ಕರ್ನಾಟಕ ನೀರಾವರಿ ನಿಗಮವು ಕೇಂದ್ರಕ್ಕೆ ಮೂರು ವರ್ಷಗಳ ಪ್ರಸ್ತಾವ ಸಲ್ಲಿಸಿತ್ತು. 2025ರ ಡಿಸೆಂಬರ್ 12ರಂದು ಸಭೆ ನಡೆಸಿದ್ದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು ರಾಜ್ಯ ಸರ್ಕಾರದಿಂದ ನಾಲ್ಕು ಸ್ಪಷ್ಟೀಕರಣಗಳನ್ನು ಕೇಳಿತ್ತು. ‘ಮಹದಾಯಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಕರ್ನಾಟಕ ಸರ್ಕಾರ ಸಲ್ಲಿಸಿದ ಇತ್ತೀಚಿನ ವಿಶೇಷ ಮೇಲ್ಮನವಿ ಅರ್ಜಿಯ ವಿವರ ಸೇರಿದಂತೆ ಎಲ್ಲ ಅರ್ಜಿಗಳ ಸ್ಥಿತಿಗತಿಯ ವಿವರಗಳನ್ನು ಸಲ್ಲಿಸಬೇಕು’ ಎಂದು ಸಮಿತಿ ತಾಕೀತು ಮಾಡಿತ್ತು. ನಾಲ್ಕೂವರೆ ತಿಂಗಳು ಕಳೆದರೂ ರಾಜ್ಯ ಸರ್ಕಾರ ಇದಕ್ಕೆ ಉತ್ತರ ನೀಡಿರಲಿಲ್ಲ. ಆ ಬಳಿಕ ಸಚಿವಾಲಯವು ಪ್ರಸ್ತಾವನ್ನು ಡಿ–ಲಿಸ್ಟ್ (ಪಟ್ಟಿಯಿಂದ ತೆಗೆದು ಹಾಕು) ಮಾಡಿತ್ತು. ರಾಜ್ಯದ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಉತ್ತರ ನೀಡಿತ್ತು. ‘ಈ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ. ಯೋಜನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕೇಂದ್ರದ ಅಧಿಕಾರಿಗಳು ಸ್ವತಂತ್ರರು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ಅಗತ್ಯ ಅನುಮೋದನೆಗಳನ್ನು ಪಡೆದ ಬಳಿಕ ರಾಜ್ಯ ಸರ್ಕಾರವು ಯೋಜನೆಯ ಅನುಷ್ಠಾನ ಮಾಡಲು ಅವಕಾಶ ಇದೆ. ಆದರೆ, ಗೋವಾ ಪಿಸಿಸಿಎಫ್ (ವನ್ಯಜೀವಿ) 2023ರಲ್ಲಿ ನೋಟಿಸ್ ನೀಡಿದ್ದಾರೆ. ಕರ್ನಾಟಕದ ಗಡಿಯೊಳಗೆ ಈ ಯೋಜನೆ ಅನುಷ್ಠಾನವಾಗುತ್ತಿರುವುದರಿಂದ ನೋಟಿಸ್ ನೀಡುವ ಅಧಿಕಾರ ಅವರಿಗಿಲ್ಲ’ ಎಂದು ರಾಜ್ಯ ಸಮಜಾಯಿಷಿ ನೀಡಿತ್ತು. ಈ ವಾದವನ್ನು ಅರಣ್ಯ ಸಚಿವಾಲಯ ಒಪ್ಪಿಲ್ಲ. ಕಾವೇರಿ: ರಾಜ್ಯ ಮತ್ತೆ ನಿರಾಳಕಾವೇರಿ ಜಲಾನಯನ ಪ್ರದೇಶದಲ್ಲಿ ಬರದ ಆತಂಕ ವ್ಯಕ್ತಪಡಿಸಿದ ಕಾವೇರಿ ನಿರ್ವಹಣಾ ಪ್ರಾಧಿಕಾರ, ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕರ್ನಾಟಕ ರಾಜ್ಯಕ್ಕೆ ನಿರ್ದೇಶನ ನೀಡಿಲ್ಲ.ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಪ್ರಾಧಿಕಾರದ 53ನೇ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ಬಗ್ಗೆ ಅವಲೋಕಿಸಲಾಯಿತು. ಈ ವಾರದ ಅಂತ್ಯದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಾಧಿಕಾರವು ಒಂದು ವಾರ ಕಾದು ನೋಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿತು. ಜಲಾಶಯಗಳಲ್ಲಿ ಲಭ್ಯ ಇರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಬೇಕೆಂದು ಕರ್ನಾಟಕ ಹಾಗೂ ತಮಿಳುನಾಡಿಗೆ ನಿರ್ದೇಶನ ನೀಡಿತು. ಇದೇ 28ರಂದು ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ನಡೆಯಲಿದೆ.ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜೂನ್ ಹಾಗೂ ಜುಲೈ ತಿಂಗಳಲ್ಲಿ ತಮಿಳುನಾಡಿಗೆ ಕರ್ನಾಟಕವು 28 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಈವರೆಗೆ ಕೇವಲ 3.4 ಟಿಎಂಸಿ ಅಡಿ ನೀರು ಹರಿಸಿದೆ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ 48 ಟಿಎಂಸಿ ನೀರಿದೆ. ಜೂನ್ನಿಂದ ಇಲ್ಲಿಯ ವರೆಗೆ ಈ ಜಲಾಶಯಗಳಿಗೆ 31 ಟಿಎಂಸಿ ನೀರು ಹರಿದು ಬಂದಿದೆ. ಇನ್ನೊಂದೆಡೆ, ಮೆಟ್ಟೂರು ಜಲಾಶಯದಲ್ಲಿ ಕೇವಲ 36 ಟಿಎಂಸಿ ಅಡಿ ನೀರಿದೆ. ಒಳಹರಿವು 1003 ಕ್ಯುಸೆಕ್ ಮಾತ್ರ. ಹೀಗಾಗಿ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.ಕರ್ನಾಟಕ ಸರ್ಕಾರದ ಪ್ರತಿನಿಧಿ, ‘ಮಳೆ ಕೊರತೆಯಿಂದಾಗಿ ಜಲಾಶಯಗಳಿಗೆ ಕನಿಷ್ಠ ಪ್ರಮಾಣದ ನೀರು ಹರಿದುಬಂದಿದೆ. ಬೆಂಗಳೂರು ಸೇರಿದಂತೆ ನಗರ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವುದೇ ಕಷ್ಟಕರವಾಗಿದೆ’ ಎಂದು ಹೇಳಿದರು.