ಶಿವಮೊಗ್ಗ: ಅಕ್ರಮ ಗಣಿಗಾರಿಕೆ ತನಿಖಾ ವರದಿ, ಅಧಿಕಾರಿ ವರ್ಗಾವಣೆ
ಶಿವಮೊಗ್ಗ: ಜಿಲ್ಲೆಯ ನದಿ ಪಾತ್ರಗಳಲ್ಲಿ ಮರಳು ಹಾಗೂ ಮಣ್ಣು ಗಣಿಗಾರಿಕೆಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮದ ಬಗ್ಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸರ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅದರ ಬೆನ್ನ ಹಿಂದೆಯೇ ಇಲ್ಲಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಪಿ.ಕೆ.ನಾಯ್ಕ ಅವರ ವರ್ಗಾವಣೆ ಆಗಿದೆ. ಜೊತೆಗೆ ಅಕ್ರಮಗಳಲ್ಲಿ ಅವರ ಪಾತ್ರದ ಬಗ್ಗೆ ಇಲಾಖೆ ವಿ

ಶಿವಮೊಗ್ಗ: ಜಿಲ್ಲೆಯ ನದಿ ಪಾತ್ರಗಳಲ್ಲಿ ಮರಳು ಹಾಗೂ ಮಣ್ಣು ಗಣಿಗಾರಿಕೆಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮದ ಬಗ್ಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸರ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅದರ ಬೆನ್ನ ಹಿಂದೆಯೇ ಇಲ್ಲಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಪಿ.ಕೆ.ನಾಯ್ಕ ಅವರ ವರ್ಗಾವಣೆ ಆಗಿದೆ. ಜೊತೆಗೆ ಅಕ್ರಮಗಳಲ್ಲಿ ಅವರ ಪಾತ್ರದ ಬಗ್ಗೆ ಇಲಾಖೆ ವಿಚಾರಣೆಗೂ ಪ್ರಸ್ತಾವ ಸಲ್ಲಿಸಲಾಗಿದೆ.ಅಕ್ರಮದ ‘ಸಿಂಡಿಕೇಟ್’ ಸ್ವರೂಪ: ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ, ಭದ್ರಾ, ಶರಾವತಿ ನದಿ ಪಾತ್ರಗಳಲ್ಲಿ ಮರಳು ಹಾಗೂ ವಿವಿಧೆಡೆ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿದ್ದರೂ ಇಲ್ಲಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಅಕ್ರಮ ಗಣಿಗಾರಿಕೆಯ ದಂಧೆ ‘ಸಿಂಡಿಕೇಟ್’ ಸ್ವರೂಪ ಪಡೆದಿದೆ. ಇಲಾಖೆಯ ಅಧಿಕಾರಿಗಳೇ ಅಕ್ರಮ ನಡೆಸುವವರ ಬೆನ್ನಿಗೆ ನಿಂತಿದ್ದಾರೆ. ರಾಜಧನ, ನಿಯಮ ಉಲ್ಲಂಘನೆ ಹಾಗೂ ದಂಡದ ರೂಪದಲ್ಲಿ ಸರ್ಕಾರಕ್ಕೆ ಬರಬೇಕಿದ್ದ ₹121.14 ಕೋಟಿ ವಸೂಲಿ ಮಾಡಿಲ್ಲ ಎಂಬುದನ್ನು ಉಲ್ಲೇಖಿಸಿ ಇಲ್ಲಿನ ಲೋಕಾಯುಕ್ತ ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅದರ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.ಬಗೆದಷ್ಟೂ ಅಕ್ರಮ: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯಲ್ಲಿ ನಡೆದ ಅಕ್ರಮ ಬಗೆದಷ್ಟೂ ಹೊರಬರುತ್ತಿದೆ. ನದಿಗಳಲ್ಲಿ ಮರಳು ತೆಗೆಯಲು ಒಂದು ಲೋಡ್ಗೆ ಪರವಾನಗಿ ಪಡೆದು 10 ಲೋಡ್ ಸಾಗಣೆ ಮಾಡಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಬಳಿಯಿಂದ ಮರಳು ಕೊಂಡೊಯ್ಯಲು ಪಾಸ್ ಪಡೆದು ಅದನ್ನು ದಬ್ಬಣಗದ್ದೆಯಿಂದ ಒಯ್ಯಲು ಬಳಸಲಾಗಿದೆ. ಮರಳು ಬ್ಲಾಕ್ಗಳ ಗುತ್ತಿಗೆಯಲ್ಲೂ ಆಕ್ರಮ ನಡೆದಿದ್ದು, ಕಪ್ಪು ಪಟ್ಟಿಯಲ್ಲಿದ್ದವರಿಗೆ ಗುತ್ತಿಗೆಗೆ ಅವಕಾಶ ನೀಡಲಾಗಿದೆ. ನದಿಗಳಲ್ಲಿ ಮರಳು ತೆಗೆಯಲು ಜೆಸಿಬಿ ಬಳಕೆಗೆ ನಿಷೇಧವಿದೆ. ಹಾಗಿದ್ದರೂ ಎಲ್ಲ ಕಡೆಯೂ ಜೆಸಿಬಿ ಬಳಸಲಾಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.2 ಎಕರೆಗೆ ಅನುಮತಿ, 100 ಎಕರೆ ಗಣಿಗಾರಿಕೆ!: ಕೆಲವು ಬ್ಲಾಕ್ಗಳಲ್ಲಿ ಎರಡು ಎಕರೆ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಅನುಮತಿ ಪಡೆದು 100 ಎಕರೆಯಷ್ಟು ಪ್ರದೇಶದಲ್ಲಿ ಅಕ್ರಮವಾಗಿ ಮರಳು ತೆಗೆಯಲಾಗಿದೆ. ನಿಯಮಾವಳಿಯಂತೆ ನದಿಯಿಂದ ತೆಗೆದ ಮರಳನ್ನು ಸ್ಟಾಕ್ ಯಾರ್ಡ್ನಲ್ಲಿ ದಾಸ್ತಾನು ಮಾಡಿ ತೂಗಿ, ಅಲ್ಲಿಂದ ಕೊಂಡೊಯ್ಯಬೇಕಿದೆ. ಅಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ. ಆದರೆ ಸ್ಟಾಕ್ ಯಾರ್ಡ್ ಬದಲಿಗೆ ನೇರವಾಗಿ ನದಿಗಳಿಂದಲೇ ಮರಳು ಕೊಂಡೊಯ್ಯಲಾಗಿದೆ.ಗಣಿಗಾರಿಕೆ ವೇಳೆ 3 ಅಡಿಯವರೆಗೆ ಮಾತ್ರ ಮರಳು ತೆಗೆಯಲು ಅವಕಾಶವಿದೆ. ಆದರೆ, ಜೆಸಿಬಿ ಬಳಸಿ ಯಂತ್ರ 10ರಿಂದ 15 ಅಡಿ, ಕೆಲವು ಕಡೆ 20 ಅಡಿವರೆಗೆ ಮರಳು ತೆಗೆಯಲಾಗಿದೆ. ಇದು ಪರಿಸರದ ನಿಯಮಾವಳಿಯ ತೀವ್ರ ಉಲ್ಲಂಘನೆಯಾಗಿದ್ದು, ಆ ಗುಂಡಿಗಳ ಅರಿವು ಇಲ್ಲದೇ ಈಜಲು ಹೋದವರು ಮೃತಪಟ್ಟಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಕಲ್ಲಿನ ಕ್ವಾರಿಗಳಲ್ಲೂ ಬರೀ ಒಂದು ಲೈಸೆನ್ಸ್ ಪಡೆದು ನಾಲ್ಕು ಕಡೆ ಗಣಿಗಾರಿಕೆ ನಡೆಸಲಾಗಿದೆ. ಜೊತೆಗೆ ಲೀಸ್ (ಗುತ್ತಿಗೆ) ಪಡೆದವರು ಅದನ್ನು ಸಬ್ ಲೀಸ್ (ಉಪ ಗುತ್ತಿಗೆ) ನೀಡಿದ್ದು, ಅಲ್ಲಿಯೂ ವಂಚನೆ ಆಗಿದೆ. ಮರಳು ಕ್ವಾರಿಗಳಲ್ಲಿ ಒಂದು ಲಾರಿ ಲೋಡ್ ಆದರೂ ಸಂಬಂಧಿಸಿದ ಇಲಾಖೆಗೆ ಮಾಹಿತಿ ಇರುತ್ತಿತ್ತು. ಅದರಲ್ಲಿ ಕೆಲವು ಅಧಿಕಾರಿಗಳ ಪಾಲುದಾರಿಕೆಯೂ ಇತ್ತು. ಗಣಿಗಾರಿಕೆಯ ಪ್ರತೀ ಸ್ಥಳದಲ್ಲಿ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದು, ಅದು ವಿಷವರ್ತುಲದ (ಸಿಂಡಿಕೇಟ್) ಸ್ವರೂಪ ಪಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕಜಿಲ್ಲೆಯಲ್ಲಿ ಮರಳು ಅಕ್ರಮ ಗಣಿಗಾರಿಕೆ ಬಗ್ಗೆ ಗಣಿ ಇಲಾಖೆಗೆ ನಾನೇ ದೂರು ಕೊಟ್ಟಿದ್ದೆ. ಸರ್ಕಾರಕ್ಕೆ ಬರಬೇಕಿದ್ದ ರಾಜಧನವನ್ನು ಅಧಿಕಾರಿಗಳೇ ತಿಂದು ಹಾಕಿದ್ದಾರೆ. ಅಕ್ರಮಗಳಲ್ಲಿ ಕೆಲವು ಕಡೆ ಅವರ ಪಾಲುದಾರಿಕೆಯೂ ಇದೆ. ತನಿಖೆ ಪೂರ್ಣಗೊಂಡರೆ ಇನ್ನಷ್ಟು ಸಂಗತಿ ಗೊತ್ತಾಗಲಿವೆ.ಲೋಕಾಯುಕ್ತ; ‘ತುಷಾರ’ ಪ್ರಹಾರದ ಪರಿಣಾಮ..ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗಳ ಮೇಲೆ ಜೂನ್ 1ರಂದು ಲೋಕಾಯುಕ್ತ ಪೊಲೀಸರು ಭಾರಿ ಪ್ರಮಾಣದ ದಾಳಿ ನಡೆಸಿ 17,000 ಟನ್ ಮರಳು ಅಕ್ರಮ ದಾಸ್ತಾನನ್ನು ವಶಪಡಿಸಿಕೊಂಡಿದ್ದರು. ‘ತುಷಾರ’ (ತುಂಗಭದ್ರಾ, ಶರಾವತಿ ನದಿಗಳ ರಕ್ಷಣೆ) ಹೆಸರಿನ ಈ ರಹಸ್ಯ ಕಾರ್ಯಾಚರಣೆಯ ಪ್ರತೀ ಹಂತವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಖುದ್ದಾಗಿ ನಿರ್ವಹಣೆ ಮಾಡಿದ್ದರು.ಲೋಕಾಯುಕ್ತ ಪೊಲೀಸರ ದಾಳಿಯವರೆಗೂ ಅಕ್ರಮ ಗಣಿಗಾರಿಕೆಯ ಬಗ್ಗೆ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿರಲಿಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಇಲ್ಲ. ಪೊಲೀಸರು ಸಹಕಾರ ಕೊಡುತ್ತಿಲ್ಲ ಎಂಬ ನೆಪ ಹೇಳುತ್ತಿದ್ದರು. ಲೋಕಾಯುಕ್ತ ಪೊಲೀಸರ ದಾಳಿಯ ನಂತರ 15 ಪ್ರಕರಣ ದಾಖಲಾಗಿವೆ ಎಂದು ತಿಳಿದುಬಂದಿದೆ.ವಿಶೇಷವೆಂದರೆ, ಲೋಕಾಯುಕ್ತ ಪೊಲೀಸರೇ ಡ್ರೋನ್ ಸರ್ವೆ ಮಾಡಿಸಿ ಅಕ್ರಮದ ವಿಸ್ತೃತ ವರದಿ ಸಿದ್ಧಪಡಿಸಿದ್ದಾರೆ. ಈಗ ಪ್ರಾಥಮಿಕ ವರದಿ ಸಲ್ಲಿಸಿದ್ದು, 60 ದಿನಗಳ ಕಾಲಾವಕಾಶ ಇರುವುದರಿಂದ ಅಂತಿಮ ವರದಿಯನ್ನು ನಂತರ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.ಎ.ಸಿ. ಜೀಪು ಎತ್ತಿ ಹಾಕಲು ಮುಂದಾಗಿದ್ದರು!ಹಾಡೋನಹಳ್ಳಿ ಬಳಿ ತುಂಗಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಸ್ಥಳಕ್ಕೆ ದಾಳಿ ನಡೆಸಿದ್ದ ಉಪವಿಭಾಗಾಧಿಕಾರಿ (ಎ.ಸಿ) ಸತ್ಯನಾರಾಯಣ ಅವರ ಜೀಪನ್ನು ಅಡ್ಡ ಹಾಕಿದ್ದ ದಂಧೆಕೋರರು ಅದನ್ನು ಎತ್ತಿ ಹಾಕಲು ಮುಂದಾಗಿದ್ದರು.ವಿಶೇಷವೆಂದರೆ ಉಪ ವಿಭಾಗಾಧಿಕಾರಿಯು ಮರಳು ಅಡ್ಡೆಯ ಮೇಲೆ ದಾಳಿ ಮಾಡುವ ಮಾಹಿತಿ ದಂಧೆಕೋರರಿಗೆ ಮೊದಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಯಿಂದ ದೊರೆತಿತ್ತು. ಇಲಾಖೆಯ ಕೆಲವು ಚಾಲಕರು ಅಧಿಕಾರಿಗಳ ಚಲನವಲನದ ಮೇಲೆ ನಿಗಾ ಇಟ್ಟು ದಂಧೆಕೋರರಿಗೆ ಮಾಹಿತಿ ನೀಡುತ್ತಿದ್ದರು ಎಂಬ ಸಂಗತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260723-42-975428092