ಕಲಬುರಗಿ | ಮಳೆ ಮುನಿಸು: ಜಿಲ್ಲೆಯ 42 ಕೆರೆಗಳಲ್ಲಿ ಹನಿ ನೀರಿಲ್ಲ
ಕಲಬುರಗಿ: ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಸಮರ್ಪಕ ಮಳೆ ಸುರಿಯದ ಕಾರಣ ಜಿಲ್ಲೆಯ 42 ಕೆರೆಗಳು ಸಂಪೂರ್ಣ ಒಣಗಿವೆ. ಅವುಗಳ ಒಡಲಲ್ಲಿ ಹನಿ ನೀರಿಲ್ಲದೆ, ಹಳ್ಳಿಗಳಲ್ಲಿ ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ.ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆಯಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ನೀರಾವರಿ ಬೇಸಾಯ ಹೊಂದಿರುವ ರೈತರು ಸಂಕ

ಕಲಬುರಗಿ: ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಸಮರ್ಪಕ ಮಳೆ ಸುರಿಯದ ಕಾರಣ ಜಿಲ್ಲೆಯ 42 ಕೆರೆಗಳು ಸಂಪೂರ್ಣ ಒಣಗಿವೆ. ಅವುಗಳ ಒಡಲಲ್ಲಿ ಹನಿ ನೀರಿಲ್ಲದೆ, ಹಳ್ಳಿಗಳಲ್ಲಿ ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ.ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆಯಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ನೀರಾವರಿ ಬೇಸಾಯ ಹೊಂದಿರುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅಂತರ್ಜಲ ಕುಸಿತದಿಂದ ಬೋರ್ವೆಲ್ಗಳಲ್ಲಿ ನೀರು ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 170 ಕೆರೆಗಳಿವೆ. ಈ ಪೈಕಿ 30 ಕೆರೆಗಳು ಒಣಗಿವೆ. ಅಫಜಲಪುರ ತಾಲ್ಲೂಕಿನಲ್ಲಿ 12 ಕೆರೆಗಳಿದ್ದು, 8 ಕೆರೆಗಳು ಬರಿದಾಗಿವೆ. ಆಳಂದ ತಾಲ್ಲೂಕಿನಲ್ಲಿ 36 ಕೆರೆಗಳ ಪೈಕಿ 8 ಕೆರೆ ಒಣಗಿವೆ. ಕಮಲಾಪುರ ತಾಲ್ಲೂಕಿನ 7, ಕಲಬುರಗಿ ತಾಲ್ಲೂಕಿನಲ್ಲಿ 3, ಚಿಂಚೋಳಿ 2, ಚಿತ್ತಾಪುರ 1, ಸೇಡಂ ತಾಲ್ಲೂಕಿನಲ್ಲಿ 1 ಕೆರೆ ಒಣಗಿನಿಂತಿವೆ.ಸೇಡಂ ತಾಲ್ಲೂಕಿನ 6 ಮತ್ತು ಕಲಬುರಗಿ ತಾಲ್ಲೂಕಿನ 1 ಕೆರೆ ಹೊರತುಪಡಿಸಿ ಯಾವುದೇ ಕೆರೆಗಳಲ್ಲಿ ಶೇ 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿಲ್ಲ. ಸೇಡಂ ತಾಲ್ಲೂಕಿನ 20 ಸೇರಿದಂತೆ ಒಟ್ಟು 43 ಕೆರೆಗಳಲ್ಲಿ ಶೇ 31ರಿಂದ ಶೇ 50ರಷ್ಟು ನೀರಿದೆ. ಇನ್ನು ಆಳಂದ ತಾಲ್ಲೂಕಿನ 25, ಚಿಂಚೋಳಿ 16, ಕಮಲಾಪುರ 15 ಸೇರಿ 90 ಕೆರೆಗಳಲ್ಲಿ ಶೇ 1ರಿಂದ ಶೇ 30ರಷ್ಟು ನೀರು ಸಂಗ್ರಹವಿದೆ.2025ರ ಜುಲೈ 25ರ ಮಾಹಿತಿಯಂತೆ ಒಟ್ಟು 169 ಕೆರೆಗಳ ಪೈಕಿ 2 ಕೆರೆ ಮಾತ್ರ ಒಣಗಿದ್ದವು. 72 ಕೆರೆಗಳಲ್ಲಿ ಶೇ 51ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿತ್ತು ಎಂಬುದು ಗಣನೀಯ ಅಂಶ.ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಒಟ್ಟು 33 ಕೆರೆಗಳಲ್ಲಿ 12 ಕೆರೆ ಬರಿದಾಗಿವೆ. ಚಿತ್ತಾಪುರ ತಾಲ್ಲೂಕಿನ ಬೆಡಸೂರ, ಸೇಡಂ ತಾಲ್ಲೂಕಿನ ದುಗನೂರ, ನಾಡೆಪಲ್ಲಿ, ಈರ್ನಾಪಲ್ಲಿ, ಖಂಡೆರಾಯನಪಲ್ಲಿ, ಮಲ್ಲಾಬಾದ್, ರಿಬ್ಬನಪಲ್ಲಿ, ಜಾಕನಪಲ್ಲಿ, ಕೋನಾಪುರ, ಕೊತ್ತಪಲ್ಲಿ, ನಾಚವಾರ, ರಾಗಾಪುರ ಕೆರೆಗಳು ಸಂಪೂರ್ಣ ಒಣಗಿವೆ.ಆಳಂದ ತಾಲ್ಲೂಕಿನಲ್ಲಿ 7, ಚಿತ್ತಾಪುರ ತಾಲ್ಲೂಕಿನಲ್ಲಿ 1, ಜೇವರ್ಗಿ ತಾಲ್ಲೂಕಿನಲ್ಲಿ 1, ಕಲಬುರಗಿ ತಾಲ್ಲೂಕಿನಲ್ಲಿ 5, ಸೇಡಂ ತಾಲ್ಲೂಕಿನಲ್ಲಿ 4 ಸೇರಿದಂತೆ 18 ಕೆರೆಗಳಲ್ಲಿ ಶೇ 1ರಿಂದ ಶೇ 30ರಷ್ಟು ಮಾತ್ರ ನೀರು ಇದೆ. ಇನ್ನು ಅಫಜಲ ಪುರ ತಾಲ್ಲೂಕಿನ ನಂದರ್ಗಾ 1 ಮತ್ತು ಆಳಂದ ತಾಲ್ಲೂಕಿನ ತಡಕಲ್ ಹಾಗೂ ಮುನಳ್ಳಿ ಕೆರೆಗಳಲ್ಲಿ ಶೇ 31–50 ರಷ್ಟು ನೀರಿದೆ.‘ಜಿಲ್ಲೆಯ ರೈತರು ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸಿದರೆ, ಈ ವರ್ಷ ಅನಾವೃಷ್ಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವಾಗಲು ಕೆರೆಗಳಲ್ಲಿ ನೀರು ಸಂಗ್ರಹಕ್ಕೆ ಮತ್ತು ನೀರಾವರಿ ಪ್ರದೇಶ ಹೆಚ್ಚಿಸಲು ಸರ್ಕಾರ ಸೂಕ್ತ ಯೋಜನೆ ರೂಪಿಸುತ್ತಿಲ್ಲ. ನದಿ ಪ್ರವಾಹ ಬಂದಾಗ ನೀರು ವ್ಯರ್ಥ ಹರಿದು ಹೋಗುತ್ತದೆ. ನೀರು ಸಂಗ್ರಹಕ್ಕೆ ಯೋಜನೆ ರೂಪಿಸಿದರೆ, ಜನ–ಜಾನುವಾರು ಕುಡಿಯಲು ಮತ್ತು ಕೃಷಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ರೈತ ಮುಖಂಡರು.ಭೀಮಾಶಂಕರ ಮಾಡಿಯಾಳ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷಕಳೆದ ವರ್ಷ ಅತಿವೃಷ್ಟಿಯಿಂದ ಮಾಡಿಯಾಳದ ಕೆರೆ ಒಡೆದು 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಇನ್ನೂ ಕೆರೆ ಒಡ್ಡು ದುರಸ್ತಿ ಮಾಡಿಲ್ಲ. ಇದು ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯವೈಖರಿ.ಜಗದೇವ ಎಂ. ಇಇ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಕಲಬುರಗಿ ವಿಭಾಗಎರಡು–ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ವಾತಾವರಣ ಇರುವುದು ಆಶಾಭಾವ ಮೂಡಿಸಿದೆ. ಜೋರು ಮಳೆ ಬಂದರೆ ಕೆರೆಗಳಲ್ಲಿ ನೀರು ಸಂಗ್ರಹವಾಗಲಿದೆ.ಸಣ್ಣ ನೀರಾವರಿ ಕೆರೆಗಳಲ್ಲಿ ನೀರಿನ ಸಂಗ್ರಹ ವಿವರ (ಜುಲೈ 18ರಂತೆ)ತಾಲ್ಲೂಕು;ಕೆರೆಗಳ ಸಂಖ್ಯೆ;ಸಾಮರ್ಥ್ಯ(ಎಂಸಿಎಫ್ಟಿ.ಗಳಲ್ಲಿ);ನೀರು ಸಂಗ್ರಹ(ಟಿಎಂಸಿ ಅಡಿಗಳಲ್ಲಿ)ಅಫಜಲಪುರ;12;275;0.034ಆಳಂದ;36;549;0.159ಚಿಂಚೋಳಿ;21;946;0.125ಚಿತ್ತಾಪುರ;12;414;0.121ಜೇವರ್ಗಿ;6;139;0.038ಕಾಳಗಿ;4;74;0.022ಕಲಬುರಗಿ;12;464;0.172ಕಮಲಾಪುರ;29;498;0.147ಸೇಡಂ;34;1575;0.749ಶಹಾಬಾದ್;1;10;0.003ಯಡ್ರಾಮಿ;3;49;0.006ಒಟ್ಟು;170;4,992;1.575ಆಧಾರ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ(1,000 ಎಂಸಿಎಫ್ಟಿ= 1 ಟಿಎಂಸಿ ಅಡಿ)ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260723-34-1167037098