ಬೆಂಗಳೂರು: ಬದುಕಿನ ಜಂಜಾಟದ ಜೊತೆ ಕನಸುಗಳಿಗೆ ರೆಕ್ಕೆ ಕಟ್ಟುವ ಮಹಾನಗರ...
ಬೆಂಗಳೂರು... ಕೇವಲ ಒಂದು ನಗರವಲ್ಲ, ಅದು ಕೋಟಿ ಕೋಟಿ ಮನಸ್ಸುಗಳ ಭರವಸೆ, ಸಾವಿರಾರು ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿಸುವ ಅಗೋಚರ ಶಕ್ತಿ. ಎಲ್ಲಿಂದಲೋ ಬಂದ, ಯಾರೋ ಒಬ್ಬ ಸಾಧಾರಣ ವ್ಯಕ್ತಿಗೆ ಬದುಕಿನ ಹಾದಿ ತೋರಿಸಿ, ಆತನಿಗೆ ಆಸರೆಯ ತಾಣವಾಗುವ ಗುಣ ಈ ಸಿಲಿಕಾನ್ ಸಿಟಿಗಿದೆ. ‘ಎಲ್ಲರಿಗೂ ತಿಳಿದಿರುವ ಈ ಸಾಮಾನ್ಯ ವಿಷಯವನ್ನೇ ಇವಳು ಮತ್ತೆ ಹೇಳಲು ಹೊರಟಿದ್ದಾಳಲ್ಲಾ?’ ಎಂಬ

ಬೆಂಗಳೂರು... ಕೇವಲ ಒಂದು ನಗರವಲ್ಲ, ಅದು ಕೋಟಿ ಕೋಟಿ ಮನಸ್ಸುಗಳ ಭರವಸೆ, ಸಾವಿರಾರು ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿಸುವ ಅಗೋಚರ ಶಕ್ತಿ. ಎಲ್ಲಿಂದಲೋ ಬಂದ, ಯಾರೋ ಒಬ್ಬ ಸಾಧಾರಣ ವ್ಯಕ್ತಿಗೆ ಬದುಕಿನ ಹಾದಿ ತೋರಿಸಿ, ಆತನಿಗೆ ಆಸರೆಯ ತಾಣವಾಗುವ ಗುಣ ಈ ಸಿಲಿಕಾನ್ ಸಿಟಿಗಿದೆ. ‘ಎಲ್ಲರಿಗೂ ತಿಳಿದಿರುವ ಈ ಸಾಮಾನ್ಯ ವಿಷಯವನ್ನೇ ಇವಳು ಮತ್ತೆ ಹೇಳಲು ಹೊರಟಿದ್ದಾಳಲ್ಲಾ?’ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಆದರೆ, ನಡೆದು ಬಂದ ದಾರಿಯನ್ನು ಮರೆಯಬಾರದು ಎಂಬ ಹಿರಿಯರ ಮಾತಿನಂತೆ, ನಮ್ಮ ಹಳೆಯ ಹೆಜ್ಜೆ ಗುರುತುಗಳನ್ನು ಒಮ್ಮೆ ತಿರುಗಿ ನೋಡುವುದು ಬದುಕಿನ ಅನಿವಾರ್ಯತೆ. ನನ್ನಂತೆಯೇ ಕಣ್ಣು ತುಂಬ ಹೊಸದೊಂದು ಭವಿಷ್ಯದ ಕನಸನ್ನು ಹೊತ್ತು, ಕೈಯಲ್ಲಿ ಸಣ್ಣದೊಂದು ಚೀಲ ಹಿಡಿದು ಈ ಮಹಾನಗರದ ಅಂಗಳಕ್ಕೆ ಕಾಲಿಟ್ಟವರು ಅದೆಷ್ಟೋ ಲಕ್ಷಾಂತರ ಮಂದಿ.ಇತ್ತೀಚೆಗೆ ಪತ್ರಿಕೆಯಲ್ಲಿ ಬಂದ ಮಾಹಿತಿಯೊಂದನ್ನು ಓದಿದಾಗ ಮನಸ್ಸಿಗೆ ಆಶ್ಚರ್ಯದ ಜೊತೆಗೆ ಹೆಮ್ಮೆಯೂ ಆಯಿತು. ಇಂದಿನ ದಿನಗಳಲ್ಲಿ ವಿದೇಶಗಳ ಬಹುತೇಕ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಭಾರತದತ್ತ, ಅದರಲ್ಲಿಯೂ ಮುಖ್ಯವಾಗಿ ನಮ್ಮ ಹೆಮ್ಮೆಯ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಉದ್ಯೋಗಾವಕಾಶಗಳ ರಾಜಧಾನಿಯಾಗಿ ಬೆಳೆದಿರುವ ನಮ್ಮ ಬೆಂಗಳೂರು ವಿದೇಶಿಯರನ್ನೂ ಆಕರ್ಷಿಸುತ್ತಿರುವುದು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡಬೇಕಾದ ಸಂಗತಿಯೇ ಹೌದು. ಆದರೆ ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎಂಬ ಪ್ರಸಿದ್ಧ ನಾಣ್ಣುಡಿಯಂತೆ, ಪುಸ್ತಕದ ಪುಟಗಳಲ್ಲಿ ಸಿಗುವ ಜ್ಞಾನಕ್ಕಿಂತ ಅಥವಾ ನಾಲ್ಕು ಗೋಡೆಗಳ ನಡುವೆ ಬದುಕುವ ಸುರಕ್ಷಿತ ಜೀವನಕ್ಕಿಂತ, ವಿಶಾಲ ಪ್ರಪಂಚದಲ್ಲಿ ಒಬ್ಬಂಟಿಯಾಗಿ ನಿಂತು ಬದುಕಿನ ಜೊತೆ ಸಾಹಸ ಮಾಡಿದಾಗ ಮಾತ್ರ ಬದುಕಿನ ನೈಜ ಮುಖ ಮತ್ತು ಸತ್ಯ ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ.ಒಮ್ಮೆ ನನ್ನ ಹಳ್ಳಿಯ ಬಾಲ್ಯದ ಸ್ನೇಹಿತರು ನನ್ನೊಂದಿಗೆ ಮಾತನಾಡುತ್ತಾ ಹೀಗೆ ಕೇಳುತ್ತಿದ್ದರು.. ‘ಅಬ್ಬಾ! ನೀನು ಬಿಡಮ್ಮ, ಬೆಂಗಳೂರಿನಲ್ಲಿ ಎಷ್ಟು ಆರಾಮಾಗಿದ್ದೀಯಾ! ಪ್ರತಿದಿನ ಸಾವಿರಾರು ಜನರ ಪ್ರೀತಿ, ವಿಶ್ವಾಸ, ಮೆಚ್ಚುಗೆ ನಿನಗೆ ಸಿಗುತ್ತಿದೆ. ಅದಕ್ಕಿಂತ ಇನ್ನೇನು ಬೇಕು?’ ಅವರ ಈ ಮಾತುಗಳನ್ನು ಕೇಳಿದಾಗ ನನಗೆ ನಗು ಮತ್ತು ಕಣ್ಣೀರು ಎರಡೂ ಒಟ್ಟಿಗೇ ಬಂದವು. ಏಕೆಂದರೆ, ಹೊರಗಿನಿಂದ ನೋಡುವವರಿಗೆ ಬೆಂಗಳೂರಿನ ಹೊಳಪು, ಐಟಿ ಕಂಪನಿಗಳ ಎತ್ತರದ ಗ್ಲಾಸ್ ಕಟ್ಟಡಗಳು, ರಾತ್ರಿಯ ಮೆರುಗು ಮತ್ತು ವರ್ಣರಂಜಿತ ಜೀವನ ಅತ್ಯಂತ ಸುಂದರವಾಗಿ ಕಾಣಿಸುತ್ತದೆ. ಆದರೆ ಆ ರಂಗಿನ ಪರದೆಯ ಹಿಂದೆ ಅಡಗಿರುವ ನಿರಂತರ ಓಟದ ಜೀವನಶೈಲಿ, ಬೆಳಗಾದರೆ ಶುರುವಾಗುವ ಯಾಂತ್ರಿಕ ಬದುಕು ಹೊರಗಿನವರಿಗೆ ಕಾಣಿಸುವುದೇ ಇಲ್ಲ.ಇಲ್ಲಿನ ರಸ್ತೆಗಳಲ್ಲಿ ಪ್ರತಿದಿನ ನಡೆಯುವ ಶ್ರಮಿಕರ, ನಮಗಿಂತಲೂ ಕಡಿಮೆ ದುಡಿದು ಕಷ್ಟಪಡುವ ಜನರ ಬಾಳನ್ನು ಹತ್ತಿರದಿಂದ ನೋಡಿದಾಗ, ‘ಅಬ್ಬಾ, ನಮಗಿರುವ ಬದುಕೇ ಎಷ್ಟೋ ಮೇಲು’ ಎಂದು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳಬೇಕಾದ ಮನಸ್ಸಿನ ಸ್ಥಿತಿ ನಿರ್ಮಾಣವಾಗುತ್ತದೆ. ಇಷ್ಟೊಂದು ವರ್ಷಗಳ ಕಾಲ ನಿರೀಕ್ಷಿಸಿ ಕಾದ ಈ ದಿನಗಳ ಪ್ರಾಯೋಗಿಕ ಅನುಭವ, ಮನೆಯವರಿಂದ ದೂರವಾದ ಒಂಟಿತನ, ಭವಿಷ್ಯದ ಬಗ್ಗೆ ಕಾಡುವ ಅನಿಶ್ಚಿತತೆ... ಹೀಗೆ ಹತ್ತಾರು ಪ್ರಶ್ನೆಗಳು ಕತ್ತಲ ರಾತ್ರಿಯಲ್ಲಿ ಮನಸ್ಸಿನಲ್ಲಿ ಸುಳಿದಾಗ, ತಿಳಿಯದಂತೆಯೇ ಕಣ್ಣಿನಿಂದ ಸಣ್ಣದೊಂದು ಹನಿ ನೀರು ಕೆನ್ನೆಗೆ ಜಾರುತ್ತದೆ. ನಮ್ಮದೇ ಆದ ಆಡುಭಾಷೆಯಲ್ಲಿ ಸರಳವಾಗಿ ಹೇಳುವುದಾದರೆ—ಬೆಂಗಳೂರು ಹಠಕ್ಕೆ ಬಿದ್ದು ಸಾಧಿಸಲೇಬೇಕು ಎಂದು ಬಂದ ಬದುಕಿಗೆ ಖಂಡಿತವಾಗಿಯೂ ಆಶ್ರಯ ನೀಡುತ್ತದೆ. ಆದರೆ, ಯಾವ ಹಮ್ಮು-ಬಿಮ್ಮೂ ಇಲ್ಲದೆ, ಬೆಚ್ಚಗೆ ನೆಮ್ಮದಿಯಿಂದ ಇರಲು ಬಯಸುವ ಸಾಧಾರಣ ಜೀವಕ್ಕೆ ಈ ನಗರ ಕೊಂಚ ದುಬಾರಿಯೇ ಸರಿ.ಅದೆಷ್ಟೋ ಸುಂದರ ಊರುಗಳನ್ನು, ಪ್ರಕೃತಿಯ ಮಡಿಲನ್ನು ಸುತ್ತಿದ್ದ ನನಗೂ ಸಹ ಕೊನೆಗೆ ಈ ಕಾಂಕ್ರೀಟ್ ಕಾಡಿಗೆ ಬರಲೇಬೇಕಾದ ಸಮಯ ಒದಗಿಬಂದೇ ಬಿಟ್ಟಿತ್ತು. ಜೀವನದಲ್ಲಿ ಅಂದುಕೊಂಡಂತೆ ಉತ್ತಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ, 'ಉತ್ತಮ ಬದುಕು' ಎಂಬ ರಂಗಸ್ಥಳದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲುವ ಮೊದಲ ಹೆಜ್ಜೆಯನ್ನು ಇಡಬೇಕಾದ ಕ್ಷಣ ಎದುರಾಯಿತು. ಆದರೆ, ಕನಸುಗಳ ಮೂಟೆಯನ್ನು ಹೊತ್ತು ಇಲ್ಲಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೋ ಅಥವಾ ರೈಲ್ವೆ ಸ್ಟೇಷನ್ನಿಗೋ ಬಂದು ಇಳಿದಾಗ ಎದುರಾದ ವಾಸ್ತವದ ಪರಿಸ್ಥಿತಿಯೇ ಬೇರೆಯಾಗಿತ್ತು.ರಾಜಧಾನಿ ಬೆಂಗಳೂರಿಗೆ ಬಂದಾಗ, ಇಲ್ಲಿ ಎಲ್ಲೆಲ್ಲೂ ಕಿವಿಗೆ ತಂಪನ್ನೆರೆಯುವ ಕನ್ನಡ ಧ್ವನಿಸುರುಳಿ ಕೇಳಿಸಬಹುದು ಎಂಬ ಸಣ್ಣದೊಂದು ಆಸೆ ಇತ್ತು. ಆದರೆ ಇಲ್ಲಾದದ್ದೇ ಬೇರೆ.. ನಮ್ಮದೇ ನಾಡಿನಲ್ಲಿ ಕನ್ನಡ ಬಳಸಿ ಮಾತನಾಡುವವರಿಗಿಂತ, ಇಂಗ್ಲಿಷನ್ನು ಮೆರೆಸುವವರೇ ಹೆಚ್ಚು ಎಂಬ ಆತಂಕ ಮತ್ತು ಬೇಸರ ಒಂದೆಡೆಯಾದರೆ, ಹೊಸದಾಗಿ ಬಂದಾಗ ರಸ್ತೆಯಲ್ಲಿ ಯಾರಿಗಾದರೂ ದಾರಿ ಕೇಳಿದರೆ ‘ಎನ್ನಕ ತೆರಿಯಾದು’ (ನನಗೆ ಗೊತ್ತಿಲ್ಲ) ಎನ್ನುವ ತಮಿಳು ಭಾಷಿಕರ ಉದಾಸೀನತೆಯ ಉತ್ತರ ಇನ್ನೊಂದೆಡೆ. ಸರಿ, ಮೂಲಭೂತ ಅಗತ್ಯವಾದ ಇರಲು ಒಂದೊಳ್ಳೆ ಪಿಜಿ (PG) ಅಥವಾ ಬಾಡಿಗೆ ಮನೆ ಹುಡುಕೋಣವೆಂದು ಫೋನ್ ಮೂಲಕ ಪ್ರಯತ್ನಿಸಿದರೆ, ಅದೆಷ್ಟೋ ಕಡೆಗಳಿಂದ ‘ಕ್ಯಾ ಚಾಹಿಯೇ?’ ಎಂಬ ಹಿಂದಿಯ ನಿರಾಕರಣೆಯ ಭಾಷೆ ಮತ್ತು ಅಸಡ್ಡೆಯ ಧೋರಣೆ ಎದುರಾಯಿತು. ಸ್ವಂತ ನಾಡಿನಲ್ಲೇ ಪರಕೀಯರಂತೆ ಭಾಸವಾಗುವ ಈ ಕ್ಷಣಗಳು ಮನಸ್ಸಿಗೆ ಕೊಂಚ ಆಘಾತವನ್ನು ತಂದಿದ್ದು ಸುಳ್ಳಲ್ಲ.ಆದರೆ, ಈ ಎಲ್ಲಾ ಅನುಭವಗಳು ನನಗೆ ಬದುಕಿನ ಹೊಸದೊಂದು ಮುಖವನ್ನು ಪರಿಚಯಿಸಿದವು. ಇಷ್ಟೂ ದಿನಗಳಲ್ಲಿ ಶಾಲೆ-ಕಾಲೇಜುಗಳಲ್ಲಿ ಕೇವಲ ಪುಸ್ತಕದ ಪುಟಗಳಿಂದ ಕಲಿತ ಅಂಕಗಳ ವಿದ್ಯೆಗಿಂತ, ಇಲ್ಲಿನ ಬೀದಿ ಬೀದಿಗಳಲ್ಲಿ, ಪ್ರಾಯೋಗಿಕ ಬದುಕಿನ ಜಂಜಾಟದಲ್ಲಿ ಕಲಿಯುತ್ತಿರುವ ಪಾಠಗಳು ಅತ್ಯಂತ ಮೌಲ್ಯಯುತವಾದವುಗಳು. ಸೋಲು-ಗೆಲುವು, ಹೆದರಿಕೆ-ಧೈರ್ಯಗಳ ನಡುವೆ ಮಿoದುತ್ತಾ ಹೊಸದನ್ನು ಕಲಿಯುತ್ತಿದ್ದೇನೆ ಎಂಬ ಬಲವಾದ ಭರವಸೆ ಇಂದು ನನ್ನಲ್ಲಿದೆ.ಇದರ ಜೊತೆಜೊತೆಗೆ, ‘ಮುಂದೇನು?’ ಎಂಬ ಹೊಸ ಆತಂಕಗಳು, ಆರ್ಥಿಕ ಸ್ವಾವಲಂಬನೆಯ ಸವಾಲುಗಳು ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಓಡುವ ಭಯ ನನ್ನನ್ನು ಕಾಡುತ್ತಿರುವುದು ನಿರಾಕರಿಸಲಾಗದ ಸತ್ಯ. ಆದಾಗ್ಯೂ, ಈ ನಗರ ನಮಗೆ ಕೇವಲ ಸವಾಲುಗಳನ್ನು ಮಾತ್ರವಲ್ಲ, ಸವಾಲುಗಳನ್ನು ಎದುರಿಸಿ ಗೆಲ್ಲುವ ಕೌಶಲ್ಯವನ್ನೂ ಕಲ್ಪಿಸಿಕೊಡುತ್ತದೆ.ಕೊನೆಯದಾಗಿ ಹೇಳುವುದಾದರೆ, ಬೆಂಗಳೂರು ಎಂಬುದು ಕೇವಲ ಕಟ್ಟಡಗಳ ಅಥವಾ ರಸ್ತೆಗಳ ಸಮುಚ್ಚಯವಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ಸಹನೆ, ಶ್ರಮ ಮತ್ತು ಕನಸುಗಳ ಪರೀಕ್ಷೆ ನಡೆಸುವ ದೊಡ್ಡ ಪಾಠಶಾಲೆ. ಇಲ್ಲಿ ಕಷ್ಟಗಳಿವೆ, ಒಂಟಿತನವಿದೆ, ಭಾಷೆಯ ಗೊಂದಲಗಳಿವೆ, ನಿರಂತರ ಜಂಜಾಟವಿದೆ. ಆದರೆ, ಇವೆಲ್ಲವುಗಳ ನಡುವೆಯೂ ತನ್ನ ಬಳಿಗೆ ಬಂದವರನ್ನು ಕೈಬಿಡದೆ ಸಲಹುವ ಉದಾರ ಮನಸ್ಸು ಈ ನಗರಕ್ಕಿದೆ. ಈ ಸವಾಲುಗಳನ್ನೇ ಏಣಿ ಮಾಡಿಕೊಂಡು, ಆತಂಕಗಳನ್ನು ಮೆಟ್ಟಿ ನಿಂತು, ನಮ್ಮ ಕನಸಿನ ಗೋಪುರವನ್ನು ಕಟ್ಟುವುದು ನಮಗೆ ನಾವೇ ಕೊಟ್ಟುಕೊಳ್ಳಬೇಕಾದ ವಚನ. ಈ ಕನಸಿನ ನಗರಿಯ ಜಂಜಾಟದಲ್ಲೇ ನಮ್ಮ ಹೊಸ ಬದುಕಿನ ಸುಂದರ ಪಯಣ ನಿರಂತರವಾಗಿ ಮುಂದುವರಿಯುತ್ತದೆ.ಅವಕಾಶಗಳ ಆಗರ ನಾ ಕಂಡ ಬೆಂಗಳೂರು ಎನ್ನುವುದಂತೂ ಸತ್ಯ. ಜಿ.ಎಸ್. ಶಿವರುದ್ರಪ್ಪ ಅವರ ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ..ಎನ್ನುವ ಸಾಲುಗಳು ನೆನಪಾಗುತ್ತವೆ. ಇದನ್ನು ಗುನುಗುತ್ತಲೇ ನಿದ್ರೆಗೆ ಜಾರಿದರೆ ಮತ್ತೆ ಬೆಳಗು. ಬೇರೆ ದಿನ. ಅದೇ ದಿನಚರಿ...(ಲೇಖಕಿ: ಭಾರ್ಗವಿ ಜಿ. ಆರ್. ಪತ್ರಿಕೋಧ್ಯಮ ವಿದ್ಯಾರ್ಥಿ, ಕುವೆಂಪು ವಿವಿ)