ಸಭಾಪತಿ ಸ್ಥಾನಕ್ಕೆ ಸಂಖ್ಯಾಬಲ ಲೆಕ್ಕವಲ್ಲ: ಬಸವರಾಜ ಹೊರಟ್ಟಿ
ಬೆಂಗಳೂರು: ‘ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ವಿಧಾನಪರಿಷತ್ನಲ್ಲಿ ಆಡಳಿತ ಪಕ್ಷದ ಸಂಖ್ಯಾಬಲ ವೃದ್ಧಿಸಿದಾಗ ಸಭಾಪತಿ ಬದಲಾವಣೆಗಾಗಿ ಅವಿಶ್ವಾಸ ಮಂಡಿಸಿ, ಬದಲಾವಣೆ ಮಾಡಿದ ಉದಾಹರಣೆ ಇಲ್ಲ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿದ್ದ ಅವರು ವಿಧಾನ ಪರಿಷತ್ಗೆ ಆಯ್ಕೆ, ಸಚಿವ ಹಾಗೂ ಸಭಾಪತಿಯಾಗಿ ಕಾರ್ಯನಿರ್ವಹಣೆ ಸೇರಿದ

ಬೆಂಗಳೂರು: ‘ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ವಿಧಾನಪರಿಷತ್ನಲ್ಲಿ ಆಡಳಿತ ಪಕ್ಷದ ಸಂಖ್ಯಾಬಲ ವೃದ್ಧಿಸಿದಾಗ ಸಭಾಪತಿ ಬದಲಾವಣೆಗಾಗಿ ಅವಿಶ್ವಾಸ ಮಂಡಿಸಿ, ಬದಲಾವಣೆ ಮಾಡಿದ ಉದಾಹರಣೆ ಇಲ್ಲ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿದ್ದ ಅವರು ವಿಧಾನ ಪರಿಷತ್ಗೆ ಆಯ್ಕೆ, ಸಚಿವ ಹಾಗೂ ಸಭಾಪತಿಯಾಗಿ ಕಾರ್ಯನಿರ್ವಹಣೆ ಸೇರಿದಂತೆ ತಮ್ಮ ಸುದೀರ್ಘ ರಾಜಕೀಯ ಪಯಣವನ್ನು ನೆನಪು ಮಾಡಿಕೊಂಡರು.‘ಅಧಿಕ ಬಹುಮತ ಪಡೆದು ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಕ್ರಮೇಣ ವಿಧಾನಪರಿಷತ್ನಲ್ಲೂ ಆ ಪಕ್ಷದ ಸದಸ್ಯರ ಸಂಖ್ಯೆ ವೃದ್ಧಿಸುತ್ತದೆ. ವಿಧಾನಸಭೆಯಿಂದ ನಡೆಯುವ ಚುನಾವಣೆಗಳು, ನಾಮನಿರ್ದೇಶನ ಮಾಡುವ ಅವಕಾಶ ಸರ್ಕಾರಕ್ಕೆ ಸಿಗುವ ಕಾರಣ ಆಡಳಿತ ಪಕ್ಷಕ್ಕೆ ಪರಿಷತ್ನಲ್ಲೂ ಅನುಕೂಲವಾಗುತ್ತದೆ. ಆದರೆ, ವಿಧಾನಪರಿಷತ್ ವಿಧಾನಸಭೆಗಿಂತ ಭಿನ್ನ. ಹೀಗಾಗಿ, ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ವಿರೋಧ ಪಕ್ಷಗಳ ಸದಸ್ಯರಿಗೂ ಸಭಾಪತಿಯಾಗುವ ಅವಕಾಶ ಸಿಕ್ಕಿವೆ’ ಎಂದರು.‘ರಾಜ್ಯದಲ್ಲಿ 1983ರವರೆಗೂ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಮೊದಲ ಬಾರಿ 1983 ಹಾಗೂ 1985ರಲ್ಲಿ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ (ರಾಮಕೃಷ್ಣ ಹೆಗಡೆ) ಬಂತು. ಆಗ ಎರಡೂ ಅವಧಿ ಕಾಂಗ್ರೆಸ್ನ ಆರ್.ಬಿ.ಪೋತದಾರ್ ಸಭಾಪತಿಯಾಗಿದ್ದರು. ವೀರೇಂದ್ರ ಪಾಟೀಲ, ಎಸ್. ಬಂಗಾರಪ್ಪ ಅವರ ಅವಧಿಯಲ್ಲಿ (1989–1992) ಜನತಾದಳದ ಡಿ. ಮಂಜುನಾಥ್, ಜನತಾ ಪರಿವಾರದ ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್ ಅವರ ಅವಧಿಯಲ್ಲಿ (1994–99) ಕಾಂಗ್ರೆಸ್ನ ಡಿ.ಬಿ. ಕಲ್ಮಣಕರ್ ಸಭಾಪತಿ ಸ್ಥಾನ ಅಲಂಕರಿಸಿದ್ದರು. ಬಿಜೆಪಿ ಅವಧಿಯಲ್ಲಿ (2010ರಿಂದ) ಸಭಾಪತಿಯಾಗಿದ್ದ ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ (2013–18) ಮುಂದುವರಿದಿದ್ದರು. ನಂತರ ಅವರು ಹಾಗೂ ಕಾಂಗ್ರೆಸ್ನ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ಪದಚ್ಯುತಿಗೆ ಪ್ರಯತ್ನ ನಡೆದಿತ್ತು. ಆದರೆ, ಅವಿಶ್ವಾಸದ ಮೂಲಕ ಯಾರನ್ನೂ ಬದಲಾವಣೆ ಮಾಡಿದ ಇತಿಹಾಸ ಇಲ್ಲ’ ಎಂದು ವಿವರಿಸಿದರು.‘ವಿಧಾನಪರಿಷತ್ ಪ್ರವೇಶಿಸಿ 44 ವರ್ಷಗಳ ದಾಖಲೆಯ ಸುದೀರ್ಘ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಶಿಕ್ಷಣ ಸಚಿವನಾಗಿ ಹಲವು ಸುಧಾರಣೆಗಳನ್ನು ತಂದಿದ್ದೇನೆ. ಸಭಾಪತಿಯಾಗಿ ಸಭಾಗೌರವಕ್ಕೆ ಚ್ಯುತಿ ಬಾರದ ರೀತಿ ನಿರ್ವಹಣೆ ಮಾಡಿದ್ದೇನೆ. ಅಂದಿನ ರಾಜಕೀಯ, ರಾಜಕಾರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಂದು ರಾಜಕೀಯದಲ್ಲಿ ನೈತಿಕ ಮೌಲ್ಯಗಳು ಪತನವಾಗುತ್ತಿವೆ. ಬುದ್ಧಿಜೀವಿಗಳ ಮನೆ ಎಂದೇ ಪ್ರಸಿದ್ಧವಾಗಿದ್ದ ಪರಿಷತ್ಗೂ ಹಣಬಲ ಇರುವವರ ಪ್ರವೇಶ ಆಗುತ್ತಿದೆ. ಸಹಜವಾಗಿ ಪರಿಷತ್ ಸ್ವರೂಪವೂ ಬದಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಬಲ ವೃದ್ಧಿ ವಿಧಾನಪರಿಷತ್ನ 75 ಸದಸ್ಯ ಬಲದ ಪೈಕಿ ಈಗ ಇರುವ 70 ಸ್ಥಾನಗಳಲ್ಲಿ ಸಭಾಪತಿ ಹೊರತು ಪಡಿಸಿದರೆ ಕಾಂಗ್ರೆಸ್ 38 ಬಿಜೆಪಿ 24 ಜೆಡಿಎಸ್ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯ ಇದ್ದಾರೆ. ಇದೇ 21ಕ್ಕೆ ಬಿಜೆಪಿಯ ನಾಲ್ವರು ಹಾಗೂ ಕಾಂಗ್ರೆಸ್ನ ಒಬ್ಬರ ಅವಧಿ ಮುಕ್ತಾಯವಾಗಿದ್ದು ನಾಮ ನಿರ್ದೇಶನ ನಡೆಯಬೇಕಿದೆ. ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ಮತಕ್ಕೆ ಹಾಕುವ ದಿನ ಹಾಜರಿರುವ ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರು ಅವಿಶ್ವಾಸ ನಿರ್ಣಯದ ಪರ (ಸಭಾಪತಿ ವಿರುದ್ಧ) ಮತ ಚಲಾಯಿಸಿದರೆ ಸ್ಥಾನ ಕಳೆದುಕೊಳ್ಳಲಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸದಸ್ಯರ ಸಂಖ್ಯೆ ಅರ್ಧಕ್ಕಿಂತ ಹೆಚ್ಚು ಇದೆ.