ಮಳೆಗಾಲದಲ್ಲೂ ತಗ್ಗದ ವಿದ್ಯುತ್ ಬೇಡಿಕೆ
ದಾವಣಗೆರೆ: ರಾಜ್ಯದಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಇದರಿಂದ ವಿದ್ಯುತ್ ಸರಬರಾಜಿನ ಮೇಲಿನ ಒತ್ತಡ ಹೆಚ್ಚುತ್ತಿದೆ. ಮಳೆಗಾಲದ ಅವಧಿಯಲ್ಲೂ ವಿದ್ಯುತ್ ಬೇಡಿಕೆ ಗಣನೀಯವಾಗಿ ಏರಿಕೆ ಕಂಡಿರುವುದು ಪೂರೈಕೆಗೆ ಸವಾಲಾಗಿದೆ.ಪ್ರತೀ ವರ್ಷ ಮಳೆಗಾಲ ಆರಂಭವಾದ ಬಳಿಕ ಕೃಷಿ ಪಂಪ್ಸೆಟ್, ಗೃಹಬಳಕೆ ವಿದ್ಯುತ್ ಬಳಕೆ ಪ್ರಮಾಣ ತಗ್ಗುತ್ತಿತ್ತು. ಆದರೆ ಈ ಬಾರಿ ಬಿರು ಬೇಸಿಗೆಯ ಮಾರ್
ದಾವಣಗೆರೆ: ರಾಜ್ಯದಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಇದರಿಂದ ವಿದ್ಯುತ್ ಸರಬರಾಜಿನ ಮೇಲಿನ ಒತ್ತಡ ಹೆಚ್ಚುತ್ತಿದೆ. ಮಳೆಗಾಲದ ಅವಧಿಯಲ್ಲೂ ವಿದ್ಯುತ್ ಬೇಡಿಕೆ ಗಣನೀಯವಾಗಿ ಏರಿಕೆ ಕಂಡಿರುವುದು ಪೂರೈಕೆಗೆ ಸವಾಲಾಗಿದೆ.ಪ್ರತೀ ವರ್ಷ ಮಳೆಗಾಲ ಆರಂಭವಾದ ಬಳಿಕ ಕೃಷಿ ಪಂಪ್ಸೆಟ್, ಗೃಹಬಳಕೆ ವಿದ್ಯುತ್ ಬಳಕೆ ಪ್ರಮಾಣ ತಗ್ಗುತ್ತಿತ್ತು. ಆದರೆ ಈ ಬಾರಿ ಬಿರು ಬೇಸಿಗೆಯ ಮಾರ್ಚ್, ಏಪ್ರಿಲ್ ಅವಧಿಯಲ್ಲಿ ಇದ್ದ ಬೇಡಿಕೆಯ ಸನಿಹಕ್ಕೆ ಬಂದಿದೆ. ಜುಲೈ 17ರಂದು ರಾಜ್ಯದಲ್ಲಿ ಒಟ್ಟಾರೆ 322.12 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಸಹಜ ಮಳೆಗಾಲ ಇದ್ದ 2025ರ ಜುಲೈ 17ರಂದು 257.56 ದಶಲಕ್ಷ ಯೂನಿಟ್ ಬಳಕೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅಂದಾಜು 70 ದಶಲಕ್ಷ ಯೂನಿಟ್ನಷ್ಟು ಹೆಚ್ಚುವರಿ ವಿದ್ಯುತ್ ಈ ಬಾರಿಯ ಮುಂಗಾರು ಅವಧಿಯಲ್ಲಿ ಬಳಕೆಯಾಗುತ್ತಿದೆ.ಬೇಸಿಗೆ ತೀವ್ರವಾಗಿದ್ದ ಇದೇ ಮಾರ್ಚ್ ತಿಂಗಳ 17ರಂದು 356.77 ದಶಲಕ್ಷ ಯೂನಿಟ್ ವಿದ್ಯುತ್ ಖರ್ಚಾಗಿತ್ತು. ಇದಕ್ಕೆ ಹೋಲಿಸಿದರೆ, ಜುಲೈನಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ 34 ದಶಲಕ್ಷ ಯೂನಿಟ್ ಮಾತ್ರ ಕಡಿಮೆಯಿದೆ. ಮಳೆ ಕೊರತೆ ಹೀಗೆ ಮುಂದುವರಿದರೆ, ಮಾರ್ಚ್ನಲ್ಲಿದ್ದ ಬೇಡಿಕೆಯನ್ನೂ ಮೀರುವ ಸಾಧ್ಯತೆಯಿದೆ. ಜೂನ್ನಿಂದ ಮುಂಗಾರು ಹಂಗಾಮು ಶುರುವಾಗಬೇಕಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಜುಲೈ ಮೂರನೇ ವಾರದಲ್ಲೂ ಮಳೆಯ ಸುಳಿವಿಲ್ಲ. ಈ ಕಾರಣಕ್ಕೆ ಕೃಷಿ ಪಂಪ್ಸೆಟ್ ಮೇಲೆ ರೈತರ ಅವಲಂಬನೆ ಹೆಚ್ಚಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಎರಡು ದಿನಗಳಿಂದ ಪಂಪ್ಸೆಟ್ಗೆ ಪೂರೈಸುವ ವಿದ್ಯುತ್ನಲ್ಲಿ ಅಲ್ಪ ಪ್ರಮಾಣದ ಏರುಪೇರು ಉಂಟಾಗಿದೆ. ರಾಜ್ಯ ಗ್ರಿಡ್ನಿಂದ ಸರಬರಾಜಾಗುವ ವಿದ್ಯುತ್ನಲ್ಲಿ ಲೋ ಫ್ರೀಕ್ವೆನ್ಸಿ ಇದ್ದುದರಿಂದ ಈ ವ್ಯತ್ಯಯ ಉಂಟಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. -ತಿಪ್ಪೇಸ್ವಾಮಿ ಎ.ಕೆ.,ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್ಸೆಟ್ ಮೊರೆ ಹೋಗಿದ್ದು, ನೀರಾವರಿ ಬಳಕೆಯ ವಿದ್ಯುತ್ಗೆ ಬೇಡಿಕೆ ಹೆಚ್ಚಿದೆ. ಕೊರತೆಯಾಗದಂತೆ ಬೆಸ್ಕಾಂ ಕ್ರಮ ಕೈಗೊಂಡಿದೆ.'ಜಲವಿದ್ಯುತ್ ಒಂದನ್ನೇ ನೆಚ್ಚಿಕೊಂಡಿಲ್ಲ'ಈ ಹಿಂದೆ ಜಲವಿದ್ಯುತ್ ಉತ್ಪಾದನೆ ಮೇಲಿನ ಅವಲಂಬನೆ ಹೆಚ್ಚಿತ್ತು. ಈಗ ಅಂತಹ ಸ್ಥಿತಿ ಇಲ್ಲ. ಉಷ್ಣಸ್ಥಾವರ, ಸೌರಶಕ್ತಿ, ಪವನಶಕ್ತಿ ಸೇರಿದಂತೆ ವಿವಿಧ ಮೂಲಗಳಿಂದ ವಿದ್ಯುತ್ ಪಡೆಯಲಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೂ, ಮುಂದಿನ ದಿನಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗುವುದಿಲ್ಲ ಎಂದು ಕೆಪಿಟಿಸಿಎಲ್ ದಾವಣಗೆರೆ ವಿಭಾಗದ ಸೂಪರಿಂಟೆಂಡೆಂಟ್ ಎಂಜಿನಿಯರ್ ರೇವಣಸಿದ್ದಪ್ಪ ಜಿ.ಎಂ. ಸ್ಪಷ್ಟಪಡಿಸಿದರು.ಕೈಗಾ ಅಣು ವಿದ್ಯುತ್ ಘಟಕ, ವೈಟಿಪಿಎಸ್, ಆರ್ಟಿಪಿಎಸ್, ಬಿಟಿಪಿಎಸ್ ಉಷ್ಣವಿದ್ಯುತ್ ಘಟಕಗಳು ಅತ್ಯಧಿಕ ಉತ್ಪಾದನೆ ಮಾಡುತ್ತಿದ್ದು, ಮುಂಚೂಣಿಯಲ್ಲಿವೆ. ಕುಸುಮ್-ಸಿ ಯೋಜನೆಯ ಸೌರಶಕ್ತಿ ಘಟಕಗಳು ಉತ್ಪಾದನೆಯಲ್ಲಿ ತಮ್ಮ ಪಾಲು ಹೆಚ್ಚಿಸಿವೆ. ಪವನ ವಿದ್ಯುತ್ ಘಟಕಗಳು ಸಮರ್ಥವಾಗಿ ಕೆಲಸ ಮಾಡುತ್ತಿವೆ. ವಿದ್ಯುತ್ ಕೊರತೆ ಆಗದಂತೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ರೈತರ ಪಂಪ್ಸೆಟ್ಗೆ ವಿದ್ಯುತ್ ಒದಗಿಸಲು ಬದ್ಧವಾಗಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.