ಕೃಷಿ ಸಿಂಚಾಯಿ: ₹7,316 ಕೋಟಿ ಯೋಜನೆಗಳಿಗೆ ಜಲ ಆಯೋಗ ತಗಾದೆ
ನವದೆಹಲಿ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅನುದಾನ ಕೋರಿದ್ದ ನಾಲ್ಕು ನೀರಾವರಿ ಯೋಜನೆಗಳ ₹7,316 ಕೋಟಿ ಮೊತ್ತದ ಪ್ರಸ್ತಾವಗಳಿಗೆ ಕೇಂದ್ರ ಜಲ ಆಯೋಗ ತಗಾದೆ ಎತ್ತಿದೆ. ₹11,122 ಕೋಟಿ ಮೊತ್ತದ ಆರು ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುದಾನ ನೀಡುವಂತೆ ಕರ್ನಾಟಕ ಜಲಸಂಪನ್ಮೂಲ ಇಲಾಖೆಯು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ 2025ರ ಫೆಬ್ರುವರಿಯಲ್ಲಿ ಪ್ರಸ್ತಾವ

ನವದೆಹಲಿ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅನುದಾನ ಕೋರಿದ್ದ ನಾಲ್ಕು ನೀರಾವರಿ ಯೋಜನೆಗಳ ₹7,316 ಕೋಟಿ ಮೊತ್ತದ ಪ್ರಸ್ತಾವಗಳಿಗೆ ಕೇಂದ್ರ ಜಲ ಆಯೋಗ ತಗಾದೆ ಎತ್ತಿದೆ. ₹11,122 ಕೋಟಿ ಮೊತ್ತದ ಆರು ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುದಾನ ನೀಡುವಂತೆ ಕರ್ನಾಟಕ ಜಲಸಂಪನ್ಮೂಲ ಇಲಾಖೆಯು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ 2025ರ ಫೆಬ್ರುವರಿಯಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಈ ಯೋಜನೆಗಳ ತಾಂತ್ರಿಕ ಮೌಲ್ಯಮಾಪನ ನಡೆಸುವಂತೆ ಜಲ ಆಯೋಗಕ್ಕೆ ಜಲಶಕ್ತಿ ಸಚಿವಾಲಯ ಸೂಚಿಸಿತ್ತು. ಆಯೋಗದ ಸಲಹಾ ಸಮಿತಿಯು ಸೋಂತಿ ಏತ ನೀರಾವರಿ ಯೋಜನೆಯ ಪರಾಮರ್ಶೆ ನಡೆಸಿ ಪರಿಷ್ಕೃತ ಯೋಜನಾ ಮೊತ್ತಕ್ಕೆ ಒಪ್ಪಿಗೆ ಕೊಟ್ಟಿದೆ. ಮಲಪ್ರಭಾ ಕಾಲುವೆ ಆಧುನಿಕರಣಕ್ಕೆ ಪೂರ್ವ ಕಾರ್ಯಸಾಧ್ಯತಾ ವರದಿ ತಯಾರಿಸಲು ಜಲ ಆಯೋಗ ಒಪ್ಪಿದೆ. ತುಂಗಾಭದ್ರಾ ಎಡದಂಡೆ ಕಾಲುವೆ ಪ್ರಸ್ತಾವದ ಬಗ್ಗೆ ಸಲಹಾ ಸಮಿತಿಯು ಕೆಲವೊಂದು ಅವಲೋಕನಗಳನ್ನು ಮಾಡಿ ಯೋಜನಾ ಪ್ರಾಧಿಕಾರದಿಂದ ವಿವರಣೆ ಕೇಳಿದೆ. ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆ ಆಧುನೀಕರಣ ಪ್ರಸ್ತಾವಕ್ಕೂ ಜಲ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಬೆಣ್ಣಿಹಳ್ಳ ನದಿ ಪ್ರವಾಹ ನಿಯಂತ್ರಣ ಯೋಜನೆಯ ಪ್ರಸ್ತಾವದಲ್ಲಿ ಹಲವು ಲೋಪಗಳಿವೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಜತೆಗೆ, ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದೆ.