ಕೆಆರ್ಎಸ್ ಡ್ಯಾಂ ನೀರು ಕುಡಿಯಲು ಮಾತ್ರ: ಬೆಳೆ ಬೆಳೆಯದಂತೆ ಮನವಿ
ಮಂಡ್ಯ: ‘ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯದಲ್ಲಿ ಪ್ರಸ್ತುತ 92.08 ಅಡಿ ನೀರು ಸಂಗ್ರಹವಿದ್ದು, ಲಭ್ಯವಿರುವ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲು ಸಾಧ್ಯವಿಲ್ಲ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಸದ್ಬಳಕೆ ಮಾಡಬೇಕಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ರಘುರಾಮನ್ ಕೆ. ತಿಳಿಸಿದ್ದಾರೆ. ಈ ನಿ

ಮಂಡ್ಯ: ‘ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯದಲ್ಲಿ ಪ್ರಸ್ತುತ 92.08 ಅಡಿ ನೀರು ಸಂಗ್ರಹವಿದ್ದು, ಲಭ್ಯವಿರುವ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲು ಸಾಧ್ಯವಿಲ್ಲ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಸದ್ಬಳಕೆ ಮಾಡಬೇಕಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ರಘುರಾಮನ್ ಕೆ. ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಆರ್ಎಸ್ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟುದಾರರು, ರೈತರು ಜಲಾಶಯದ ನೀರಿನ ಮೇಲೆ ಅವಲಂಬಿತರಾಗಿ ಯಾವುದೇ ಬೆಳೆಗಳನ್ನು ಬೆಳೆಯದಂತೆ ಮನವಿ ಮಾಡಿದ್ದಾರೆ. ಪ್ರಸಕ್ತ ವರ್ಷ ಜೂನ್ 1ರಿಂದ ಇಲ್ಲಿಯವರೆಗೆ ಕೆ.ಆರ್.ಎಸ್. ಜಲಾಶಯದ ಜಲಾನಯನ ಪ್ರದೇಶದಲ್ಲಿ ವಾಡಿಕೆಯಂತೆ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಜಲಾಶಯದಲ್ಲಿ ಪ್ರಸ್ತುತ 17.214 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿದ್ದು, ಅದರಲ್ಲಿ ಕುಡಿಯುವ ನೀರಿಗಾಗಿ 12.916 ಟಿ.ಎಂ.ಸಿ ಅಡಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಜಲಸಂಪನ್ಮೂಲ ಇಲಾಖೆಯಡಿ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರನ್ನು ಬೇಸಿಗೆಯಲ್ಲಿ ಅಥವಾ ನೀರಿನ ಅಭಾವವಿರುವ ಪರಿಸ್ಥಿತಿಯಲ್ಲಿ ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ನಿರ್ಧರಿಸಲು ಆಯಾ ಪ್ರಾದೇಶಿಕ ಆಯುಕ್ತರುಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿರುತ್ತದೆ.ರಾಜ್ಯದಾದ್ಯಂತ ಬಹುತೇಕ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿದ್ದು ಹಾಗೂ ‘ಎಲ್ ನಿನೊ’ ಪರಿಣಾಮದಿಂದ ಉಂಟಾಗಲಿರುವ ಬರದ ಪರಿಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ಜುಲೈ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ‘ಜಲಾಶಯ ನಂಬಿಕೊಂಡು ಯಾವ ರೈತರು ಬೆಳೆ ಹಾಕಬೇಡಿ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಚೆಗೆ ತಿಳಿಸಿದ್ದರು.