ದೆಹಲಿ | ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ; ಗಾಯಗೊಂಡವರು ಹೇಳಿದ್ದೇನು?
ನವದೆಹಲಿ: ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಳಕೆಯಾಗುವ ಪೆಲೆಟ್ ಗನ್ಗಳನ್ನು ದೆಹಲಿಯಲ್ಲೂ ಬಳಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪೆಲೆಟ್ ಗನ್ ಬಳಸಿದ್ದರಿಂದ ನನಗೆ ಗಂಭೀರ ಗಾಯಗಳಾಗಿವೆ ಎಂದು ಪ್ರತಿಭಟನಾಕಾರರೊಬ್ಬರ ವೈದ್ಯಕೀಯ ದಾಖಲೆ ಸಮೇತ ವಿವರಿಸಿದ್ದಾರೆ ಎಂದು ’ಇಂಡಿಯಾ ಟುಡೇ‘ ವರದಿ ಮಾಡಿದೆ. ಜುಲೈ 20 ರಂದು ಕಾಕ್ರೋಚ್ ಜನತಾ ಪಾರ್ಟ

ನವದೆಹಲಿ: ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಳಕೆಯಾಗುವ ಪೆಲೆಟ್ ಗನ್ಗಳನ್ನು ದೆಹಲಿಯಲ್ಲೂ ಬಳಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪೆಲೆಟ್ ಗನ್ ಬಳಸಿದ್ದರಿಂದ ನನಗೆ ಗಂಭೀರ ಗಾಯಗಳಾಗಿವೆ ಎಂದು ಪ್ರತಿಭಟನಾಕಾರರೊಬ್ಬರ ವೈದ್ಯಕೀಯ ದಾಖಲೆ ಸಮೇತ ವಿವರಿಸಿದ್ದಾರೆ ಎಂದು ’ಇಂಡಿಯಾ ಟುಡೇ‘ ವರದಿ ಮಾಡಿದೆ. ಜುಲೈ 20 ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜಂತರ್ ಮಂತರ್ನಿಂದ ಸಂಸತ್ತಿನವರೆಗೆ ನಡೆಸಿದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದೆ. ಇದೇ ವೇಳೆ ಭದ್ರತಾ ಸಿಬ್ಬಂದಿ ನನ್ನ ಮೇಲೆ ಬಲಪ್ರಯೋಗ ಮಾಡಿದ್ದರು ಎಂದು ಗಾಯಗೊಂಡಿರುವ ವ್ಯಕ್ತಿ ವಿವರಿಸಿದ್ದಾರೆ.ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದೇನೆ. ನನ್ನ ದೇಹದಲ್ಲಿದ್ದ ಎಲ್ಲಾ ಪೆಲೆಟ್ಗಳನ್ನು ವೈದ್ಯರು ಹೊರತೆಗೆದಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದಾರೆ.ಆದರೆ, ಪ್ರತಿಭಟನೆಯಲ್ಲಿ ಗಾಯಗೊಂಡ 19 ವರ್ಷದ ಯುವಕನೊಬ್ಬ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇನ್ನೊಬ್ಬ ವ್ಯಕ್ತಿಯ ಕುತ್ತಿಗೆ ಬಳಿ ಪೆಲೆಟ್ ಸಿಲುಕಿಕೊಂಡಿದೆ ಎಂದು ’ದಿ ಇಂಡಿಯನ್ ಎಕ್ಸ್ಪ್ರೆಸ್‘ ವರದಿ ಮಾಡಿದೆ.ಪಾದಯಾತ್ರೆ ವೇಳೆ ಜನರನ್ನು ನಿಯಂತ್ರಿಸಲು ದೆಹಲಿ ಪೊಲೀಸ್ ಮತ್ತು ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್ಎಎಫ್) ಸಿಬ್ಬಂದಿ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತ ದೆಹಲಿ ಹೈಕೋರ್ಟ್ ಆ ದಿನದ ಎಲ್ಲಾ ವಿಡಿಯೊ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಕಾಯ್ದಿರಿಸುವಂತೆ ಪೊಲೀಸರಿಗೆ ಆದೇಶಿಸಿದೆ.’ನಾನು ಪ್ರತಿಭಟನಾ ಸ್ಥಳದಲ್ಲಿ ಓಡಾಡುತ್ತಿದ್ದೆ. ಅಲ್ಲಿ ಜನರು ಬೇರೆ ಬೇರೆ ಕಡೆಗಳಲ್ಲಿ ಜಮಾಯಿಸಿದ್ದರು. ಜಂತರ್ ಮಂತರ್ ಬಳಿ ಒಂದು ಗುಂಪು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದಿತ್ತು. ಕಲ್ಲು ತೂರಾಟ ನಡೆಯುತ್ತಿತ್ತು. ಪೊಲೀಸರು ಜನರ ಮೇಲೆ ಅಶ್ರುವಾಯು ಶೆಲ್ಗಳನ್ನು ಸಿಡಿಸುತ್ತಿದ್ದರು‘ ಎಂದು 25 ವರ್ಷದ ಪ್ರತಿಭಟನಾಕಾರ ತಿಳಿಸಿದ್ದಾರೆ.’ಸಂಘರ್ಷ ಹೇಗೆ ಆರಂಭವಾಯಿತು ಎಂಬುದು ನನಗೆ ಗೊತ್ತಿಲ್ಲ. ನಾನು ನೋಡಿದ್ದು ಏನೆಂದರೆ ಪೊಲೀಸರು ಒಂದಾದ ಮೇಲೊಂದರಂತೆ ಅಶ್ರುವಾಯು ಶೆಲ್ಗಳನ್ನು ಸಿಡಿಸುತ್ತಿದ್ದರು. ನನ್ನ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬನ ಕಣ್ಣಿನ ಮೇಲ್ಭಾಗಕ್ಕೆ ಅಶ್ರುವಾಯು ಶೆಲ್ ಬಡಿಯಿತು. ಆರಂಭದಲ್ಲಿ ಶೆಲ್ಗಳನ್ನು ಗಾಳಿಯಲ್ಲಿ ಸಿಡಿಸಲಾಗುತ್ತಿತ್ತು. ಆದರೆ, ಸಂಘರ್ಷ ತೀವ್ರಗೊಂಡಾಗ, ಪೋಲೀಸರು ನೇರವಾಗಿ ಬಂದೂಕನ್ನು ಅಡ್ಡಲಾಗಿ ಹಿಡಿದು ಜನರ ಮೇಲೆಯೇ ಸಿಡಿಸಿದರು‘ ಎಂದು ಅವರು ವಿವರಿಸಿದ್ದಾರೆ.’ಪ್ರತಿಭಟನಾ ಸ್ಥಳದಲ್ಲಿ ಗೊಂದಲ ಉಂಟಾಗಿದ್ದಾಗ, ಪೊಲೀಸರೊಬ್ಬರು ನನ್ನ ಕಡೆಗೆ ಬಂದೂಕು ಗುರಿ ಇಟ್ಟಿರುವುದನ್ನು ನಾನು ದಿಢೀರನೆ ಕಂಡೆ. ತಕ್ಷಣ ಓಡಲು ಯತ್ನಿಸಿದೆ. ಆ ಸಮಯದಲ್ಲಿ ನನ್ನ ಬೆನ್ನಿಗೆ ಮತ್ತು ಬಲ ಮೊಣಕೈ ಸುತ್ತಮುತ್ತ ಪೆಲೆಟ್ಗಳು ಬಡಿದವು. ನಾನು ಓಡದೇ ಇದ್ದಿದ್ದರೆ, ಪೆಲೆಟ್ ನನ್ನ ಮುಖಕ್ಕೆ ಬಡಿಯುತ್ತಿತ್ತು‘ ಎಂದು ಅವರು ಹೇಳಿದ್ದಾರೆ.ಜನರನ್ನು ನಿಯಂತ್ರಿಸಲು ಪೆಲೆಟ್ ಗನ್ಗಳನ್ನು ಬಳಸುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ದೇಹದಲ್ಲಿದ್ದ ಅಡ್ರಿನಾಲಿನ್ ಪ್ರಭಾವದಿಂದಾಗಿ ನನಗೆ ತಕ್ಷಣವೇ ನೋವಿನ ಅನುಭವವಾಗಲಿಲ್ಲ ಎಂದಿದ್ದಾರೆ.ಏನಿದು ಪ್ರಕರಣ...ಜುಲೈ 20ರಂದು ನಡೆದ ಸಿಜೆಪಿ ಪ್ರತಿಭಟನೆ ವೇಳೆ ಪೊಲೀಸರು ಪೆಲೆಟ್ ಗನ್ ಬಳಸಿದ್ದರಿಂದ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಎಂಬಿಎ ಪದವೀಧರ, 25 ವರ್ಷದ ಶೇಖ್ ಇರ್ಷಾದ್ ಮನ್ಸೂರಿಗೆ ಗಂಭೀರ ಗಾಯಗಳಾಗಿದ್ದು, ಲೇಡಿ ಹಾರ್ಡಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.ವೈದ್ಯರು ಅವರ ಮುಖ ಮತ್ತು ದೇಹದಲ್ಲಿದ್ದ ಹಲವು ಪೆಲೆಟ್ಗಳನ್ನು ತೆಗೆದುಹಾಕಿದ್ದಾರೆ. ಆದರೆ, ಒಂದು ಪೆಲೆಟ್ ಇರ್ಷಾದ್ನ ಕುತ್ತಿಗೆಯ ರಕ್ತನಾಳದ ಬಳಿ ಸಿಲುಕಿಕೊಂಡಿದೆ ಎನ್ನಲಾಗಿದೆ.ಜುಲೈ 20 ರ ಪಾದಯಾತ್ರೆಯಲ್ಲಿ ಪೆಲೆಟ್ ಗಾಯಗಳಿಗೊಳಗಾದ 19 ವರ್ಷದ ಸಿಜೆಪಿ ಪ್ರತಿಭಟನಾಕಾರರೊಬ್ಬರು ಬಲಗಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಚೇತರಿಸಿಕೊಳ್ಳಲು ಶೇಕಡ 1ರಷ್ಟು ಮಾತ್ರ ಅವಕಾಶವಿದೆ ಎಂದು ವೈದ್ಯರು ಹೇಳಿರುವುದಾಗಿ ಅವರ ಕುಟುಂಬ ತಿಳಿಸಿದೆ ಎಂದು ’ದಿ ಹಿಂದೂ‘ ವರದಿಯಲ್ಲಿ ಉಲ್ಲೇಖಿಸಿದೆ.ವ್ಯಕ್ತಿಯೊಬ್ಬರು ಗಾಯಗೊಂಡಿರುವ ದೃಶ್ಯಪೆಲೆಟ್ ಗನ್ ಬಳಸಿಲ್ಲ ಎಂದ ದೆಹಲಿ ಪೋಲೀಸ್’ಸಂಸತ್ ಚಲೋ‘ ಮೆರವಣಿಗೆಯಲ್ಲಿ ಪೆಲೆಟ್ ಗನ್ಗಳನ್ನು ಬಳಸಲಾಗಿದೆ ಎಂಬ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಈ ಕುರಿತು ’ಎಕ್ಸ್‘ನಲ್ಲಿ ಹೇಳಿಕೆ ನೀಡಿರುವ ಪೊಲೀಸರು, ’ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ದೆಹಲಿ ಪೊಲೀಸ್ ಪಡೆಗಳು ಪೆಲೆಟ್ ಗನ್ಗಳನ್ನು ಬಳಸಿವೆ ಎಂಬ ವರದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ದಾರಿ ತಪ್ಪಿಸುವಂತಿವೆ. ನಮ್ಮ ಬಳಿ (ದೆಹಲಿ ಪೊಲೀಸರು) ಪೆಲೆಟ್ ಗನ್ಗಳಿಲ್ಲ ಮತ್ತು ಪ್ರತಿಭಟನಾಕಾರರನ್ನು ಚದುರಿಸಲು ಅವುಗಳನ್ನು ಬಳಸುತ್ತಿಲ್ಲ. ಸಾರ್ವಜನಿಕರು ಯಾವುದೇ ದೃಢಪಡಿಸದ ಅಥವಾ ದಾರಿ ತಪ್ಪಿಸುವ ಮಾಹಿತಿಯನ್ನು ಹಂಚಿಕೊಳ್ಳಬಾರದು‘ ಎಂದು ಮನವಿ ಮಾಡಿದ್ದಾರೆ. ಪ್ರೆಸ್ ಇನ್ಫರ್ಮೇಷನ್ ಬ್ಯೂರೊದ (ಪಿಐಬಿ) ಫ್ಯಾಕ್ಟ್ಚೆಕ್ ಘಟಕ ’ಎಕ್ಸ್‘ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ’ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಪಡೆಗಳು ಪೆಲೆಟ್ ಗನ್ಗಳನ್ನು ಬಳಸಿವೆ ಎಂದು ಪ್ರತಿಪಾದಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ, ಇದು ಸುಳ್ಳು‘ ಎಂದು ಬರೆದುಕೊಂಡಿದೆ.’ಪೆಲೆಟ್ ಗನ್‘ ಎಂದರೇನು?ಪೆಲೆಟ್ ಗನ್ಗಳನ್ನು ’ಪಂಪ್-ಆಕ್ಷನ್ ಗನ್ಗಳು‘ ಅಥವಾ ’ರೈಯಟ್ ಶಾಟ್ಗನ್ಗಳು‘ ಎಂದೂ ಕರೆಯಲಾಗುತ್ತದೆ. ಇವುಗಳ ಒಂದು ಕಾರ್ಟ್ರಿಡ್ಜ್ನಿಂದ ಹತ್ತಾರು ಸಣ್ಣ ಲೋಹದ ಪೆಲೆಟ್ಗಳು ಹರಡಿಕೊಂಡು ಹೊರಬರುತ್ತವೆ.ಸಾಮಾನ್ಯ ಬುಲೆಟ್ಗಳಂತೆ ಒಂದೇ ಕಡೆ ತೂರಿಕೊಳ್ಳದೆ, ಇವು ವಿಶಾಲ ಪ್ರದೇಶದಲ್ಲಿ ಒಂದೇ ಬಾರಿಗೆ ಹಲವು ಪೆಲೆಟ್ಗಳನ್ನು ಹರಡುತ್ತವೆ. ದೇಶದಲ್ಲಿ ಹಿಂಸಾತ್ಮಕ ಗುಂಪುಗಳನ್ನು ನಿಯಂತ್ರಿಸಲು ’ಕಡಿಮೆ ಮಾರಕ‘ ಆಯುಧವಾಗಿ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (ಸಿಆರ್ಪಿಎಫ್), ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇವುಗಳನ್ನು ಹೆಚ್ಚಾಗಿ ಬಳಸಿದ್ದಾರೆ.2010ರಲ್ಲಿ ಕಾಶ್ಮೀರದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಪೊಲೀಸ್ ಗುಂಡಿನ ಚಕಮಕಿಯಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟ ನಂತರ, ನೈಜ ಗುಂಡುಗಳಿಗೆ ಪರ್ಯಾಯವಾಗಿ ಸಾವು-ನೋವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಪೆಲೆಟ್ ಗನ್ಗಳನ್ನು ಪರಿಚಯಿಸಲಾಯಿತು.ಪೆಲೆಟ್ ಗನ್ಗಳ ಬಳಕೆಯ ಮಾನದಂಡಗಳ ಪ್ರಕಾರ, ಇವುಗಳನ್ನು ಕೊನೆಯ ಅಸ್ತ್ರವಾಗಿ ಮಾತ್ರ ಬಳಸಬೇಕು. ಅಂದರೆ ಮಾತುಕತೆ, ಎಚ್ಚರಿಕೆ, ಅಶ್ರುವಾಯು ಮತ್ತು ಇತರ ಮಾರಕವಲ್ಲದ ವಿಧಾನಗಳು ವಿಫಲವಾದ ನಂತರವೇ ಬಳಸಬೇಕು. ಸೂಚನೆಗಳ ಪ್ರಕಾರ, ದೂರದಿಂದ ಗುಂಡು ಹಾರಿಸಬೇಕು, ಸೊಂಟದ ಕೆಳಭಾಗಕ್ಕೆ ಗುರಿ ಇಡಬೇಕು ಮತ್ತು ಇತ್ತೀಚಿನ ಆವೃತ್ತಿಗಳಲ್ಲಿ ಪೆಲೆಟ್ಗಳನ್ನು ಕೆಳಮುಖವಾಗಿ ನಿರ್ದೇಶಿಸಲು ಡಿಫ್ಲೆಕ್ಟರ್ಗಳನ್ನು ಬಳಸಬೇಕು. ಪೋಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ (ಬಿಪಿಆರ್ಡಿ) ಮತ್ತು ಸಂಬಂಧಿತ ನಿಯಮಗಳು ಅತ್ಯಂತ ಕಡಿಮೆ ಬಲಪ್ರಯೋಗಕ್ಕೆ ಒತ್ತು ನೀಡುತ್ತವೆ.ಆದಾಗ್ಯೂ, ಕಾಶ್ಮೀರದಲ್ಲಿ ಈ ನಿಯಮಗಳನ್ನು ಪಾಲಿಸಿಲ್ಲ ಎಂಬುದನ್ನು ಹಲವು ವರದಿಗಳು ದಾಖಲಿಸಿವೆ. ಇದರಿಂದಾಗಿ ಕಣ್ಣುಗಳಿಗೆ ಗಂಭೀರ ಗಾಯಗಳಾಗಿರುವ ಹಲವು ಉದಾಹರಣೆಗಳಿವೆ.ಕಾಶ್ಮೀರದ ಹೊರತಾಗಿಯೂ ಪೆಲೆಟ್ ಗನ್ ಬಳಕೆಯ ಆರೋಪಗಳು ಕೇಳಿಬಂದಿವೆ. 2024ರ ಜನವರಿ-ಫೆಬ್ರುವರಿಯಲ್ಲಿ ಹರಿಯಾಣದ ಅಂಬಾಲಾ ಜಿಲ್ಲೆಯ ಶಂಭು ಗಡಿಯಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಸಿದ್ದರಿಂದಾಗಿ ಹಲವರು ಗಾಯಗೊಂಡಿದ್ದರು. ರೈತರು ತಮ್ಮ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ತೋರಿಸಿದ್ದರು. ಆದರೆ, ಹರಿಯಾಣ ಪೊಲೀಸರು ಅಶ್ರುವಾಯು ಮತ್ತು ಲಾಠಿಚಾರ್ಜ್ ನಂತರ ಅಂತಿಮ ಅಸ್ತ್ರವಾಗಿ ರಬ್ಬರ್ ಬುಲೆಟ್ಗಳನ್ನು ಮಾತ್ರ ಬಳಸಿದ್ದೇವೆ ಎಂದು ಸ್ಪಷ್ಟಪಡಿಸಿ, ಪೆಲೆಟ್ ಗನ್ ಬಳಕೆಯ ಆರೋಪಗಳನ್ನು ನಿರಾಕರಿಸಿದ್ದರು.2023ರಲ್ಲಿ ಮಣಿಪುರದಲ್ಲೂ ಪೆಲೆಟ್ ಗನ್ಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ಇತರ ಕಡೆಗಳಲ್ಲಿ ಇವುಗಳ ಬಳಕೆಯ ಆರೋಪಗಳು ಕೇಳಿ ಬಂದಿರುವುದು ಅಪರೂಪ.ಇದೇ ಜುಲೈ 20ರಂದು ದೆಹಲಿಯ ಜಂತರ್ ಮಂತರ್ ಬಳಿ ನಡೆದ ಪ್ರತಿಭಟನೆ ವೇಳೆ ನಾಗರಿಕರು ಪೆಲೆಟ್ ಗನ್ಗಳಿಂದ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಗಾಯಗೊಂಡವರ ಸಂಖ್ಯೆ ನಿಖರವಾಗಿಲ್ಲ. ದೆಹಲಿ ಪೊಲೀಸ್ ಮತ್ತು ಪಿಐಬಿ ಈ ಆರೋಪಗಳನ್ನು ತಳ್ಳಿಹಾಕುತ್ತಲೇ ಇವೆ.ಆದಾಗ್ಯೂ, 'ಇಂಡಿಯಾ ಟುಡೇ ಡಿಜಿಟಲ್' ಜೊತೆ ಮಾತನಾಡಿದ ವ್ಯಕ್ತಿಯೊಬ್ಬರು, ಪೋಲೀಸರು ಗನ್ ಗುರಿ ಇಟ್ಟಿದ್ದನ್ನು ಕಂಡು ದೂರ ಹೋಗಲು ಯತ್ನಿಸಿದಾಗ ನನಗೆ ಪೆಲೆಟ್ನಿಂದ ಗುಂಡು ಹಾರಿಸಲಾಯಿತು ಮತ್ತು ವೈದ್ಯಕೀಯ ದಾಖಲೆಗಳಲ್ಲಿ ಪೆಲೆಟ್ ಗಾಯ ಎಂದು ನಮೂದಿಸಲಾಗಿದೆ ಎಂದು ಹೇಳಿದ್ದಾರೆ.ವ್ಯಕ್ತಿಯೊಬ್ಬರು ಗಾಯಗೊಂಡಿರುವ ದೃಶ್ಯವೈದ್ಯಕೀಯ ದಾಖಲೆಗಳುವೈದ್ಯಕೀಯ ದಾಖಲೆಗಳುನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ | ಕಲ್ಲು, ಮೊಟ್ಟೆ ತೂರಾಟ: ಹಲವರಿಗೆ ಗಾಯಸಿಜೆಪಿ ಪ್ರತಿಭಟನೆ | ಪಾಸ್ಪೋರ್ಟ್ ರದ್ದುಗೊಳಿಸುವ ಸಾಧ್ಯತೆ: ಪೊಲೀಸ್ ಮೂಲಗಳುನೀಟ್ ಪ್ರತಿಭಟನೆಗೆ ಕಮಲ ಹಾಸನ್, ಸಲ್ಮಾನ್ ಖಾನ್ ಸೇರಿ ಸಿನಿಮಾ ತಾರೆಯರ ಬೆಂಬಲಅಪ್ಪ ಕಲಿಸಿದ ಪಾಠ ನೆನಪಿಸಿಕೊಂಡು ನೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿನ್