ಕಂಪ್ಲಿ: ಮತ್ತೆ ಚುರುಕುಗೊಂಡ ಬಿತ್ತನೆ ಕಾರ್ಯ
ಕಂಪ್ಲಿ: ಸುಮಾರು ಎರಡು ತಿಂಗಳ ಹಿಂದೆ ಹೊಲ ಹಸನು ಮಾಡಿಕೊಂಡು ಬಿತ್ತನೆಗೆ ಸಿದ್ಧಗೊಳಿಸಿದ್ದ ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದ ಕೆಲ ರೈತರು ಕಳೆದ ಎರಡು ದಿನಗಳಿಂದ ಬಿದ್ದ ಸಣ್ಣ ಪ್ರಮಾಣದ ಮಳೆಗೆ ಭೂಮಿ ಹಸಿಯಾಗಿರುವುದರಿಂದ ಬಿತ್ತನೆ ಚುರುಕುಗೊಳಿಸಿದ್ದಾರೆ.ಮಳೆಯಾಶ್ರಿತ ಬೆಳೆಗಳಾದ ಸಜ್ಜೆ, ಹೈಬ್ರಿಡ್ ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ ಬಿತ್ತನೆ ಭರದಿಂದ ಸಾಗಿರುವುದು ತ

ಕಂಪ್ಲಿ: ಸುಮಾರು ಎರಡು ತಿಂಗಳ ಹಿಂದೆ ಹೊಲ ಹಸನು ಮಾಡಿಕೊಂಡು ಬಿತ್ತನೆಗೆ ಸಿದ್ಧಗೊಳಿಸಿದ್ದ ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದ ಕೆಲ ರೈತರು ಕಳೆದ ಎರಡು ದಿನಗಳಿಂದ ಬಿದ್ದ ಸಣ್ಣ ಪ್ರಮಾಣದ ಮಳೆಗೆ ಭೂಮಿ ಹಸಿಯಾಗಿರುವುದರಿಂದ ಬಿತ್ತನೆ ಚುರುಕುಗೊಳಿಸಿದ್ದಾರೆ.ಮಳೆಯಾಶ್ರಿತ ಬೆಳೆಗಳಾದ ಸಜ್ಜೆ, ಹೈಬ್ರಿಡ್ ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ ಬಿತ್ತನೆ ಭರದಿಂದ ಸಾಗಿರುವುದು ತಾಲ್ಲೂಕಿನ ದೇವಸಮುದ್ರ ವ್ಯಾಪ್ತಿಯ ಪ್ರದೇಶದಲ್ಲಿ ಮಂಗಳವಾರ ಕಂಡುಬಂತು.‘ಕಳೆದ ವರ್ಷ ಈ ಸಂದರ್ಭದಲ್ಲಿ ಸಜ್ಜೆ ಬೆಳೆ ನಳನಳಿಸುತ್ತಿತ್ತು. ಈ ಬಾರಿ ಒಂದೂವರೆ ತಿಂಗಳು ತಡವಾಗಿ ಬಿತ್ತನೆ ಶುರು ಮಾಡಿದ್ದೇವೆ. ಎರಡು ದಿನಗಳಿಂದ ಜಿಟಿಜಿಟಿ ಮಳೆಗೆ ಕೆಂಪು ಮಣ್ಣಿನ (ಮಸಾರಿ) ಹೊಲಗಳು ಹದವಾಗಿದ್ದು, ಸಜ್ಜೆ ಬಿತ್ತನೆ ಮಾಡುತ್ತಿದ್ದೇವೆ. ಎಕರೆ ಬಿತ್ತನೆಗೆ ₹3,500 ರಿಂದ ₹4,000 ಖರ್ಚು ಬರುತ್ತದೆ. ಮುಂದಿನ ದಿನಗಳಲ್ಲಿ ಮಳೆರಾಯ ಕೃಪೆ ತೋರುತ್ತಾನೋ ಇಲ್ಲವೋ ಗೊತ್ತಿಲ್ಲ. ಎಲ್ಲ ಆ ದೇವರ ಮೇಲೆ ಭಾರ ಹಾಕಿದ್ದೇವೆ’ ಎಂದು ದೇವಸಮುದ್ರ ಗ್ರಾಮದ ರೈತ ಬಲಕುಂದಿ ಕರೆಗೌಡ್ರು ತಿಳಿಸಿದರು.ಗೂಬಾಜಿ ಸಿದ್ದಯ್ಯ, ಕರೆಗೌಡ್ರು ಭೀಮಪ್ಪ ಸಜ್ಜೆ ಬಿತ್ತನೆಯಲ್ಲಿ ತೊಡಗಿದ್ದರೆ, ಮೂಕಯ್ಯ ಹತ್ತಿ ಬಿತ್ತನೆ ಮುಂದುವರಿಸಿರುವುದು ಕಂಡುಬಂತು.ಈ ಸಲ ಮುಂಗಾರು ಮಳೆ ಆರಂಭದಲ್ಲಿ ಶುಭಾರಂಭ ಮಾಡಿದ್ದರಿಂದ ಸಂತಸಗೊಂಡ ಮಳೆಯಾಶ್ರಿತ ಕೆಲ ರೈತರು ಸಜ್ಜೆ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಬಳಿಕ ಮಳೆ ಕೈಕೊಟ್ಟಿದ್ದರಿಂದ ಈ ಫಸಲುಗಳು ಕಳೆಗುಂದಲು ಆರಂಭಿಸಿದ್ದವು. ಇದರಿಂದ ಆತಂಕಗೊಂಡ ರೈತರು ಅಕ್ಕಪಕ್ಕದ ಬೋರ್ವೆಲ್ ಹೊಂದಿರುವ ರೈತರ ಮೊರೆ ಹೋಗಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಕಳೆದ ಎರಡು ದಿನಗಳ ಜಿಟಿಜಿಟಿ ಮಳೆಗೆ ಬೆಳೆಗಳು ಸ್ವಲ್ಪ ಚೇತರಿಸಿಕೊಂಡಿವೆ ಎಂದು ರೈತರು ಸಂತಸದಿಂದ ತಿಳಿಸಿದರು.ಕೃಷಿಯಲ್ಲಿ ಬದಲಾವಣೆ ಬೇಕುಮಳೆಯಾಶ್ರಿತ ರೈತರು ಹತ್ತಿ ಬಿತ್ತನೆ ಮಾಡುವುದಕ್ಕೆ ಇದು ಸಕಾಲವಲ್ಲ. ಅಲ್ಪ ನೀರು ಬೇಡುವ ನವಣೆ, ಸಜ್ಜೆ, ಸೂರ್ಯಕಾಂತಿ, ಸಿರಿಧಾನ್ಯ ಬೆಳೆ ಬಿತ್ತನೆ ಮತ್ತು ಭತ್ತ ನಾಟಿ ಸಂಪ್ರದಾಯ ಕೈಬಿಟ್ಟು ನೇರ ಕೂರಿಗೆ ಪದ್ಧತಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಬೋರ್ವೆಲ್ ಹೊಂದಿರುವ ಎಲ್ಲ ವರ್ಗದ ರೈತರು ಹನಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಇಲಾಖೆಯಿಂದ ಶೇ 90ರಷ್ಟು ಸಹಾಯಧನ ಲಭ್ಯವಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎ. ಮಂಜುನಾಥರೆಡ್ಡಿ ತಿಳಿಸಿದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260723-25-2038120803