ಭಾರತದ ಮೇಲೆ 10% ಸುಂಕ ಹೇರಿದ ಟ್ರಂಪ್
ವಾಷಿಂಗ್ಟನ್: ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆಯಾಗಿದ್ದರೂ ಟ್ರಂಪ್ ತಮ್ಮ ಸುಂಕ ಸಮರದ ನೀತಿಯಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಈಗ ಟ್ರಂಪ್ (Donald Trump) ಭಾರತ (India) ಚೀನಾ ಮತ್ತು ಬ್ರಿಟನ್ ಸೇರಿದಂತೆ 60 ದೇಶಗಳ ಮೇಲೆ ಹೊಸ ಸುಂಕ ಹೇರಿದ್ದಾರೆ. ಈ ದೇಶಗಳು ಬಲವಂತದ ಕಾರ್ಮಿಕ ಪದ್ಧತಿಯನ್ನು (Forced Labour) ತಡೆಯುವ ಕಾನೂನುಗಳನ್ನು ಸರಿಯಾಗಿ ಜಾರಿಗೆ ತ

ವಾಷಿಂಗ್ಟನ್: ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆಯಾಗಿದ್ದರೂ ಟ್ರಂಪ್ ತಮ್ಮ ಸುಂಕ ಸಮರದ ನೀತಿಯಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಈಗ ಟ್ರಂಪ್ (Donald Trump) ಭಾರತ (India) ಚೀನಾ ಮತ್ತು ಬ್ರಿಟನ್ ಸೇರಿದಂತೆ 60 ದೇಶಗಳ ಮೇಲೆ ಹೊಸ ಸುಂಕ ಹೇರಿದ್ದಾರೆ. ಈ ದೇಶಗಳು ಬಲವಂತದ ಕಾರ್ಮಿಕ ಪದ್ಧತಿಯನ್ನು (Forced Labour) ತಡೆಯುವ ಕಾನೂನುಗಳನ್ನು ಸರಿಯಾಗಿ ಜಾರಿಗೆ ತಂದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಹೊಸ ನಿರ್ಧಾರದ ಪ್ರಕಾರ ಈ ದೇಶಗಳಿಂದ ಬರುವ ಆಮದು ಸರಕುಗಳ ಮೇಲೆ 10% ರಿಂದ 12.5% ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಹೊಸ ಕ್ರಮದ ನಂತರವೂ ಭಾರತದ ಮೇಲಿನ ಒಟ್ಟಾರೆ ಸುಂಕದ ಪ್ರಮಾಣ 10% ರಷ್ಟೇ ಇರಲಿದೆ. ‘ಯುಎಸ್-ಮೆಕ್ಸಿಕೋ-ಕೆನಡಾ ಒಪ್ಪಂದದ (USMCA) ವ್ಯಾಪ್ತಿಗೆ ಬರುವ ಉತ್ಪನ್ನಗಳು ಹಾಗೂ ತೈಲ ಮತ್ತು ನೈಸರ್ಗಿಕ ಅನಿಲ ಆಮದುಗಳಿಗೆ ಈ ಹೊಸ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಯಾರಿಗೆ ಎಷ್ಟು ತೆರಿಗೆ? ಬಲವಂತದ ಶ್ರಮದ ಮೂಲಕ ತಯಾರಿಸಿದ ಸರಕುಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಇಲ್ಲದ ದೇಶಗಳಿಗೆ (ಉದಾಹರಣೆಗೆ ಚೀನಾ, ಜಪಾನ್) 12.5% ತೆರಿಗೆ ಹೇರಲಾಗಿದೆ. ಇಂತಹ ಕಾನೂನುಗಳನ್ನು ಹೊಂದಿರುವ ಅಥವಾ ಜಾರಿಗೆ ತರಲು ಒಪ್ಪಿಕೊಂಡಿರುವ ಭಾರತ, ಶ್ರೀಲಂಕಾ ಮತ್ತು ಯುರೋಪಿಯನ್ ಯೂನಿಯನ್ನಂತಹ ದೇಶಗಳಿಗೆ 10% ರಷ್ಟು ತೆರಿಗೆ ವಿಧಿಸಲಾಗಿದೆ. ಟ್ರಂಪ್ ಆಡಳಿತದ ಈ ಹೊಸ ಸುಂಕ ನೀತಿಯು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಈ ಹಿಂದೆ ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಅವರ ‘ಲಿಬರೇಶನ್ ಡೇ’ ಸುಂಕಗಳನ್ನು ರದ್ದುಗೊಳಿಸಿದ ನಂತರ ತಾತ್ಕಾಲಿಕವಾಗಿ ವಿಧಿಸಲಾಗಿದ್ದ 10% ರಷ್ಟು ತೆರಿಗೆಯ ಗಡುವು ಮುಗಿಯುತ್ತಿದ್ದಂತೆಯೇ ಈ ಹೊಸ ನಿಯಮ ಬಂದಿದೆ. ಇದನ್ನೂ ಓದಿ: ಸುಂಕ ಸಮರ ಆಯ್ತು ಈಗ ಭಾರತ ಸೇರಿದಂತೆ 16 ದೇಶಗಳ ಮೇಲೆ ಟ್ರಂಪ್ ವ್ಯಾಪಾರ ತನಿಖೆ ಭಾರತದ ಮೇಲೆ ಏನು? ಆರಂಭದಲ್ಲಿ ಅಮೆರಿಕವು ಭಾರತದ ಮೇಲೆಯೂ 12.5% ದಂಡದ ಸುಂಕ ವಿಧಿಸಲು ಉದ್ದೇಶಿಸಿತ್ತು. ಆದರೆ ಭಾರತವು ಬಲವಂತದ ಕಾರ್ಮಿಕ ಪದ್ಧತಿಯಿಂದ ತಯಾರಾಗುವ ಆಮದು ಉತ್ಪನ್ನಗಳ ವಿರುದ್ಧ ನಿಷೇಧ ನಿಯಮಗಳನ್ನು ಅಳವಡಿಸಿಕೊಂಡಿರುವುದನ್ನು ಮತ್ತು ದ್ವಿಪಕ್ಷೀಯ ಮಾತುಕತೆಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ 10% ತೆರಿಗೆ ಹಾಕಲಾಗಿದೆ. ಇದರಿಂದಾಗಿ ಭಾರತಕ್ಕೆ ನಿಗದಿಯಾಗಿದ್ದ ಹೆಚ್ಚಿನ ತೆರಿಗೆ ಭರದಿಂದ ಕೊಂಚ ಸಮಾಧಾನ ಸಿಕ್ಕಂತಾಗಿದೆ. ಮತ್ತಷ್ಟು ಸುಂಕ ವರದಿಗಳ ಪ್ರಕಾರ, ಟ್ರಂಪ್ ಆಡಳಿತವು ಮುಂಬರುವ ವಾರಗಳಲ್ಲಿ ಮತ್ತೊಂದು ಸುತ್ತಿನ ಸುಂಕಗಳನ್ನು ವಿಧಿಸಲು ಸಿದ್ಧತೆ ನಡೆಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಕಂಪನಿಗಳಿಗೆ ಸ್ಪರ್ಧೆ ನೀಡಲು ಕೃತಕವಾಗಿ ಕನಿಷ್ಠ ಬೆಲೆಗೆ ಸರಕುಗಳನ್ನು ಪೂರೈಸುವ (ಅತಿಯಾದ ಉತ್ಪಾದನೆಗೆ ಸಬ್ಸಿಡಿ ನೀಡುವ) ದೇಶಗಳನ್ನು ಗುರಿಯಾಗಿಸಿಕೊಂಡು ಈ ಹೊಸ ಕ್ರಮ ಬರಲಿದೆ ಎನ್ನಲಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರು ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಿಂದ ಆಮದಾಗುವ ಸೌರ ಫಲಕ ಮತ್ತು ಇತರ ಸರಕುಗಳ ಮೇಲೆ ಈ ಹಿಂದೆ ಈ ಕಾಯ್ದೆ ಬಳಸಿ ಕಠಿಣ ಕ್ರಮ ಕೈಗೊಂಡಿದ್ದರು. ಉಯ್ಘರ್ ಮುಸ್ಲಿಮರಿಂದ ಬಲವಂತವಾಗಿ ಸೌರ ಫಲಕಗಳನ್ನು ತಯಾರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಕ್ರಮಕೈಗೊಂಡಿತ್ತು. ಇನ್ನು ಮುಂದೆ ಈ ತನಿಖೆ ಇತರ 60 ದೇಶಗಳಿಗೆ ವಿಸ್ತರಣೆಯಾಗಲಿದೆ. ಚೀನಾದ ಪಶ್ಚಿಮ ಭಾಗದಲ್ಲಿ ಉಯ್ಘರ್ ಮತ್ತು ಇತರ ಮುಸ್ಲಿಂ ಗುಂಪುಗಳಿಗೆ ಚೀನಾದ ಅಧಿಕಾರಿಗಳು ಕಾರ್ಮಿಕ ಶಿಬಿರಗಳ ಮೂಲಕ ಬಲವಂತವಾಗಿ ಸರಕುಗಳನ್ನು ಉತ್ಪಾದನೆ ಮಾಡಿಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿತ್ತು. ಆದರೆ ಚೀನಾ ಅಮೆರಿಕ ಸರ್ಕಾರದ ಆರೋಪಗಳನ್ನು ನಿರಾಕರಿಸಿತ್ತು. 1974ರ ಅಮೆರಿಕ ವ್ಯಾಪಾರ ಕಾಯ್ದೆಯ ‘ಸೆಕ್ಷನ್ 301’ ಅಡಿಯಲ್ಲಿ ಸುಂಕ ಹೇರಲಾಗಿದೆ. ಇದು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿರುವ ಅಥವಾ ಅನ್ಯಾಯದ ವ್ಯಾಪಾರ ನೀತಿಗಳನ್ನು ಹೊಂದಿರುವ ದೇಶಗಳ ಮೇಲೆ ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಸಂಪೂರ್ಣ ಅಧಿಕಾರ ನೀಡುತ್ತದೆ ಹಿಂದೆ ಟ್ರಂಪ್ ಆಡಳಿತವು ತುರ್ತು ಪರಿಸ್ಥಿತಿ ಕಾಯ್ದೆಯಡಿ ವಿಧಿಸಿದ್ದ ಜಾಗತಿಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿತ್ತು. ಹೀಗಾಗಿ ನ್ಯಾಯಾಲಯದ ಮಿತಿಗಳನ್ನು ಮೀರಿ ಮತ್ತೆ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲು ಟ್ರಂಪ್ ಆಡಳಿತವು ಈ ‘ಸೆಕ್ಷನ್ 301’ ಮಾರ್ಗವನ್ನು ಬಳಸಿಕೊಂಡಿದೆ.